ವಿಶ್ವಾಸ ಮತಯಾಚನೆ ವಿಳಂಬ ವಿರೋಧಿಸಿ ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದಾರೆ.
ರಾತ್ರಿ ಸದನದಲ್ಲಿ ಇದ್ದ ಶಾಸಕರು ಬೆಳಗ್ಗೆ ವಿಧಾನಸೌಧದ ಮೊಗಸಾಲೆಯಲ್ಲಿ ಉಪಹಾರ ಸೇವಿಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಕೂಡ ಬಿಜೆಪಿ ಶಾಸಕರೊಂದಿಗೆ ತಿಂಡಿ ತಿಂದಿದ್ದಾರೆ.
ಬಿಜೆಪಿ ಶಾಸಕರಿಗಾಗಿ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್ ತರಿಸಲಾಗಿತ್ತು. ಪರಮೇಶ್ವರ್ ಕೂಡ ಬಿಜೆಪಿ ಶಾಸಕರೊಂದಿಗೆ ಉಪಹಾರ ಸೇವಿಸಿದ್ದಾರೆ. ಬೆಳ್ಳಂಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಅವರು, ಬಿಜೆಪಿ ಶಾಸಕರೊಂದಿಗೆ ಆತ್ಮೀಯವಾಗಿ ಮಾತನಾಡಿ, ಆರೋಗ್ಯ ಕುಶಲೋಪರಿ ವಿಚಾರಿಸಿದ್ದಾರೆ.
ಬಿಜೆಪಿಯವರು ಹೋರಾಟ ಕೈಗೊಂಡಿದ್ದರಿಂದ ಊಟ-ವಸತಿಗೆ ವ್ಯವಸ್ಥೆ ಮಾಡುವಂತೆ ಸ್ಪೀಕರ್ ಸೂಚನೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಶಾಸಕರಿಗೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಅಂತೆಯೇ ಬೆಳಿಗ್ಗೆ ಬಂದು ಬಿಜೆಪಿ ಮಿತ್ರರನ್ನು ವಿಚಾರಿಸಿದ್ದೇನೆ. ಇದು ನಮ್ಮ ಕರ್ತವ್ಯವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.