ಸಾವಿರಾರು “ರತ್ನ”ಗಳ ತಯಾರಿಕೆಯಲ್ಲೊಂದು ಮಾದರಿ ಶಾಲೆ

Date:

ಹೊರಗೆ ಮೈಸುಡುವ ರಣ ಬಿಸಿಲು, ಆದರೆ ಒಳಗೆ ಕಾಲಿಟ್ಟೊಡನೆ ಏನೋ ಒಂದು ವಿನೂತನವಾದ ಅನುಭವ. ಸುತ್ತಲು ಅಡಿಕೆ, ತೆಂಗು ಬಾಳೆ ಮರಗಳು. ನಡುನಡುವಲ್ಲಿ ಕ್ಯಾರೆಟ್ಟು, ಅನಾನಸು ಇತರೆ ಸೊಪ್ಪು ತರಕಾರಿಗಳ ಬೆಳೆಗಳು. ಮರದ ತುದಿಯಲ್ಲಿ ಕುಳಿತು ಚಿಲಿಪಿಲಿ ಕಲರವಿಸುವ ಒಂದಿಷ್ಟು ಪಕ್ಷಿಗಳು. ನಡೆದಾಡುವಲೆಲ್ಲಾ ಫಲವತ್ತಾದ ಮಣ್ಣಿನ ನೆಲ. ಈ ಸುವಿಶಾಲವಾದ ತಂಪಾದ ತೋಟದ ನಡುವೆ ಒಂದು ಹಿಂದಿನ ಕಾಲದ ಚೌಕಾಕಾರದ ಹಳ್ಳಿ ತೋಟದಮನೆ. ಸುತ್ತಲು ಸಪ್ತ ಕಂಬಗಳು. ಅದನ್ನು ಸುತ್ತುವರಿದ ಜಗುಲಿ. ಮನೆಯ ಹೆಂಚಿನ ಅಡಿಯಲ್ಲಿ ಕಂಬಗಳನ್ನು ಒರಗಿ ಜಗುಲಿಯ ಮೇಲೆ ಕುಳಿತರೇ ಹೊರಗಿನ ಬಿಸಿಲಿನ ನೆನಪು, ಪರಿವೆಯೇ ಬರುವುದಿಲ್ಲ.


ಈ ಜಗುಲಿಗಳ ಅಂಚಿನಲ್ಲಿ ಹಿಂದಿನ ಕಾಲದ ಹಾಗೂ ಅಪರೂಪದ ಒಂದಿಷ್ಟು ಕಲಾಕೃತಿಗಳು ಹಾಗು ಮರ, ಕಬ್ಬಿಣದ ಸಾಮಗ್ರಿಗಳ ಪುಟಾಣಿ ಸಂಗ್ರಹಾಲಯ. ಜೂತೆಗೆ ಒಂದಿಷ್ಟು ಅಪರೂಪದ ಪುಸ್ತಕಗಳ ಸಂಗ್ರಹ. ಹಿತ್ತಿಲಿನಲ್ಲಿ ಒಂದು ದನದ ಕೊಟ್ಟಿಗೆ. ಸುಮಾರು 20 ಗೋವುಗಳಿದ್ದು ಎಲ್ಲವು ನೊರೆ ಹಾಲು ಕೊಡುತ್ತದೆ.
ಈ ವಾತಾವರಣ, ಚಿತ್ರಣ ಕಂಡು ಬರುವುದು ಯಾರದೋ ಮನೆ ಅಥವಾ ಆಶ್ರಮದಲ್ಲಲ್ಲಾ ಬದಲಾಗಿ ಜೀವನ ಶಿಕ್ಷಣ ಕಲಿಸುವ “ರತ್ನಮಾನಸ” ಎಂಬ ವಿಶಿಷ್ಟವಾದ ಗುರುಕುಲ ಮಾದರಿಯ ಶಾಲೆಯಲ್ಲಿ ಮಿಗಿಲಾಗಿ ಸಾವಿರಾರು “ರತ್ನ”ಗಳನ್ನು ತಯಾರಿಸಿರುವ ಜೀವನದ ಪ್ರಯೋಗ ಶಾಲೆಯಲ್ಲಿ.


