ಜೀವನದಲ್ಲಿ ಎದುರಾದಂತಹ ಅಡೆತಡೆಗಳನ್ನು ಮೀರಿ ಸಾಧನೆ ಮಾಡಿದ ಅದೆಷ್ಟೋ ಮಹಿಳೆಯರಿದ್ದಾರೆ. ಅದರಲ್ಲಿ ಅನಿಲ ಜ್ಯೋತಿ ರೆಡ್ಡಿ ಕೂಡ ಒಬ್ಬರು.1970 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದ ವರಂಗಲ್ ನ ಹನುಮಕೊಂಡ ಮಂಡಲದ ನರಸಿಂಹುಲ ಗುಡ್ಡದ ಅತೀ ಬಡಕುಟುಂಬದಲ್ಲಿ ಎರಡನೇ ಮಗಳಾಗಿ ಜನಿಸಿದ ಡಿ. ಅನಿಲ ಜ್ಯೋತಿ ರೆಡ್ಡಿ ಅರ್ಥಾತ್ ಜ್ಯೋತಿ ರೆಡ್ಡಿ ಇವರ ಜೀವನದ ಕಥೆ ಮಹಿಳೆಯರೆಲ್ಲರಿಗೂ ಆದರ್ಶ.
ತಮ್ಮ ಸಣ್ಣ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥಾಶ್ರಮದ ಪಾಲಾದ ಜ್ಯೋತಿ ರೆಡ್ಡಿ ಹಾಗೋ ಹೀಗೂ ಹತ್ತನೇ ತರಗತಿಯನ್ನು ಪೂರೈಸಿದಳು. ನಂತರ ಹಿರಿಯರ ಬಲವಂತದಿಂದಾಗಿ ತನ್ನ 16 ರ ಹರೆಯದಲ್ಲಿ ಮದುವೆಯಾದರು. ನಂತರ 2 ಮಕ್ಕಳಿಗೆ ಜನ್ಮ ನೀಡುತ್ತಾರೆ. ಪತಿ ಇದ್ದರೂ ಇಲ್ಲದಂತೆ ಅನ್ನುವ ಪರಿಸ್ಥಿತಿ ಅವರದ್ದು. ಮಕ್ಕಳನ್ನು ಸಾಕಲು 5 ರೂಪಾಯಿ ದಿನಗೂಲಿ ಸಂಬಳಕ್ಕೆ ಕೆಲಸ ಮಾಡತೊಡಗುತ್ತಾರೆ.
1988ರಲ್ಲಿ ನೆಹರು ಯುವ ಕೇಂದ್ರದ ವಯೋಜನ ವಿದ್ಯಾಲಯದಲ್ಲಿ ನೈಟ್ ಸ್ಕೂಲ್ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ.1990 ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವೃತ್ತಿಗೆ ಸೇರುತ್ತಾರೆ, ಇಷ್ಟಕ್ಕೆ ಸುಮ್ಮನಾಗದ ಜ್ಯೋತಿ ರೆಡ್ಡಿ ದುಡಿಯಬೇಕು ದುಡಿದು ಮಕ್ಕಳಿಗೆ ಒಳ್ಳೆ ಭವಿಷ್ಯವನ್ನು ಕಟ್ಟಿ ಕೊಡಬೇಕು ಎನ್ನುವ ಉದ್ದೇಶದಿಂದ ರಾತ್ರಿ ಸಮಯ ಮನೆಯಲ್ಲಿ ಕೂತು ಪೆಟಿಕೋಟ್ ಹೊಲಿದು ಅದನ್ನು ಮಾರಿ ಜೀವನ ಸಾಗಿಸುತ್ತಾರೆ.
ಇಷ್ಟೆಲ್ಲ ಕಷ್ಟಪಡುತ್ತಿದ್ದ ಜ್ಯೋತಿ ರೆಡ್ಡಿ ಮುಂದಿನ ದಿನಗಳಲ್ಲಿ ಪತಿಯ ಕಿರುಕುಳಕ್ಕೆ ಬಲಿಯಾಗಿ ಅವರಿಂದ ಬೇರ್ಪಟ್ಟು ಇಬ್ಬರು ಮಕ್ಕಳ ಜೊತೆ ಮೈಲಾರನ್ ಗ್ರಾಮದಿಂದ ಹನುಮಕೊಂಡ ಪೇಟೆಗೆ ವಾಸ್ತವ್ಯ ಬದಲಾಯಿಸಿದರು. ಅಲ್ಲಿ ಜ್ಯೋತಿ ರೆಡ್ಡಿ ಟೈಪ್ ರೈಟಿಂಗ್ ಕಲಿಯುತ್ತಾರೆ. ಕ್ರಾಫ್ಟ್ ವರ್ಕ್ ಕಲಿಯುತ್ತಾರೆ. ಹೀಗೆ ಕಷ್ಟ ಪಟ್ಟು 1991ರಿಂದ 94ರವರೆಗೆ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವ ವಿದ್ಯಾಲಯದಲ್ಲಿ ಬಿ.ಎ. ಪದವಿ ಮಾಡುತ್ತಾರೆ. ಇವೆಲ್ಲವೂ ತನ್ನ ಹೊಟ್ಟೆಪಾಡಿನ ಕೆಲಸದ ಜೊತೆ ಜೊತೆಯಲ್ಲಿ ನಡೆಯುತ್ತದೆ.
