1. ಭಾರತ ಉತ್ತಮ ಕೆಲಸ ಮಾಡುತ್ತಿದೆ: ಡೊನಾಲ್ಡ್ ಟ್ರಂಪ್
ಭಾರತ ದೇಶ ಉತ್ತಮ ಕೆಲಸ ಮಾಡುತ್ತಿದೆ, ಆದರೆ ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪಧರ್ಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಾಗಿ ಘೋಷಣೆಯಾದ ನಂತರ ಭಾರತ ದೇಶದ ಬಗ್ಗೆ ಮೊದಲ ಸಲ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನೇರ, ನಿಷ್ಠುರ ಹೇಳಿಕೆಗಳಿಗೆ ಹೆಸರಾಗಿರುವ ಟ್ರಂಪ್ ಈಗಾಗಲೇ ತಮ್ಮ ಭಾಷಣದಲ್ಲಿ ಚೀನಾ, ಮೆಕ್ಸಿಕೋ, ಜಪಾನ್ ನ ಬಗ್ಗೆ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
2. ಪೊಲೀಸರು- ಸ್ಥಳೀಯರ ನಡುವೆ ಘರ್ಷಣೆ
ದೇವಸ್ಥಾನ ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯು ಹಿಂಸಾಚಾರಕ್ಕೆ ತಿರುಗಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ವೈಶಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಇದ್ದ ವಾಸುದೇವ ದೇವಸ್ಥಾನ ತೆರವುಗೊಳಿಸುವಂತೆ ಕೆಲ ಸ್ಥಳೀಯ ಹಿಂದೂ ಮತ್ತು ಮುಸ್ಲೀಮರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ದೇವಸ್ಥಾನವನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ಕೋರ್ಟ್ ಆದೇಶದ ಮೇರೆಗೆ ಪೊಲೀಸರು ದೇವಸ್ಥಾನ ತೆರವಿಗೆ ಮುಂದಾಗಿದ್ದರು. ಆದರೆ, ಇದಕ್ಕೆ ಸ್ಥಳೀಯರು ಅಡ್ಡಿಪಡಿಸಿದ್ದಾರೆ.
3. ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಪ್ರಣಬ್ ಒಪ್ಪಿಗೆ
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಕೇಂದ್ರದ ಶಿಫಾರಸ್ಸಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮ್ಮತಿ ನೀಡಿದ್ದಾರೆ. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಕೇಂದ್ರದ ಅಭಿಪ್ರಾಯವನ್ನು ಪ್ರಣಬ್ ಒಪ್ಪಿಕೊಂಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ರನ್ನು ಕರೆಯಿಸಿಕೊಂಡಿದ್ದ ಮುಖರ್ಜಿ ಸಂಪುಟ ನಿರ್ಧಾರದ ಬಗ್ಗೆ ಪ್ರಶ್ನಿಸಿದ್ದರು. ರಾಜಕೀಯ ಅಸ್ಥಿರತೆ ಎದುರಿಸುತ್ತಿದ್ದ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಭಾನುವಾರ ಕೇಂದ್ರ ಸಂಪುಟಸಭೆ ತೀರ್ಮಾನ ಕೈಗೊಂಡು, ರಾಷ್ಟ್ರಪತಿಗಳಿಗೆ ಆ ಸಂಬಂಧ ಶಿಫಾರಸ್ಸು ಕಳಿಸಿಕೊಟ್ಟಿತ್ತು.
4. ಪಾಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಕೊಹ್ಲಿ ಅಭಿಮಾನಿ ಸೆರೆ
ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಅಭಿಯಾನಿ, ಪಾಕಿಸ್ತಾನದ ಯುವಕ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಘಟನೆ ನಡೆದಿದೆ. ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ಈತ ತನ್ನ ಪ್ರೀತಿಯನ್ನು ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವ್ಯಕ್ತಪಡಿಸಿದ್ದ. ಲಾಹೋರ್ ನಿಂದ 200ಕಿಲೋ ಮೀಟರ್ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಓಕಾರಾ ಜಿಲ್ಲೆಯ ಉಮರ್ ಡ್ರಾಜ್ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾನೆ ಎಂಬ ದೂರಿನ ಮೇರೆಗೆ ಇದೀಗ ಬಂಧಿತನಾಗಿದ್ದಾನೆ.
