‘ಕೆಂಪೇಗೌಡ’ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ. 2011ರಲ್ಲಿ ರಿಲೀಸ್ ಆಗಿದ್ದ ‘ಕೆಂಪೇಗೌಡ’ ಕನ್ನಡ ಚಿತ್ರಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತ್ತು. ಚಿತ್ರದಲ್ಲಿ ಸುದೀಪ್ ಖಡಕ್ ಪೊಲೀಸ್ ಆಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುದೀಪ್ ಗೆಟಪ್, ಸ್ಟೈಲ್, ಆರ್ಮುಘಂ ಘರ್ಜನೆ, ಡೈಲಾಗ್ಸ್ ಪ್ರತಿಯೊಂದು ಸಹ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಈಗ್ಯಾಕೆ ಬ್ಲಾಕ್ ಬಸ್ಟರ್ ‘ಕೆಂಪೇಗೌಡ’ ಚಿತ್ರದ ಬಗ್ಗೆ ಅಂತೀರಾ. ‘ಕೆಂಪೇಗೌಡ 2’ ಸಿನಿಮಾ ರಿಲೀಸ್ ಗೆ ತಯಾರಾಗಿದೆ. ಆದ್ರೆ ಈ ಬಾರಿ ಕೆಂಪೇಗೌಡನಾಗಿ ಅಭಿನಯ ಚಕ್ರವರ್ತಿ ಕಾಣಿಸಿಕೊಂಡಿಲ್ಲ.
ಹೊಸ ಕೆಂಪೇಗೌಡನಾಗಿ ಹಾಸ್ಯ ನಟ ಕೋಮಲ್ ಕಾಣಿಸಿಕೊಂಡಿದ್ದಾರೆ. ಶಂಕರ್ ಗೌಡ ನಿರ್ದೇಶನದ ‘ಕೆಂಪೇಗೌಡ 2’ ಚಿತ್ರದಲ್ಲಿ ಕೋಮಲ್ ನಾಯಕನಾಗಿ ಮಿಂಚಿದ್ದಾರೆ.
ಸದ್ಯ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನಯಾ ಕೆಂಪೇಗೌಡನ ಆಕ್ಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೋಮಲ್ ಉದ್ದ ಮೀಸೆ ಬಿಟ್ಟು ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ಖದರ್ ತೋರಿಸಿದ್ದಾರೆ.
ಬರೋಬ್ಬರಿ ಮೂರು ವರ್ಷದ ನಂತರ ಕೋಮಲ್ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ‘ಡೀಲ್ ರಾಜ’ ಚಿತ್ರದ ನಂತರ ಚಿತ್ರರಂಗದಿಂದ ಕೊಂಚ ದೂರ ಉಳಿದ್ದಿದ್ದ ಕೋಮಲ್ ಈಗ ಕೆಂಪೇಗೌಡನಾಗಿ ಎಂಟ್ರಿ ಕೊಟ್ಟಿದ್ದಾರೆ. ಅಂದ್ಹಾಗೆ ಕೆಂಪೇಗೌಡ-2 ಸೆಟ್ಟೇರಿ ವರ್ಷಗಳೆ ಆಗಿತ್ತು. ಆದ್ರೆ ಕಾರಣಾಂತರಗಳಿಂದ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ದೊರೆತಿರಲಿಲ್ಲ. ಆದ್ರೀಗ ಟ್ರೈಲರ್ ಮೂಲಕ ಸಿನಿರಸಿಕರ ಮುಂದೆ ಬಂದಿದೆ.