ಸುಮಲತಾ ಅಂಬರೀಶ್ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಸಾಮಾಜಿಕ ಜಾಲತಾಣ ಸೇರಿ ಇಡೀ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸುಮಲತಾ ಅವರು ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡುತ್ತಾ ರೇವಣ್ಣ ಅವರು ‘ಗಂಡ ಸತ್ತು ಒಂದು ತಿಂಗಳಾಗಿಲ್ಲ ಆಗಲೆ ರಾಜಕೀಯ ಬೇಕಾಯ್ತಾ?’ ಎಂದು ಅಸೂಕ್ಷ್ಮ ಹೇಳಿಕೆಯೊಂದನ್ನ ನೀಡಿದ್ದರು. ರಾಜಕಾರಣಿಗಳು, ಸಾಮಾಜಿಕ ಮಾಧ್ಯಮದವರು, ಮಹಿಳಾಪರರು, ಸಾಹಿತಿಗಳು ಎಲ್ಲರೂ ರೇವಣ್ಣ ಅವರ ಈ ಹೇಳಿಕೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ರೇವಣ್ಣ ಅವರ ಈ ಹೇಳಿಕೆ ಅಹಂಕಾರದಿಂದ ಬಂದದ್ದು, ಅಂತಹಾ ಅನುಭವಿ ರಾಜಕಾರಣಿಗಳು ಮಹಿಳೆಯೊಬ್ಬರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಅವರ ಸಂಸ್ಕಾರ ತೋರುತ್ತದೆ ಎಂದು ರೇವಣ್ಣ ವಿರುದ್ದ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು, ಇದರ ಬೆನ್ನಲ್ಲೆ ಇದೀಗ ಮಂಡ್ಯ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ತನ್ನ ದೊಡ್ಡಪ್ಪನ ಹೇಳಿಕೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಳವಳ್ಳಿಯಲ್ಲಿ ಮಾತನಾಡಿದ ನಿಖಿಲ್, “ರೇವಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೆ ನಿಜವಾಗಿಯೂ ನನಗೆ ಗೊತ್ತಿಲ್ಲ. ನಾನಾಗಲಿ ನಮ್ಮಪ್ಪ, ಅಮ್ಮ, ಕುಟುಂಬ ಒಳ್ಳೆಯ ನಡತೆಯನ್ನು ಹೇಳಿಕೊಟ್ಟಿದೆ. ಮಹಿಳೆಯರಿಗೆ ಗೌರವ ಕೊಡೋದನ್ನು ಹೇಳಿಕೊಟ್ಟಿದೆ. ರೇವಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ದೊಡ್ಡಪ್ಪನ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎಲ್ಲರೂ ಕೂಡ ಬೆಂಬಲ ನೀಡಿದ್ದಾರೆ.
ನನ್ನ ಸ್ಪರ್ಧೆಗೆ ವರಿಷ್ಠರು, ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ. ಕಾರ್ಯಕರ್ತರು ಹಾಗೂ ಜಿಲ್ಲೆಯ ಜನತೆಯ ಒತ್ತಾಯದಿಂದ ನನಗೆ ಟಿಕೆಟ್ ನೀಡಿದ್ದಾರೆ.ಜೆಡಿಎಸ್ ಪಕ್ಷ ಟಿಕೆಟ್ ಕೊಟ್ಟಿರೋದ್ರಿಂದ ನಮ್ಮ ತಂದೆ ಮೇಲೆ ಜಿಲ್ಲೆಯ ಜನರು ಇಟ್ಟಿರುವ ನಿರೀಕ್ಷೆ ಉಳಿಸಿಕೊಳ್ಳುತ್ತೇನೆ ಎಂದರು. ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಮಳವಳ್ಳಿ ಜನತೆ ಜೊತೆ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಜಿಲ್ಲೆಯ ಜನರು ಯಾವ ತೀರ್ಪು ಕೊಡುತ್ತಾರೋ ಅದನ್ನು ಕಾದು ನೋಡಬೇಕಿದೆ. ರಾಜಕಾರಣದಲ್ಲಿ ಸಂಬಂಧಗಳನ್ನು ಹಾಳು ಮಾಡಲು ಬಿಡಲ್ಲ. ರಾಜಕಾರಣದಲ್ಲಿ ಯಾರೋ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಎಲ್ಲರ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಚರ್ಚೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅಂತಿಮ ತೀರ್ಪು ಮಂಡ್ಯ ಜನತೆ ನೀಡುತ್ತದೆ. ಹಾಗಾಗಿ ಸೋಷಿಯಲ್ ಮೀಡಿಯಾ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳೊದಿಲ್ಲ ಎಂದು ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ಅಂಬರೀಶಣ್ಣನ ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ. ಚಿತ್ರರಂಗಕ್ಕೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ನಟ ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಅಂಬರೀಶಣ್ಣನ ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ. ಚಿತ್ರರಂಗದಲ್ಲಿ ಅವರದೇ ಕೊಡುಗೆ ನೀಡಿದ್ದಾರೆ. ಅಂಬರೀಶಣ್ಣನ ಸಹೋದರನಾಗಿ ಕುಮಾರಣ್ಣ ನಡೆದುಕೊಂಡ ರೀತಿ ನಿಮಗೆ ಗೊತ್ತಿದೆ. ನಾನು ಸಂಬಂಧಗಳಿಗೆ ಬೆಲೆ ಕೊಡುವ ಮನುಷ್ಯ ಎಂದು ಹೇಳುವ ಮೂಲಕ ಅಂಬರೀಷ್ ಅವರನ್ನು ಸಹ ನಿಖಿಲ್ ನೆನೆದಿದ್ದಾರೆ.