ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಜಿ.ಟಿ. ದೇವೇಗೌಡ, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮುಂಬೈಗೆ ಆಗಮಿಸಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಡಿ.ಕೆ. ಶಿವಕುಮಾರ್, ಹೋಟೆಲ್ ನಲ್ಲಿ ತಂಗಿರುವ ಅತೃಪ್ತರ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ, ಇದಕ್ಕೆ ರಾಜೀನಾಮೆ ನೀಡಿರುವ ಶಾಸಕರು ಒಪ್ಪಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡದಿರಲು ತೀರ್ಮಾನಿಸಿದ್ದಾರೆ.
ಹಿಂದೆಯೇ ಹಲವು ಬಾರಿ ಭೇಟಿ ಮಾಡಿದ್ದರೂ, ಡಿ.ಕೆ. ಶಿವಕುಮಾರ್ ಸೇರಿದಂತೆ ನಾಯಕರು ನಮ್ಮನ್ನು ಪರಿಗಣಿಸಿರಲಿಲ್ಲ. ಈಗ ನಾವು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಈಗ ಕಾಲ ಮೀರಿದ್ದು, ಅವರನ್ನು ಭೇಟಿ ಮಾಡುವುದಿಲ್ಲ. ಅವರು ಇಲ್ಲಿಗೆ ಬರುವುದು ವೇಸ್ಟ್.ಅವರೊಂದಿಗೆ ನಾವು ಮಾತನಾಡುವುದಿಲ್ಲ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಇನ್ನು ಭದ್ರತೆ ಕೊಡುವಂತೆ ಮುಂಬೈ ಪೊಲೀಸ್ ಕಮಿಷನರ್ ಗೆ ರಾಜೀನಾಮೆ ನೀಡಿ ಹೋಟೆಲ್ ನಲ್ಲಿ ತಂಗಿರುವ ಶಾಸಕರು ಮುಂಬೈ ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಹೋಟೆಲ್ ಆವರಣದೊಳಗೆ ಬಿಡಬೇಡಿ. ನಮಗೆ ರಕ್ಷಣೆ ಕೊಡಿ ಎಂದು ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.