ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

0
893

ಹೆಸರಿಡಲಾಗದ ಅವ್ಯಕ್ತ ಭಾವನೆಯೊಂದಕ್ಕೆ ನೀರೆರೆದು, ಭದ್ರವಾಗಿ ಬೇರೂತ್ತಿದ್ದಂತೆಯೇ ಹೊರಟ ಅವಳೆಂಥಾ ಸ್ವಾರ್ಥಿ! ಹೀಗೆ ಅದೆಷ್ಟೋ ಬಾರಿ ನಾನು ಕೇಳಿಕೊಂಡಿದ್ದಿದೆ, ಅವಳ ನೆನಪಾದಗಲೆಲ್ಲಾ ಜೋರಾಗಿ ಬಿಕ್ಕಿ ಬಿಕ್ಕಿ ಒಬ್ಬನೇ ಅತ್ತಿದ್ದಿದೆ! ಅವಳು ಮಾಡಿದ ನೋವನ್ನು ,ಅವಮಾನವನ್ನು ನೆನೆಸಿಕೊಂಡಾಗಲೆಲ್ಲಾ ನನ್ನೊಳಗೆ ನಾನೇ ಕುದಿಯುತ್ತೇನೆ. ಕ್ಷಣಹೊತ್ತಿನ ನಂತರ ಅವಳಾಡುತ್ತಿದ್ದ ಮುತ್ತಿನಂಥಾ ಮಾತುಗಳು ನೆನಪಾಗುತ್ತವೆ, ಆಗ ಮತ್ತೆ ನಿರಾಳ! ಛೇ, ನಾನೇ ದುಡಿಕಿದೆನೆಂದು ಪರಿತಪಿಸುತ್ತೇನೆ. ಇವತ್ತು ಆಗಿದ್ದಾಗಲಿ, ಅವಳಿಗಾಗಿ ಎಷ್ಟೋ ಸಲ ತಲೆಬಾಗಿದ್ದೇನೆ, ಇದೊಂದು ಸಲ ನಾನೇ ಸೋತು ಅವಳಿಗೆ ಕರೆ ಮಾಡಿ, ಕ್ಷಮಿಸಿ ಮರಳಿ ಬರುವಂತೆ ವಿನಂತಿಸಿಕೊಳ್ಳಲು..ಮೊಬೈಲ್ ಎತ್ತಿಕೊಂಡಾಗ ಮನಸ್ಸು ತೂಗುಯ್ಯಾಲೆ! ಇಲ್ಲ , ಅವಳು ಮಾಡಿದ ಅವಮಾನ, ಅವಳಿಂದ ಕಳೆದುಕೊಂಡ ಅಮೂಲ್ಯ ಕ್ಷಣಗಳು ತಿರುಗಿ ಬರವು, ಇನ್ನೇಕೆ ಅವಳು? ನೋಡು, ಅವಳಿಗಿಂತಲೂ ಎತ್ತರಕ್ಕೆ ಬೆಳೆಯಬೇಕೆಂದು ಎಚ್ಚೆರಿಸುವ ಸ್ವಾಭಿಮಾನ!

ಎಷ್ಟೊಂದು ಚೆನ್ನಾಗಿದ್ವಿ ನಾವು, ಒಂದಿನಿತೂ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದ ಅವಳೇಕೆ ಇದ್ದಕ್ಕಿದ್ದಂತೆ ದೂರಾದಳು? ನನ್ನ ಕೋಪ ಕಾರಣವೆ? ಇಬ್ಬರೊಳಗೂ ಸುಪ್ತವಾಗಿದ್ದ ಸ್ವಾರ್ಥ, ಅಹಂನಿಂದ ಇಂದು ನಾವು ಜೊತೆಗಿಲ್ಲವೇ? ಯಾವುದಕ್ಕೂ ಉತ್ತರವಿಲ್ಲ! ಉತ್ತರ ಬೇಕೆಂದೆರೆ ಇಬ್ಬರೂ ಒಟ್ಟಾಗಿ ಕೂತು ಮಾತನಾಡಬೇಕು! ಅದಂಥೂ ಈ ಜನ್ಮದಲ್ಲಿ ಸಾಧ್ಯವಿಲ್ಲ, ಅವಳು ಹೇಳಿಬಿಟ್ಟಿದ್ದಾಳೆ!

