ಇಂದು ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಹಾಸನದಲ್ಲಿ ನೂತನವಾಗಿ ಚುನಾಯಿತರಾಗಿದ್ದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಫಲಿತಾಂಶದ ಮರುದಿನವೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ, ತಾತ, ತುಮಕೂರಿನಲ್ಲಿ ದೇವೇಗೌಡ ಅವರ ಸೋಲಿನಿಂದ ತೀವ್ರ ನೋವಾಗಿದೆ.
ಹೀಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ, ಈ ಮೂಲಕ ಪ್ರಜ್ವಲ್ ರೇವಣ್ಣ ದೇವೇಗೌಡರಿಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ.
ತಮ್ಮ ರಾಜೀನಾಮೆ ಕುರಿತಂತೆ ತಂದೆ ಎಚ್.ಡಿ. ರೇವಣ್ಣ ಹಾಗೂ ಚಿಕ್ಕಪ್ಪ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಲ್ಲ,
ಇನ್ನೂ ಯಾರಿಗೂ ಈ ಬಗ್ಗೆ ಕೇಳಿಲ್ಲ ಇದು ನನ್ನ ಮನಸಿನಲ್ಲಿರುವ ನಿರ್ಧಾರ ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ನಾಯಕರೊಂದಿಗೆ ಚರ್ಚಿಸಿ ಎಲ್ಲರೂ ಹೋಗಿ ದೇವೇಗೌಡರ ಮನವೊಲಿಸಲಾಗುವುದು ಎಂದು ಪ್ರಜ್ವಲ್ ತಿಳಿಸಿದ್ದಾರೆ ಅಲ್ಲದೆ ನನ್ನ ರಾಜೀನಾಮೆ ನಿರ್ಧಾರ ಯಾವುದೇ ರೀತಿಯ ತ್ಯಾಗ ಅಲ್ಲ. ಇದು ದೇವೇಗೌಡರ ರಾಜಕೀಯ ಜೀವನದಲ್ಲಿ ಮಾಡಿರುವ ಹೋರಾಟಕ್ಕೆ ನಾನು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರು ನೀಡುತ್ತಿರುವ ಗೌರವ.
ಈ ಬಗ್ಗೆ ಅವರ ಮನವೊಲಿಸುತ್ತೇನೆ ಎಂಬ ವಿಶ್ವಾಸ ನನಗೆ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಅವರನ್ನು ಒಪ್ಪಿಸುವ ನಂಬಿಕೆ ಇದೆ ಎಂದು ಪ್ರಜ್ವಲ್ ತಿಳಿಸಿದ್ದು ಇಂದು ಮಧ್ಯಾನ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಅವರನ್ನು ಭೇಟಿ ಮಾಡಲಿದ್ದಾರೆ.