ನಮ್ಮಲ್ಲಿ ಗಣೇಶನಿಗೆ ವಿಶೇಷ ಸ್ಥಾನ. ಯಾವುದೇ ಕಾರ್ಯ, ಕಾರ್ಯಕ್ರಮದ ಆರಂಭದ ಮುನ್ನ ವಿಘ್ನನಿವಾರಕನನ್ನು ಪೂಜಿಸ್ತೀವಿ. ಗಣಪತಿ ಹಬ್ಬ ಬಂತು ಅಂದ್ರೆ ಸಂಭ್ರಮವೋ ಸಂಭ್ರಮ. ಗಣಪತಿಯನ್ನೇನೋ ಪೂಜಿಸ್ತೀವಿ. ಆದರೆ, ಈತನ ವಾಹನ ಮೂಷಿಕರಾಜನ ಪೂಜೆ ಮಾಡ್ತೀವಾ? ಪೂಜೆ ಕತೆ ಹಂಗಿರಲಿ ನೆನಪು ಮಾಡಿಕೊಳ್ಳುವುದೂ ಕಷ್ಟ. ಆದರೆ, ಇಲ್ಲೊಂದು ದೇವಸ್ಥಾನವಿದೆ ಇಲಿರಾಯನಿಗೆ ಸಿಗುತ್ತೆ ಇಲ್ಲಿ ರಾಜಾತಿಥ್ಯ..!
ಇಲಿ ದೇವೋಭವ…!
ಹೌದು, ಇಲ್ಲೊಂದು ದೇವಾಲಯವಿದೆ. ಈ ದೇವಾಲಯದಲ್ಲಿ ನಿತ್ಯ ಇಲಿಗಳಿಗೆ ಪೂಜೆ ಮಾಡಲಾಗುತ್ತೆ. ಪ್ರತಿನಿತ್ಯ ಇಲ್ಲಿಗೆ ಆಗಮಿಸುವ ಭಕ್ತರಿಗಿಂತಲೂ ಹೆಚ್ಚು ಇಲಿಗಳು ಕಂಡುಬರುತ್ತವೆ..!
ಈ ಇಲಿಗಳು ಯಾವುದೇ ಭಯವಿಲ್ಲದೆ ತಮ್ಮ ಪಾಡಿಗೆ ತಾವು ಆರಾಮಾಗಿ ಓಡಾಡಿಕೊಂಡಿರ್ತವೆ..!
ಅಂದಹಾಗೆ ಈ ದೇವಾಲಯ ಇರೋದು ರಾಜಸ್ಥಾನ್‍ನ ಬಿಕಾನೇರ್ ಜಿಲ್ಲೆಯಿಂದ ಸುಮಾರು 30 ಕಿ.ಮೀ ದೂರದ ದೇಶ್ನೋಕ್ ಎಂಬ ಊರಲ್ಲಿ. ಇಲ್ಲಿ ಪುರಾಣ ಪ್ರಸಿದ್ಧ ಕರ್ಣಿ ಮಾತಾ ದೇವಾಲಯವಿದೆ.ಈ ದೇವಾಲಯದಲ್ಲಿಯೇ ಮೂಷಿಕರಾಜನಿಗೆ ವಿಶೇಷ ಸ್ಥಾನವಿರುವುದು. ಇಲ್ಲಿ ಹೆಚ್ಚುಕಡಿಮೆ 30ಸಾವಿರ ಇಲಿಗಳಿದ್ದು,ಪ್ರತಿದಿನ ಇವುಗಳಿಗೆ ಪೂಜೆ ನೆರವೇರುತ್ತೆ.
ಇಲಿಗಳಿಗೆ ಪೂಜೆ ಸಲ್ಲುವುದು ಮಾತ್ರವಲ್ಲ. ಇಲಿಗಳು ಅರ್ಧ ತಿಂದುಬಿಟ್ಟ ಪ್ರಸಾದವನ್ನು ಭಕ್ತರು ತಿನ್ತಾರೆ! ಹೀಗೆ ಇಲಿಗಳು ತಿಂದು ಬಿಟ್ಟ ಪ್ರಸಾದವನ್ನು ತಿಂದಿರುವುದರಿಂದ ಯಾವುದೇ ತೊಂದರೆ ಆಗಿಲ್ಲಂತೆ. ಯಾರ ಆರೋಗ್ಯವೂ ಕೆಟ್ಟಿಲ್ಲಂತೆ.
