ಅವಳದ್ದು ಮುಸ್ಲೀಂ ಮನೆತನ. ನೋಡಲು ಅಪರೂಪ ಎನಿಸುವಂಥಹ ಸೊಬಗು, ಸೌಂದರ್ಯ. ಅವಳು ಚಿತ್ರರಂಗವನ್ನು ಆಳಿದ್ದು ಅನಾಮತ್ತು ಮೂವತ್ತು ವರ್ಷಗಳ ಕಾಲ. ಬರೋಬ್ಬರಿ ತೊಂಬತ್ತು ಚಿತ್ರಗಳಲ್ಲಿ ನಟಿಸಿದಳು. ಅವಳನ್ನು ಚಿತ್ರರಂಗ `ಚೈನಾ ಡಾಲ್’ ಎಂದೇ ಕರೆದಿತ್ತು. ಅಷ್ಟು ಮುದ್ದಾಗಿದ್ದ ಈ ತಾರೆ ನಟಿಸಿದ ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ದುರಂತ ಕಥಾಹಂದರವನ್ನು ಹೊಂದಿದ್ದವು. ಕಾಕಾತಾಳೀಯ ಅಂದ್ರೆ ಅವಳ ಬದುಕಿನುದ್ದಕ್ಕೂ ಹರಿದಿದ್ದು ಕಣ್ಣೀರು. ಜಿಗುಪ್ಸೆಯಿಂದ ಕುಡಿತ ಕಲಿತ ಆಕೆ, ಕುಡಿದು ಕುಡಿದೇ ಕರುಳನ್ನು ಘಾಸಿ ಮಾಡಿಕೊಂಡಳು. ಎಷ್ಟರ ಮಟ್ಟಿಗೆಂದರೇ ಸಾವು ಅವಳನ್ನು ಆಕ್ರಮಿಸುವವರೆಗೂ…!
ಅಪಾರ ಯಶಸ್ಸಿನ ಹಿಂದೆ ದುರಂತ ಅಂತ್ಯವೊಂದು ಹೊಂಚು ಹಾಕುತ್ತಾ…!? ಉತ್ತರವಿರುವ ಈ ಪ್ರಶ್ನೆಗೆ ಕಿಂಚಿತ್ತು ಆಲೋಚಿಸದೇ ಹೇಳಬಹುದಾದ ಮತ್ತೊಂದು ಉತ್ತರ, ಸೆಲೆಬ್ರಿಟಿಗಳ ಸಾವು ಮತ್ತು ಬದುಕು..! ತೆರೆ ಮೇಲೆ ಕೇವಲ ನಾಟಕ ಆಡಿದ್ದನ್ನೇ ವೇಧ್ಯ ಎಂಬ ಕೋಟ್ಯಾಂತರ ಅಭಿಮಾನಿಗಳ ಸೂಕ್ಷ್ಮ ಸಂವೇಧನೆಯ ತಾಪ ಸಹಿಸಿಕೊಳ್ಳುವುದು ಒಮ್ಮೊಮ್ಮೆ ಕಷ್ಟ; ಒಮ್ಮೊಮ್ಮೆ ಇಷ್ಟ. ! ಅದೇನಾಗುತ್ತೋ, ಕೆಲವೊಮ್ಮೆ ಆಕಸ್ಮಿಕ, ಕೆಲವೊಮ್ಮೆ ಅನಾಹುತ ಸಂಭವಿಸಿಬಿಡುತ್ತದೆ. ಸಾವೆನ್ನುವ ಅನಿರೀಕ್ಷಿತ ಆತಿಥಿ, ಅದ್ಯಾವ ರೀತಿಯಲ್ಲಿ ಆಗಮಿಸುತ್ತೋ, ನಾಟ್ ಶ್ಯೂರ್..! ಕೆಲವರದ್ದು ಆತ್ಮಹತ್ಯೆ. ಕೆಲವರದ್ದು ನಿಗೂಢ ಅಂತ್ಯ. ಕೆಲವರದ್ದು ಸ್ವಯಂಕೃತ ಅಪರಾಧ. ದುಶ್ಚಟಕ್ಕೆ ತೆರಲೇಬೇಕಾದ ಬೆಲೆ..! ಅಂಥದೊಂದು ದುಶ್ಚಟಕ್ಕೆ ಬಿದ್ದು ಸಾವಿಗೀಡಾದ ಅನೇಕರ ಪೈಕಿ ಅವಳೂ ಕೂಡ ಒಬ್ಬಳು; ಹೆಸರು ಮೆಹ್ಜಾಬೀನ್ ಬಾನು, ಅರ್ಥಾತ್ ಮೀನಾಕುಮಾರಿ.
