ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರಿನ ನಾಲ್ವರು ಶಾಸಕರು ಸರ್ಕಾರದ ವಿರುದ್ಧ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ ಎಂದರೆ ಏನಾಗಿದೆ ಎಂಬುದನ್ನು ನೀವೇ ಊಹಿಸಿ. ಬೆಂಗಳೂರು ಅಭಿವೃದ್ಧಿಯನ್ನು ಕಡೆಗಣಿಸಿದ್ದೆ ಇದಕ್ಕೆಲ್ಲ ಕಾರಣ ಎಂದು ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ.
ನಾವು ಬೇಜಾರಾಗಿರುವುದು ನಿಜ. ಯಾರೂ ಹಣಕ್ಕಾಗಿ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ನಿನ್ನೆ ರಾಜೀನಾಮೆ ನೀಡಿರುವ ಶಾಸಕರೆಲ್ಲರೂ ಅಭಿವೃದ್ಧಿ ಆಧಾರದ ಮೇಲೆ ಗೆಲ್ಲುವವರೇ ಆಗಿದ್ದಾರೆ. ಅವರೆಲ್ಲ ಹಣಕ್ಕಾಗಿ ಹೋಗುವವರಲ್ಲ. ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ಅವರನ್ನೇ ಕಡೆಗಣಿಸಲಾಗಿದೆ. ಈಗ ಸಚಿವ ಸ್ಥಾನ ಕೊಡುತ್ತೇವೆ ಎಂದರೆ ಅವರು ಪರಿಗಣಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿಗಾಗಿ ಪರಿಪರಿಯಾಗಿ ಮನವಿ ಮಾಡಿದರೂ, ಸಂಬಂಧಿಸಿದವರು ಗಮನ ಹರಿಸಲಿಲ್ಲ.ಇಲ್ಲಿ ಯಾರೂ ಶಾಶ್ವತರಲ್ಲ, ನಾವು ಮಾಡಿದ ಕೆಲಸಗಳೇ ಶಾಶ್ವತ. ಸಿದ್ದರಾಮಯ್ಯ ಪ್ರತಿಕ್ಷಣವೂ ಸಮ್ಮಿಶ್ರ ಸರ್ಕಾರ ಉಳಿಸಲು ಪ್ರಯತ್ನ ನಡೆಸಿದ್ದರು. ಅವರ ಬಗ್ಗೆಯೇ ಆರೋಪಿಸಿ ಅವರತ್ತಲೇ ಬೊಟ್ಟುಮಾಡಿ ತೋರಿಸಲಾಗುತ್ತಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಹೆಚ್.ಡಿ. ರೇವಣ್ಣ ಕರೆದು ಮಾತನಾಡಿದ್ದರೆ ನಾವು ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಭಿವೃದ್ಧಿಗೆ ಯಾರದರೇನು? ಬಿಜೆಪಿಯವರಾದರೆ ಏನು? ನಾವು ಹೋಗ್ತೇವೆ. ನಮಗೆ ಅಭಿವೃದ್ಧಿ ಮುಖ್ಯ ಎಂದು ತಿಳಿಸಿದ್ದಾರೆ. ಅಲ್ಲದೇ, ಬೆಂಗಳೂರು ಅಭಿವೃದ್ಧಿಯನ್ನು ಕಡೆಗಣಿಸಿದ್ದಾಗಿ ಪರೋಕ್ಷವಾಗಿ ಡಿಸಿಎಂ ಪರಮೇಶ್ವರ್, ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.