ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಪಿ ಗೌಡ ಅವರ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು.
ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಬುಧವಾರ ತಡರಾತ್ರಿ ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತು. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು.
ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಪೊಲೀಸ್ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು.
ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ಈ ಬಗ್ಗೆ ದೂರು ನೀಡಿದ್ದರು. ಸದ್ಯ ಈ ಹಿನ್ನೆಲೆಯಲ್ಲಿ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ಐಪಿಸಿ 353 ಅನ್ವಯ ಪ್ರಕರಣ ದಾಖಲಾಗಿದೆ.