ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 18 ರನ್ ಗಳ ಅಂತರದಿಂದ ಸೋಲು ಕಂಡಿದೆ.ಈ ಮೂಲಕ ಕೋಟ್ಯಂತರ ಅಭಿಮಾನಿಗಳ ವಿಶ್ವಕಪ್ ಕನಸು ಭಗ್ನವಾಗಿದೆ. ಉತ್ತಮ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಫೈನಲ್ ಗೆ ಎಂಟ್ರಿ ಕೊಟ್ಟರೆ, ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ.
ಟೀಂ ಇಂಡಿಯಾ ಸೋಲಿಗೆ ಕಾರಣಗಳ ಕುರಿತು ಭಾರೀ ಚರ್ಚೆ ನಡೆದಿದೆ. ಹೀಗಿರುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಲಿಗೆ ಕಾರಣ ಹೇಳಿದ್ದಾರೆ. ಭಾರತದ ಇನಿಂಗ್ಸ್ ವೇಳೆಯಲ್ಲಿ ಆರಂಭದಲ್ಲಿ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಸೋಲಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
240 ರನ್ ಗೆಲುವಿನ ಗುರಿ ಪಡೆದ ಭಾರತ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಿತು. ಆರಂಭದಲ್ಲಿ 45 ನಿಮಿಷ ಭಾರತ ಕೆಟ್ಟ ಪ್ರದರ್ಶನ ನೀಡಿದ್ದಕ್ಕಾಗಿ ದೊಡ್ಡ ಬೆಲೆಯನ್ನೇ ತೆರಬೇಕಾಯಿತು ಎಂದು ತಿಳಿಸಿದ್ದಾರೆ. ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿದ್ದು ನಮ್ಮ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಗಿದೆ ಎಂದು ಹೇಳಿದ್ದಾರೆ.