ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾದಂತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾನೂನು ಆಯೋಗಕ್ಕೆ ಈ ಕುರಿತು ಸಲಹೆ ನೀಡಿ 8 ಪುಟಗಳ ಪತ್ರ ಬರೆದಿರುವಂತೆಯೇ ಈ ಬೆಳವಣಿಗೆ ನಡೆದಿದ್ದು, ‘ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೆಲವು ರಾಜ್ಯಗಳ ವಿಧಾನಸಭೆಗಳ ಚುನಾವಣೆ ಮುಂದೂಡುವುದು ಅಥವಾ ಅವಧಿಗೆ ಮುನ್ನ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಛತ್ತೀಸ್‌ಗಢ ವಿಧಾನಸಭೆ ಅವಧಿ ಜ. 5, ಮಧ್ಯ ಪ್ರದೇಶದ ಅವಧಿ ಜ. 7, ರಾಜಸ್ಥಾನದ್ದು ಜ. 20ರಂದು ಮುಕ್ತಾಯವಾಗಲಿದೆ. ಆಂಧ್ರಪ್ರದೇಶ ಜೂ. 18, ತೆಲಂಗಾಣ ಜೂ. 6, ಒಡಿಶಾ ಜೂ. 11, ಹರಿಯಾಣ ನ. 2, ಝಾರ್ಖಂಡ್ 2020 ಜ. 5, ಮಹಾರಾಷ್ಟ್ರ, 2019ರ ನ. 9, ಬಿಹಾರ 2020ರ ನ. 29ರಂದು ಮುಕ್ತಾಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರಕಾರ ಪತನವಾಗಿರು ವುದರಿಂದ ಅಲ್ಲಿ ರಾಜ್ಯಪಾಲರ ಆಳ್ವಿಕೆ ಇದೆ.
ಕಾಂಗ್ರೆಸ್ ಆಡಳಿತದಲ್ಲಿರುವ ಮಿಜೋರಾಂ ವಿಧಾನಸಭೆ ಅವಧಿ ಡಿ.15ಕ್ಕೆ ಮುಕ್ತಾಯವಾಗಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳಲ್ಲಿ ಸದ್ಯ ಬಿಜೆಪಿ ಸರಕಾರ ಇದೆ. ಅಲ್ಪಾವಧಿಗೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ, ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆ ನಡೆಸಲಾಗುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಲೋಕಸಭೆಯ ನಿವೃತ್ತ ಸೆಕ್ರೆಟರಿ ಜನರಲ್ ಮತ್ತು ಸಾಂವಿಧಾನಿಕ ತಜ್ಞ ಪಿ.ಡಿ.ಟಿ. ಆಚಾರ್ಯ ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಪ್ರಸ್ತಾಪದ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಮಾತ್ರ ಅಂಥ ಕ್ರಮ ಅನುಸರಿಸಲು ಅವಕಾಶವಿದೆ ಎಂದಿದ್ದಾರೆ. ಕಾಂಗ್ರೆಸ್, ಇತರ ಕೆಲವು ಪ್ರತಿಪಕ್ಷಗಳು ಈ ಪ್ರಸ್ತಾಪಕ್ಕೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿವೆ.
ಕಾನೂನು ಆಯೋಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಪತ್ರ
ಏಕಕಾಲದಲ್ಲಿ ಚುನಾವಣೆ ಸೂಕ್ತ. ಇದರಿಂದ ವರ್ಷವಿಡೀ ಚುನಾವಣೆಯ ಗುಂಗು ತಪ್ಪಿಸ ಬಹುದು ಎಂದು ಶಾ ಕಾನೂನು ಆಯೋಗಕ್ಕೆ 8 ಪುಟಗಳ ಪತ್ರ ಬರೆದಿದ್ದಾರೆ. ಇದು ಕಲ್ಪನೆಯಲ್ಲ. ಅನುಷ್ಠಾನಗೊಳಿಸಲು ಸಾಧ್ಯವಿದೆ ಎಂದು ಪತ್ರದಲ್ಲಿ ಪ್ರಸ್ತಾವಿಸಿದ್ದಾರೆ. ಈ ವಿಚಾರಕ್ಕೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.