ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸೇರಿದಂತೆ 10ಮಾಜಿ ಸಿಎಂಗಳ ಪುತ್ರರು ಚುನಾವಣಾ ಅಖಾಡದಲ್ಲಿ ಸೆಣೆಸಲು ರೆಡಿಯಾಗಿದ್ದಾರೆ.
ಸಿಎಂ ಸಿದ್ಧರಾಮಯ್ಯ , ಮಾಜಿ ಮುಖ್ಯಮಂತ್ರಿಗಳಾದ ಗುಂಡೂರಾವ್, ಜೆ.ಎಚ್ ಪಟೇಲ್, ಎಸ್ ಬಂಗಾರಪ್ಪ, ಎಚ್ ಡಿ ದೇವೇಗೌಡ, ಬಿ ಎಸ್ ಯಡಿಯೂರಪ್ಪ, ಎಸ್ ಆರ್ ಬೊಮ್ಮಾಯಿ ,ಧರ್ಮಸಿಂಗ್ ಅವರ ಮಕ್ಕಳು ಚುನಾವಣೆಯಲ್ಲಿ ಸೆಣೆಸಲು ಸಿದ್ಧರಾಗಿದ್ದಾರೆ.
ಡಾ. ಯತೀಂದ್ರ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರು ಕಣದಲ್ಲಿದ್ದಾರೆ.

ವಿಜಯೇಂದ್ರ:
ಮಾಜಿ ಸಿಎಂ ಯಡಿಯೂರಪ್ಪನವರ ಕಿರಿಯ ಮಗ ವಿಜಯೇಂದ್ರ ಈವರೆಗೂ ಯಾವುದೇ ಚುನಾವಣೆ ಕಣಕ್ಕೆ ಇಳಿದಿರಲಿಲ್ಲ. ತೆರೆಮರೆಯಲ್ಲಿದ್ದ ಇವರೀಗ ಚುನಾವಣಾ ಕಣದಲ್ಲಿದ್ದಾರೆ. ಮೊದಲ ಬಾರಿಗೆ ಅವರು ವರುಣಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇವರ ಪ್ರತಿಸ್ಪರ್ಧಿ ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಯತೀಂದ್ರ.

ಮಹಿಮ ಪಾಟೀಲ್:
ಸಮಾಜವಾದಿ ಚಿಂತಕ, ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ಜೆಡಿಯು ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ.

ಎಚ್.ಡಿ. ಕುಮಾರ ಸ್ವಾಮಿ : ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ರಾಮನಗರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. 2004ರಿಂದ ಸತತ ಮೂರು ಬಾರಿ ಗೆದ್ದಿರುವ ಅವರು ನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಸಿದ್ಧರಾಗಿದ್ದಾರೆ.

ಹೆಚ್.ಡಿ.ರೇವಣ್ಣ :
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೂರನೇ ಮಗ ಎಚ್.ಡಿ.ರೇವಣ್ಣ ಹಾಸನ ಜಿಲ್ಲೆ ಹೊಳೆನರಸೀಪುರದ ಜೆಡಿಎಸ್ ಅಭ್ಯರ್ಥಿ. ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ ಅವರು ತಾವು ಎದುರಿಸಿದ ಐದು ಚುನಾವಣೆಯಲ್ಲಿ ಒಂದು ಬಾರಿ ಸೋಲನುಭವಿಸಿದವರು.

ಅಜಯ್ ಸಿಂಗ್:
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿಯಿಂದ ಎರಡನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಎದುರಿಸಿದ ಮೊದಲ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಆದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಮತಗಳಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ ಅವರು ಈಗ ಮತ್ತೊಮ್ಮೆ ಚುನಾವಣಾ ಅಖಾಡಕ್ಕಿಳಿದ್ದಾರೆ.

ದಿನೇಶ್ ಗುಂಡೂರಾವ್:
ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪುತ್ರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ 5ನೇ ಬಾರಿಗೆ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 1999ರಿಂದ ಸತತ ನಾಲ್ಕು ಬಾರಿ ಗೆದ್ದಿದ್ದಾರೆ ಇವರು.

ಕುಮಾರ್ ಬಂಗಾರಪ್ಪ -ಮಧು ಬಂಗಾರಪ್ಪ :
ಸಹೋದರರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸೊರಬ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರರರೀಗ ಚುನಾವಣೆಯಲ್ಲಿ ಬದ್ಧ ವೈರಿಗಳು. ಬಿಜೆಪಿಯಿಂದ ಕುಮಾರ ಬಂಗಾರಪ್ಪ ಹಾಗೂ ಜೆಡಿಎಸ್‍ನಿಂದ ಮಧುಬಂಗಾರಪ್ಪ ಸ್ಪರ್ಧಿಸಿದ್ದಾರೆ.


ಬಸವರಾಜ ಬೊಮ್ಮಾಯಿ:
ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.