ರತ್ನಮಾನಸ ಧರ್ಮಸ್ಥಳ ಸಮೀಪದ ಒಂದು ವಿಭಿನ್ನ ಮಾದರಿಯ ವಿದ್ಯಾರ್ಥಿ ನಿಲಯ. ತೋಟ, ವಿದ್ಯಾರ್ಥಿ ನಿಲಯ ಎಲ್ಲವು ಸೇರಿ ಉಟ್ಟು ಹತ್ತು ಏಕರೆ ವಿಸ್ತೀರ್ಣ. ಇಲ್ಲಿ ಪ್ರೌಢಶಾಲಾ ಮಕ್ಕಳಿಗೆ ಮಾತ್ರ ಅವಕಾಶ. ದೂರದ ಊರೂರುಗಳಿಂದ ವಿದ್ಯಾರ್ಥಿಗಳು ಇಲ್ಲಿ ಬಂದು 3 ವರ್ಷದಲ್ಲಿ ಇಡೀ ಜೀವನಕ್ಕೆ ಬೇಕಾಗುವ ಮೌಲ್ಯ, ಪಾಠ ಕಲಿತು ಹೋಗುತ್ತಾರೆ.


ಮುಂಜಾನೆ 5ಕ್ಕೆ ಎದ್ದು ಶಿಸ್ತುಬದ್ಧವಾಗಿ ಪ್ರಾರ್ಥನೆ ಮಾಡುತ್ತಾರೆ. ಸೂರ್ಯ ದಿಗಂತದ ಅಂಚಿಗೆ ಬರುವಷ್ಟರಲ್ಲಿ ಚುರುಕಾಗಿ ಹಾಲು ಕರೆದಿಡುತ್ತಾರೆ. ಇಲ್ಲಿ ವಿಶೇಷವೆಂದರೆ ಪ್ರತಿಯೊಂದು ಹುಡುಗನಿಗು ಒಂದೊಂದು ಹಸುವಿನ ಜವಾಬ್ದಾರಿ.
ಶಾಲೆಯಲ್ಲಿ ಕಲಿತು ಮತ್ತೆ ರತ್ನಮಾನಸಕ್ಕೆ ಸಂಜೆ ಮರಳಿದ ಬಳಿಕ ಮತ್ತೆ ಚುರುಕಾಗಿ ತಮಗೆ ವಹಿಸಲಾದ ಗೋವಿನ ಬಳಿ ಹೋಗಿ ಉತ್ಸಾಹದಿಂದ ಹಾಲುಕರೆದು ತನ್ನ ಹಸು ಎಷ್ಟು ಹಾಲು ನೀಡಿತು ಎಂದು ನಮೂದಿಸುತ್ತಾರೆ. ಬಳಿಕ ಪ್ರಾರ್ಥನೆ ಮುಗಿಸಿ ನಿಗಧಿತ ಅವಧಿಯಲ್ಲಿ ಓದುವ ಕಾರ್ಯಕ್ರಮವನ್ನು ಸಮಾಪ್ತಿಸಿ ಮತ್ತೆ ಜೀವನದ ಶಿಕ್ಷಣಕ್ಕೆ ಇಳಿಯುತ್ತಾರೆ. ಪುನಃ ಮರುದಿನವು ಮುಂಜಾವು ಮೂಡುವಷ್ಟರಲ್ಲಿ ಎಲ್ಲ ಮಕ್ಕಳು ಎದ್ದು ಎಂದಿನಂತೆ ಹಾಲು ಕರೆಯುವುದು, ತೋಟದ ಕೈಂಕರ್ಯಗಳಲ್ಲಿ ತೊಡಗಿಕೊಳ್ಳುವುದು ಹಾಗು ತಮಗೆ ವಹಿಸಿದ ಇತ್ಯಾದಿ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಇದು ರತ್ನಮಾನಸದಲ್ಲಿ ಕಲಿಯುವ ಮಕ್ಕಳ ದಿನಚರಿ, ಜೀವನಚರಿ.
ಅಷ್ಟೇ ಅಲ್ಲದೆ ಒಂದಿಷ್ಟು ಮಕ್ಕಳ ತಂಡಗಳನ್ನು ರಚಿಸಿ ಅದಕ್ಕೆ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಅವರ ನಾಯಕತ್ವದಲ್ಲಿ ತೋಟದ ಕೆಲಸ, ಹಬ್ಬ ಸಮಾರಂಭಗಳ ಆಯೋಜನೆಯಿಂದ ಹಿಡಿದು ಪ್ರತಿಯೊಂದು ಚಟುವಟಿಕೆಯನ್ನು ಮಾಡಿಸಲಾಗುತ್ತದೆ. ವಿಶೇಷವೆಂದರೆ, ರತ್ನಮಾನಸದ ಗಣೇಶ ಚತುರ್ಥಿ, ಇಡೀ ಊರಿನಲ್ಲೆ ಅದ್ದೂರಿ ಹಬ್ಬ ಅದು.


