ಗೆಳತಿ ಜೊತೆ ಲಾಡ್ಜ್ ಗೆ ಹೋಗಿದ್ದ ಯುವಕನನ್ನು ಹಣಕ್ಕಾಗಿ ಬೆದರಿಸಿದ ಆರೋಪಿಯನ್ನು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಹೇಂದ್ರ ಕುಮಾರ್ ಬಂಧಿತ.
ಯುವಕನೊಬ್ಬ ತನ್ನ ಗೆಳತಿ ಜೊತೆಗೆ ಲಾಡ್ಜ್ ಗೆ ಹೋಗಿದ್ದಾಗ , ಮಧ್ಯರಾತ್ರಿ ಮಹೇಂದ್ರ ರೂಮ್ ಗೆ ಹೋಗಿ ಯುವಕನಿಗೆ ಬೆದರಿಕೆ ಹಾಕಿದ್ದಾನೆ. ಲಾಡ್ಜ್ ನಲ್ಲಿ ಏನ್ ಮಾಡ್ತಿದ್ದೀಯ ಎಂದು ಪ್ರಶ್ನಿಸಿದ್ದಾನೆ. ನಿಮ್ಮ ವೀಡಿಯೋ ಸಹ ನನ್ನ ಬಳಿ ಇದೆ ಎಂದು ಬೆದರಿಸಿ 50 ಸಾವಿರ ರೂ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡ್ತೀನಿ ಎಂದು ಹೇಳಿದ್ದ.
ನಂತರ ಯುವಕ ಹಣ ಕೊಡಲು ಒಪ್ಪಿದಾಗ ಮಹೇಂದ್ರ ಕಾರಿನಲ್ಲಿ ಅವನನ್ನು ಕರೆದುಕೊಂಡು ಹೋಗಿ ಎಟಿಎಂನಿಂದ 20 ಸಾವಿರ ರೂ ಡ್ರಾ ಮಾಡಿಸಿಕೊಂಡಿದ್ದನು. ಹಣ ಪಡೆದ ಬಳಿಕ ಯುವಕನನ್ನು ಕೆ.ಆರ್ ಪುರಂ ಬಳಿ ಬಿಟ್ಟು ಹೋಗಿದ್ದನು.
ಬಳಿಕ ಮೊಬೈಲ್ ಗೆ ಕರೆಮಾಡಿ ಉಳಿದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟು, ಇಲ್ಲದಿದ್ದರೆ ವೀಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಅಂತಿಮವಾಗಿ ಯುವಕ ಮಾರತ್ ಹಳ್ಳಿ ಠಾಣೆಯಲ್ಲಿ ಮಹೇಂದ್ರನ ವಿರುದ್ಧ ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.