ಅಲಿಭಕ್ಷ್ ಸೊಗಸಾಗಿ ಪದ್ಯ ಬರೆಯುತ್ತಿದ್ದ. ತಾನು ಬರೆದ ಪದ್ಯವನ್ನು ಅಷ್ಟೇ ಸೊಗಸಾಗಿ ಹಾಡುತ್ತಿದ್ದ. ಸಂಗೀತವೂ ಅವನದ್ದೇ..! ಆತ ಹಾರ್ಮೋನಿಯಂ ಹಿಡಿದು ಹಾಡಲು ಕುಂತರೇ ಇಡೀ ಸಭೆಯೇ ಕಿವಿಗಡಚಿಕ್ಕುವಂತೆ ಕರತಾಡನವಾಗುತ್ತಿತ್ತು. ಆರಂಭದಲ್ಲಿ ಆತ ಪಾರ್ಸಿ ಧಾರ್ಮಿಕ ಕೇಂದ್ರದಲ್ಲಿ ಪದ್ಯ ಬರೆದು ಹಾಡಿಕೊಂಡಿರುತ್ತಿದ್ದ. ಈದ್ ಕಾ ಚಾಂದ್ ಸೇರಿದಂತೆ, ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ರೋಲ್ ಮಾಡಿದ್ದ. ಈತ `ಶಾಹೀ ಲುಟೇರೇ’ ಚಿತ್ರಕ್ಕೆ ಸಂಗೀತವನ್ನೂ ನೀಡಿದ್ದ. ಈ ಅಲಿಭಕ್ಷ್, ಠಾಗೂರ್ ಮನೆತನದ ಬಂಗಾಲಿ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆ ಸ್ಟೇಜ್ ಡ್ಯಾನ್ಸರ್ ಆಗಿದ್ದಳು. ಅವಳನ್ನು ಮದ್ವೆಯಾಗುವ ಉದ್ದೇಶದಿಂದ ಮೊದಲ ಪತ್ನಿಯಿಂದ ಮುಕ್ತನಾದ. ಆಕೆಯ ಹೆಸರು ಪ್ರಭಾವತಿ ದೇವಿ. ಅಲೀಭಕ್ಷ್ ಅವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಮದ್ವೆಯಾಗಿದ್ದ. ಪ್ರಭಾವತಿ ದೇವಿ, ಇಕ್ಬಾಲ್ ಬೇಗಂ ಆಗಿ ಬದಲಾದಳು. ಅವರ ದಾಂಪತ್ಯಕ್ಕೆ ಮೂರು ಮಕ್ಕಳಾದವು. ಮೂರೂ ಹೆಣ್ಣು ಮಕ್ಕಳೇ. ಕುರ್ಷೀದ್, ಮಧು, ಹಾಗೂ ಮೆಹ್ಜಾಬೀನ್ ಬಾನು.
ಇವರ ಪೈಕಿ ಮೆಹ್ಜಾಬೀನ್ ಬಾನು ಜನಿಸಿದ ಹೊತ್ತೇ ಕರಾಳವಾಗಿತ್ತು. ಮೂರನೇ ಬಾರಿ ಗರ್ಭ ಹೊತ್ತ ಇಕ್ಬಾಲ್ ಬೇಗಂ, ತೀವ್ರ ಬೇನೆಯಿಂದ ನರಳಿದಾಗ ಅವಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾಕ್ಟರ್ ಗಾಡ್ರೆ ಹೆರಿಗೆ ಮಾಡಿಸಿದ. ಮೆಹ್ಜಾಬೀನ್ ಜನಿಸಿದಳು. ಆದರೆ ಖಾಸಗಿ ಆಸ್ಪತ್ರೆಯ ಬಿಲ್ಲು ಬರಿಸಲು ಅಲೀಭಕ್ಷ್ ಕೈಲಿ ಸಾಧ್ಯವಾಗಲಿಲ್ಲ. ಜೊತೆಗೆ ಮೂವರು ಹೆಣ್ಣುಮಕ್ಕಳು ಹುಟ್ಟಿದ್ವು ಅಂತ ಕರುಬಿದ. ಇವೆಲ್ಲಾ ದ್ವಂದ್ವಗಳ ಪ್ರತಿಫಲ ಏನಂದ್ರೆ, ಆ ಪುಟ್ಟ ಮೆಹ್ಜಾಬೀನ್ ಮುಸ್ಲೀಂ ಅನಾಥಾಶ್ರಮದ ಪಾಲಾದಳು. ದೇವರು ಭವಿಷ್ಯವನ್ನು ಕಾಣಿಸಲು ಕೆಲವೊಂದು ಸುಳಿವುಗಳನ್ನು ಕೊಡುತ್ತಾನೆ ಎಂಬ ಮಾತಿದೆ. ಅದೆಷ್ಟು ನಿಜವೋ, ನಂಬಿಕೆಗಳಿಗೆ ಬಿಟ್ಟ ವಿಚಾರ. ಆದರೆ ಮೆಹ್ಜಾಬೀನ್ ಹುಟ್ಟು ಕಣ್ಣೀರುಮಯವಾಗಿತ್ತು. ಅವಳು ಜೀವನದುದ್ದಕ್ಕೂ ದುರಂತವನ್ನೇ ಕಂಡಳು. ಆದರೆ ಆಗತಾನೇ ಪಿಳಿ-ಪಿಳಿ ಕಣ್ಣು ಬಿಡಲು ಯತ್ನಿಸುತ್ತಿದ್ದ ಹಸುಗೂಸನ್ನು, ಕೆಲವೇ ಗಂಟೆಗಳ ಸಮಯ ಅನಾಥಾಶ್ರಮದಲ್ಲಿ ಬಿಟ್ಟಿದ್ದ ಅಲಿಭಕ್ಷ್, ತಡೆಯದೇ ಆ ಮಗುವನ್ನು ಅಲ್ಲಿಂದ ತಂದುಬಿಟ್ಟಿದ್ದ. ಪಿತೃವಾತ್ಸಲ್ಯ ಅನ್ನೋದು ಇದಕ್ಕೇನಾ..?
