ಸಿನಿಮಾ ಲೋಕವೇ ಹಾಗೆ..ಎಲ್ಲರನ್ನು ಆಕರ್ಷಿಸುತ್ತೆ, ಸೆಳೆಯುತ್ತೆ. ಬಣ್ಣದ ಲೋಕಕ್ಕೆ ಬಣ್ಣ ಬಣ್ಣದ ಕನಸುಗಳೊಂದಿಗೆ ಬರುವವರು ಅದೆಷ್ಟೋ ಮಂದಿ. ಸಿನಿ ತಾರೆಯರನ್ನು ಫಾಲೋ ಮಾಡುತ್ತಾ ಅವರಂತೆ ದೊಡ್ಡ ಸ್ಟಾರ್ ಆಗಬೇಕು ಎಂದು ಕನಸು ಕಾಣುವ ಯುವಮನಸ್ಸುಗಳು ನಮ್ಮ-ನಿಮ್ಮ ನಡುವೆಯೇ ಸಾಕಷ್ಟು ಮಂದಿ ಇದ್ದಾರೆ. ಸ್ಟಾರ್ ನಟ, ನಟಿಯರನ್ನು ಇಷ್ಟಪಟ್ಟು, ಫಾಲೋ ಮಾಡಿ ಕಿರುತೆರೆ, ಬೆಳ್ಳಿತೆರೆ ಅಂತ ಕಲಾರಂಗ ಪ್ರವೇಶಿಸಿರುವ ಸಾಕಷ್ಟು ಪ್ರತಿಭೆಗಳು ನಮ್ಮಲ್ಲಿದ್ದಾರೆ. ಆ ಸಾಲಿಗೀಗ ದೀಪಾ ಹಿರೇಮಠ್ ಸೇರಿದ್ದಾರೆ.
ಈ ದೀಪಾ ಹಿರೇಮಠ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಧಾರವಾಡದ ದೀಪಾ ಬಾಲ್ಯದಿಂದಲೂ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ. ಪುನೀತ್ ಇದುವರೆಗೆ ನಟಿಸಿರುವ ಪ್ರತಿಯೊಂದು ಸಿನಿಮಾಗಳ ಚಿತ್ರಗಳನ್ನು ಸಂಗ್ರಹಿಸಿ ಫೋಟೋ ಆಲ್ಬಮ್ ಮಾಡಿಟ್ಟುಕೊಂಡಿದ್ದಾರೆ! ಮನೆಯ ಒಂದು ರೂಂ ತುಂಬಾ ಪವರ್ ಸ್ಟಾರ್ ಫೋಟೋಗಳದ್ದೇ ಡೆಕೋರೇಷನ್! ಚಿಕ್ಕಂದಿನಿಂದಲೂ ಅಪ್ಪು ಅಭಿಮಾನಿಯಾಗಿ ಪ್ರತಿಯೊಂದು ಸಿನಿಮಾವನ್ನು ಕೂಡ ನೋಡಿದ್ದಾರಂತೆ.
ಒಂದಲ್ಲ ಒಂದು ದಿನ ಅಪ್ಪು ಜೊತೆ ನಟಿಸಬೇಕು ಎನ್ನುವುದೇ ಈ ದೊಡ್ಡ ಅಭಿಮಾನಿಯ ಮಹಾದಾಸೆ. ಕಾನೂನು ವಿದ್ಯಾರ್ಥಿನಿಯಾಗಿರುವ ದೀಪಾ ಈಗ ಸಿನಿರಂಗಕ್ಕೆ ಬಂದಿದ್ದಾರೆ. ಈಗಾಗಲೇ ಮಹಾಸತಿ, ಬ್ರಹ್ಮಾಸ್ತ್ರ ಎಂಬ ಕನ್ನಡ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೀಪಾ, ತೆಲುಗು ಇಂಡಸ್ಟ್ರಿಯಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. `ಪ್ರೇಮ ನಗರ’ ಎಂಬ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅದೂ ನಾಯಕಿಯಾಗಿ. ಇನ್ನು ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂಬ ಚಿತ್ರದಲ್ಲಿ ನಟಿಸಿರುವ ದೀಪಾ, ಕ್ರಿಟಿಕಲ್ ಕೀರ್ತನೆಗಳು ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಪ್ಪು ಅಭಿಮಾನಿಯಾಗಿ ಸಿನಿ ಆಸಕ್ತಿ ಬೆಳೆಸಿಕೊಂಡ ದೀಪಾ ಹಿರೇಮಠ ಇಂದು ಹೀರೋಯಿನ್ ಆಗಿದ್ದಾರೆ. ಅವರ ಆಸೆಯಂತೆ ಅಪ್ಪು ಜೊತೆ ನಟಿಸುವ ಅವಕಾಶ ಶೀಘ್ರದಲ್ಲೇ ಬರಲಿ.