ವಿಶ್ವ ಕ್ರಿಕೆಟಿನ ಅತ್ಯಂತ ಚಾಣಾಕ್ಷ ಆಟಗಾರ ಯಾರು ಅಂತ ಯಾರನ್ನೇ ಕೇಳಿದರೂ ನಿಸ್ಸಂದೇಹವಾಗಿ ಹೇಳ್ತಾರೆ ಮಹೇಂದ್ರ ಸಿಂಗ್ ಧೋನಿ ಅಂತ! ಎಲ್ಲಾ ಐಸಿಸಿ ಕಪ್ ಗಳನ್ನು ಗೆದ್ದ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿಗೆ ಚಾಣಾಕ್ಷ ಪಟ್ಟವನ್ನು ವಿಶ್ವಕ್ರಿಕೆಟೇ ನೀಡಿದೆ ಎಂದರೆ ಅತಿಶಯೋಕ್ತಿಯಲ್ಲ. 2007 ರ ಟಿ20 ಮತ್ತು 2011ರ ಏಕದಿನ ವರ್ಲ್ಡ್ ಕಪ್ ಅನ್ನು ಭಾರತ ಗೆದ್ದಿದ್ದು ಇದೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ.
ಧೋನಿ ತಾಳ್ಮೆ..ಅವರು ಸಂದರ್ಭಕ್ಕೆ ತಕ್ಕಂತೆ ದಿಢೀರ್ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಮೆಚ್ಚುಗೆಗೆ ಪಾತ್ರವಾಗಿವೆ.
2019ರ ವಿಶ್ವಕಪ್ ಬಳಿಕ ಧೋನಿ ತಂಡದಿಂದ ದೂರ ಉಳಿದಿದ್ದಾರೆ. ಆದರೂ ಇಂದಿಗೂ ಚಾಣಾಕ್ಷ ಆಟಗಾರ ಎಂದರೆ ಪ್ರತಿಯೊಬ್ಬರು ಹೇಳುವುದು ಧೋನಿ ಹೆಸರನ್ನೇ.
ಹೀಗೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಗೆ ಚಾಣಾಕ್ಷ ಕ್ರಿಕೆಟಿಗ ಯಾರೆಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಎದುರಾಗಿದ್ದು, ಅದಕ್ಕೆ ಅವರು ಕೊಟ್ಟ ಉತ್ತರ ಧೋನಿ ಅಲ್ಲ!
ಹೌದು ಟ್ವಿಟ್ಟರ್ ನಲ್ಲಿ ಚಾಣಾಕ್ಷ ಕ್ರಿಕೆಟಿಗ ಯಾರೆಂಬ ಪ್ರಶ್ನೆಗೆ ಉತ್ತರ ನೀಡಿದ ವಾಸಿಮ್ ಜಾಫರ್ ಧೋನಿ ಬದಲು ಟೀಮ್ ಇಂಡಿಯಾದ ಆರಂಭಿಕ ಆಟಗಾರ , ಉಪನಾಯಕ , ಡಬಲ್ ಸೆಂಚುರಿ ಸ್ಟಾರ್, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಹೆಸರನ್ನು ಹೆಸರಿಸಿದ್ದಾರೆ.
ರೋಹಿತ್ ಶರ್ಮಾರನ್ನು ಚಾಣಾಕ್ಷ ಎಂದಿರುವ ಜಾಫರ್ ,ಮುಂದಿನ ವಿಶ್ವಕಪ್ ನಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಆಡುವುದನ್ನು ನೋಡಲು ಇಷ್ಟಪಡುತ್ತೇನೆ. ಅವರು ಐಪಿಎಲ್ ನಲ್ಲಿ ತಾವು ಮುನ್ನೆಡೆಸುವ ಮುಂಬೈ ಇಂಡಿಯನ್ಸ್ ತಂಡವನ್ನು ಮೂರುಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಅವರು ಉತ್ತಮ ಸ್ಥಿರತೆಯುಳ್ಳ ಆಟಗಾರ ಎಂದು ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
ಅಂತೆಯೇ ತಮ್ಮ ಇಷ್ಟದ ಜೊತೆಗಾರ ಯಾರು ಎಂಬ ಪ್ರಶ್ನೆಗೆ ವೀರೇಂದ್ರ ಸೆಹ್ವಾಗ್ ಹೆಸರನ್ನು ಹೇಳಿದ್ದಾರೆ.
ಜಾಫರ್ 2000ನೇ ಇಸವಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ರು.2008ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ರು. ಇತ್ತೀಚಗಷ್ಟೇ ನಿವೃತ್ತಿ ಘೋಷಿಸಿದ್ದರು.