ಇಂದಿನ ಟಾಪ್ 10 ಸುದ್ದಿಗಳು..! 11.01.2016

Date:

ಪಠಾಣ್ ಕೋಟ್ ದಾಳಿ; ಪಾಕಿಸ್ತಾನದಲ್ಲಿ ಶಂಕಿತ ಉಗ್ರರ ಬಂಧನ

ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ಸಂಬಂಧ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಪಾಕ್ ತನಿಖಾ ತಂಡ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಗುಜ್ರಾನ್ವಾಲ್, ಜೆಲೂಮ್ ಮತ್ತು ಬಹವಾಲ್ ಪುರ ಜಿಲ್ಲೆಗಳ ಮೇಲೆ ದಾಳಿ ನಡೆಸಿರುವ ಪಾಕ್ ಪಡೆ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಪಾಕ್ ಕ್ರಮದ ಬಳಿಕವೇ ಮಾತುಕತೆ : ಅಜಿತ್ ದೋವಲ್

ಜನವರಿ 15ರಂದು ನಡೆಸಲು ಉದ್ದೇಶಿಸಲಾಗಿರುವ ಭಾರತ – ಪಾಕ್ ವಿದೇಶ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ರದ್ದಾಗಿದೆ ಎಂಬ ಮಾಧ್ಯಮ ವರದಿಗಳ ಮಧ್ಯೆಯೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದಿದ್ದಾರೆ. ಆದರೆ ಪಠಾಣ್ ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿರುವ ಪಾಕ್ ಭಯೋತ್ಪಾದಕ ಸಮೂಹದ ವಿರುದ್ಧ ಪಾಕಿಸ್ತಾನ ಸರಕಾರ ನಿರ್ಣಾಯಕ ಕ್ರಮ ಕೈಕೊಂಡ ಬಳಿಕವೇ ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆ ನಡೆಯಲಿದೆ ಎಂದು ಹೇಳಿದ್ದಾರೆ.

ಹತ್ತನೇ ಹರಗತಿಯಲ್ಲಿ 95% ಅಂಕ ಪಡೆದ ಅಫ್ಜಲ್ ಪುತ್ರ

ಸಂಸತ್ ದಾಳಿಯ ತಪ್ಪಿತಸ್ಥ ಮತ್ತು 3 ವರ್ಷಗಳ ಹಿಂದೆ ಮರಣ ದಂಡನೆಗೆ ಗುರಿಯಾದ ಅಫ್ಜಲ್ ಗುರು ಪುತ್ರ ಘಾಲಿಬ್ ಗುರು ಜಮ್ಮು ಮತ್ತು ಕಾಶ್ಮೀರ ಪರೀಕ್ಷಾ ಮಂಡಳಿಯ 10ನೇ ತರಗತಿ ಪರೀಕ್ಷೆಯಲ್ಲಿ 500 ಅಂಕಗಳಿಗೆ 474 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾನೆ. ಅಪ್ಹಲ್ ಗುರುವನ್ನು ಸಂಸತ್ ದಾಳಿಯ ಶಿಕ್ಷೆಯಲ್ಲಿ ಫೆಬ್ರವರಿ 2013, 9 ರಂದು ಗಲ್ಲಿಗೇರಿಸಿದ ಮೇಲೆ ಹಲವಾರು ಕಷ್ಟ ಕೋಟಲೆಗಳ ನಡುವೆಯೂ 95% ಅಂಕಗಳೊಂದಿಗೆ ತೇರ್ಗಡೆಯಗಿರುವ ಘಾಲಿಬ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾಗಿದ್ದಾನೆ.
ಬೈಕ್ ಸ್ಕಿಡ್ ಆಗಿ ಬಿಸಿಲೆ ಚಿತ್ರದ ನಿರ್ದೇಶಕ ಸಾವು

ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಬಿಸಿಲೆ ಚಿತ್ರದ ನಿರ್ದೇಶಕ ಸಂದೀಪ್ ರವರು ನಿಧನರಾಗಿದ್ದಾರೆ. ಚಿತ್ರವೊಂದರ ಚಿತ್ರೀಕರಣಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ರಸ್ತೆ ಮೂಲಕ ತೆರಳುತ್ತಿದ್ದ ಸಂದೀಪ್ ರವರು ಆಯತಪ್ಪಿ ಕೆಳಗೆ ಬಿದ್ದು ದುರ್ಮರಣಕ್ಕೀಡಾಗಿದ್ದಾರೆ. ಸಂದೀಪ್ ತೆರಳುತ್ತಿದ್ದ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಕದ್ದು ಮುಚ್ಚಿ ಒಳಬಂದ ಅಮೆರಿಕ ನೌಕೆ: ಸಿಬ್ಬಂದಿಗೆ 5 ವರ್ಷ ಶಿಕ್ಷೆ

