ದುನಿಯಾ ವಿಜಿಯ ಈ ಫೋಟೊ ಹಿಂದಿದೆ ಹೆಮ್ಮೆ ಪಡುವ ಸಂಗತಿ..!!
2018 ರ ಕಹಿ ಘಟನೆಗಳನ್ನ ಮರೆತು, ಹೊಸ ವರ್ಷದಲ್ಲಿ ಹೊಸ ತನವನ್ನ ಬೆಳಸಿಕೊಂಡು, ತನ್ನ ಸಿನಿ ಪಯಣವನ್ನ ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ದುನಿಯಾ ವಿಜಿ ಸಿದ್ದವಾಗಿದ್ದಾರೆ.. ಹೀಗಾಗೆ ಹೊಸ ವರ್ಷ ತನ್ನ ಅಭಿಮಾನಿಗಳಿಗೆ ಹಾಗೆ ತನ್ನ ವೃತ್ತಿ ಬದುಕಿಗೆ ಸಂತಸವನ್ನ ನೀಡುವಂತೆ ಇರಲಿದೆ ಎಂಬ ಆಶಯದಲ್ಲಿ ಮುಂದೆ ಸಾಗಿದ್ದಾರೆ.. ಇದೆಲ್ಲದರ ರೂಪವಾಗಿ ದುನಿಯಾ ವಿಜಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದನ್ನ ಅಪ್ ಲೋಡ್ ಮಾಡಿದ್ದಾರೆ.. ವಿಜಿ ಅವರ ಬೆನ್ನು ಕಾಣುವ ಈ ಫೋಟೊದಲ್ಲಿ ನಿರ್ದೇಶಕ ರಾಘು ಶಿವಮೊಗ್ಗ ಹಾಗೆ ಕ್ಯಾಮರಾಮ್ಯಾನ್ ಶಾಂತಿ ಸಾಗರ್ ಇದ್ದಾರೆ..
ಈ ಫೋಟೊವನ್ನ ಹಾಕಿರುವ ದುನಿಯಾ ವಿಜಿ ಹೀಗೆ ಬರೆದಿದ್ದಾರೆ..” ಇದೇನಪ್ಪ ವಿಜಯ್ ಮುಖಾನೇ ಕಾಣಿಸದ ಫೊಟೋ ..” ಅಂತ ಅಂದ್ಕೊಂಡಿರ್ತೀರ.. ಅಲ್ವ? ಈ ಸಿನಿಮಾ ಒಂದು ರಿಲೀಸ್ ಆಗಲಿ, ಕನ್ನಡಿಗರೆಲ್ಲ ಮುಖ ಎತ್ತಿ ತೋರಿಸೋ ಅಂಥ ಚಿತ್ರ ಅದಾಗುತ್ತೆ ಎಂಬ ವಿಶ್ವಾಸ ನನಗಿದೆ.
ನಾನಿರೋದು ಸಿನಿಮಾದ ಶೂಟಿಂಗ್ ನಡೀಬೇಕಾದ ಲೊಕೇಶನ್ನಲ್ಲಿ. ನನ್ನ ಬಲಗಡೆ ಇರೋದು ನಿಮಗೆಲ್ಲ ಈಗಾಗಲೇ ತಿಳಿದಿರೋ ಹಾಗೆ ನನ್ನ ಹೊಸ ಚಿತ್ರದ ಡೈರೆಕ್ಟರ್ ರಾಘು ಶಿವಮೊಗ್ಗ. ಎಡಗಡೆ ಇರೋದು ಕ್ಯಾಮರಮ್ಯಾನ್ ಶಾಂತಿ ಸಾಗರ್. ನನ್ನ ಹೊಸ ಚಿತ್ರಕ್ಕೆ ಇವರಿಬ್ಬರು ಎಡ ಬಲ ಇದ್ದ ಹಾಗೇನೇ. ಶಾಂತಿ ಸಾಗರ್ ಕ್ಯಾಮೆರಾ ಹಿಡಿದಂಥ ಈ ಹಿಂದಿನ ಹಿಟ್ ಸಿನಿಮಾ ‘ಗುಳ್ಟು‘. ಆದರೆ ಈಗ ನಮ್ಮೊಳಗೆ ಏನು ನಡೀತಿದೆ ಎನ್ನೋದೆಲ್ಲ ಗುಟ್ಟು! ಸದ್ಯಕ್ಕೆ ನಮ್ಮ ಯೋಚನೆಗಳು ರಟ್ಟಾಗದ ಹಾಗೆ ಜುಟ್ಟು ಗಟ್ಟಿ ಮಾಡ್ಕೊಂಡಿದ್ದೀನಿ. ಈ ಸರ್ಪ್ರೈಸ್ ಗಳೆಲ್ಲ ನಿಮಗಾಗಿ ಮಾತ್ರ..
ಈ ಲೊಕೇಶನ್ನಲ್ಲಿ ಏನೋ ಕೆಲಸ ನಡೆದಿರೋದು ನಿಮಗೆ ಕಾಣಿಸ್ತಿರಬಹುದು. ಯೋಚನೆ ಯೋಜನೆಯಾಗೋ ಮಧ್ಯೆ ಕೆಲಸ ಸಾಕಷ್ಟಿವೆ. ಕೆಲಸ ಮುಗಿದ್ಮೇಲೆ ಮೊದಲು ನೋಡೋದೇ ನಿಮ್ಮ ಮುಖ. ಆಗ ಸಿಗುತ್ತೆ ನೋಡಿ ಹೊಸ ದುನಿಯಾದ ಸುಖ“.. ಇದು ದುನಿಯಾ ವಿಜಿ ಅವರ ಮಾತು.. ಹೊಸ ವರ್ಷ ವಿಜಿ ಖಾಸಗಿ ಜೀವನ ಹಾಗೆ ವೃತ್ತಿ ಬದುಕಿಗೆ ಹೊಸ ಆಯಾಮವನ್ನ ನೀಡುವಂತಾಗಲಿ ಎಂಬುದು ಅವರ ಅಭಿಮಾನಿಗಳ ಆಶಯ ಕೂಡ ಆಗಿದೆ..