ಜೂನ್ 1 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳದಿದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವಾರು ಬಾರಿ ಸರ್ಕಾರ ಪತನಗೊಳಿಸಲು ಪ್ರಯತ್ನಿಸಿದ್ದಾರೆ. ಯಶಸ್ವಿಯಾಗಿಲ್ಲ. ಈಗ ಜೂನ್ 1ರಂದು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಒಂದು ವೇಳೆ ಅವರು ಹೇಳಿದಂತೆ ನಡೆಯದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ? ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಕೇಂದ್ರ ಸರ್ಕಾರಕ್ಕೆ ದೊರೆತ ಜನಾದೇಶ.ರಾಜ್ಯಸರ್ಕಾರಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲೇ ಜನ ತೀರ್ಪು ನೀಡಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಅವರು, ಈ ಹಿಂದೆ ನಾವು ಉಪಚುನಾವಣೆಗಳನ್ನು ಗೆದ್ದಿದ್ದೆವು.ಆಗ ಮೋದಿಯವರು ರಾಜೀನಾಮೆ ನೀಡಿದ್ದರಾ. ವಿಧಾನಸಭೆ ಚುನಾವಣೆ ಗೆದ್ದ ತಕ್ಷಣ ಮುನಿಸಿಪಾಲಿಟಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ರಾಜೀನಾಮೆ ಕೊಡಬೇಕು ಎಂದರೆ ಸಾಧ್ಯವೇ? ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಾಧ್ಯವಿಲ್ಲ. ಜನ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿರುವುದು ಕೇಂದ್ರ ಸರ್ಕಾರಕ್ಕೆ.
ನಾವು ಅದನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ವಾಗತಿಸಿದ್ದೇವೆ. ಒಂದೊಂದು ಕಾಲದಲ್ಲಿ ಜನ ಬೇರೆ ಬೇರೆ ರೀತಿಯ ತೀರ್ಪು ನೀಡುತ್ತಾರೆ. ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು. ರಮೇಶ್ ಜಾರಕಿ ಹೊಳಿ ಸೇರಿದಂತೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಸರ್ಕಾರ ಪತನಗೊಳಿಸುವ ಬಿಜೆಪಿಯ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಆಪರೇಷನ್ ಕಮಲ ವಿಫಲವಾಗಲಿದೆ.
ನಿನ್ನೆ ಕಾಂಗ್ರೆಸ್ ಶಾಸಕರಾದ ಸುಧಾಕರ್ ಮತ್ತು ರಮೇಶ್ ಜಾರಕಿ ಹೊಳಿ ಅವರು ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ.
ಮೊದಲು ರಮೇಶ್ ಜಾರಕಿ ಹೊಳಿ ಸುಧಾಕರ್ ಮನೆಗೆ ಹೋಗಿದ್ದರು. ಸುಧಾಕರ್ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಹೇಳಿದಾಗ, ನಾನೂ ಬರುತ್ತೇನೆ ಎಂದು ರಮೇಶ್ ಜಾರಕಿ ಹೊಳಿ ಕೂಡ ಹೋಗಿದ್ದಾರೆ.
ಅಲ್ಲಿಗೆ ಬಿಜೆಪಿಯ ಯಡಿಯೂರಪ್ಪ, ಆರ್.ಅಶೋಕ್ ಮತ್ತು ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಬರುವುದು ಗೊತ್ತಿರಲಿಲ್ಲ. ಅಶೋಕ್ ಅವರ ಜೊತೆ ಪ್ರತ್ಯೇಕ ರಾಜಕೀಯ ಚರ್ಚೆಗಳೇನೂ ನಡೆದಿಲ್ಲ. ಎಲ್ಲವೂ ಊಹಾಪೋಹಗಳಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.