ದೇಶದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ‘ಕೆಫೆ ಕಾಫಿ ಡೇ’ ಮಾಲಿಕ ಸಿದ್ಧಾರ್ಥ್ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಸಿದ್ದಾರ್ಥ್ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆಯಿಂದ ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಸಿದ್ದಾರ್ಥ್ ವಿವಿಧ ಬ್ಯಾಂಕ್, ಕಂಪನಿ ಹಾಗೂ ಖಾಸಗಿಯವರ ಬಳಿ ಒಟ್ಟು 8,000 ಕೋಟಿ ರೂಪಾಯಿ ಸಾಲ ಪಡೆದಿದ್ದರೆಂದು ಹೇಳಲಾಗುತ್ತಿದ್ದು, ಆದರೆ ಸಿದ್ಧಾರ್ಥ್ ಅವರ ಆಸ್ತಿ ಅವರು ಮಾಡಿರುವ ಸಾಲಕ್ಕಿಂತ ಮೂರು ಪಟ್ಟು ಹೆಚ್ಚಿರುವುದರಿಂದ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ತೀವ್ರ ಶೋಧ ಕಾರ್ಯಾಚರಣೆಯ ಬಳಿಕವೂ ಸಿದ್ಧಾರ್ಥ್ ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಕಡೆಯದಾಗಿ ಅವರು ಯಾರಿಗೆ ಕರೆ ಮಾಡಿದ್ದರು ಎಂಬ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.