ಕನಸಿನ ಬೆನ್ನಟ್ಟಿ ಹೊರಟಿರುವ‌ ಚಂದನ್ ಹೆಜ್ಜೆ ಗುರುತು

Date:

ಅವಮಾನವನ್ನು ಮೆಟ್ಟಿ ನಿಂತು ಕನಸಿನ ಬೆನ್ನಟ್ಟಿ ಹೊರಟು ಸಾಧನೆಯ ದಾರಿಯಲಿ ಹೆಜ್ಜೆ ಹಾಕುತ್ತಿರುವ ಯುವನಟನ ಹೆಜ್ಜೆಗುರುತಿದು.‌
ಆರ್ ಕೆ ಚಂದನ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಮಾಂಗಲ್ಯಂ ತಂತು ನಾನೇನ’ ಧಾರವಾಹಿಯ ಹೀರೋ.‌

ಚಂದನ್ ಮೂಲತಃ ಬೆಂಗಳೂರಿನವರು.‌ ತಂದೆ ಆರ್.ಕೆ ಸ್ವಾಮಿ, ತಾಯಿ ಲಲಿತಾ, ಅಣ್ಣಾ ಪುನೀತ್, ಅಕ್ಕ ನಯನ.‌
ಎಸ್ ಬಿಐ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ, ಕಾರ್ಮಲ್ ಪಿಯು ಕಾಲೇಜಿನಲ್ಲಿ ಪಿಯುಸಿ, ಬಿಎಂಎಸ್ ಕಾಲೇಜಲ್ಲಿ ಆರ್ಕಿಟೆಕ್ಚರ್ ‌ನಲ್ಲಿ ಪದವಿ ಮಾಡಿರುವ ಚಂದನ್ ಆಯ್ಕೆ ಮಾಡಿಕೊಂಡಿದ್ದು ಅಭಿನಯವನ್ನು.

ಆಗಿನ್ನೂ ಚಂದನ್ ಗೆ ಮೂರು ವರ್ಷ. ತಂದೆ ಅಕಾಲಿಕ ಮರಣವನ್ನಪ್ಪಿದರು. ಆದರೆ, ಬೆಳೆಯುವ ಮಗನ ಮೇಲೆ ಈ ಕಹಿ ಘಟನೆ ಕೆಟ್ಟ ಪರಿಣಾಮ ಬೀರ ಬಾರದು ಅಂತ ತಾಯಿ ತಂದೆ ಸಾವನ್ನಪ್ಪಿದ ವಿಷಯವನ್ನು ಚಂದನ್ ಗೆ ತಿಳಿಸಲೇ ಇಲ್ಲ. ಅಪ್ಪ ಕೆಲಸಕ್ಕೆ ಹೋಗಿದ್ದಾರೆ, ನಾಳೆ ಬರ್ತಾರೆ, ನಾಡಿದ್ದು ಬರ್ತಾರೆ, ಆ ಹಬ್ಬಕ್ಕೆ ಬರ್ತಾರೆ, ಈ ಹಬ್ಬಕ್ಕೆ ಬರ್ತಾರೆ , ನಿನ್ನ ಹುಟ್ಟು ಹಬ್ಬಕ್ಕೆ ಬರ್ತಾರೆ ಅಂತ ಹೇಳುತ್ತಲೇ ಅದೆಷ್ಟೋ ವರ್ಷಗಳನ್ನು ದಬ್ಬಿದ್ದರು…! ತಂದೆ ಇಲ್ಲದ ಕೊರಗು ಕಾಡದಂತೆ ಆ ತಾಯಿ ಮಕ್ಕಳನ್ನು ಬೆಳೆಸಿದರು.

ಚಂದನ್ ಗೆ ಚಿಕ್ಕಂದಿನಲ್ಲೇ ನೃತ್ಯ , ನಟನೆಯಲ್ಲಿ ಆಸಕ್ತಿ. ವಿನೋದ್ ರಾಜ್ ಕುಮಾರ್ ಅಭಿನಯದ ‘ಡ್ಯಾನ್ಸ್ ರಾಜ ಡ್ಯಾನ್ಸ್ ‘ ಚಿತ್ರದ ಹಾಡನ್ನು ಟಿವಿಯಲ್ಲಿ ನೋಡುತ್ತಾ ಹೆಜ್ಜೆ ಹಾಕುತ್ತಿದ್ದರು. ಮಗನಲ್ಲಿನ ಡ್ಯಾನ್ಸ್ ಕಲಿಕೆಯ ಆಸಕ್ತಿ ಕಂಡು ತಾಯಿ ಡ್ಯಾನ್ಸ್ ಕ್ಲಾಸ್ ಗೆ ಸೇರಿಸಿದ್ರು.‌

ಕಾಲೇಜು ದಿನಗಳಲ್ಲಿ ತಂಡವೊಂದನ್ನು ಮಾಡಿಕೊಂಡು ಕಾರ್ಯಕ್ರಮ ನೀಡುತ್ತಿದ್ದರು. ರಘುದೀಕ್ಷಿತ್ ಅವರ ತಂಡದೊಂದಿಗೆ ಕಾರ್ಯಕ್ರಮ‌ ಮಾಡುವ ಅವಕಾಶವೂ ಆಗಲೇ ಅವರಿಗೆ ಒಲಿದು ಬಂದಿತ್ತು. ಅಮೆರಿಕಾಕ್ಕೆ ಹೋಗುವ ಅವಕಾಶ ಸಹ ಬಂದಿತ್ತು. ‌ಬೆಸ್ಟ್ ಡ್ಯಾನ್ಸರ್ ಅವಾರ್ಡ್, ಬೆಸ್ಟ್ ಆಲ್ ರೌಂಡರ್ ಅವಾರ್ಡ್ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಚಂದನ್ ಕಾಲೇಜು ದಿನಗಳಲ್ಲಿ ಮುಡಿಗೇರಿಸಿಕೊಂಡಿದ್ದರು.

ಪಿಯಸಿ ಮುಗಿದ ಬಳಿಕ ಆ್ಯಕ್ಟಿಂಗ್ ಕ್ಲಾಸ್ ಗೆ ಹೋಗ್ತೀನಿ ಅಂದ್ರು ಚಂದನ್. ಡಿಗ್ರಿ ಮುಗಿದ ಮೇಲೆ ಹೋಗು ಎಂದು ಅಮ್ಮ ಹೇಳಿದ್ರು. ಅಮ್ಮನ ಮಾತಿಗೆ ಒಪ್ಪಿ ಆರ್ಕಿಟೆಕ್ಚರ್ ವಿಷಯದಲ್ಲಿ ಪದವಿಗೆ ಸೇರಿದ್ರು. ಆ ವೇಳೆಯೇ ಧಾರವಾಹಿಯಲ್ಲಿ ನಟಿಸುವ ಅವಕಾಶ ಬಂದರೂ ಅಮ್ಮ ಓದು ಕಂಪ್ಲೀಟ್ ಮಾಡು ಅಂದಿದ್ರಿಂದ ನಟನೆಯತ್ತ ಮುಖಮಾಡಿರಲಿಲ್ಲ.‌

ಪದವಿ ಬಳಿಕ ಕೆಲಸ ಮಾಡುತ್ತಲೇ ಆಡಿಷನ್ ಕೊಡುತ್ತಿದ್ದರು. ‘ಹಂಬಲ್ ಪೊಲಿಟೀಶನ್ ನೋಗ್ ರಾಜ್’ ಸಿನಿಮಾಕ್ಕೆ ಆಯ್ಕೆಯೂ ಆಗಿದ್ದರು…! ಆದರೆ, ಆ ಚಿತ್ರತಂಡದಿಂದ ಬಂದ ಈ-ಮೇಲ್ ಗಮನಿಸಿದ್ದು 6 ತಿಂಗಳ ಬಳಿಕ..! ತನನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ತಡವಾಗಿ ತಿಳಿದುಕೊಂಡಿದ್ದರಿಂದ ಆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲಿಲ್ಲ.

ಒಮ್ಮೆ ಚಂದನ್ ಫ್ರೆಂಡ್ ಒಬ್ಬರು ಫೇಸ್ ಬುಕ್ ನಿಂದ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡು ಶಾಂತಂಪಾಪಂ ಧಾರವಾಹಿ ತಂಡಕ್ಕೆ ಕಳುಹಿಸಿಕೊಟ್ಟಿದ್ದರು. ಶಾಂತಂಪಾಪಂ ಧಾರವಾಹಿಯ ಪ್ರೊಡಕ್ಷನ್ ಟೀಂ ನವರು, ಮಾಂಗಲ್ಯಂ ತಂತುನಾನೇನ ತಂಡಕ್ಕೆ ಒಂದಿಷ್ಟು ಮಂದಿಯ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದರು.‌ ಅದರಲ್ಲಿ ಚಂದನ್ ಅವರ ಫೋಟೋವು ಇತ್ತು.