ಹೀಗೇ ಜೀವನದ ಒಂದೊಂದೇ ಮೆಟ್ಟಿಲೇರಿದ ಜ್ಯೋತಿ ರೆಡ್ಡಿ 2000 ನೇ ಇಸವಿ ಮಹತ್ತರ ತಿರುವನ್ನು ಕಾಡುಕೊಳ್ಳುತ್ತಾರೆ. ಅಮೆರಿಕಾದಿಂದ ತನ್ನ ಸಂಬಂಧಿಯೊಬ್ಬರು ಊರಿಗೆ ಬಂದಾಗ ಅಮೆರಿಕಾದ ಕೆಲಸದ ಆಸೆ ಹುಟ್ಟಿಸುತ್ತಾರೆ. ಆಗ ಜ್ಯೋತಿ ರೆಡ್ಡಿ ಮಾಡುತ್ತಿದ್ದ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಹೈದರಾಬಾದಿನಲ್ಲಿ ಸಾಫ್ಟ್ ವೇರ್ ಕೋರ್ಸ್ ಗೆ ಸೇರಿಕೊಳ್ಳುತ್ತಾರೆ. ನಂತರ ಮಕ್ಕಳನ್ನು ಹಾಸ್ಟೆಲ್ ಗೆ ದಾಖಲಿಸಿ ಜ್ಯೋತಿ ರೆಡ್ಡಿ ಅಮೆರಿಕದ ವಿಮಾನ ಏರುತ್ತಾರೆ. ಪ್ರಾರಂಭದಲ್ಲಿ ದಿನನಿತ್ಯ 60 ಯುಎಸ್ ಡಾಲರ್ ಗೆ 12 ಗಂಟೆ ದುಡಿಯುತ್ತಾರೆ.
ಕೊನೆಗೆ 2001 ಅಕ್ಟೋಬರ್ ನಲ್ಲಿ ಅಮೆರಿಕದಲ್ಲಿ ಸಣ್ಣಮಟ್ಟದಲ್ಲಿ ತನ್ನ ಸ್ವಂತ ಉದ್ಯಮ “ಕೀ ಸಾಫ್ಟವೇರ್ ಸೊಲ್ಯುಷನ್ಸ್” ಕಂಪೆನಿಯನ್ನು ಸ್ಪಷ್ಟವಾಗಿ ಇಂಗ್ಲೀಷ್ ಮಾತನಾಡಲೂ ಬಾರದಿದ್ದಿದ್ದರು ಎದೆಗುಂದದೇ ಪ್ರಾರಂಭಿಸುತ್ತಾರೆ. ಅಂದು ಶುರುಮಾಡಿದ್ದ ಕಂಪನಿ ಇಂದು 15 ಮಿಲಿಯನ್ ಡಾಲರ್ ನ ವಹಿವಾಟು ನಡೆಸುತ್ತಿದೆ. ಪ್ರಸ್ತುತ ಜ್ಯೋತಿ ರೆಡ್ಡಿ ಇಬ್ಬರು ಮಕ್ಕಳು ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮ್ಮನ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾರೆ. ಇಡೀ ಕುಟುಂಬವು ಫಿನಿಕ್ಸ್ ನಲ್ಲಿ ವಾಸಿಸುತ್ತಿದೆ.
ಎಷ್ಟೆಲ್ಲ ಸಾಧಿಸಿದ ಜ್ಯೋತಿ ರೆಡ್ಡಿ ಪ್ರಸ್ತುತ ಮಿಲಿಯನ್ ಡಾಲರ್ ಒಡತಿಯಾದರೂ ತಾವು ಹುಟ್ಟಿದ ಊರಿನ ಮೇಲೆ ಅಭಿಮಾನವಿದೆ. ತಮ್ಮ ಜೊತೆ ಜೊತೆಗೆ ತನ್ನ ಊರಿನ ಅಭಿವೃದ್ಧಿಗೂ ಕೂಡ ಸಹಾಯ ಮಾಡುತ್ತಿದ್ದಾರೆ. ತಮ್ಮ ಊರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ.
ಶುರುವಾಗಿದ್ದು 5 ರೂ ದಿನಗೂಲಿಯಿಂದ ಈಗ 15 ಮಿಲಿಯನ್ ಡಾಲರ್ ಕಂಪನಿ ಒಡತಿ!
Date: