ಮುಂಬೈನಲ್ಲಿದ್ದು ಕೊಂಡು ದೋಸ್ತಿ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿರುವ ಅತೃಪ್ತ ದೋಸ್ತಿ ಪಕ್ಷದ 13 ಶಾಸಕರು ಇಂದು, ಮತ್ತೊಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ. ಹೀಗೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ, ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ನಮ್ಮನ್ನು ಗನ್ಪಾಯಿಂಟ್ನಲ್ಲಿ ಇಡಲಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ. ಆದರೆ, ಗನ್ ಇಟ್ಟು ಹೆದರಿಸುವ ಸಂದರ್ಭ ಇಲ್ಲಿಲ್ಲ.
ನಾವೆಲ್ಲರೂ ಫ್ರೀಡಂ ಆಗಿದ್ದೇವೆ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ದೋಸ್ತಿಗಳ ವಿರುದ್ಧ ಕಿಡಿಕಾರಿದ್ದಾರೆ.ಇವರ ಬಳಿಕ ಮಾತನಾಡಿರುವ ಶಾಸಕ ಭೈರತಿ ಬಸವರಾಜ್, ಇದೀಗ ನಮ್ಮನ್ನು ಬೆತ್ತಲು ಮಾಡಲು ಹೊರಟಿರುವ ನಮ್ಮ ನಾಯಕರೊಬ್ಬರು ಲೋಕಸಭೆ ಚುನಾವಣೆಯ ಬಳಿಕ ಒಂದು ಕ್ಷಣವೂ ಈ ಸರ್ಕಾರವನ್ನು ಉಳಿಸಬಾರದು ಎಂದು ಹೇಳಿದ್ದರು. ಅದರಂತೆ ನಡೆದುಕೊಂಡೆವು. ಯಾವುದೇ ಹಣ, ಅಧಿಕಾರದ ಆಸೆಗಾಗಿ ನಾವು ಯಾರೂ ಇಲ್ಲಿಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಇನ್ನೂ, ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಮಾತನಾಡಿ, ಸ್ವಾಭಿಮಾನಕ್ಕಾಗಿ ಬದುಕಿ, ತ್ಯಾಗ ಮಾಡಿದವರು ನಾವು. ನಾವು ಯಾರೂ ಕೂಡ ಆಸೆ, ಆಮಿಷಗಳಿಗೆ ಬಲಿಯಾಗಿ ಇಲ್ಲಿಗೆ ಬಂದಿಲ್ಲ, ಸ್ವತಂತ್ರವಾಗಿದ್ದೇವೆ ಎಂದರೇ, ಶಾಸಕ ಗೋಪಾಲಯ್ಯ, ಈ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ನನ್ನ ಕುಟುಂಬದ ಮೇಲೆ ಸಾಕಷ್ಟು ದಾಳಿಗಳಾಗಿದ್ದು, ಸಿಎಂ ಎಚ್.ಡಿ. ಕುಮಾರಸ್ವಾಮಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗದ ಕಾರಣ ರಾಜೀನಾಮೆ ಕೊಟ್ಟು ಮುಂಬೈ ಸೇರಿದ್ದು ಎಂದು ತಿಳಿಸಿದ್ದಾರೆ.
ಇವರ ಬಳಿಕ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮಾತನಾಡಿ, 2ನೇ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ಕೊಡುತ್ತೀರಿ, ಏಳು ಬಾರಿ ಗೆದ್ದವರನ್ನು ಕಡೆಗಣಿಸಿ ಮೂಲೆಗುಂಪು ಮಾಡುತ್ತೀರಿ. ಎಲ್ಲೆಲ್ಲಿಂದಲೋ ಬಂದವರನ್ನು ಸಚಿವರನ್ನಾಗಿ ಮಾಡಿದ್ದೀರಿ. ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ ಹೊರತು ಬೇರೆ ಉದ್ದೇಶವಿಲ್ಲ. ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಾವು ಸದನಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.