ಬಿಜೆಪಿ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಕೇವಲ ಗಿಮಿಕ್ ಎಂದು ರಾಯಚೂರಿನಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಗ್ರಾಮ ವಾಸ್ತವ್ಯಕ್ಕೆ ಬಂದಿರುವ ಸಿಎಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮ್ಮನೆ ನಾಲಿಗೆ ಹರಿಬಿಡಬಾರದೆಂದು ಶಿವನಗೌಡ ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕ ಶಿವನಗೌಡ ನಾಯಕ್ ಕ್ಷೇತ್ರದ ಅಭಿವೃದ್ಧಿ ವಿಚಾರಗಳಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ದೇವದುರ್ಗದ ಅಭಿವೃದ್ಧಿಗೆ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಅವರು ಏನು ಮಾಡಿದ್ದರು?. ಆಗ ಮಂತ್ರಿಯಾಗಿ ಏನು ಮಾಡುತ್ತಿದ್ದರು? ಈಗ ಯಾರಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಜನರ ದಂಡು ಕಟ್ಟಿಕೊಂಡು ಯುದ್ಧ ಮಾಡಲು ಬರುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಸಿಎಂ, ದೇವದುರ್ಗ ಐಬಿಗೆ ಯಡಿಯೂರಪ್ಪರನ್ನು ಕರೆದುಕೊಂಡು ಬಂದು ಡ್ರಾಮಾ ಮಾಡಿದ್ದು ಗೊತ್ತಿಲ್ವಾ?ನಮ್ಮ ಕುಟುಂಬ ಸೋಲು, ಗೆಲುವು ಕಂಡಿದೆ. ಇಂತಹದನ್ನೆಲ್ಲ ಬಹಳ ನೋಡಿದ್ದೇನೆ ಎಂದು ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈಗಾಗಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಾಲ ಮನ್ನಾ ಮಾಡಲು ಹಣದ ಕೊರತೆ ಇಲ್ಲ ಎಂದು ಸಿಎಂ ತಿಳಿಸಿದ್ದಾರೆ.