5. ಲೈಂಗಿಕ ಕಿರುಕುಳ: ಯೋಗ ಗುರು ಬಿಕ್ರಂ ಚೌಧುರಿಗೆ ದಂಡ
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಅಮೆರಿಕ ಯೋಗ ಗುರು ಬಿಕ್ರಂ ಚೌಧುರಿ ಅವರಿಗೆ 6 ಕೋಟಿ ರೂ. ಪರಿಹಾರ ನೀಡುವಂತೆ ಅಮೆರಿಕದ ಕೋರ್ಟೊಂದು ಸೂಚಿಸಿದೆ. ಬಿಕ್ರಂ ಚೌಧುರಿ ಕೆಲಸದ ವೇಳೆ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರ ಮಾಜಿ ವಕೀಲೆ ಮೀನಾಕ್ಷಿ ಜಾಫಾ ಬೊಡೆನ್ ಎನ್ನುವವರು ಪ್ರಕರಣ ದಾಖಲಿಸಿದ್ದರು. ಚೌಧುರಿ ಅವರು ಅರೆಬೆತ್ತಲೆ ಅವಸ್ಥೆಯಲ್ಲಿ ಯೋಗ ಮಾಡಿಸಿ ವಿವಾದಗಳ ಸೃಷ್ಟಿಕರ್ತರೂ ಆಗಿದ್ದಾರೆ.
6.ನಾಳೆಯೇ ಚುನಾವಣೆ ನಡೆದರೆ ಎನ್ ಡಿಎಗೆ 301 ಸ್ಥಾನ..!
ದೇಶದಲ್ಲಿ ಒಂದು ವೇಳೆ ನಾಳೆಯೇ ಲೋಕಸಭೆಗೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಬಹುತೇಕ 301 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕಿಂತ ಪ್ರಧಾನಿ ನರೇಂದ್ರ ಮೋದಿಗೆ ಹೆಚ್ಚಿನ ಅಂಕ ಸಮೀಕ್ಷೆಯಲ್ಲಿ ಲಭಿಸಿದೆ ಎಂದು ವರದಿ ಹೇಳಿದೆ. ಎಬಿಪಿ ನ್ಯೂಸ್ ಮತ್ತು ನೀಲ್ಸನ್ ಜಂಟಿಯಾಗಿ ನಡೆಸಿದ ಅಭಿಪ್ರಾಯ ಸಮೀಕ್ಷೆಯ ಪ್ರಕಾರ ಅಭಿಪ್ರಾಯ ವ್ಯಕ್ತಪಡಿಸಿದ ಶೇ.46ರಷ್ಟು ಜನರು ಎನ್ ಡಿಎ ಸರ್ಕಾರದ ಆಡಳಿತವನ್ನು ತುಂಬಾ ಉತ್ತಮ ಹಾಗೂ ಉತ್ತಮ ಎಂಬುದಾಗಿ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಶೇ.28ರಷ್ಟು ಮತ ಹಂಚಿಕೊಳ್ಳುವ ಮೂಲಕ ಸುಮಾರು 108 ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯು ಹೇಳಿದೆ.