ಭಾರತೀಯ ಜಲಪ್ರದೇಶಕ್ಕೆ ಶಸ್ತ್ರಾಸ್ತ್ರ ಸಹಿತ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಅಮೆರಿಕ ನೌಕೆಯೊಂದರ ಎಲ್ಲ 35 ಸಿಬ್ಬಂದಿಗೆ ತಮಿಳುನಾಡಿನ ಟುಟಿಕೋರಿನ್ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು  ನೀಡಿದೆ. ಅಮೆರಿಕದ ಅಡ್ವನ್ ಫೋರ್ಟ್ ಇಂಟರ್ ನ್ಯಾಷನಲ್ ಕಂಪನಿ ಸ್ವಾಮ್ಯದ ಸೀಮನ್ ಗಾರ್ಡ್ ಓಹಿಯೋ ನೌಕೆ, ಅಕ್ರಮವಾಗಿ ಭಾರತದ ಜಲಪ್ರದೇಶ ಪ್ರವೇಶ ಮಾಡಿದೆ ಎಂಬ ಸುದ್ದಿ ಖಚಿತವಾಗಿದೆ. ನೌಕೆಯಲ್ಲಿ ಇಬ್ಬರು ಭಾರತೀಯರು, ಮೂವರು ಉಕ್ರೇನ್ ಪ್ರಜೆಗಳು, ಆರು ಜನ ಬ್ರಿಟಿಷರು ಹಾಗೂ 14 ಜನ ಎಸ್ಟೋನಿಯನ್ ಪ್ರಜೆಗಳು ಸೇರಿದಂತೆ ಒಟ್ಟು 35 ಮಂದಿ ಸಿಬ್ಬಂದಿ ಇದ್ದರು.

ಪಿಡಿಪಿ-ಬಿಜೆಪಿ ಅಧಿಕಾರ ಹಂಚಿಕೆ ಮುಂದುವರಿಯಲಿದೆ: ಬಿಜೆಪಿ

ಪಿಡಿಪಿ ಜೊತೆಗಿನ ಅಧಿಕಾರ ಹಂಚಿಕೆ ವ್ಯವಸ್ಥೆ ಮುಂದುವರಿಯುವುದನ್ನು ಬಿಜೆಪಿ ಬಯಸುತ್ತದೆ ಮತ್ತು ಸರಕಾರ ರಚಿಸುವಲ್ಲಿ ಮೆಹಬೂಬ ಮುಫ್ತಿ ನೇತೃತ್ವದ ಪಕ್ಷವೇ ಮೊದಲ ಹೆಜ್ಜೆಯನ್ನು ಇರಿಸಬೇಕಾಗುತ್ತದೆ ಎನ್ನುವ ಮೂಲಕ ಬಿಜೆಪಿಯು ಪಿಡಿಪಿ ಅಂಗಣಕ್ಕೆ ಚೆಂಡನ್ನು ಎಸೆದಿದೆ. ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ತನ್ನ ತಂದೆ ಮುಫ್ತಿ ಮಹಮ್ಮದ್ ಸಯೀದ್ ರ ನಿಧನಾನಂತರ ಈಗ ಶೋಕಾಚರಣೆಯಲ್ಲಿರುವ ಮೆಹಬೂಬ ಮುಫ್ತಿ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಅಥವಾ ಉಭಯ ಪಕ್ಷಗಳು ಸರಕಾರ ರಚನೆಯ ವಿಷಯದಲ್ಲಿ ಯಾವುದೇ ಶರತ್ತು ಒಡ್ಡಿಕೊಂಡಿಲ್ಲ, ಈ ಬಗ್ಗೆ ಮಾಧ್ಯಮಗಳೇ ಊಹಾಪೋಹದ ಸುದ್ದಿ ಹರಡಿಸಿವೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಹೇಳಿದರು.