ಒಂದು ದಿನ ರಾತ್ರಿ 12 ಗಂಟೆಗೆ ಮಾಂಗಲ್ಯಂ ತಂತು ನಾನೇನ ಧಾರವಾಹಿ ಟೀಂ ನಿಂದ ಕಾಲ್ ಮಾಡ್ತಿದ್ದೀವಿ. ನಿಮ್ಮ ಮತ್ತಷ್ಟು ಫೋಟೋಸ್ ಕಳುಹಿಸಿಕೊಡಿ ಅಂತ ಚಂದನ್ ಗೆ ಕರೆಬಂದಿತ್ತು. ಯಾರೋ ಸ್ನೇಹಿತರು ತಮಾಷೆ ಮಾಡ್ತಿದ್ದಾರೆ ಅಂತ ಚಂದನ್ ತಲೆ‌ಕೆಡಿಸಿಕೊಂಡಿರಲಿಲ್ಲ‌.‌ಎರಡು ದಿನಗಳ ಬಳಿಕ ಅವರೇ ಕರೆ ಮಾಡಿದ ಮೇಲೆ ಫೋಟೋಗಳನ್ನು ಕಳುಹಿಸಿಕೊಟ್ಟರು.

ಆಡಿಷನ್ ಗೆ ಕರೆದಾಗ ಹೀರೋ ಪಾರ್ಟ್ ಗೆ ಅಂತ ಚಂದನ್ ಅಂದುಕೊಂಡಿರಲಿಲ್ಲ. ಸಣ್ಣಪುಟ್ಟ ಪಾತ್ರಕ್ಕೆ ಎಂದುಕೊಂಡಿದ್ದರು. ಆಡೀಷನ್ ನಡೆಯಿತು. ಚಂದನ್ ಆಯ್ಕೆಯಾದರು. ನಿರ್ದೇಶಕ ರಘುಚರಣ್ ಕಥೆ ಹೇಳಿದರು. ಬಳಿಕ ಫೈನಲ್ ರೌಂಡ್ ಸ್ಕ್ರೀನ್ ಟೆಸ್ಟ್ ನಡೆಬೇಕಿತ್ತು.

ಹೀರೋ ಹೀರೋಯಿನ್ ಜೋಡಿ ಹೇಗಿರುತ್ತೆ ಅಂತ ನೋಡಬೇಕಾಗಿತ್ತು. ಆಡಿಷನ್ ನಡೆಯುವ ದಿನ ಹಾಫ್ ಡೇ ರಜೆ ಬೇಕು ಅಂತ ಚಂದನ್ ಆಫೀಸಲ್ಲಿ ಕೇಳಿದ್ದರು. ಹಿಂದಿನ ದಿನ ಒಪ್ಪಿಕೊಂಡಿದ್ದ ಮ್ಯಾನೇಜರ್ ಅಂದು ರಾತ್ರಿ 10 ಗಂಟೆಯವರೆಗೂ ಬಿಟ್ಟಿರಲಿಲ್ಲ. ಆಫೀಸಲ್ಲಿ ಫೋನ್ ಕೂಡ ಬಳಸುವಂತಿರಲಿಲ್ಲ. ಆದ್ದರಿಂದ ಧಾರವಾಹಿ ತಂಡಕ್ಕೆ ವಿಷಯ ತಲುಪಿಸಲು ಸಾಧ್ಯವಾಗಿರಲಿಲ್ಲ.

ರಾತ್ರಿ ಮೊಬೈಲ್ ಎತ್ತಿಕೊಂಡಾಗ ರಾಶಿ ರಾಶಿ ಮಿಸ್ಡ್ ಕಾಲ್ ಗಳು,‌ ಮೆಸೇಜ್ ಗಳಿದ್ದವು. ಮನೆಗೆ ಬಂದವರೇ ಕ್ಷಮೆ ಯಾಚಿಸಿ ರಘು ಅವರಿಗೆ ಚಂದನ್ ಮೆಸೇಜ್ ಮಾಡಿದರು.

ಆಗ ಅವರು ಕೂಡಲೇ ಎರಡು ಜೊತೆ ಡ್ರಸ್ ತಗೊಂಡು ಆಫೀಸ್ ಹತ್ತಿರ ಬರ ಹೇಳಿದ್ರು. ಚಂದನ್ ಗಾಗಿ ರಾತ್ರಿವರೆಗೂ ಇಡೀ ತಂಡ ಕಾದಿತ್ತು. ಚಂದನ್ ನಡೆದ ವಿಷಯ ತಿಳಿಸಿ ಲೈಟ್ ಬಾಯ್ ಯಿಂದ ಹಿಡಿದು ಪ್ರತಿಯೊಬ್ಬರಲ್ಲೂ ಕ್ಷಮೆ ಕೇಳಿದ್ರು.