ಆಗಿನ್ನೂ ಯೂನಿವರ್ಸಿಟಿ ಮೆಟ್ಟಿಲೇರಿದ್ದ ಆರಂಭದ ದಿನಗಳು, ಪಕ್ಕದಲ್ಲೇ ಎಷ್ಟೊತ್ತಿಗೂ ಮುಗುಳ್ನಗುತ್ತಾ ಕುಳಿತಿರ್ತಿದ್ದ ಸ್ಮಿತಾ ಒಂಥರಾ ಇಷ್ಟವಾದಳು! ನೋಡು ನೋಡುತ್ತಿದ್ದಂತೆ, ಅವಳು ಮತ್ತವಳ ಗೆಳತಿ ಮೀನಾ ಇಬ್ಬರೂ ನನ್ನೊಡನೆ ಆತ್ಮೀಯರಾದರು. ಮೂವರು ಕ್ಯಾಂಟಿನ್ ಗೋಬಿ, ದಾವಣಗೆರೆ ಬೆಣ್ಣೆದೋಸೆ, ರಂಗಣ್ಣನ ಪಾನಿಪುರಿ ತಿನ್ತಾ ಆರಾಮಾಗಿ ಸುತ್ತಾಡ್ಕೊಂಡು ಇದ್ವಿ! ಮೀನಾಳ ಜೊತೆಯಲ್ಲಿ ಮಾತು ಕಡಿಮೆ, ಸ್ಮಿತಾಜೊತೆ ತುಸು ಹೆಚ್ಚೇ ಇತ್ತು! ತಡರಾತ್ರಿಯವರೆಗೂ ಇಬ್ಬರೂ ಚಾಟಿಂಗ್‍ನಲ್ಲಿ ಬ್ಯುಸಿಯಾಗಿರ್ತಿದ್ವಿ! ಒಮ್ಮೆ ಅವಳಿಂದ ಮೆಸೇಜ್ ಬಂತು, “ಹೇ ನೀವು ನನ್ನ ಲವ್ ಮಾಡ್ತಿದ್ದೀರಂತೆ, ಹೌದಾ?” ಅಯ್ಯೋ, ರೀ.. ಸ್ಮಿತಾ ತಲೆಗಿಲೆ ಕೆಟ್ಟಿದಿಯೇನ್ರಿ? ನನ್ನ ರಿಪ್ಲೆ! ರೀ,ಇಲ್ಲ ರೀ ಮೀನಾಗೆ ಫೇಸ್‍ರೀಡಿಂಗ್ ಬರುತ್ತೆ, ಅವಳು ಹೇಳಿದ್ದು ಎಂದು ಗೂಬೆ ಕೂರಿಸಿದ್ಲು! ಸರಿ, ಅವಳತ್ರನೇ ಕೇಳ್ತೀನಂದೆ, ಬೇಡ ಬೇಡ ಸುಮ್ನೆ ಕಿರಿಕ್‍ಯಾಕ್ರೀ ಅಂದಾಗಲೇ ಕನ್ಫರ್ಮ್ ಆಗಿತ್ತು, ಅವಳೊಳಗೆ ನಾನಿದ್ದೇನೆ! ಸರಿ, ತಕ್ಷಣವೇ ಹೇಳಿದೆ ಸ್ಮಿತಾ ನೀವಂದ್ರೆ ಇಷ್ಟ! ತಿಳಿಯದಂತೆ ಮನದ ಮರೆಯಲ್ಲಿ ಅರಳಿದ್ದ ಪ್ರೀತಿ ವಿಷಯವನ್ನು ಹೇಳಿದ್ದೇ ತಡ, ಅವಳು ತಡಮಾಡಲಿಲ್ಲ… ಉತ್ತರಿಸಿದಳು, ನನಗೆ ಅದೃಷ್ಟವಿದ್ರೆ ನಿಮ್ಮಮನೆ ಸೊಸೆ ಆಗ್ತೀನಿ!

