1. ಹೆಲ್ಮೆಟ್ ಕಡ್ಡಾಯ ನಿಯಮ : 3 ಗಂಟೆಯಲ್ಲಿ 3000 ಸಾವಿರ ಪ್ರಕರಣ ದಾಖಲು..!
ಇಂದಿನಿಂದ ರಾಜ್ಯದಲ್ಲಿ ದ್ವಿಚಕ್ರವಾಹನ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಅಧಿಕೃತವಾಗಿ ನಿಯಮವನ್ನು ಕಡ್ಡಾಯಗೊಳಿಸಿ ನಿಯಮ ಪಾಲನೆಯ ಕುರಿತು ಆರ್.ಟಿ.ಒ ಹಾಗೂ ಸಂಚಾರಿ ಪೊಲೀಸರು ಜಂಟಿ ಕಾರ್ಯಚರಣೆ ಕೈಗೊಂಡಿದ್ದಾರೆ. ಕಾರ್ಯಚರಣೆ ಆರಂಭವಾಗಿ ಕೇವಲ ಮೂರೇ ಮೂರು ಗಂಟೆಗಳಲ್ಲಿ 3000 ಪ್ರಕರಣಗಳನ್ನು ದಾಖಲಾಗಿದೆ..! ಅನೇಕ ಹಿಂಬದಿ ಸವಾರರು ಇವತ್ತೂ ಕೂಡ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.
2. ಐಎಎಸ್ ಅಧಿಕಾರಿ ರಶ್ಮಿ ಮೇಲೆ ಹಲ್ಲೆ : ಆರೋಪಿ ಆತ್ಮಹತ್ಯೆ
ಮೈಸೂರು ನಗರ ಆಡಳಿತ ಮತ್ತು ತರಬೇತಿ ಸಂಸ್ಥೆ (ಎಟಿಎ)ಯ ಮಹಾ ನಿರ್ದೇಶಕಿ ಆಗಿದ್ದ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಶೇಖರ್(26) ಇಂದು ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
3. ಬರ ಪರಿಹಾರ ನೀಡಲು ನೀತಿ ಸಂಹಿತೆಯ ಅಡ್ಡಿಯಿಲ್ಲ
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ಘೋಷಣೆಯಾಗಿರುವುದರಿಂದ ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿ ಆರಂಭಿಸಲು ಮತ್ತು ರೈತರಿಗೆ ಪರಿಹಾರ ವಿತರಿಸಲು ಚುನಾವಣ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲವೆಂದು ರಾಜ್ಯ ಚುನಾವಣ ಆಯೋಗ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ರೈತರಿಗೆ ಇತ್ತೀಚೆಗೆ 1540.20ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿತ್ತು. ನಂತರ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಪ್ರಕಟವಾಗಿದ್ದರಿಂದ ರೈತರಿಗೆ ಪರಿಹಾರ ಹಣ ವಿಳಂಬವಾಗಿ ಕೈಸೇರುತ್ತೆ ಎಂಬ ಆತಂಕ ನಿರ್ಮಾಣವಾಗಿತ್ತು. ಆದರೆ ಇದೀಗ ಚುನಾವಣೆಗೂ ರೈತರ ಹಣವನ್ನು ಅವರಿಗೆ ಕೊಡಲು ಯಾವುದೇ ಸಂಬಂಧವಿಲ್ಲ, ಚುನಾವಣ ನೀತಿ ಸಂಹಿತೆ ಅಡ್ಡಿ ಆಗದೆಂದು ರಾಜ್ಯ ಚುನಾವಣ ಆಯೋಗವೇ ಹೇಳಿದೆ.
4. ಕೋಹ್ಲಿ 25ನೇ ಶತಕ; ಸಂಗ ದಾಖಲೆ ಸಮಗಟ್ಟಿದ ವಿರಾಟ್ :
ವಿರಾಟ್ ಕೋಹ್ಲಿ ಸತತ ಎರಡು ಶತಕ ಬಾರಿಸುವ ಮೂಲಕ ಮತ್ತೊಂದು ನೂತನ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲೂ ಶತಕಗಳಿಸಿದ ವಿರಾಟ್ ಶ್ರೀಲಂಕಾದ ಕುಮಾರ ಸಂಗಕ್ಕಾರರ ದಾಖಲೆಯ ಸಮಕ್ಕೆ ಬಂದು ನಿಂತಿದ್ದಾರೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ ಆಟಗಾರರೆಂಬ ಶ್ರೇಯಕ್ಕೆ ಪಾತ್ರರಾಗಿದ್ದಾರಲ್ಲದೇ ಅತೀ ಹೆಚ್ಚು ಶತಕ ಬಾರಿಸಿರುವ ಆಟಗಾರರ ಸಾಲಿನಲ್ಲಿ ಸಂಗಕ್ಕಾರರೊಂದಿಗೆ ಜಂಟಿ 4ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಗಕ್ಕಾರ ಒಟ್ಟು 404 ಏಕದಿನ ಪಂದ್ಯಗಳಲ್ಲಿ 25 ಶತಕ ಬಾರಿಸಿದ್ದಾರೆ.
