ಕಳೆದ ವಾರವಷ್ಟೇ ಬಿಡುಗಡೆಯಾದ ತೆಲುಗು ಸ್ಟಾರ್ ನಟ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಸಿದೆ. ಪ್ರಿನ್ಸ್ ಅಭಿನಯ, ಚಿತ್ರದ ಕಾನ್ಸೆಪ್ಟ್ ವಿಚಾರಕ್ಕೆ ಶಬ್ಬಾಶ್ ಎನ್ನಿಸಿಕೊಂಡ ಈ ಸಿನಿಮಾ ಹಾಡಿನ ವಿಚಾರದಲ್ಲೂ ಎಲ್ಲಾರ ಮನ ಗೆದ್ದಿದೆ. ಅದರಲ್ಲೂ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಹಾಡೊಂದು ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಕೇಳುಗರ ಮನಕ್ಕೆ ಖುಷಿ ಕೊಡ್ತಿದೆ. ‘ಓಹ್…ವಿಜಯ್ ಪ್ರಕಾಶ್ ಹಾಡಿರೋ ಹಾಡಾ ಇದು….ಅದಕ್ಕೆ ಸೂಪರ್ ಆಗಿದೆ’ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೌದು, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಹೊಂದಿರುವ ಮಹರ್ಷಿ ಚಿತ್ರದಲ್ಲಿ ‘ಇದೇ ಕದ ನೀ ಕಥಾ…..’ ಎಂಬ ಹಾಡನ್ನ ವಿಜಯ್ ಪ್ರಕಾಶ್ ಹಾಡಿದ್ದಾರೆ.
ಕಥೆಗೆ ಅನುಸಾರವಾಗಿ ಈ ಹಾಡು ಚಿತ್ರದಲ್ಲಿ ಬರಲಿದ್ದು, ಅದಕ್ಕೆ ತಕ್ಕಂತೆ ಕೊರಿಯೋಗ್ರಫಿ ಮಾಡಲಾಗಿದೆ. ಅದಕ್ಕೆ ಈ ಹಾಡು ಕೇಳುವುದಕ್ಕೂ ಹಾಗೂ ಬೆಳ್ಳಿತೆರೆಯ ಮೇಲೆ ನೋಡುವುದಕ್ಕೂ ತುಂಬಾ ಇಷ್ಟ ಆಗುತ್ತೆ. ಯಜಮಾನ ಸಿನಿಮಾ ಟೈಟಲ್ ಹಾಡು ‘ಬಂದ ನೋಡೋ ಯಜಮಾನ….’, ರಾಜಕುಮಾರ ಚಿತ್ರದ ‘ಬೊಂಬೆ ಹೇಳುತೈತೆ….’ ಹಾಡು, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ‘ಒಂದಾನೊಂದು ಊರಲ್ಲಿ…..’ ಹಾಡುಗಳಂತೆ ಮಹರ್ಷಿ ಚಿತ್ರದ ‘ಇದೇ ಕದ ನೀ ಕಥಾ…..’ ಹಾಡು ಮೂಡಿಬಂದಿದೆ. ಇನ್ನುಳಿದಂತೆ ಶ್ರೀಮಣಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಂಶಿ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್ ತೆಲುಗಿನಲ್ಲಿ ಹಾಡಿರುವ ಮೊದಲ ಹಾಡು ಇದಲ್ಲ. ಅನೇಕ ಹಾಡುಗಳನ್ನ ಹಾಡಿದ್ದಾರೆ.