ಹೀಗೆ ಪ್ರೀತಿ ಹುಚ್ಚು ಹೆಚ್ಚಿ ಮೆಚ್ಚಿಕೊಂಡಾಗ ಮಧ್ಯರಾತ್ರಿ 2ಗಂಟೆ! ಕೂಡಲೇ ಫೋನ್ ಮಾಡಿದೆ, ಮಾತಾಡಿದ್ಲು! ಅವಳು ಪ್ರೀತಿ ನಿವೇಧನೆಗೆ ಸ್ಪಂದಿಸಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ! ಗಾಢನಿದ್ರೆಯಲ್ಲಿದ್ದ ರೂಂಮೇಟ್ ಅಮರನನ್ನು ಎಬ್ಬಿಸಿದೆ! ಬೈದು, ತೆಪ್ಪಗೆ ಮಲಗಿದ!
ಬೆಳಗ್ಗೆ ಎದ್ದು ಕ್ಲಾಸ್‍ಗೆ ಹೋದಾಗ ಅವಳನ್ನು ನೋಡಿ, ಮಾತಾಡಿಸಲು ಏನೋ ಒಂಥರಾ, ನಾಚಿಕೆ, ಭಯ! ಮಾತಾಡ್ದೆ ಮೊದಲಿನಂತೆಯೇ! ಆದರೆ, ಅವಳು ನನ್ನೊಡನೆ ಹೆಜ್ಜೆ ಹಾಕಿದ್ದು ನಾಲ್ಕೇ ನಾಲ್ಕು ದಿನ! ನಮ್ಮೂರ ಮಳೆಯಲ್ಲಿ ನನ್ನ ಜೊತೆ ಕೈಹಿಡಿದು ನೆನೆಯ ಬೇಕು, ನನ್ನ ಎದೆಗೆ ತಲೆಗೊಟ್ಟು ಮಲಗಿ ಆಕಾಶದ ತಾರೆಗಳನ್ನು ಎಣಿಸ ಬೇಕೆಂದು ಕನಸು ಕಂಡ ಸ್ಮಿತಾ.. ಇದ್ದಕ್ಕಿದ್ದಂತೆ ಪ್ರೇಮಿಗಳಾಗಿರುವುದು ಬೇಡ ಬೆಸ್ಟ್ ಫ್ರೆಂಡ್ಸ್ ಆಗಿರೋಣ ಎಂದು ಹೇಳಿದಾಗ, ಹೃದಯ ನುಚ್ಚುನೂರಾಗಿತ್ತು! ಕಾರಣ ಕೇಳಿದರೆ, ಹೇಳಲಿಲ್ಲ! ಹಠ ಹಿಡಿದಾಗ ಹೇಳಿದಳು, “ನನಗೆ ಮದುವೆ ನಿಶ್ಚಯ ಮಾಡಿದ್ದಾರೆ, ನಮ್ಮಿಬ್ಬರ ಜಾತಿಯೂ ಬೇರೆ, ಅಷ್ಟೇ ಅಲ್ಲದೇ ನೀನಿನ್ನೂ ಲೈಫ್‍ನಲ್ಲಿ ಸೆಟಲ್ ಆಗಿಲ್ಲ! ನಮ್ಮ ಮನೆಲೀ ನಿನ್ನ ಒಪ್ಪಲ್ಲ .ಸಾರಿ ಕಣೋ ನಿಂಗೆ ಒಳ್ಳೇ ಹುಡುಗಿ ಸಿಗ್ತಾಳೆ.. ಇದು ಹುಡುಗಿಯರ ಮಾಮೂಲಿ ಡೈಲಾಗ್ ಅಲ್ವೇ? ಹಾಗೆ ಸದ್ದಿಲ್ಲದೆ ಬಂದು ಹೀಗೆ ಹೃದಯಕ್ಕೆ ಗುದ್ದಲಿ ಏಟು ಕೊಟ್ಟು ಅಪರಿಚಿತನಂತೆ ಟ್ರೀಟ್ ಮಾಡಲಾರಂಭಿಸಿದ್ಲು! ಅವಳು ಹೃದಯಕ್ಕೆ ಮಾಡಿದ ನೋವಿಗೆ ಗೆಳೆಯರ ಸಮಾಧಾನ ಸಾಕಾಗಲಿಲ್ಲ. ತರಗತಿಯಲ್ಲಿ ಕೂರಲಾಗದೇ ಪದೇ ಪದೇ ರಜೆಹಾಕಿ ರೂಮ್‍ನಲ್ಲಿ ಒಂಟಿಯಾಗಿ ಅಳಲಾರಂಭಿಸಿದೆ. ಭಾರವಾದ ಮನಸ್ಸು ಸಾಯುವ ಯೋಚನೆಯನ್ನೂ ಮಾಡಿದ್ದಿದೆ.
ಆದರೆ,ಹೃದಯದ ಅಳು, ಮನಸ್ಸಿನ ಭಾರ ಕರಗಿ ನೀರಾಯಿತು..! ಹೃದಯದದಲ್ಲಿ ಕವಿದಿದ್ದ ಸೂತಕದ ಛಾಯೆ ಒಂದೆರಡು ವಾರದಲ್ಲಿ ಮಾಯವಾಯ್ತ. ನಾನು ಮತ್ತೆ ಬದಲಾದೆ, ಉತ್ಸಾಹದ ಚಿಲುಮೆಯಾದೆ.ಕಾರಣ, ಸುಕ್ಷರ! ಹೌದು, ಅವಳಿಲ್ಲದೇ ಇದ್ದಿದ್ದರೆ ಸ್ಮಿತಾಳ ನೆನಪಲ್ಲೇ ಕೊರಗುತ್ತಾ ಸಾಯುತ್ತಿದ್ದೆನೇನೋ? ಕಳೆದೊಗಿದ್ದ ನನ್ನ ಸರಿಪಡಿಸಲು ಆತ್ಮೀಯ ಗೆಳೆಯ ಸುಬ್ಬು ಕೂಡ ಸೋತಿದ್ದ. ಆದರೆ, ಸುಕ್ಷರಾ ನನ್ನ ಜಗವನ್ನೇ ಬದಲಾಯಿಸಿದ್ಲು!
ತಿಳಿಯದಂತೆ ಮನಸ್ಸಿನ ಭದ್ರಕೋಟೆಯಲ್ಲಿ ಶಾಶ್ವತ ಸ್ಥಾನ ಅಲಂಕರಿಸಿ, ಮಿಂಚಿನ ಸಂಚಲನ ಉಂಟು ಮಾಡಿದ್ಲು. ಇಬ್ಬರು ಜೊತೆಯಲ್ಲೇ ಕ್ಲಾಸ್‍ಗೆ ಹೋಗಿ-ಬರುವುದು, ಓದು, ಬರಹ, ತಮಾಷೆ, ಸುತ್ತಾಟ. ಒಂದೇ ಒಂದು ಕ್ಷಣವು ಬಿಟ್ಟಿರದೆ ಕೈ ಹಿಡಿದು ನಡೆದೆವು ಬಹುದೂರ ದೂರ ದೂರ! ಅವಳಿಗೆ ಹತ್ತಿರವಾದ ಮೇಲೆ ಅವಳ ಮನೆಯವರಿಗೆಲ್ಲಾ ಇಷ್ಟವಾಗಲು ಹೆಚ್ಚು ದಿನ ಬೇಕಾಗಲಿಲ್ಲ..! ಕೆಲವೇ ದಿನದಲ್ಲಿ ಅವಳ ಮನೆಯಲೊಬ್ಬನಾದೆ. ಆಮೇಲಂತೂ ದಿನಪೂರ್ತಿ ಒಟ್ಟಿಗೇ ಕಾಲಕಳೆಯುತಿದ್ವಿ! ಅವಳ ಮನೆಗೊಬ್ಬ ಮಗನಾಗಿ ನಾನಿದ್ದೆ, ಅವಳ ಅಪ್ಪ-ಅಮ್ಮನಿಗೆ ನಾನೊಬ್ಬ ಗಂಡು ಮಗ. ಅವಳ ಅಕ್ಕಳಿಗೆ ಮುದ್ದಿನ ತಮ್ಮ! ಅವಳಿಗೆ ಅಚ್ಚುಮೆಚ್ಚಿನ ಗೆಳೆಯ.