ಅತ್ಯಂತ ವಿಜೃಂಭಣೆಯಿಂದ ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಿಷಯವನ್ನು ವಿದ್ಯಾರ್ಥಿಗಳು ಉತ್ಸುಕತೆಯಿಂದ ನಿರ್ವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸುತ್ತಾರೆ. ತನ್ಮೂಲಕ ಸಂಘ-ಜೀವನ, ಸಹಬಾಳ್ವೆ, ನಾಯಕತ್ವದ ಗುಣ ಎಲ್ಲವನ್ನು ಕಲಿಸಲಾಗುತ್ತದೆ.


ಇಂತಹ ಜೀವನ ಶಿಕ್ಷಣದ ಕುಟೀರಕ್ಕೆ ಸೇರಲು ವಿದ್ಯಾರ್ಥಿಗಳಿಗೆ ದಾಖಲಾತಿ ಪ್ರಕ್ರಿಯೆಯು ಇದೆ. ಏಳನೇ ತರಗತಿ ಉತೀರ್ಣರಾದ ವಿದ್ಯಾರ್ಥಿಗಳು ಏಪ್ರಿಲ್‍ನಲ್ಲಿ ಅರ್ಜಿ ಸಲಿಸತಕ್ಕದ್ದು. ಅವರಿಗೆ ಹಲವು ಸುತ್ತಿನ ಪರೀಕ್ಷೆ, ಸಂದರ್ಶನ ಇರುತ್ತದೆ. ಒಟ್ಟು 600 ಅಂಕಗಳ ಪರೀಕ್ಷೆ ಬರೆಯಬೇಕು. ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಸೇರಿಸಿ 120 ಮಕ್ಕಳಿಗೆ ಮಾತ್ರ ಅವಕಾಶ. ಆ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಿಂದ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೋಗಿರುತ್ತಾರೋ ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳನ್ನು ಎಂಟನೇ ತರಗತಿಗೆ ಸೇರಿಸಿಕೊಳ್ಳಲಾಗುತ್ತದೆ. ಪರೀಕ್ಷೆಯಲ್ಲಿ ಉತೀರ್ಣರಾದ 5-10 ಮಂದಿಗೆ ಮಾತ್ರ ಅವಕಾಶ.

ಇಲ್ಲಿ ಇನ್ನೊಂದು ವಿಶೇಷವು ಇದೆ. ರತ್ನಮಾನಸದ ತೋಟದ ಎಲ್ಲಾ ಬೆಳೆಗಳಿಗು ಸಾವಯವ ಗೊಬ್ಬರವನ್ನೇ ಬಳಸಲಾಗುತ್ತದೆ. ಈ ಗೊಬ್ಬರಗಳ ತಯಾರಿಕೆಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಸಸಿಗಳಿಗೆ ಕಾಡುವ ರೋಗರುಜಿನಗಳಿಗೆ ದಿವ್ಯಔಷದ “ಜೀವಾಮೃತ”ವನ್ನು ಇಲ್ಲಿ ತಯಾರಿಸಿ ಗಿಡಗಳಿಗೆ ಸಿಂಪಡಿಸಲಾಗುತ್ತದೆ.