5. ಜಿಹಾದಿ ಜಾನ್ ಸಾವನ್ನಪ್ಪಿದ್ದಾನೆ : ಐಸಿಸ್ ಸ್ಪಷ್ಟನೆ
ಜಿಹಾದಿ ಜಾನ್’ ಎಂದೇ ಪ್ರಸಿದ್ಧನಾಗಿದ್ದ ಐಸಿಸ್ ನ ಪ್ರಮುಖ ಉಗ್ರ ಮೊಹಮ್ಮದ್ ಎಮ್ವಜಿ ಡ್ರೋಣ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಐಸಿಸ್ ಸಂಘಟನೆ ಖಚಿತಪಡಿಸಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಸಿರಿಯಾದ ಐಸಿಸ್ ಉಗ್ರರ ಪ್ರಾಬಲ್ಯದ ರಖ್ಖಾದಲ್ಲಿ ಜಿಹಾದಿ ಜಾನ್ ತೆರಳುತ್ತಿದ್ದ ಕಾರ್ ಮೇಲೆ ಅಮೆರಿಕ ಸೈನಿಕರು ಡ್ರೋಣ್ ದಾಳಿ ನಡೆಸಿದ್ದರು. ದಾಳಿಯಲ್ಲಿ `ಜಿಹಾದಿ ಜಾನ್’ ಮೃತಪಟಿದ್ದಾನೆ ಎಂದು ವರದಿಯಾಗಿತ್ತು. ಆದರೆ ಇದುವರೆಗೂ ಐಸಿಸ್ ಉಗ್ರರು ಈ ವಿಷಯವನ್ನು ಸ್ಪಷ್ಟಪಡಿಸಿರಲಿಲ್ಲ. ಆದರೆ ಇಸಿಸ್ ಉಗ್ರ ಸಂಘಟನೆ ಈಗ ಅದನ್ನು ಸ್ಪಷ್ಟಪಡಿಸಿದೆ. ಜಿಹಾದಿ ಜಾನ್ ಐಸಿಸ್ ಉಗ್ರರು ಬಿಡುಗಡೆ ಮಾಡುತ್ತಿದ್ದ ಬಹುತೇಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ. ಈತ ಒತ್ತೆಯಾಳುಗಳ ಶಿರಚ್ಛೇದನ ಮಾಡುತ್ತಿದ್ದ ದೃಶ್ಯಾವಳಿಗಳಿಂದಾಗಿಯೇ ವಿಶ್ವದಾದ್ಯಂತ ಕುಖ್ಯಾತನಾಗಿದ್ದ.
6. ಪಾಕಿಸ್ತಾನದಲ್ಲಿ ಮತ್ತೆ ಉಗ್ರರ ಅಟ್ಟಹಾಸ, ಕನಿಷ್ಠ 25 ಸಾವು
2014ರಲ್ಲಿ ಪೇಶಾವರದ ಸೈನಿಕ ಶಾಲೆಯ ಮೇಲೆ ನಡೆದ ದಾಳಿ ಮಾದರಿಯಲ್ಲೇ ಇಂದು ಖೈಬರ್ ಫಕ್ತುಂಖಾ ಪ್ರಾಂತ್ಯದ ಚರ್ಸಡ್ಡದಲ್ಲಿ 3000 ವಿದ್ಯಾರ್ಥಿಗಳು ಓದುತ್ತಿರುವ ಬಚಾ ಖಾನ್ ವಿಶ್ವವಿದ್ಯಾಲಯದ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಒಬ್ಬ ಪ್ರೊಫೆಸರ್ ಸೇರಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾರೆ. ಡಾನ್ ವರದಿ ಪ್ರಕಾರ 21 ಮಂದಿಯ ಸಾವನ್ನು ಪೊಲೀಸರು ದೃಢಪಡಿಸಿದ್ದು, ಕಾರ್ಯಾಚರಣೆ ಅಂತ್ಯಗೊಂಡಿರುವುದಾಗಿ ಸೇನೆ ತಿಳಿಸಿದೆ. `ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದ್ದು, ನಾಲ್ವರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ವರದಿಗಳು ಹೇಳಿವೆ.
