ಮುಂಬೈ ಸ್ಫೋಟದ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ನಂತರ ಸಂಜಯ್ ದತ್ ಎಲ್ಲೂ ಕಾಣಿಸುತ್ತಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲೂ ಅವರ ದರ್ಶನವಾಗುತ್ತಿಲ್ಲ. ಮುಖಭಂಗಕ್ಕೀಡಾದ ಸಂಜಯ್ ಸಾರ್ವಜನಿಕ ಜೀವನದಿಂದ ದೂರವುಳಿದರಾ..? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಮುಂಬೈ ಸ್ಫೋಟಕ್ಕೆ ಸಂಬಂಧಪಟ್ಟಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪ ಸಾಬೀತಾಗಿ ಸಂಜಯ್ ದತ್ ಗೆ ಟಾಡಾ ಕೋರ್ಟ್ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಅಟ್ ದಿ ಸೇಮ್ ಟೈಂ ಟಾಡಾ ನ್ಯಾಯಾಲಯ ಯಾಕೂಬ್ ಮೆಮೊನ್ ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಸಿಕ್ಕಿಬಿದ್ದ ಉಳಿದವರಿಗೆ ಜೀವಾವಧಿ ಶಿಕ್ಷೆಯನ್ನು ಅನೌನ್ಸ್ ಮಾಡಿತ್ತು. ಟಾಡಾ ಕೋರ್ಟ್ ತೀರ್ಪಿನ ವಿರುದ್ಧ ಅವತ್ತು ಯಾಕೂಬ್ ಮೆಮೊನ್ ಸುಪ್ರೀಂ ಮೆಟ್ಟಿಲೇರಿದ್ದ. ಆಮೇಲೆ ಅದೇನೇನೋ ಆಗಿ ಕಡೆಗೂ ಯಾಕೂಬ್ ಮೆಮೊನ್ ಗೆ ಗಲ್ಲು ಶಿಕ್ಷೆಯಾಗಿತ್ತು. ಈ ಹೊತ್ತಿಗೆ ಸಂಜಯ್ ದತ್ ಟಾಡಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಸುಪ್ರೀಂ ಕೋರ್ಟ್ ಟಾಡಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಅಲ್ಲಿ ಕೊಂಚ ಮಟ್ಟಿಗೆ ಸಂಜಯ್ ದತ್ ಪ್ರಯೋಜನ ಪಡೆದುಕೊಂಡರು. ಸುಪ್ರೀಂ ಕೋರ್ಟ್ ಆರು ವರ್ಷವಿದ್ದ ಶಿಕ್ಷೆಯನ್ನು ಐದು ವರ್ಷಕ್ಕೆ ಕಡಿತಗೊಳಿಸಿತ್ತು. ಸುಪ್ರಿಂ ಮೆಟ್ಟಿಲೇರಿದ್ದಕ್ಕೆ ಒಂದು ವರ್ಷ ಜೈಲು ಶಿಕ್ಷೆಯಿಂದ ರಿಲೀಫ್ ಸಿಕ್ಕಿತ್ತು. ಹಾಗೂ ಹೀಗೂ ಎಲ್ಲಾ ಆಟಗಳು ಮುಗಿದು 2013ರಂದು ಜೈಲಿಗೆ ಹೋಗುವ ಕಾಲ ನಿರ್ಣಯವಾಗಿತ್ತು. ಆದರೆ ಸಂಜಯ್ ದತ್ ಮತ್ತೆ ಸುಪ್ರೀಂ ಕೋರ್ಟ್ ಮುಂದೆ ಒಂದೇ ಕಣ್ಣಿನಲ್ಲಿ ನೀರಿಡತೊಡಗಿದ್ದರು. ನಾನೀಗಲೇ ಜೈಲಿಗೆ ಹೋಗಲಾರೆ, ನನ್ನ ನಂಬಿದ ನಿರ್ಮಾಪಕರಿದ್ದಾರೆ. ನಾನೀಗಲೇ ಜೈಲಿಗೆ ಹೋದರೇ ಅವರು ನಷ್ಟ ಅನುಭವಿಸುತ್ತಾರೆ. ಒಂದು ತಿಂಗಳು ಟೈಂ ಕೊಡಿ ಅಂತ ಕೇಳಿದ್ದರು. ಕೋರ್ಟ್ ಸಂಜಯ್ ಕೋರಿಕೆಗೆ ಓಕೆ ಅಂದಿತ್ತು. ಸಂಜಯ್ ದತ್ ಅವರ ಒಟ್ಟು ಶಿಕ್ಷಾ ಅವಧಿಯಲ್ಲಿ ನೂರ ಅರವತ್ತೈದು ದಿನ ಪೆರೋಲ್ ಸಿಕ್ಕಿದ್ದು ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
1993ರ ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಸತ್ತವರು ಇನ್ನೂರೈವತ್ತೇಳು ಜನರು. ಗಾಯಗೊಂಡವರು ಏಳುನೂರ ಹದಿಮೂರು ಮಂದಿ. ಈ ಪೈಶಾಚಿಕತೆಯ ಹಿಂದಿರುವ ದಾವೂದ್, ಟೈಗರ್, ಶಕೀಲ್ ಮುಂತಾದವರು ಪಾಕಿಸ್ತಾನದಲ್ಲಿ ಆರಾಮಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ಯಾಕೂಬ್ ಮೆಮೋನ್ನನ್ನು ಗಲ್ಲಿಗೇರಿಸಲಾಗಿತ್ತು. ಈ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಶೇಕರಿಸಿಟ್ಟುಕೊಂಡಿದ್ದ ಆರೋಪದಲ್ಲಿ ಸಂಜಯ್ ದತ್ ಮೇಲೆ ಎಫ್ಐಆರ್ ದಾಖಲಾಗಿತ್ತು. ದಾವೂದ್ ಗೂ ಬಾಲಿವುಡ್ ನಟರಿಗೂ ಮೊದಲಿನಿಂದಲೂ ಲಿಂಕಿರುವ ಸಂಗತಿ ಜಾಗತೀಕ ಸತ್ಯ. ಹೆಸರು ಸೂಚಿಸಬೇಕೆಂದರೇ ಸಂಜಯ್ ದತ್, ಸಲ್ಮಾನ್ ಖಾನ್ ಯಾರೂ ಹೊರತಾಗಿಲ್ಲ. ಆದರೆ ಸುದೀರ್ಘ ವಿಚಾರಣೆಯಲ್ಲಿ ಅಬು ಸಲೆಂ ಸೇರಿದಂತೆ ಅನೇಕ ಸಾಕ್ಷಿಗಳು ಸಂಜಯ್ ದತ್ ಪರವಾಗಿ ಸಾಕ್ಷಿಗಳನ್ನು ಹೇಳಿದ್ದರು. ಕೊನೆಗೆ ಕೋರ್ಟ್ ನಲ್ಲಿ, ಡಿ ಕಂಪನಿ ಜೊತೆ ಸಂಜಯ್ ದತ್ ಗೆ ನಂಟಿದ್ದರೂ ಮುಂಬೈ ಬ್ಲಾಸ್ಟ್ಗೂ ಅವನಿಗೂ ಸಂಬಂಧವಿಲ್ಲ ಎಂಬುದು ಸಾಬೀತಾಗಿತ್ತು. ಡಿ ಕಂಪನಿ ದೊಡ್ಡಮಟ್ಟದಲ್ಲಿ ಸಂಚು ರೂಪಿಸಿರುವುದು ಗೊತ್ತಿಲ್ಲದೇ ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿಕೊಂಡಿದ್ದ ಅಂತ ತೀರ್ಮಾನಕ್ಕೆ ಬರಲಾಯಿತು. ಸಂಜಯ್ ದತ್ ಮುಂಬೈ ಸ್ಫೋಟದ ಸಂದರ್ಭದಲ್ಲಿ ಅಕ್ರಮವಾಗಿ 9 ಎಂ ಎಂ ಪಿಸ್ತೂಲ್, ಎಕೆ 57 ರೈಫಲ್ ಹೊಂದಿದ್ದರು.
ಕಾನೂನಿನಲ್ಲಿ ಕೆಲವೊಂದು ಕೇಸುಗಳಿಗೆ ಸಂಬಂಧಿಸಿದಂತೆ ಬಚಾವಾಗಲು ಹಲವು ಅವಕಾಶಗಳಿವೆ. ಆರೋಪಿಗಳು ಮಾಡಿದ್ದಷ್ಟೆ ತಪ್ಪಿಗೆ ಸೆಕ್ಷನ್ ಜಾರಿಗೊಳಿಸಿ, ಅದರಿಂದಾದ ಎಫೆಕ್ಟ್ ನಿಂದ ಮುಕ್ತಿ ಸಿಗುವಂತೆ ಮಾಡಬಹುದು. ಆ ಕಾರಣಕ್ಕೆ ಸಂಜಯ್ ದತ್ ಮೇಲೆ ಬರೀ ಶಸ್ತ್ರಾಸ್ತ್ರ ಸಂಗ್ರಹಣೆಯ ಆಧಾರದ ಮೇಲೆ ಟಾಡಾ ಕೋರ್ಟ್ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಮುಂದೆ ಸುಪ್ರೀಂ ಕೋರ್ಟ್ ಗೆ ಹೋಗಿ ಶಿಕ್ಷೆಯ ಪ್ರಮಾಣವನ್ನು ಐದು ವರ್ಷಕ್ಕೆ ಇಳಿಸಿಕೊಂಡರು. ಆದರೆ ಎಲ್ಲರಿಗೂ ಕಾನೂನಿನನಲ್ಲಿ ಇಂತ ಅವಕಾಶಗಳು ಸಿಗುವುದಿಲ್ಲ. ಬಲಿಷ್ಠ ವಕೀಲ, ಪ್ರಭಾವ, ವ್ಯವಸ್ಥೆಯ ಬೆಂಬಲವಿದ್ದವರಿಗೆ ಮಾತ್ರ ಕಾನೂನಿನಲ್ಲಿ ಭತ್ಯೆ ಸಿಗುತ್ತದೆ. ಅದನ್ನು ದಕ್ಕಿಸಿಕೊಂಡಿದ್ದ ಸಂಜಯ್ ದತ್ ಕಡೆಗೆ ಐದು ವರ್ಷದ ಜೈಲು ಶಿಕ್ಷೆಗೆ ಫಿಕ್ಸ್ ಆಗಿದ್ದರು. ತಮಾಷೆಯೆಂದರೇ ಸಂಜಯ್ಗೆ ಅಪಾರ ಅಭಿಮಾನಿಗಳಿದ್ದಾರೆ, ಖ್ಯಾತ ಸಿನಿಮಾ ನಟ, ಅವರಪ್ಪ ಸುನೀಲ್ ದತ್ ರಾಜಕಾರಣಿ, ಅವರಮ್ಮ ನರ್ಗೀಸ್ ಒಂದು ಕಾಲದಲ್ಲಿ ಬಾಲಿವುಡ್ಡನ್ನು ಕಿರುಬೆರಳಿನಲ್ಲಿ ಆಡಿಸಿದ್ದಾರೆ- ಆ ಕಾರಣಕ್ಕೆ ಅವರಿಗೆ ಜೈಲಿನಿಂದ ಬಿಡುಗಡೆಗೊಳಿಸಬೇಕು ಅಂತ ಒತ್ತಾಯವೂ ಕೇಳಿಬಂದಿತ್ತು. ಅಷ್ಟೆಲ್ಲಾ ಏಕೆ..!? ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಸಂಜಯ್ ದತ್ ಕ್ಷಮೆಗೆ ಅರ್ಹರು ಅಂತ ರಾಷ್ಟ್ರಪತಿಗಳು ಹಾಗೂ ಮಹಾರಾಷ್ಟ್ರದ ರಾಜ್ಯಪಾಲರ ಮುಂದೆ ಅರ್ಜಿ ಗುಜರಾಯಿಸಲು ಸಿದ್ಧತೆ ನಡೆಸಿದ್ದರು. ರಾಷ್ಟ್ರಪತಿಗಳಿಗೆ ಕೆಲ ಸಂಘಟನೆಗಳು ಹಾಗೂ ರಾಜಕೀಯ ಪ್ರತಿನಿಧಿಗಳು ಮನವಿ ಮಾಡಿದ್ದರು. ಆದರೆ ಖುದ್ದಾಗಿ ಸಂಜಯ್ ದತ್ ಕ್ಷಮಾಧಾನದ ಅರ್ಜಿ ಸಲ್ಲಿಸಲು ನಿರಾಕರಿಸಿದ್ದರು.