7. ಸನ್ನಡತೆ ಆಧಾರದ ಮೇಲೆ ಜೈಲಿನಿಂದ 375 ಖೈದಿಗಳ ಬಿಡುಗಡೆ
14 ವರ್ಷ ಮೇಲ್ಪಟ್ಟು ಶಿಕ್ಷೆ ಅನುಭವಿಸಿದ ಮಾಫಿರಹಿತ 120 ಮತ್ತು ಮಾಫಿಸಹಿತ 14 ವರ್ಷ ಶಿಕ್ಷೆ ಪೂರೈಸಿದ 255 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಯಿತು. ಪರಪ್ಪನ ಕಾರಾಗೃಹದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬಿಡುಗಡೆ ಯಾದ ಕೈದಿಗಳಿಗೆ `ಬಿಡುಗಡೆ ಪ್ರಮಾಣ ಪತ್ರ’ ವಿತರಿಸುವ ಮೂಲಕ ಮುಂದಿನ ಜೀವನ ಒಳ್ಳೆಯ ರೀತಿ ನಡೆಸುವಂತೆ ಶುಭ ಹಾರೈಸಿದರು. ಇನ್ನು ಕೇಂದ್ರ ಕಾರಾಗೃಹದಿಂದ ಮೂವರು ಮಹಿಳಾ ಕೈದಿಗಳು ಸೇರಿ 98 ಸಜಾಬಂಧಿಗಳು ಬಿಡುಗಡೆಯಾದರು. ಉಳಿದಂತೆ ಧಾರವಾಡ-10, ಬಳ್ಳಾರಿ-23, ಬೆಳಗಾವಿ-114, ಕಲಬುರ್ಗಿ-50, ಮೈಸೂರು-42, ವಿಜಯಪುರ-38 ಕೈದಿಗಳು ಬಿಡುಗಡೆಯಾದರು. 13 ಮಹಿಳಾ ಕೈದಿಗಳೂ ಸೇರಿದ್ದಾರೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಬೆಂಗಳೂರಿನ ಜೈಲಿನಿಂದ ಒಟ್ಟು 105 ಕೈದಿಗಳ ಬಿಡುಗಡೆಗೆ ಪಟ್ಟಿ ಸಿದ್ಧಪಡಿಸಲಾಗಿತ್ತು. ಸಲಹಾ ಮಂಡಳಿ 7 ಸಜಾಬಂಧಿಗಳ ಹೆಸರನ್ನು ತಿರಸ್ಕರಿಸಿ, 98 ಕೈದಿಗಳ ರಿಲೀಸ್?ಗೆ ಒಪ್ಪಿಗೆ ನೀಡಿತ್ತು.
8. ಮಂತ್ರಾಲಯಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡಿ ಪೀಠಾಧಿಪತಿ ಸುಭುದೇಂದ್ರ ತೀರ್ಥರ ಆಶೀವರ್ಾದ ಪಡೆದರು. ಯಡಿಯೂರಪ್ಪ ಅವರ ಜತೆ ಬಿಜೆಪಿ ಮುಖಂಡ ಸಿ.ಟಿ.ರವಿ ಸೇರಿದಂತೆ ಕೆಲವು ಮುಖಂಡರು ಇದ್ದರು. ಬುಧವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದ ಅವರು ರಾಯರ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದುಕೊಂಡರು.
9. ಕಮಲ ಹಾಸನ್ ಟ್ವಿಟರ್ಗೆ
ಖ್ಯಾತ ಬಹುಭಾಷಾ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಟ್ವಿಟರ್ಗೆ ಪಾದಾರ್ಪಣೆ ಮಾಡಿದ್ದಾರೆ. ಅದರಲ್ಲೂ 67ನೇ ಗಣರಾಜ್ಯೋತ್ಸವ ದಿನವನ್ನೇ ಆಯ್ಕೆ ಮಾಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಅಪಾರ ಸಂತಸ ತಂದಿದೆ. ಗಣರಾಜ್ಯೋತ್ಸವ ಶುಭಾಶಯ ಹೇಳುವದರೊಂದಿಗೆ ಟ್ವಿಟರ್ ಗೆ ಸೇರಿದ ಮೊದಲ ದಿನವೇ ಕಮಲ ಹಾಸನ್ ಅವರು ವಿಡಿಯೋ ಚಿತ್ರಿಕೆಯೊಂದರ ಮೂಲಕ ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ.
10. ಮುಂಬಯಿ ಷೇರು ಪೇಟೆಯಲ್ಲಿ ಏರಿಕೆ
ಅಮೆರಿಕ ಮತ್ತು ಐರೋಪ್ಯ ಷೇರು ಮಾರುಕಟ್ಟೆಗಳಲ್ಲಿ ಉತ್ತಮ ಏರಿಕೆ ಕಂಡುಬಂದಿರುವುದನ್ನು ಅನುಸರಿಸಿ ಏಷ್ಯನ್ ಷೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದರಿಂದ ಮುಂಬಯಿ ಷೇರು ಪೇಟೆ ಕೂಡ ಇಂದು ಆರಂಭಿಕ ವಹಿವಾಟಿನಲ್ಲಿ, 160 ಅಂಕಗಳ ಏರಿಕೆಯನ್ನು ದಾಖಲಿಸಿ 24,645.70 ಅಂಕಗಳ ಮಟ್ಟವನ್ನು ತಲುಪಿದೆ. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 39 ಅಂಕಗಳ ಮುನ್ನಡೆಯನ್ನು ದಾಖಲಿಸಿ 7,476.05 ಅಂಕಗಳ ಮಟ್ಟವನ್ನು ಏರಿದೆ.