7. ಉಗ್ರರೊಂದಿಗೆ ಗುಂಡಿನ ಚಕಮಕಿ, ಇಬ್ಬರು ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ನೈನ ಬಟ್ಪುರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ಗ್ರಾಮದಲ್ಲಿ ಉಗ್ರರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾಗ, ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8. ಐಆರ್ ಎನ್.ಎಸ್.ಎಸ್-1 ಸಿ ಉಪಗ್ರಹ ಉಡಾವಣೆ ಯಶಸ್ವಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 5 ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಐಆರ್ ಎನ್ಎಸ್ಎಸ್-1 ಸಿ ಉಪಗ್ರಹವನ್ನು ಹೊತ್ತೊಯ್ದಿರುವ ಉಪಗ್ರಹ ವಾಹಕ ಪಿಎಸ್ಎಲ್ ವಿ-ಸಿ 31 , ಅದನ್ನು ಭೂಸ್ಥಾಯಿ ಕಕ್ಷೆಗೆ ಸೇರಿಸಲಿದ್ದು, ಏಳು ಸರಣಿ ಉಪಗ್ರಹಗಳು ಮ್ಯಾಪಿಂಗ್ ಹಾಗೂ ಟ್ರ್ಯಾಕಿಂಗ್ ಜೊತೆಗೆ ರಸ್ತೆ, ವಾಯು ಮತ್ತು ಸಮುದ್ರ ಸಂಚಾರಕ್ಕೆ ಸಂಬಂಧಿಸಿದ ಸೇವೆಗಳನ್ನು ವಿಸ್ತರಿಸಲು ನೆರವಾಗಲಿದೆ.
9. ಮರಾಠಿ ಟೈಗರ್ಸ್ ಚಿತ್ರ ಬಿಡುಗಡೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ಕುರಿತು ನಿರ್ಮಾಣ ಮಾಡಿರುವ ಮರಾಠಿ ಭಾಷೆಯ ಮರಾಠಿ ಟೈಗರ್ಸ್ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರುವಂತೆ ತಡೆ ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಆದರೆ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದೆ. ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅವರು ಈ ಅರ್ಜಿ ದಾಖಲಿಸಿದ್ದರು. ಬೆಳಗಾವಿ ವಿಚಾರವಾಗಿ ಕರ್ನಾಟಕ-ಮಹಾರಾಷ್ಟ್ರಗಳ ನಡುವೆ ಉಂಟಾಗಿರುವ ಗಡಿ ವಿವಾದ ಕುರಿತು ಮರಾಠಿ ಚಿತ್ರ ಮರಾಠಿ ಟೈಗರ್ಸ್ ಚಿತ್ರಿಸಲಾಗಿದೆ. ಹೀಗಾಗಿ, ಈ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
10 ಕಾಂಗರೂಗಳ ವಿರುದ್ಧ ಮತ್ತೆ ಮುಗ್ಗರಿಸಿದ ಟೀಂ ಇಂಡಿಯಾ
ಸತತ ಮೂರು ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಇಂದು ಮತ್ತೆ ಕಾಂಗರೂಗಳ ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲೂ ಸೋಲನುಭವಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿಯವರ ಉತ್ತಮ ಜೊತೆಯಾಟದ ಮಧ್ಯೆಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಟೀಮ್ ಇಂಡಿಯಾ ಸೋಲನುಭವಿಸಿತು. ಆ ಮೂಲಕ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 4-0ಯ ಅಂತರವನ್ನು ಪಡೆಯಿತು.
ಇದಕ್ಕೂ ಮುನ್ನ ಮನುಕಾ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಆಡಿದ ಆರಂಭಿಕ ಆ್ಯರೋನ್ ಫಿಂಚ್ ಶತಕದಾಟವಾಡಿದರು. ಅವರಿಗೆ ಭರ್ಜರಿ ಸಾಥ್ ನೀಡಿದ ಡೇವಿಡ್ ವಾರ್ನರ್ 93 ರನ್ ಗಳಿಸಿ ಶತಕವಂಚಿತರಾದರು. ಇನ್ನು ಅಂತಿಮ ಓವರ್ ಗಳಲ್ಲಿ ಸಿಡಿದ ಮ್ಯಾಕ್ಸ್ ವೆಲ್ ಮತ್ತು ಸ್ಟೀವನ್ ಸ್ಮಿತ್ ತಂಡದ ಮೊತ್ತವನ್ನು 348ಕ್ಕೆ ಕೊಂಡೊಯ್ದರು. ಇನ್ನು ಭಾರತ ಪರ ಇಶಾಂತ್ ಶರ್ಮ 77ಕ್ಕೆ4, ಉಮೇಶ್ ಯಾದವ್ 67ಕ್ಕೆ3 ವಿಕೆಟ್ ಗಳಿಸಿದರು.