ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದ್ದು ಕಾಂಗ್ರೆಸ್‍ನ ಸುಮಾರು 20ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಮತ್ತೆ ಬಾಂಬ್ ಸಿಡಿಸಿದ್ದಾರೆ.
ನಾನು ಪ್ರಚಾರಕ್ಕಾಗಲಿ ಇಲ್ಲವೇ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ದುರದ್ದೇಶದಿಂದ ಈ ಮಾತನ್ನು ಹೇಳುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನಾಯಕತ್ವವನ್ನು ಒಪ್ಪದೆ ಅಸಮಾಧಾನಗೊಂಡಿರುವ 20ಕ್ಕೂ ಹೆಚ್ಚು ಶಾಸಕರು ಯಾವುದೇ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬರಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂಬ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್‍ವೈ, ಮೊದಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ವೇಣುಗೋಪಾಲ್ ಅವರಿಗೆ ಕರ್ನಾಟಕದ ಸ್ಥಿತಿಗತಿ ಎಷ್ಟು ಗೊತ್ತಿದೆ. ಯಾವ ಯಾವ ಜಿಲ್ಲೆಗೆ ಪ್ರವಾಸ ಮಾಡಿದ್ದಾರೆ? ರಾಜ್ಯದಲ್ಲಿರುವ ಎಷ್ಟು ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೀರಿ? ಕರ್ನಾಟಕದಲ್ಲಿ ಎರಡಂಕಿಯನ್ನು ದಾಟುತ್ತೀರಾ ಎಂದು ಬಿಎಸ್ ವೈ ಪ್ರಶ್ನಿಸಿದರು.
ಯಾವ ಶಾಸಕರು ಕೂಡ ಕಾಂಗ್ರೆಸ್ ಕಡೆ ಮುಖ ಮಾಡುವುದಿಲ್ಲ ಏಕೆಂದರೆ ಆ ಪಕ್ಷ ಒಂದು ಮುಳುಗುತ್ತಿರುವ ಹಡಗು. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಎಲ್ಲಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ವೇಣುಗೋಪಾಲ್ ಸುಮ್ಮನೆ ಜಂಭ ಕೊಚ್ಚಿಕೊಳ್ಳುವುದನ್ನು ಬಿಡಬೇಕು. ನಮ್ಮ ಯಾವ ಶಾಸಕರು ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಂದಗೋಳ ಮತ್ತು ಚಿಂಚೋಳಿಯಲ್ಲಿ ನಮ್ಮ ಪಕ್ಷದ ಪರ ಗೆಲುವಿಗೆ ಪೂರಕವಾದ ವಾತಾವರಣವಿದೆ. ಎರಡು ಕಡೆ ನಮ್ಮ ಅಭ್ಯರ್ಥಿಗಳು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈ ಚುನಾವಣೆಯ ಫಲಿತಾಂಶ ಸರ್ಕಾರಕ್ಕೆ ಮುಳುಗಡೆಯಾದರೂ ಅಚ್ಚರಿ ಇಲ್ಲ ಎಂದರು.