ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಕಾರ್ಯಕರ್ತರು ಹೇಳಿದರೆ ಅದು ಅಭಿಮಾನವಾಗುತ್ತದೆ. ಆದರೆ, ಒಬ್ಬ ಮಂತ್ರಿ ಹೇಳಿದರೆ ಅದು ಚಮಚಗಿರಿಯಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಯಾಗಿರುವಂತಹವರು ಸಚಿವರಾದಂತಹ ಎಂ.ಬಿ.ಪಾಟೀಲ್ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳುವುದು ಎಷ್ಟು ಸರಿ. ಸಂವಿಧಾನಾತ್ಮಕವಾಗಿ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಮುಖ್ಯಮಂತ್ರಿ ಇದ್ದರೂ ಕೂಡ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಹೇಳಿದರು.
ಎಂ.ಬಿ.ಪಾಟೀಲ್ ಅವರು ಯಾರನ್ನೋ ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು. ಅವರ ಹೇಳಿಕೆ ಶಾಸನಬದ್ಧವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.ಕಾರ್ಯಕರ್ತರು ಮುಖ್ಯಮಂತ್ರಿಗಳಾಗಬೇಕು ಎಂಬ ಒತ್ತಡ ಹೇರಿದರೆ ಅದನ್ನು ಅಭಿಮಾನ ಎಂದು ಪರಿಗಣಿಸಬಹುದು. ಆದರೆ, ಮಂತ್ರಿಗಳು ಹೇಳುವುದು ಬೇರೆಯೇ ಅರ್ಥ ಕಲ್ಪಿಸುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಗಿನೆಲೆಪೀಠದ ನಿರಂಜನಾನಂದಪುರಿ ಶ್ರೀಗಳ ಹೇಳಿಕೆ ತಪ್ಪಲ್ಲ. ಮಠಾಧೀಶರು ಕೂಡ ಮತದಾರರೇ ಆಗಿರುತ್ತಾರೆ. ಹಾಗಾಗಿ ಅವರ ಹೇಳಿಕೆ ಸರಿ ಇದೆ ಎಂದು ಹೇಳಿದರು.
ಸಿದ್ದು ಅವರೇ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಯಾರೋ ಒಬ್ಬರು ಸಿಎಂ ಆಗಲಿ ಎಂದು ಶ್ರೀಗಳು ಹೇಳಿದರೆ ತಪ್ಪಲ್ಲ. ಆದರೆ, ಇಂತಹ ಪಕ್ಷದವರೇ ಸಿಎಂ ಆಗಬೇಕೆಂದು ಹೇಳಿದರೆ ತಪ್ಪಾಗುತ್ತದೆ ಎಂದು ತಿಳಿಸಿದರು.