ಆದರೆ ಮೇಲಿಂದ ಮೇಲೆ ಸಂಜಯ್ ದತ್ ಗೆ ಪೆರೋಲ್ ಸಿಕ್ಕಿದ್ದರಿಂದ ಪ್ರತಿಭಟನೆಗಳು ನಡೆದಿದ್ದವು. ಅವತ್ತು ಮಹಾರಾಷ್ಟ್ರ ಸರ್ಕಾರ ಪೆರೋಲ್ನ ಸತ್ಯಾಸತ್ಯತೆ ತಿಳಿದುಕೊಳ್ಳುವುದಾಗಿ ಹೇಳಿತ್ತು. ಇದಾದ ಮೇಲೆ ಅದೇ ಮಹಾ ಸರ್ಕಾರ ಮತ್ತೊಮ್ಮೆ ಸಂಜಯ್ ದತ್ ಗೆ ಪೆರೋಲ್ ಕೊಟ್ಟಿತ್ತು. ಕೊಡುತ್ತಲೇ ಇತ್ತು. ಸಂಜಯ್ ದತ್ ವಿಚಾರದಲ್ಲಿ ಕಾನೂನು ಸಡಿಲವಾಗಿದ್ದು ಸುಳ್ಳಲ್ಲ. ಜಯಲಲಿತಾ ಪ್ರಕರಣದಲ್ಲೂ ಜನಸಾಮಾನ್ಯರು ಕಾನೂನಿನ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ಶಿಕ್ಷೆಯಾದರೂ ಸಹ ಮಿಡ್ ನೈಟ್ ಕೋರ್ಟ್ ಡ್ರಾಮಗಳು, ಯಾಕೂಬ್ ಮೆಮೊನ್ ವಿಚಾರದಲ್ಲಿ ಜನಸಾಮಾನ್ಯರ ಗೊಂದಲಕ್ಕೆ ಕಾರಣವಾಗಿತ್ತು. ಹಾಗೆಯೇ ಸಲ್ಮಾನ್ ಖಾನ್ ವಿಚಾರದಲ್ಲೂ ಕೋರ್ಟ್ ನಿರ್ಧಾರ ಪ್ರಶ್ನಾತೀತವಾಗಿತ್ತು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಹೆಚ್ಚಿನ ಮನ್ನಣೆ ಇದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಈ ದೇಶದಲ್ಲಿ ನ್ಯಾಯ, ಜೀವನ, ದಿನಚರಿಗಳಿವೆ. ಇಲ್ಲಿ ಪ್ರಜೆಗಳು ಸಿಟ್ಟಾಗಬಾರದು. ಪ್ರಜೆಗಳಿಗೆ ಪ್ರಶ್ನೆಗಳು ಹುಟ್ಟಿಕೊಳ್ಳಬಾರದು. ಏಕೆಂದರೇ ನೋಡುವಷ್ಟು ನೋಡಿ ಕಡೆಗೆ ಅವರು ಸ್ಫೋಟಗೊಂಡರೆಂದರೇ ಎಲ್ಲವೂ ಅಲ್ಲೋಲಕಲ್ಲೋಲವಾಗುತ್ತದೆ. ನ್ಯಾಯಾಲಯಕ್ಕೆ, ಅದರ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಎಲ್ಲರಿಗೂ ಸಮಾನ ಕಾನೂನು ಅನ್ವಯಿಸಿದರೇ ಮಾತ್ರ. ನ್ಯಾಯಾಂಗಕ್ಕೆ ಶಾಸಕಾಂಗದ ನೆರಳು ಸೋಕಿದರೇ ಮಾತ್ರ ಇಂತಹ ಅಚಾತುರ್ಯಗಳು ನಡೆಯುತ್ತವೆ. ಕಾನೂನನ್ನು ಗೌರವಿಸದವರಿಲ್ಲ. ತೀರ್ಪನ್ನು ಪ್ರಶ್ನಿಸುವುದು