ಅದೆಷ್ಟೋ ಸಲ ಅವಳೊಡನೆ ಜಗಳವಾಡಿದ್ದೆ, ಅವಳೂ ಜಗಳ ಕಾದಿದ್ದಳು! ದೂರಾದಷ್ಟೂ ಹತ್ತಿರವಾಗುತ್ತಿದ್ದ ನಮ್ಮನ್ನು ಕಂಡು ಉರ್ಕೊಂಡವರಿಗೆ ಲೆಕ್ಕವಿಲ್ಲ. ಈಗ ಮರೆತರೂ ಮರೆಯಲಾಗದ ನೆನಪು ಮಾತ್ರ!

ಅದೊಂದು ದಿನ ಸಣ್ಣ ವಿಷಯಕ್ಕೆ ದೊಡ್ಡ ಜಗಳ ಆಡಿದೆವು. ಇಬ್ಬರಿಗೂ ಹಠ, ಸೋಲು ಇಷ್ಟವಿಲ್ಲ. ಮಾತು ಮಿತಿ ಮೀರಿತು, ಭಾವನೆಗಳು ಬದಲಾಯಿತು..ಕಾಪಾಡಿಕೊಂಡು ಬಂದಿದ್ದ ಬಾಂದವ್ಯ ಕ್ಷಣಮಾತ್ರದಲ್ಲಿ ಹಳಸಿತು! ಆ ಕ್ಷಣ, ಅದೊಂದು ಕ್ಷಣ ಇಬ್ಬರಲ್ಲಿ ಒಬ್ಬರು ಸುಮ್ಮನಿದಿದ್ದರೆ ಸಾಕಿತ್ತು, ಎಂದೆಂದಿಗೂ ಅಗಲುವಿಕೆಯ ಪ್ರಮೆಯವೇ ಬರುತ್ತಿರಲಿಲ್ಲವೇನೋ? ಆಗ ಇಬ್ಬರಿಗೂ ಅದೇನು ರೋಗ ಬಡಿದಿತ್ತೋ ಶಿವನೇ ಬಲ್ಲ!