ಚಂದನ್ ಮತ್ತು ಅವರೊಳಗಿನ ಕಲಾವಿದನ ಮೇಲೆ ರಘುಚರಣ್ ಅವರಿಟ್ಟಿದ್ದ ನಂಬಿಕೆಯಿಂದ ಮಾಂಗಲ್ಯಂ ತಂತುನಾನೇನಾ ಧಾರವಾಹಿ ನಾಯಕ ತೇಜಸ್ವಿಯಾಗಿ ನಿಮ್ಮ ಮನೆ-ಮನ ತಲುಪಿದ್ದಾರೆ ಚಂದನ್. ಕನ್ನಡ, ತೆಲುಗು, ತಮಿಳು ಚಿತ್ರರಂಗದಿಂದ ಚಂದನ್ ಗೆ ಆಫರ್ ಗಳು ಬರುತ್ತಿವೆ.


ಚಂದನ್ ಸಿನಿಮಾ ಕಥೆ, ಸಾಹಿತ್ಯ ಸಹ ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ. ಲೂಸಿಯಾ ಪವನ್ ಕುಮಾರ್, ರಾಜ್ ಬಿ ಶೆಟ್ಟಿ ಅವರಿಗೆ ಹಿಂದೊಮ್ಮೆ ಚಂದನ್ ಕಥೆ ಕಳುಹಿಸಿಕೊಟ್ಟಿದ್ದರು. ಲೂಸಿಯಾ ಪವನ್ ಅವರು ಸ್ಕ್ರೀನ್ವಪ್ಲೇ ಬರೆಯಲು, ರಾಜ್ ಬಿ ಶೆಟ್ಟಿ ಅವರು ಒಂದು ಸೀನ್ ಡೆವಲಪ್ ಮಾಡಲು ಹೇಳಿದ್ದರು. ಆದರೆ , ಆರ್ಕಿಟೆಕ್ಚರ್ ಕೆಲಸದ ಒತ್ತಡದ ನಡುವೆ ಅದು ಸಾಧ್ಯವಾಗಿರಲಿಲ್ಲ.‌ ಮುಂದಿನ ದಿನಗಳಲ್ಲಿ ಸಿನಿಮಾ ನಟನೆ ಮಾತ್ರವಲ್ಲದೇ ನಿರ್ದೇಶನ ಮಾಡುವ ಆಸೆ ಸಹ ಚಂದನ್ ಅವರಿಗಿದೆ.

ಮಜಾಟಾಕೀಸ್ ನಲ್ಲಿ ಚಂದನ್ ಅವರನ್ನು ಕಂಡ ತಾಯಿಯ ಆನಂದಬಾಷ್ಪ ಚಂದನ್ ಎಂದೂ ಮರೆಯಲಾಗದ ಖುಷಿ ಕ್ಷಣ. ತಂದೆ ಇಲ್ಲದಿದ್ದರೂ ತಾಯಿ ಕಷ್ಟಪಟ್ಟು ಈ ಮಟ್ಟಕ್ಕೆ ಬೆಳೆಸಿದ್ದಾರೆ ಅವರ ಖುಷಿಯೇ ನನ್ನ ಖುಷಿ ಎನ್ನುತ್ತಾರೆ ಚಂದನ್. ‌

ನನ್ನ ತಂದೆಯ ಆಶೀರ್ವಾದ , ತಾಯಿಯ ಪ್ರೀತಿ, ನಿರ್ದೇಶಕ ರಘುಚರಣ್ ಅವರ ನಂಬಿಕೆಯೇ ನನ್ನ ಯಶಸ್ಸಿಗೆ ಕಾರಣ. ಅಣ್ಣ ಗಾಡ್ ಫಾದರ್, ಸ್ನೇಹಿತ ಎಲ್ಲವೂ ಹೌದು. ಇವಾರಾರು ಇಲ್ಲದಿದ್ದರೆ ಆರ್ ಕೆ ಬಿಗ್ ಝೀರೋ ಎನ್ನೋದು ಚಂದನ್ ಮನದ ಮಾತು.

ಹಾಗೆಯೇ ಫೇಸ್ ಬುಕ್, ಇನ್ಸ್ಟಾ ಗ್ರಾಮ್ ನಲ್ಲಿ ಫ್ಯಾನ್ ಪೇಜ್ ಗಳನ್ನು ಕ್ರಿಯೇಟ್ ಮಾಡಿ ಸಪೋರ್ಟ್ ಮಾಡ್ತಿರೋ ಎಲ್ಲರಿಗೂ ನಾನು ಚಿರರುಣಿ ಎನ್ನುವ ಚಂದುಗೆ ಶುಭವಾಗಲಿ ಎನ್ನುತ್ತಾ…

-ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...