ಮೈಸೂರಲ್ಲೂ ಹನಿಟ್ರ್ಯಾಪ್ ದಂಧೆ, ಪ್ರತಿಷ್ಠಿತರ ಮಕ್ಕಳೇ ಟಾರ್ಗೆಟ್

ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳನ್ನೇ ಪ್ರಮುಖ ಗುರಿಯಾಗಿರಿಸಿ ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡು ಹಲವರನ್ನು ಸುಲಿಗೆ ಮಾಡಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಬಿ. ದಯಾನಂದ್ ತಿಳಿಸಿದ್ದಾರೆ. ಸೈನಿಕರನ್ನು ಟಾರ್ಗೆಟ್ ಮಾಡುವ ಜಾಲವೊಂದು ಸುಂದರ ಯುವತಿಯರ ಮೂಲಕ ಮೊಬೈಲ್ ನಲ್ಲಿ ಸೈನಿಕರನ್ನು ಸಂಪರ್ಕಿಸಿ ಅವರ ವಿಶ್ವಾಸಗಳಿಸಿ ಪ್ರೀತಿ ಮಾಡುವ ನಾಟಕವಾಡಿ ದೇಶದ ಭದ್ರತೆಗೆ ಸಂಬಂಧಿಸಿದ ಎಲ್ಲಾ ರಹಸ್ಯಗಳನ್ನು ಪಡೆಯುವುದು ರಾಷ್ಟ್ರೀಯ ಮಟ್ಟದ ಹನಿ ಟ್ರ್ಯಾಪ್ ಆಗಿದೆ. ಆದರೆ ಈಗ ಆ ಜಾಲ ಹಣ ಮಾಡುವುದರಲ್ಲೂ ಬಳಕೆಯಾಗುತ್ತಿದೆ.

ಶಾಸಕರು, ಅಧಿಕಾರಿಗಳಿಗೆ ಶಾಕ್ ನೀಡಿದ ಸರ್ಕಾರ..!

ಸರ್ಕಾರಿ ದುಡ್ಡಲ್ಲಿ ಫಾರಿನ್ ಟ್ರಿಪ್ ಮಾಡಲು ಸಿದ್ಧವಾಗಿದ್ದ ಶಾಸಕರು ಹಾಗೂ ಅಧಿಕಾರಿಗಳಿಗೆ ಸರ್ಕಾರ ಶಾಕ್ ನೀಡಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಪ್ರತಿ ವರ್ಷ ರಾಜ್ಯ ಸರ್ಕಾರ ಅಧ್ಯಯನಕ್ಕಾಗಿ ಶಾಸಕರು ಹಾಗೂ ಅಧಿಕಾರಿಗಳನ್ನು ತಂಡ ತಂಡವಾಗಿ ವಿದೇಶಕ್ಕೆ ಕಳುಹಿಸುತ್ತಿತ್ತು. ಆದರೆ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿರುವುದರಿಂದ ವಿದೇಶ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಮಕ್ಕಳ ದೌರ್ಜನ್ಯಕ್ಕೆ ಶಿಕ್ಷೆ ನೀಡುವ ಹಕ್ಕು ನಮಗಿಲ್ಲ; ಸುಪ್ರಿಂ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಯಾವ ರೀತಿಯ ಶಿಕ್ಷೆ ನೀಡಬೇಕೆಂದು ತೀರ್ಮಾನಿಸುವ ಹಕ್ಕು ನ್ಯಾಯಾಲಯಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂತಹ ವಿಷಯಗಳ ಬಗ್ಗೆ ಸಂಸತ್ತು ತೀರ್ಮಾನ ಕೈಗೊಳ್ಳಬೇಕು. ಈ ರೀತಿಯ ಪ್ರಕರಣಗಳಿಗೆ ಶಿಕ್ಷೆ ವಿಧಿಸುವ ಬಗ್ಗೆ ಕಾನೂನಿನಲ್ಲಿ ನಿಯಮಗಳಿನೆ. ಆದರೆ ಸಂತ್ರಸ್ತರ ವಯಸ್ಸಿಗೆ ಸಂಬಂಧಿಸಿದ ನಿಯಮಗಳಲ್ಲಿ ಸ್ಪಷ್ಟತೆ ಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ: ಮೂವರು ಅಂದರ್

ವೇಶ್ಯಾವಾಟಿಕೆಗೆ ಸಹಾಯ ಮಾಡುತ್ತಿದ್ದ ಲಾಡ್ಜ್ ಮ್ಯಾನೇಜರ್ ಸೇರಿ ಇಬ್ಬರು ಗಿರಾಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಲಾಡ್ಜ್ ಒಂದರ ಮ್ಯಾನೇಜರ್ ಕೆ.ಎಂ. ಪ್ರದೀಪಗೌಡ ಎಂಬಾತನೇ ಬಂಧಿತ ಆರೋಪಿ. ಈತ ತನ್ನ ಲಾಡ್ಜ್ ನಲ್ಲಿ ಮಹಿಳೆಯರಿಗೆ ಉಳಿದುಕೊಳ್ಳಲು ಆಶ್ರಯ ನೀಡುತ್ತಿದ್ದ. ಲಾಡ್ಜ್ಗೆ ಬರುವ ಪುರುಷ ಗಿರಾಕಿಗಳಾದ ದುರ್ಗಪ್ಪ ಡೋನಿ ಹಾಗೂ ನೊವೆಲ್ ಶ್ಯಾಮುವೆಲ್ ಎಂಬಾತರೊಂದಿಗೆ ಹಣದ ವ್ಯವಹಾರ ಕುದುರಿಸಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...