ಮಾತುಬಿಡುವ ನಿರ್ಧಾರ ತೆಗೆದುಕೊಂಡೆವು, ಮಾತು ಬಿಟ್ಟೆವು..! ಸಿಟ್ಟು ತಣಿಯುವುದು ತಡವಾಗಿದ್ದೇ ಶಾಪವಾಯ್ತೇನೋ? ಮರುದಿನ ಕ್ಲಾಸ್‍ನಲ್ಲಿ ಪೂರ್ವ-ಪಶ್ಚಿಮದಲ್ಲಿ ಕುಳಿತೆವು. ಒಟ್ಟಿಗೆ ಇರುತ್ತಿದ್ದವರು ಎಣ್ಣೆಸೀಗೆಕಾಯಿಯಾಗಿದ್ದು ಕಂಡ ಕೆಲವು ಸಹಪಾಠಿಗಳಿಗೆ ಆಶ್ಚರ್ಯ,ಮತ್ತೆ ಕೆಲವರಿಗೆ ಅರ್ಥವಿಲ್ಲದ ಖುಷಿ. ಅವಳೋ, ಕಾರಣವಿಲ್ಲದೆ ನೆತ್ತಿಗೇರಿದ ಪಿತ್ತಕ್ಕೆ ಪರಮಶತ್ರುವಿನಂತೆ ಕಂಡಳು. ಅಷ್ಟು ಮಾತ್ರವಲ್ಲ, ಅದ್ಯಾಕೋ, ಇಲ್ಲಸಲ್ಲದ ಕತೆಕಟ್ಟಿ ಬೇರೆಯವರೂ ಮಾತುಬಿಡುವಂತೆ ಮಾಡಿದಳು! ಕ್ಲಾಸ್‍ಮೇಟ್ಸ್‍ಗಳೆಲ್ಲಾ ಕೈ ಬಿಟ್ಟರೂ, ಒಬ್ಬಂಟಿಯಾಗಿರಲು ಬಿಡದ ಗೌರವ್, ಆಸೀಫ್ ಅಭಿ, ಪುನಿ, ಶಂಕ ಹೀಗೆ ಬೇರೆ ವಿಭಾಗದ ಸ್ನೇಹಿತರ ದೊಡ್ಡ ಸಾಲು ನನಗೆ ಸಾಗಬೇಕಾದ ದಾರಿ ತೋರಿಸಿ,ಬೆನ್ನಹಿಂದೆ ನಿಂತು ಜೀವಾಮೃತ ನೀಡಿದರು! ಅವಳ ಮಾತು ಕೇಳಿ, ನನ್ನ ಮೇಲೆ ಕತ್ತಿ ಮಸೆದ ಅವರಿಗೆಲ್ಲಾ ಈಗ ಅರ್ಥವಾಗುತ್ತಿದೆ, ಅವಳೆಂಥವಳೆಂದು!
ಹ್ಞೂಂ, ನನಗೂ ಗೊತ್ತು, ಅವಳೆಂಥಾ ಪುಣ್ಯಾತ್ಗಿತ್ತಿ! ಆದರೂ, ಹುಚ್ಚು ಮನಸ್ಸು ಅವಳು ಬೇಕೆಂದು ಹಠ ಹಿಡಿದಿದೆ. ಆಗಾಗ ಅಲ್ಲಲ್ಲಿ ಎದುರ-ಬದುರ ಸಿಕ್ಕಾಗಲೆಲ್ಲಾ ಹಳೆಯದೆಲ್ಲಾ ಕಣ್ಣಪರದೆಯ ಮುಂದೆ ಹಾದುಹೋಗುತ್ತದೆ!


ಮನಸ್ಸಿನ ನೋವಿಗೆ ಬರವಣಿಗೆಯೊಂದು ಮುಲಾಮ್ ಆದೀತೆ? ಸಾಧ್ಯವಿಲ್ಲ. ಇಷ್ಟ-ಕಷ್ಟದ ನಡುವೆ, ಬೇಕು-ಬೇಡಗಳನ್ನೆಲ್ಲಾ ಗೀಚಿ ಮನಸ್ಸನ್ನು ಹಗರ ಮಾಡಿಕೊಳ್ಳುವ ಯತ್ನ ಮಾತ್ರ! ಸಂಶಯವಿಲ್ಲ ಅಷ್ಟು ಮಾತ್ರ!