ರತ್ನಮಾನಸದ ಮಕ್ಕಳನ್ನು ನೋಡಿದರೆ ಖುಷಿಯಾಗುತ್ತದೆ. ಕನಸುಗಳು ಚಿಗುರುವ ಎಳೆ ವಯಸ್ಸಿನಲ್ಲಿ ಅಡಿಕೆ, ಬಾಳೆ ಮರಗಳಿಗೆ ಬೀಜ ಬಿತ್ತಿ ಅವು ಚಿಗುರೊಡೆಯುವಂತೆ ಪೋಷಿಸುತ್ತಾರೆ. ರತ್ನಮಾನಸದ ಪಾಲಕರಾದ ಕೃಷ್ಣ ಶೆಟ್ಟಿ ಹೇಳುವಂತೆ ಎಂತ ತರೆಲೆಯಾಗಿ ಕನಿಷ್ಠ ಸಮಾಜ ಜ್ಞಾನವು ಇಲ್ಲದೆ ಬಂದರು 3 ವರ್ಷಗಳ ಬಳಿಕ ಹೊರ ಹೋಗುವಾಗ ಇಡೀ ಜೀವನ ಸಮರ್ಥವಾಗಿ ಬದುಕಬಲ್ಲ ಸಾಮರ್ಥ್ಯ.

ಸಂಪಾದಿಸಿಕೊಂಡು ಹೋಗುತ್ತಾರೆ. ಇದಕ್ಕೆ ಉದಾಹರಣೆ ರತ್ನಮಾನಸದ ಒಂದು ಭಾಗವಾದ ನ್ಯಾಯ ಬೆಲೆ ಅಂಗಡಿ ಮತ್ತು ಬ್ಯಾಂಕಿಂಗ್ ವ್ಯವಹಾರ. ರತ್ನಮಾನಸದ ತೋಟದಲ್ಲಿ ಬೆಳೆದ ಸಣ್ಣ ಬೆಳೆಗಳು ತರಕಾರಿ, ಹಾಲು ಹಾಗು ಇತರೆ ಸರಕುಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸುವ ಅಂಗಡಿಯಲ್ಲಿ ಕನಿಷ್ಠ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಅದರಿಂದ ಬಂದ ಹಣದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನಾ ವೇತನವನ್ನು ನೀಡಲಾಗುತ್ತದೆ. ಹಾಗೆಂದು ಹಣವನ್ನು ನೇರವಾಗಿ ಅವರಿಗೆ ನೀಡುವುದಿಲ್ಲ. ಬದಲಾಗಿ ಪ್ರತಿ ವಿದ್ಯಾರ್ಥಿಯ ಹೆಸರಿನಲ್ಲು ಒಂದು ಬ್ಯಾಂಕ್ ಖಾತೆ ತೆರೆಯಲಾಗುತ್ತದೆ. ಅದರಲ್ಲಿ ಪ್ರತಿ ಬಾರಿಯ ವೇತನವನ್ನು ಜಮಾಯಿಸಲಾಗುತ್ತದೆ. ತನ್ಮೂಲಕ ಪ್ರೌಢಶಾಲಾ ಸಮಯದಿಂದಲೇ ಬ್ಯಾಂಕಿಂಗ್, ವ್ಯಾಪಾರ ಹಾಗು ವ್ಯಾವಹಾರಿಕ ಜ್ಞಾನವನ್ನು ನೀಡಲಾಗುತ್ತದೆ.


