ಪ್ರತಿಯೊಬ್ಬರ ಜೀವನದಲ್ಲಿ ಹನಿಮೂನ್ ಅನ್ನೋದು ಮಧುರ ಕ್ಷಣ. ಇದು ತುಂಬಾ ವಿಶೇಷವಾಗಿರಬೇಕು ಎಂದು ಬಯಸುವುದು ಸಹಜ. ಬೀಚ್ ನಲ್ಲಿ, ಪ್ಯಾರಚೂಟ್ ಗಳಲ್ಲಿ ಹನಿಮೂನ್ ಮಾಡಿಕೊಂಡವರಿದ್ದಾರೆ. ಆದರೆ, ರೈಲಿನಲ್ಲಿ ಹನಿಮೂನ್ ಮಾಡಿಕೊಂಡಿರುವವರನ್ನು ನೋಡಿದ್ದೀರ?
ವಿಶೇಷ ಎಂಬಂತೆ ಬ್ರಿಟನ್ ದಂಪತಿ ತಮ್ಮ ಹನಿಮೂನ್ ಗಾಗಿ ರೈಲನ್ನೇ ಬುಕ್ ಮಾಡಿದ್ದಾರೆ…!
ಬ್ರಿಟನ್ ನ ಗ್ರಹಾಂ ವಿಲಿಯಂ ಲಿನ್ (30) , ಸಿಲ್ವಿಯ ಪ್ಲಾಸಿಕ್ (27) ದಂಪತಿ ಹನಿಮೂನ್ ಗಾಗಿ ಆಯ್ಕೆ ಮಾಡಿಕೊಂಡಿದ್ದು ಭಾರತವನ್ನು.
ಭಾರತಕ್ಕೆ ಬಂದ ಈ ಜೋಡಿ ನೀಲಗಿರಿ ಬೆಟ್ಟಕ್ಕೆ ಪ್ರಯಾಣಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಮೆಟ್ಟುಪಾಳಯಂ (ಕೋಯಮುತ್ತೂರು) ನಿಂದ ಉದಕಮಂಡಲಂ (ಊಟಿ) ತಲುಪಲು 3 ಲಕ್ಷ ರೂ ಪಾವತಿಸಿ ಇಡೀ ರೈಲನ್ನೇ ಬುಕ್ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ9.10 ಕ್ಕೆ ಮೆಟ್ಟುಪಾಳಯಂನಿಂದ ಹೊರಟ ರೈಲು ಅಂದೇ ಮಧ್ಯಾಹ್ನ 2.40 ಕ್ಕೆ ಊಟಿ ತಲುಪಿದೆ.
ದಂಪತಿ ಐಆರ್ಟಿಸಿ ವೆಬ್ ಸೈಟ್ನಲ್ಲಿ ಇಡೀ ರೈಲನ್ನೇ ಬುಕ್ ಮಾಡಿದರು. ಮೊದಲ ಬಾರಿ ಹಿಲ್ ಟೂರಿಸಂ ಅನ್ನು ಪ್ರೋತ್ಸಾಹಿಸಲು ಈ ವಿಶೇಷ ಮನವಿಯನ್ನು ಒಪ್ಪಿಕೊಳ್ಳಲಾಯಿತು. ಸೇಲಂ ವಿಭಾಗ ಹಿಲ್ ಟೂರಿಸಂ ಅನ್ನು ಪ್ರೋತ್ಸಾಹಿಸಲು 120 ಆಸನ ಸಾಮಾರ್ಥ್ಯದ ಈ ವಿಶೇಷ ರೈಲನ್ನು ಬಿಟ್ಟಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.