ಕೂಡ ಅಪರಾಧ. ಹಾಗಿದ್ದಾಗ ನ್ಯಾಯ ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕಲ್ವಾ..? ಸಂಜಯ್ ದತ್ ಗೆ ಒಂದು ನ್ಯಾಯ, ರೋಡ್ ಸೈಡ್ ಭಿಕ್ಷುಕನಿಗೊಂದು ನ್ಯಾಯ ಅಂತಾದರೆ ಸಮಾಜ ಎಲ್ಲಿಯವರಿಗೆ ಸಹಿಸಿಕೊಳ್ಳುತ್ತೆ..? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿತ್ತು. ಭಾರತದ ಜೈಲುಗಳಲ್ಲಿ ಸಜೆಯಾದ ಲಕ್ಷಾಂತರ ಕೈದಿಗಳಿದ್ದಾರೆ. ಅವರಲ್ಲಿ ಶೇಕಡಾ ಅರವತ್ತರಷ್ಟು ಜನರಿಗೆ ಎಷ್ಟೋ ವರ್ಷಗಳಾದರೂ ಪೆರೋಲ್ ಸಿಗುತ್ತಿಲ್ಲ. ಸಿಕ್ಕರೂ ಐದು ವರ್ಷಕ್ಕೆರಡು ಸಲ ಸಿಕ್ಕರೆ ದೊಡ್ಡ ಮಾತು. ಮನೆಯಲ್ಲಿ ಸಾವು ನೋವುಗಳಾದರೂ ಪೆರೋಲ್ ಸಿಗದೇ ನೊಂದ ಕೈದಿಗಳಿದ್ದಾರೆ. ಆದರೆ ಎಡವಿದ್ದಕ್ಕೂ. ಬಿದ್ದಿದ್ದಕ್ಕೂ ಸಂಜಯ್ ದತ್ ಅಂತವರಿಗೆ ಈಸಿಯಾಗಿ ಪೆರೋಲ್ ಸಿಕ್ಕಿದ್ದು, ಮತ್ತದಕ್ಕೆ ರಾಜಕಾರಣ ಸಮಜಾಯಿಷಿ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
ಸಧ್ಯಕ್ಕೆ ಸಂಜಯ್ ದತ್ ಜೈಲಿಂದ ರಿಲೀಸ್ ಆಗಿ ಹೊರಬಂದಿದ್ದಾರೆ. ಈಗ ಅವರು ಸಾರ್ವಜನಿಕ ಜೀವನದಲ್ಲಿ ಕಾಣಿಸುತ್ತಿಲ್ಲ. ಅದ್ಯಾಕೆ ಅವರು ನಾಪತ್ತೆಯಾಗಿದ್ದಾರೆ ಎಂಬುದಕ್ಕೆ ಅವರೇ ಉತ್ತರ ಕೊಡಬೇಕು.
- ರಾ ಚಿಂತನ್.
POPULAR STORIES :
ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!
ತನ್ನ ಸಿನಿಮಾವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ..!
ಮುಖದ ಅಂದ ಹೆಚ್ಚಿಸಬೇಕಾ…? ಇದನ್ನು ಓದಿ…
ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?
ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!