ಲೋಕಸಭಾ ಚುನಾವಣೆ ಪೂರ್ಣಗೊಳ್ಳುವವರೆಗೂ ಮೌನವಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನೇ ಗುರಿಯಾಗಿಸಿಕೊಂಡು ರೋಶನ್ ಬೇಗ್ ಅವರುಗಳ ಕಾರ್ಯವೈಖರಿ ಕುರಿತು ಕಿಡಿ ಕಾರಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಮೈತ್ರಿಕೂಟ ಸರ್ಕಾರಕ್ಕೆ ಆಘಾತ ತಂದೊಡ್ಡಿದ್ದರ ಮಧ್ಯೆ ರೋಷನ್ ಬೇಗ್ ಅವರ ಈ ನಡೆ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹಲವು ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಬಹುದೆಂಬ ವದಂತಿಯ ಬೆನ್ನಲ್ಲೇ ರೋಷನ್ ಬೇಗ್ ಅವರ ಹೇಳಿಕೆ ಮೈತ್ರಿಕೂಟ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ.
ರೋಷನ್ ಬೇಗ್ ಬಿಜೆಪಿ ಕುರಿತು ಮೃದು ಧೋರಣೆಯ ಮಾತುಗಳನ್ನಾಡಿರುವ ಕಾರಣ ಅವರೂ ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರಾ ಎಂಬ ಅನುಮಾನ ಮೈತ್ರಿಕೂಟದ ನಾಯಕರನ್ನು ಕಾಡತೊಡಗಿದೆ. ರೋಷನ್ ಬೇಗ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಕೇಳಿ ಬರುತ್ತಿದ್ದರೂ ಮೈತ್ರಿಕೂಟ ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ರೋಷನ್ ಬೇಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.