ಈ ದೇವಾಲಯಕ್ಕೆ ಬರುವ ಭಕ್ತರು ಕರ್ಣಿಮಾತೆಗೆ ಮಾತ್ರವಲ್ಲದೆ ಇಲಿಗಳಿಗೂ ಹಾಲು, ಲಡ್ಡುನ್ನ ಪ್ರಸಾದಕ್ಕಂತ ತಗೊಂಡು ಬರ್ತಾರೆ, ಇಲಿಗಳು ಕಾಲಿನ ಮೇಲೆ ಓಡಾಡಿದರೆ ಒಳ್ಳೆಯದಾಗುತ್ತವೆ ಎಂಬ ನಂಬಿಕೆ ಇದೆ.
ಇಲ್ಲಿ ಹೆಚ್ಚಾಗಿ ಕಪ್ಪು ಇಲಿಗಳೇ ಕಂಡುಬರುತ್ತವೆ. ಅಪ್ಪಿತಪ್ಪಿ ಯಾರಿಗಾದ್ರು ಬಿಳಿ ಇಲಿ ಕಾಣಿಸ್ತು ಅಂದ್ರೆ ಜೀವನ ಪೂರ್ತಿ ಅವರ ಮೇಲೆ ಕರ್ಣಿ ಮಾತೆ ಆಶೀರ್ವಾದ ಇರುತ್ತೆ ಎಂಬುದು ಭಕ್ತರ ಅಚಲ ನಂಬಿಕೆ. ಒಂದು ವೇಳೆ ಯಾರ ಕಾಲಿಗಾದರೂ ಸಿಕ್ಕಿ ಇಲಿ ಸಾವನ್ನಪ್ಪಿದರೆ ಅದೇ ಇಲಿ ಗಾತ್ರದ ಬೆಳ್ಳಿ ಅಥವಾ ಚಿನ್ನದ ಇಲಿಯನ್ನು ಕಾಣಿಕೆಯಾಗಿ ನೀಡಬೇಕಂತೆ.
ಅದೇನೇ ಇರಲಿ ಯಾವುದಕ್ಕು ಒಂದು ಹುಟ್ಟು ಅಂತ ಇರುತ್ತಲ್ಲಾ? ಈ ದೇವಾಲಯ ಉದಯಿಸಿದ್ದು ಹೇಗೆ ಗೊತ್ತಾ?
ಕ್ರಿ.ಶ 1387-1538ರ ಕಾಲವಧಿಯಲ್ಲಿ ಕರ್ಣಿ ಮಾತಾ ಎಂಬ ಸಾಧ್ವಿ ಇದ್ದರು. ಇವರು ಸುಮಾರು 151 ವರ್ಷಗಳ ಕಾಲ ಬದುಕಿದ್ರಂತೆ. ಕಿಪೋಜಿ ಚರಣ್ ಎಂಬುವವರನ್ನು ಮದುವೆ ಆಗಿದ್ದ ಕರ್ಣಿ ಮಾತೆ ಅವರಿಗೆ ಅದ್ಯಾಕೋ ಸಂಸಾರಿಕ ಜೀವನದ ಮೇಲೆ ಜಿಗುಪ್ಸೆ ಬಂದು ಸಂಸಾರ ಜಂಜಡದಿಂದ ಹೊರ ಬರಲು ತೀರ್ಮಾನಿಸಿದರಂತೆ. ಆಗ ತನ್ನಿಂದ ತನ್ನ ಪತಿಯ ಯಾವುದೇ ಕಾರಣಕ್ಕು ಸಾಂಸಾರಿಕ ಜೀವನಕ್ಕೆ ತೊಂದರೆ ಆಗಬಾರದು ಎಂದು ಕರ್ಣಿ ಮಾತಾ ತನ್ನ ತಂಗಿ ಗುಲಾಬ್ ಬಾಯಿ ಜೊತೆ ಪತಿಗೆ ಮದುವೆ ಮಾಡಿಸಿ ಧ್ಯಾನ ನಿರತರಾಗಲು ತಾನು ದೇಶೋಕ್ನನ ಗುಹೆ ಸೇರುತ್ತಾರೆ.