ಪುಟ್ಟ ಮೆಹ್ಜಾಬೀನ್ ತೀವ್ರ ಬಡತನದ ಕುಟುಂಬದಲ್ಲಿ ಬೆಳೆಯತೊಡಗಿದಳು. ಅಪ್ಪ ಅಲ್ಲಿ-ಇಲ್ಲಿ ಹಾಡಿ ಸಂಪಾದಿಸುತ್ತಿದ್ದ ಹಣ ಎರಡು ಹೊತ್ತಿನ ಊಟಕ್ಕೂ ಸಾಲುತ್ತಿರಲಿಲ್ಲ. ಅರೆಹೊಟ್ಟೆಯಲ್ಲೂ ಅವಳು ಮೈ ತುಂಬಿ ಬೆಳೆಯತೊಡಗಿದಳು. ಸೌಂದರ್ಯವೊಂದು ಹೊಂಚುಹಾಕಿದಂತೆ ಭಾಸವಾಗುತ್ತಿತ್ತು. ಅಲಿಭಕ್ಷ್ ಹಣ ಸಂಪಾದಿಸದಿದ್ದರೂ ಚಿತ್ರರಂಗದಲ್ಲಿ ನಿಕಟ ಸಂಪರ್ಕವಿಟ್ಟುಕೊಂಡಿದ್ದ. ಆ ಕಾರಣಕ್ಕೇನೋ ಚಿತ್ರರಂಗದ ಕೆಲ ಮಂದಿ ಅಲಿಭಕ್ಷ್ನ ಮುದ್ದಾದ ಮಗಳ ಮೇಲೆ ಕಣ್ಣಿಟ್ಟರು. ಆತನ ಕೈಗೆ ಒಂದಿಷ್ಟು ಹಣವನ್ನು ಕೊಟ್ಟ ಪ್ರಕಾಶ್ ಸ್ಟುಡಿಯೋ ಮಾಲೀಕ ವಿಜಯ್ಭಟ್, ನನ್ನ `ಲೆದರ್ಫೇಸ್’ ಚಿತ್ರಕ್ಕೆ ನಿನ್ನ ಮಗಳೇ ಬಾಲನಟಿಯಾಗಬೇಕು, ಒಪ್ಪಿಸಿ ಕರೆದುಕೊಂಡು ಬಾ’ ಅಂದಿದ್ದ. ಖುಷಿಯಿಂದ ಮಾತಾಡದಾದ ಅಲೀಭಕ್ಷ್. ಮನೆಗೆ ಬಂದವನೇ ಎವೆಯಿಕ್ಕದೇ ಮಗಳನ್ನು ನೋಡಿದ, ಮನಸಾರೆ ತಣಿದ. ನಿಜ, ನನ್ನ ಮಗಳು ತುಂಬಾ ಮುದ್ದಾಗಿದ್ದಾಳೆ ಅಂದುಕೊಂಡವನೇ ಮಾಯ ಪ್ರಪಂಚವನ್ನು ವೈಭವಿಕರಿಸಿ ಮಗಳನ್ನು ಆ ಸಿನಿಮಾದಲ್ಲಿ ನಟಿಸಲು ಒಪ್ಪಿಸಿದ. ಸಿನಿಮಾ ಪ್ರಪಂಚ ಅರಿಯದ `ನಂಗೆ ಸಿನಿಮಾ ಬೇಡ, ನಾನು ಓದಬೇಕೆಂದ’ ಆ ಪುಟ್ಟ ಮೆಹ್ಜಾಬೀನ್ಗೆ ಆಗಿನ್ನು ಏಳರ ಹರೆಯ.