ಹಾಗಂತ ಅವರು ಇಂದಿನ ಆಧುನಿಕ ಹಾಗು ಔಪಚಾರಿಕ ಶಿಕ್ಷಣದಿಂದ ದೂರಾಗಿಲ್ಲ. ಆದರೆ ಉಳಿದ ಸಮಯವನ್ನು ಎಷ್ಟು ಪ್ರಯೋಜನಕಾರಿ ಮಾಡಿಕೊಳ್ಳಬಹುದು ಎಂಬುದಕ್ಕೆ ರತ್ನಮಾನಸ ಉದಾಹರಣೆ.
ರತ್ನಮಾನಸ ಅಪ್ಪಟ ದೇಸಿ ಶಾಲೆ. ನಮ್ಮ ಭಾರತ ನೆಲದ ಶಾಲೆಗಳು ಹೇಗಿದ್ದರೆ ಚಂದ ಇರುತಿತ್ತು ಎಂಬುದಕ್ಕೆ ರತ್ನಮಾನಸ ಜ್ವಲಂತ ಸಾಕ್ಷಿ. ಇಂದಿನ ಯುವ ಪೀಳಿಗೆ ತಂತ್ರಜ್ಞಾದ ದಿಕ್ಕಿಗೆ ಹೊರಳಿ ನಮ್ಮ ದೇಸೀಯತೆಯ ಸೊಬಗಿನ ನೆರಳಿನಿಂದ ದೂರ ಸರಿಯುತ್ತಿರುವಾಗ ನಮ್ಮ ತನವನ್ನು ಹಿಡಿದಿಡುವ ಹಾಗು ಯುವಪೀಳಿಗೆಗೆ ನಮ್ಮ ದೇಸಿ ಶಿಕ್ಷಣವನ್ನು ನೀಡುವ ವಿನೂತನ ಪ್ರಯತ್ನ ರತ್ನಮಾನಸದಲ್ಲಿ ನಡೆಯುತ್ತಿದೆ. ಭಾರತದ ಉಜ್ವಲ ಭವಿಷ್ಯಕ್ಕೆ ನಮ್ಮ ಮಕ್ಕಳಿಗೆ ಹಾಗು ಯುವಪೀಳಿಗೆಗೆ ಸುಭದ್ರ ದೇಸೀಯ ಬುನಾದಿ ದೊರೆತರೆ ಗಾಂಧಿ ಕನಸಿನ ಭಾರತದ ನಿರ್ಮಾಣ ಕಷ್ಟವಲ್ಲ. ಬಹುಶಃ ಗಾಂಧಿ ಕನಸಿನ ಶಾಲೆ ಇಂತಹದ್ದೇ ಆಗಿತ್ತೋ ಏನೋ? ಅದು ರತ್ನಮಾನಸದಲ್ಲಿ ಸಾಕಾರಗೊಳ್ಳುತ್ತಿದೆ.

– ಪ್ರಗತಿ. ಎಂ
ಎಸ್.ಡಿ.ಎಂ. ಕಾಲೇಜು, ಉಜಿರೆ.

Share post:

Subscribe

spot_imgspot_img

Popular

More like this
Related

ಜನರ ಕಲ್ಯಾಣ ಯೋಜನೆಗಳಿಗೆ ಪ್ರತಿ ವರ್ಷ 1 ಲಕ್ಷ ಕೋಟಿ ವೆಚ್ಚ: ಡಿ.ಕೆ.ಶಿವಕುಮಾರ್

ಜನರ ಕಲ್ಯಾಣ ಯೋಜನೆಗಳಿಗೆ ಪ್ರತಿ ವರ್ಷ 1 ಲಕ್ಷ ಕೋಟಿ ವೆಚ್ಚ:...

ರಾಜ್ಯದಲ್ಲಿ ಮುಗಿದಿಲ್ಲ ವರುಣನ ಅಬ್ಬರ: 20 ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಮುಗಿದಿಲ್ಲ ವರುಣನ ಅಬ್ಬರ: 20 ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...

ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ!

ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷ್ಯ ಮಾಡಬೇಡಿ! ನಮ್ಮ ದೇಹವು ಕೆಲವೊಮ್ಮೆ...

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ಯಾವುದೇ ಸಂಘಸಂಸ್ಥೆಗಳ...