ಈ ಕರ್ಣಿಮಾತೆ ಅವರಿಗೆ ಪೂನಂ ರಾಜ್, ನಾಗರಾಜ್, ಸಿದ್ಧರಾಜ್ ಮತ್ತು ಲಕ್ಷ್ಮಣರಾಜ್ ಎಂಬ ಮಕ್ಕಳಿದ್ದರಂತೆ. ಒಮ್ಮೆ ಲಕ್ಷ್ಮಣರಾಜ್ ನೀರು ಕುಡಿಯಲು ಹೋದಾಗ ಸರೋವರದಲ್ಲಿ ಮುಳುಗುತ್ತಾರೆ! ಇದನ್ನು ತಿಳಿದ ಕರ್ಣಿಮಾತೆ ಲಕ್ಷ್ಮಣರಾಜ್ ಅನ್ನು ಬದುಕಿಸುವಂತೆ ಯಮನನ್ನು ಪ್ರಾರ್ಥಿಸುತ್ತಾರೆ! ಯಮರಾಜ ಕರ್ಣಿಮಾತೆಯ ಮಗನಿಗೆ ಇಲಿ ರೂಪದಲ್ಲಿ ಮರು ಜನ್ಮನೀಡಿದ, ಅಂದಿನಿಂದ ಕರ್ಣಿಮಾತೆ ವಂಶದಲ್ಲಿ ಹುಟ್ಟಿದವರು ಪುನರ್ಜನ್ಮದಲ್ಲಿ ಇಲಿಗಳಾಗಿ ಹುಟ್ಟಿ ಈ ದೇವಾಲಯದಲ್ಲಿರುತ್ತಾರೆ ಎಂಬುದು ಭಕ್ತರ ನಂಬಿಕೆ.
ಇನ್ನೊಂದು ಜನಪದ ಕತೆ ಪ್ರಕಾರ, ದೇಶ್ನೋಕ್ ಬಳಿ ಯುದ್ಧ ನಡೆದ ಸಂದರ್ಭದಲ್ಲಿ ಬಿಸಿಲು ಹಾಗೂ ಬಾಯಾರಿಕೆ ತಡೆಯಲಾಗದೆ ಸುಮಾರು 20 ಸಾವಿರ ಸೈನಿಕರನ್ನು ಸಾವನ್ನಪ್ಪಿದರಂತೆ. ಕರ್ಣಿಮಾತೆ ಕರುಣೆಯಿಂದ ಇವರಿಗೆ ಇಲಿಗಳ ರೂಪದಲ್ಲಿ ಪುನರ್ಜನ್ಮ ಸಿಕ್ತಂತೆ. ಕರ್ಣಿಮಾತೆ ದುರ್ಗಾದೇವಿಯ ಒಂದು ರೂಪ ಎಂದು ತಮಗೆ ಮರುಜನ್ಮ ನೀಡಿದ ಮಾತೆಯ ಸೇವೆ ಸಲ್ಲಿಸಲು ಇಲಿರೂಪದ ಸೈನಿಕರು ಈ ದೇವಾಲಯದಲ್ಲೇ ಉಳಿದುಕೊಂಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ಸ್ಥಳಪುರಾಣ, ಜಾನಪದ ಕತೆ ಏನೇ ಇರಲಿ. ಎಲ್ಲಕ್ಕಿಂತ ಹೆಚ್ಚಾಗಿ ಇಲಿಗಳನ್ನು ದೇವರಂತೆ ಪೂಜಿಸುವುದು ವಿಶೇಷವೇ ಸರಿ..ಸಾಧ್ಯವಾದ್ರೆ ಒಮ್ಮೆ ಈ ವಿಶೇಷ ದೇವಾಲಯಕ್ಕೆ ಹೋಗಿಬನ್ನಿ.