ಸಿನಿಮಾ ಅಂದ್ರೆ ಏನೆಂದೇ ಗೊತ್ತಿರದ ವಯಸ್ಸಿನಲ್ಲಿ ಮೀನಾಕುಮಾರಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಳು. ಮನೆಯ ಬಡತನ ಅನಿವಾರ್ಯವಾಗಿ ಆ ಲೋಕಕ್ಕೆ ಅವಳನ್ನು ತಳ್ಳಿತ್ತು ಎಂದೇ ಹೇಳಬಹುದು. `ಲೆದರ್ಫೇಸ್’ ನಂತರ, `ವೀರ್ ಘಟೋತ್ಕಚ್’, `ಶ್ರೀ ಗಣೇಶ ಮಹೀಮ’, `ಅಲ್ಲದೀನ್ ಅ್ಯಂಡ್ ವಂಡರ್ಫುಲ್ ಲ್ಯಾಂಪ್’ ಚಿತ್ರಗಳಲ್ಲಿ ಸಣ್ಣಪುಟ್ಟ ರೋಲ್ಗಳನ್ನು ಮಾಡಿದಳು. ಅವಳ ವಯಸ್ಸಿನ್ನೂ ಏಳು ದಾಟಿರಲಿಲ್ಲ, ಆಗಲೇ ವಿಜಯ್ಭಟ್ ಬಾಲಕಿ ಮೀನಾಳನ್ನು ಕರೆದು ಅವಕಾಶ ಕೊಟ್ಟಿದ್ದ. ಮುಂದೊಂದು ದಿನ ಅದೇ ವಿಜಯ್ಭಟ್ ತನ್ನ `ಬೈಜುಬಾವ್ರ’ ಚಿತ್ರಕ್ಕೆ ಮೀನಾಕುಮಾರಿಯನ್ನು ಪೂರ್ಣ ಪ್ರಮಾಣದ ನಾಯಕಿಯಾಗಿ ಆರಿಸಿದ. 1953ರಲ್ಲಿ ಆ ಚಿತ್ರದ ನಟನೆಗೆ ಫಿಲ್ಮ್ಫೇರ್ ಅವಾರ್ಡ್ ಸಿಕ್ಕಿತ್ತು. ದಾಖಲೆ ಏನಂದ್ರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಟಿಯೊಬ್ಬಳಿಗೆ ಪ್ರಪ್ರಥಮ ಬಾರಿಗೆ ಸಿಕ್ಕ ಫಿಲ್ಮ್ ಫೇರ್ ಅವಾರ್ಡ್ ಇದು. ಆ ಮೂಲಕ ಮೀನಾಕುಮಾರಿ ಚಿತ್ರರಂಗಕ್ಕೆ ಹೆಜ್ಜೆಯಿಟ್ಟ ಅಲ್ಪ ಸಮಯದಲ್ಲೇ ಹೊಸದೊಂದು ದಾಖಲೆ ಬರೆದಳು.
ಸಕ್ಸಸ್; ಅದೊಮ್ಮೆ ಬೆನ್ನ ಮೇಲೇರಿದರೇ ಸಾಕು, ಅವಕಾಶದ ಮಹಪೂರ ಶುರುವಾಗಿಬಿಡುತ್ತೆ. ಮೀನಾಳನ್ನು ಅರಸಿಕೊಂಡು ಬಂದ ಪ್ರಶಸ್ತಿ, ಅವಳಿಗೆ ಸಾಲು-ಸಾಲು ಅವಕಾಶಗಳನ್ನು ಕಲ್ಪಿಸಿತ್ತು. ಅವಳ ವೃತ್ತಿ ಜೀವನದಲ್ಲಿ ಅಭಿನಯಿಸಿದ ಬರೋಬ್ಬರಿ ತೊಂಬತ್ತು ಚಿತ್ರಗಳಲ್ಲಿ, ಇನ್ನಿಲ್ಲದಂತೆ ಕಾಡಿದ ಚಿತ್ರಗಳು ಐವತ್ತಕ್ಕಿಂತ ಹೆಚ್ಚು. ಅಂಥ ಚಿತ್ರಗಳ ಪೈಕಿ, `ಪರಿಣೀತಾ’, `ದೇರಾ’, `ಏಕ್ ಹೀ ರಾಸ್ತಾ’ ಪ್ರಮುಖವಾದ ಚಿತ್ರಗಳು. ಹಾಗೆಯೇ `ಶಾರ್ದಾ’, `ಆಜಾದ್’, `ಮಿಸ್ ಮೇರಿ’, `ಶರಾರತ್’, ಹಾಗೂ `ಕೋಹಿನೂರ್’ ಚಿತ್ರಗಳು ಅಪಾರ ಯಶಸ್ಸನ್ನು ತಂದು ಕೊಟ್ಟಿತ್ತು. ಅವಳೆಂಥಾ ಅದ್ಬುತ ನಟಿಯಂದ್ರೇ, ಸಲೀಸಾಗಿ ಪಾತ್ರದ ಪರಾಕಾಯ ಪ್ರವೇಶ ಮಾಡಿಬಿಡುತ್ತಿದ್ದಳು. ಅದರಲ್ಲೂ ಸೆಂಟಿಮೆಂಟ್ ಪಾತ್ರಗಳಿಗೆ ಹೇಳಿ ಮಾಡಿಸಿದ ನಟಿ ಎನಿಸಿಕೊಂಡಳು. ಅಂಥ ಪಾತ್ರಗಳು ಸೃಷ್ಟಿಯಾದರೇ; ಆ ಪಾತ್ರಕ್ಕೆ ಮೀನಾಕುಮಾರಿಯೇ ಬೇಕಾಗಿತ್ತು. ತೆರೆಯ ಮೇಲೇ ಕಣ್ಣೀರಾಗುತ್ತಿದ್ದ ಅವಳು, ಅದೆಷ್ಟೋ ಪ್ರೇಕ್ಷಕರ ಕಣ್ಣಾಲಿಗಳನ್ನು ಹನಿಗೂಡಿಸಿದ್ದಳು.
ಸೆಲೆಬ್ರಿಟಿಗಳ ಬದುಕು ರೈಲು ನಿಲ್ದಾಣವಿದ್ದಂತೆ, ಅಂತಿಮ ನಿಲ್ದಾಣ ಬಂದ ನಂತರ ಇಳಿದುಕೊಳ್ಳಲೇಬೇಕು, ಇಲ್ಲವೇ ಹೊಸದೊಂದು ದಾರಿಯನ್ನು ಹುಡುಕಿ ಬೇರೆ ನಿಲ್ದಾಣವನ್ನು ತಾವೇ ಸೃಷ್ಟಿಸಿಕೊಳ್ಳಬೇಕು. ಆದರೆ ಅಷ್ಟೊಂದು ತಾಳ್ಮೆ, ಆಲೋಚಿಸುವ ವ್ಯವಧಾನ ಅವರಿಗಿರೋದಿಲ್ಲ. ಸುಂದರ ಪಯಣದಲ್ಲಿ ಹಂಪ್ಸ್ ಧುತ್ತನೇ ಎದುರಾಗಿಬಿಡುತ್ತದೆ. ಸಂಭಾಳಿಸಿಕೊಳ್ಳದಿದ್ದರೇ ಅನಾಹುತ ನಿಶ್ಚಿತ. ಬಹುಶಃ ಸೆಲೆಬ್ರಿಟಿಗಳಲ್ಲಿ ಬಹುತೇಕರು ಸಮಸೈಗಳಿಗೆ ಗೋಣೊಡ್ಡಿದರೇ ವಿನಃ, ಎದುರಾದ ಸವಾಲುಗಳನ್ನು ಮೆಟ್ಟಿ ನಿಲ್ಲಲಿಲ್ಲ. ಅಂಥವರ ಪೈಕಿ ಈ ಮೀನಾಕುಮಾರಿಯೂ ಒಬ್ಬಳು. ಅವಳ ಯಶೋಗಾಥೆ ಇನ್ನೂ ಅರಗಿರಲಿಲ್ಲ. ಆಗಲೇ ಅವಳ ಹೃದಯದಲ್ಲಿ ಅವನೊಬ್ಬ ಮೊಳಕೆಯೊಡೆದಿದ್ದ. ಆತನ ಹೆಸ್ರು ಕಮಲ್ ಅಮ್ರೋಹಿ. ಆತ ಆ ಕಾಲಕ್ಕೆ ಹಿಂದಿ ಚಿತ್ರರಂಗದ ಖ್ಯಾತ ನಿದರ್ೇಶಕ. ಆಗಲೇ ಅವನಿಗೆ ಮದ್ವೆಯಾಗಿತ್ತು. ಮೇಲಾಗಿ ಮೀನಾಕುಮಾರಿಗಿಂಥ ಅನಾಮತ್ತು ಹದಿನೈದು ವರ್ಷಕ್ಕೆ ಹಿರಿಯ. ಆದೇನು ಕಂಡಳೋ ಅವನಲ್ಲಿ, `ದಿಲ್ ಸಾ ಜಬ್ ಸಾಥಿ ಪಾಯ, ಬೇಚೈನೀ ಭೀ ವೋ ಸಾಥ್ ಆಯಾ’ ಅಂಥ ಹಾಡತೊಡಗಿದಳು. ಮುಂದೊಂದು ದಿನ ಅವರಿಬ್ಬರ ಮದುವೆಯೂ ನಡೆದು ಹೋಗಿತ್ತು.
ಇದೇ ಕಮಲ್ ಅಮ್ರೋಹಿ, ಈ ಹಿಂದೆ ಚಂದದ ನಟಿ ಮಧುಬಾಲಾಳನ್ನು ಪ್ರೀತಿಸಿದ್ದ. ಮದುವೆ ಆಗುವಂತೆ ಒತ್ತಾಯಿಸಿದ್ದ. ಅವನಲ್ಲಿ ಅದೇನು ಮ್ಯಾಜಿಕ್ ಇತ್ತೋ, ಮಧುಬಾಲಾ ಕೂಡ ಅವನನ್ನು ಪ್ರೀತಿಸಿದ್ದಳು. ಆದರೆ ಮೊದಲ ಪತ್ನಿಗೆ ಡಿವೋರ್ಸ್ ಕೊಡದ ಹೊರತು ನಿನ್ನನ್ನು ಮದ್ವೆಯಾಗಲಾರೆ ಎಂದು ಮಧು ಕಂಡೀಷನ್ ಹಾಕಿದ್ದಳು. ಕಮಲ್ ಒಪ್ಪಲಿಲ್ಲ. ಮದ್ವೆ ಮುರಿದು ಬಿದ್ದಿತ್ತು. ಆದರೆ ಮೀನಾಕುಮಾರಿ, ಕಮಲ್- ಕಮಾಲ್ಗೆ ಸೋತು ಮದ್ವೆಯಾದಳು. ಆದರೆ ಅವರ ದಾಂಪತ್ಯ ಜೀವನ ಸುಖಮಯವಾಗಲಿಲ್ಲ. ದಿನನಿತ್ಯ ಜಗಳ, ಹೊಂದಾಣಿಕೆಯ ಸಮಸ್ಯೆ ಅವಳ ಬದುಕನ್ನು ನರಕದ ಬಾಗಿಲಿಗೆ ತಂದು ನಿಲ್ಲಿಸಿತ್ತು.
ಯಾರಿಗೂ ಗೊತ್ತಿಲ್ಲದ ಇನ್ನೊಂದು ವಿಚಾರವೇನೆಂದರೇ, ಮೀನಾಕುಮಾರಿ ಕೇವಲ ನಟಿಯಾಗಿರಲಿಲ್ಲ. ಸ್ವತಃ ಪದ್ಯ ಬರೆಯುತ್ತಿದ್ದಳು. ಅವುಗಳಲ್ಲಿ ಅಂತರಂಗವನ್ನು ಹಿಂಡಿ ಹಾಕುವಂತಿದ್ದ ಕವನಗಳದ್ದೇ ಯಮಪಾಲು. ಅಂಥ ಕವನಗಳ ಪೈಕಿ ಆಕೆ ಕಮಲ್ ಅಮ್ರೋಹಿ ಕುರಿತು ಬರೆದ ಪದ್ಯದ ಒಂದು ತುಣುಕಿದು. `ದಿಲ್ ಸಾ ಜಬ್ ಸಾಥಿ ಪಾಯ, ಬೇಚೈನೀ ಭೀ ವೋ ಸಾಥ್ ಆಯಾ’, ತಿಜಟಿ ಜಿಠಣಟಿಜ ಠಟಜಠಟಿಜ ಟಞಜ ಟಥಿ ಜಚಿಡಿಣ, ಜ ಚಿಟಠ ಛಡಿಠಣರಣ ಠಡಿಡಿಠತಿ ತಿಣ ಟ’, ಅಚ್ಚ ಕನ್ನಡದಲ್ಲಿ ಹೇಳುವುದಾದರೇ, `ಹೃದಯದಿಂದ ಒಬ್ಬ ಜೊತೆಗಾರನನ್ನು ಬಯಸಿದೆ, ಆತ ಅಷ್ಟೇ ಅಕ್ಕರೆಯಿಂದ ಜೊತೆಯಾದ..’. ಕಮಲ್ ಅಮ್ರೋಹಿಯನ್ನ ಬಯಸಿದ ಮೀನಾಳ ಮನಸು ಹೀಗೆ ಗುನುಗಿಕೊಂಡಿತ್ತು. ಏಕೆಂದರೇ ಅವಳು ಅಪ್ಪಟ ಪ್ರೇಮಿ.
ಮದುವೆಯಾದ ಆರಂಭದಲ್ಲಿ ಕಮಲ್ ಅಮ್ರೋಹಿ ಹಾಗೂ ಮೀನಾ ಇಬ್ಬರು ಸೇರಿಕೊಂಡು `ದೇರಾ…’ ಹೆಸರಿನ ಚಿತ್ರ ನಿರ್ಮಾಣ ಮಾಡಿದರು. ಆನಂತರ ಪಕೀಜಾ’ ಹೆಸರಿನ ಚಿತ್ರ ನಿಮರ್ಿಸಿದರು. ಈ ಮಧ್ಯೆ ಮೀನಾ ಮಗುವೊಂದನ್ನು ಬಯಸಿದಳು. ಆದರೆ ಕಮಲ್ ಅಮ್ರೋಹಿ `ನಿನಗೀಗಲೇ ಮಗು ಬೇಡ’ ಅಂದಿದ್ದ. ಅದ್ಯಾಕೋ ಅದ್ಯಾವುದೋ ಆತಂಕವೊಂದು ಅವನನ್ನು ಕಾಡುತ್ತಿತ್ತು. ಆದರೆ ಮೀನಾ ಕುಸಿದು ಹೋದಳು. ಅವಳು ನೂರಾರು ಕನಸನ್ನು ಕಂಡವಳು, ಬೊಗಸೆಗಟ್ಟಳೇ ಪ್ರೇಮವನ್ನು ಬಯಸಿದವಳು. ಮೆಚ್ಚಿದ ಅಂಕಲ್ನನ್ನೇ ಮದ್ವೆಯಾದರೂ, ಆತ ಅದ್ಯಾಕೋ ಸಿಡಿಮಿಡಿಗುಟ್ಟುತ್ತಿದ್ದ. 1960ರ ಹೊತ್ತಿಗೆ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. 1964ರಲ್ಲಿ ಇಬ್ಬರೂ ಡಿವೋಸರ್್ ಪಡೆದು ದೂರವಾದರು. ಕಮಲ್ ಸಾತ್ವಿಕನಂತೆ ಬದುಕಿದ, ಆದರೆ ಮೀನಾ, ಹತಾಶೆ ಹೊತ್ತು ನರಳಿದಳು. ಕಮಲ್ ಅಮ್ರೋಹಿಯನ್ನು ಮನಸಾರೆ ಪ್ರೀತಿಸಿ, ಆ ಪ್ರೀತಿ ಸಿಗದೇ, ಅವನಿಂದ ದೂರಬಂದ ಮೇಲೆ ಮೀನಾಕುಮಾರಿ ಬದುಕಿನಲ್ಲಿ ಅವನೊಬ್ಬ ಪ್ರವೇಶಿಸಿದ್ದ. ಆತ ಅಮಲು ತರಿಸುತ್ತಿದ್ದ, ನೋವು ಮರೆಸುತ್ತಿದ್ದ, ದಿನದ ಇಪ್ಪತ್ನಾಲ್ಕು ತಾಸು ಅವಳೊಳಗೆ ಇಳಿದು ಬೆಚ್ಚಗೇ ಮಲಗುತ್ತಿದ್ದ. ಅವಳನ್ನು ಬಿಟ್ಟು ಆತ, ಆತನನ್ನು ಬಿಟ್ಟು ಇವಳು ಇರುತ್ತಿರಲಿಲ್ಲ. ಆತನ ಹೆಸರು `ಮದ್ಯ..’!
ಅವಳು ಅದ್ಯಾವ ಪರಿ ಕುಡಿತಕ್ಕೆ ದಾಸಳಾದ್ದಳೆಂದರೇ ಅವಳ ಸ್ನಿಗ್ದ ಸೌಂದರ್ಯ ಹಂತಹಂತವಾಗಿ ಹಾಳಾಗತೊಡಗಿತ್ತು. ಮೀನಾಕುಮಾರಿಯನ್ನು ಚಿತ್ರರಂಗ ದೂರಮಾಡತೊಡಗಿತ್ತು. ಅವಳು ಕಡೆಯದಾಗಿ ಜವಾಬ್ ಹಾಗೂ ದುಶ್ಮನ್ ಚಿತ್ರಗಳಲ್ಲಿ ಅಭಿನಯಿಸಿದಳು. ಅದ್ಯಾಕೋ ಅವಳ ಹೃದಯದಿಂದ ಕಮಲ್ ನೆನಪು ಮಾಸಲೇ ಇಲ್ಲ. ಒಂದೇ ಸಮನೇ ಪದ್ಯ ಬರೆಯತೊಡಗಿದಳು. `ತುಮ್ ಕ್ಯಾ ಕರೋಗೀ ಸುನ್ಕರ್ ಮುಜ್ಸೇ ಮೇರೀ ಕಹಾನಿ, ಬೇ ಲುತ್ಫ್ ಜಿಂದಗೀ ಕಿಸ್ಸೇ ಹೈ ಪೀಕೇ ಪೀಕೇ’, `why do you want to listen to my story; colourless tales of a joyless life’,`ಇನ್ನೇನಿದೆ ಅಂತ ನನ್ನ ಕಥೆಗಳನ್ನು ಕೇಳ್ತೀರಾ, ಅದು ಬಣ್ಣವಿಲ್ಲದ, ಖುಷಿಯಿಲ್ಲದ ನೀರಸ ಬದುಕು’.
ಏನೂ ಉಳಿದಿರಲಿಲ್ಲ, ಅವಳು ಯಾರ ಮಾತನ್ನೂ ಕೇಳಲಿಲ್ಲ. ಕುಡಿತ ಅವಳ ಕರುಳನ್ನು ಘಾಸಿ ಮಾಡಿತ್ತು. ಹೆಚ್ಚಿನ ಚಿಕಿತ್ಸೆಗೆ ಲಂಡನ್ಗೇ ಹೋದರೂ ಪ್ರಯೋಜನವಾಗಲಿಲ್ಲ. ಸ್ವಿಡ್ಜರ್ಲ್ಯಾಂಡ್ ಲುಕ್ಸಾನು ತಂದು ಕೊಡಲಿಲ್ಲ. ವೈದ್ಯರು ಕೈ ಚೆಲ್ಲಿದರು. 1972 ಮಾರ್ಚ್ 31ನೇ ತಾರೀಕು ಲಿವರ್ ಡ್ಯಾಮೇಜ್ ಮಿತಿಮೀರಿ ಮೀನಾಕುಮಾರಿ ಪ್ರಾಣಪಕ್ಷಿ ಹಾರಿಹೋಗಿತ್ತು. ಕೇವಲ ಏಳನೇ ವಯಸ್ಸಿಗೆ ಚಿತ್ರರಂಗವನ್ನು ಪ್ರವೇಶಿಸಿ, ಮೊಟ್ಟ ಮೊದಲನೇ ಫಿಲ್ಮ್ಫೆರ್ ಅವಾರ್ಡ್ ಪಡೆದು, ಸತತ ಮೂವತ್ತು ವರ್ಷಗಳಲ್ಲಿ ತೊಂಬತ್ತಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆ ನಿಂತ ಚಂದದ ನಟಿಯೊಬ್ಬಳು, ತನ್ನ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ಅವನೊಬ್ಬನ ಪ್ರೀತಿಗಾಗಿ ಬದುಕನ್ನೇ ಮುಡಿಪಿಟ್ಟಳು, ಬದುಕನ್ನೇ ಬಲಿಕೊಟ್ಟಳು. ಆದರೆ ಕಮಲ್ ಅಮ್ರೋಹಿ, ಅವಳು ಸತ್ತ ಕೆಲ ದಿನಕ್ಕೇ `ಪಕೀಜಾ’ ಚಿತ್ರವನ್ನು ಮರು ಬಿಡುಗಡೆ ಮಾಡಿ ಕೋಟ್ಯಾಂತರ ಹಣವನ್ನು ಸಂಪಾದಿಸಿದ್ದ. ನಾನ್ಸೆನ್ಸ್..!
ಮೀನಾಕುಮಾರಿ ಅಕ್ಷರಶಃ ಪ್ರೇಮಸಖಿಯಾಗಿದ್ದಳು. ಬಹುಶಃ ಆ ಕಾರಣಕ್ಕೇ ಸತ್ತಳು. `ತಲಾಖ್ ತೋ ದೇ ರಹೇ ಹೋ ನಜರ್ ಎ ಗೆಹರ್ ಕೆ ಸಾಥ್, ಜವಾನಿ ಭೀ ಮೇರಿ ಲೌಟಾ ದೋ ಮೆಹರ್ ಕೆ ಸಾಥ್’ ಇದು ಅವಳು ಬರೆದ ಅಂತಿಮ ಪದ್ಯ. ಅದು ಅವಳ ಅಂತರಂಗದ ಅಂತಿಮ ಮಿಡಿತ..! ವಿದಾಯ ಗೀತೆ..!
POPULAR STORIES :
100% ಕಾಮಿಡಿ, ಸಖತ್ ಮೂವಿ ಈಗಲೇ ನೋಡಿ ಸ್ವಾಮಿ..!
ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!
ಟ್ಯಾಂಕರ್ ಮುಷ್ಕರದ ಎಫೆಕ್ಟ್..! ಪೆಟ್ರೋಲ್ ಸಿಗ್ದಿದ್ರೇ ಏನಾಗುತ್ತೆ ಗೊತ್ತಾ..?
ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?
ಭಾರತೀಯ ನಟಿ ಜೊತೆ ಒಬಾಮಾ ಡಿನ್ನರ್..!
ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?