ಗೆಳತಿ ಸುಕ್ಷರಾ…ಇದನ್ನೆಲ್ಲಾ ನೀ ಓದಿಯೇ ಓದುತ್ತೀಯಾ. ಕೋಪಿಸಿಕೊಳ್ಳಬೇಡ, ಹೀಗೆಲ್ಲಾ ಬರೆದಿದ್ದೇನೆಂದು! ಬರೆಯದೆ ಬೇರೆ ದಾರಿಯಿಲ್ಲ. ಕರೆ ಮಾಡಲು ಮನಸ್ಸು ಒಪ್ಪಲ್ಲ! ಅಕಸ್ಮಾತ್ ಮಾಡಿದರೂ ನೀ ರಿಸೀವ್ ಮಾಡಲ್ಲ, ಮಾಡಿದರೂ ಪ್ರೀತಿಯಿಂದ ಮಾತನಾಡಲ್ಲ! ಬದಲಾಗು, ನಾನು ಮಾತನಾಡಿಸಲು ತುದಿಗಾಲಲ್ಲಿ ನಿಂತಿದ್ದೇನೆ, ಕರೆಮಾಡು, ಮುಗುಳ್ನಕ್ಕು ಮಾತನಾಡಿಸು! ಸಾವಿರ ಆಣೆ ಸೇರಿಸಿದರೆ ಆಗುವಷ್ಟು ತೂಕದ ಸತ್ಯ! ಈಗಲೂ ನಿನ್ನ ಬಗ್ಗೆ ಗೌರವವಿದೆ, ನೀ ಬೇಡ ಎನ್ನುವ ಆತ್ಮಸಾಕ್ಷಿಯನ್ನೂ, ನೀ ಮಾಡಿದ ಅವಮಾನವನ್ನು ಮರೆತು ಒಪ್ಪಿಕೊಳ್ಳುವೆ! ಹಠಮಾಡದೆ ಮಾತಾಡು! ತಪ್ಪು ಇಬ್ಬರಿದ್ದೂ ಇದೆ, ಆದದ್ದಾಗಲಿ ಬಂದು ಬಿಡೇ .. ಎನ್ನಲೇ..?
ಬೇಡ ಅವಳು ಮತ್ತೆ ಬರಳು, ಬರುವುದೂ ಬೇಡ..! ಗುರಿಯನ್ನು ಬೆನ್ನಹತ್ತಿ ಹೊರಟಿದ್ದೇನೆ..ಹಿಂದೇಟು ಹಾಕದೇ ಅವಳೆದುರೇ ಬೆಳೆದು ನಿಲ್ಲಲೇ? ಏನೇನೂ ಅರ್ಥವಾಗುತ್ತಿಲ್ಲ! ಯಾವುದಕ್ಕೂ ಇಷ್ಟೊಂದು ಕನ್ಫೂಸ್ ಆಗದಿದ್ದವನು ಹಿಂಗೇಕೆ ಕನ್ಫೂಸ್ ಆಗಿದ್ದೇನೆ? ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೆಕೆ ಒಂಟಿ ಮಾಡಿ ಹೊಂಟು ಹೋದಳು!?ಅವಳೇನೋ ಹೋದಳು, ಅವಳಿಗೆ ನಾನು ಕೊರಗುವುದು ಏಕೆ? ಇಂಥಾ ನೂರೊಂದು ಪ್ರಶ್ನೆಗಳು ಇವೆ! ಉತ್ತರವಿಲ್ಲ.


ಉತ್ತರ ಹುಡುಕುವ ಗೋಜಿಗೆ ಹೋಗಲಾರೆ, ಏಕಾಂಗಿಯಾಗಿ ದಡಸೇರುವ ಛಲವಿದೆ, ಇರಬಲ್ಲೆ ನಾನೊಬ್ಬನೇ..ಗೆದ್ದೆಗೆಲ್ಲುವೆ ಒಂದು ದಿನ ಗೆಲ್ಲಲ್ಲೇ ಬೇಕು ಒಳ್ಳೇತನ. ದಾರಿತೋರುವವರಿದ್ದಾರೆ, ಮುನ್ನುಗ್ಗುವ ತಾಕತ್ತು ಇದೆ, ಖಂಡಿತಾ ಬಂದೇ ಬರುತ್ತೆ ಆ ಸುದಿನ..ಆ ಕಡೆ ಸಾಗಿದೆ ಪಯಣ..

LEAVE A REPLY

Please enter your comment!
Please enter your name here