ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ , ನಮ್ಮನ್ನೆಲ್ಲಾ ನಗೆಕಡಲಲ್ಲಿ ತೇಲಿಸಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ನೆನಪು ಮಾತ್ರ . ಅವರು ನಿನ್ನೆ ನಮ್ಮನ್ನೆಲ್ಲಾ ಅಗಲಿದ್ದಾರೆ . ಮರೆಯಾಗುವ ಮುನ್ನ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದು, ಅವುಗಳು ಬಿಡುಗಡೆಯಾಗ ಬೇಕಿದೆ .
ಬುಲೆಟ್ ಪ್ರಕಾಶ್ ಕೊನೆಯದಾಗಿ ನಟಿಸಿರುವ ಸಿನಿಮಾ, ತೆರೆಕಾಣಲಿರುವ ಸಿನಿಮಾಗಳು, ನಟಿಸಬೇಕಿದ್ದ ಸಿನಿಮಾಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಪಟ್ಟಿ .
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಶಾಂತಿ – ಕ್ರಾಂತಿ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ಬುಲೆಟ್ ಪ್ರಕಾಶ್ ಕನ್ನಡ ಹಾಸ್ಯ ಮತ್ತು ಸಿನಿ ಜಗತ್ತಿಗೆ ನೀಡಿದ ಕೊಡುಗೆ ಅಪಾರ .
ದೈತ್ಯ ದೇಹ, ವಿಶಿಷ್ಟ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ನಗೆಕಡಲಿನಲ್ಲಿ ತೇಲಿಸಿದ್ದರು . ಐತಲಕಡಿ ಎಂಬ ಒಂದು ಸಿನಿಮಾದಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದರು . ಚಂದನವನದ ಬಹುಬೇಡಿಕೆಯ ಹಾಸ್ಯ ನಟನಾಗಿದ್ದರು .
ರವಿಚಂದ್ರನ್ ಸಿನಿಮಾ ಮೂಲಕವೇ ಸಿನಿಯಾನ ಆರಂಭಿಸಿದ್ದ ಬುಲೆಟ್ ಪ್ರಕಾಶ್, ರವಿಚಂದ್ರನ್ ಅವರೊಡನೆ 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದ ಬುಲೆಟ್ ಪ್ರಕಾಶ್ , ಅವರೊಡನೆ ಧ್ರುವ, ಭಗವಾನ್, ಶೌರ್ಯ, ಕಲಾಸಿಪಾಳ್ಯ, ದತ್ತ, ಐರಾವತ ಸಿನಿಮಾಗಳಲ್ಲಿ ಅಭಿನಯಿಸಿದ್ದರು .
ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರು . ನೀರ್ ದೋಸೆ ಸಿನಿಮಾ ಮೂಲಕ ಕಮ್ ಬ್ಯಾಕ್ ಆಗಿದ್ದರು .
ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಅಭಿನಯಿಸಿದ್ದು, ಆ ಸಿನಿಮಾ ಲಾಕ್ ಡೌನ್ ಮುಗಿದ ಬಳಿಕ ತೆರೆ ಕಾಣಲಿದೆ .
ನೀರ್ ದೋಸೆ ಡೈರೆಕ್ಟರ್ ವಿಜಯ ಪ್ರಸಾದ್ ನಿರ್ದೇಶನದ ಪರಿಮಳ ಲಾಡ್ಜ್ ಸಿನಿಮಾದಲ್ಲಿ ನಟಿಸುತ್ತಿದ್ದರು . 45 ದಿನಗಳ ಕಾಲ್ ಶೀಟ್ ಕೂಡ ನೀಡಿದ್ದರು ..! ಆದರೆ ..?
ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ – 2 ನಲ್ಲಿ ಕೊನೆಯ ಬಾರಿ ಕ್ಯಾಮಾರಾ ಮುಂದೆ ಕಾಣಿಸಿಕೊಂಡಿದ್ದು , ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಹಾಸ್ಯ ಚಟಾಕಿ ಹಾರಿಸಿದ್ದಾರೆ . ಸಿನಿಮಾ ರಿಲೀಸ್ ಆಗಬೇಕಿದೆ .
ಓಂ ಪ್ರಕಾಶ್ ರಾವ್ ಆ್ಯಕ್ಷನ್ ಕಟ್ ಹೇಳಲಿರುವ ಬೆಳಗಾಂ, ಗಲ್ಲ ಸಾಧುಕೋಕಿಲ ಅವರ ಸ್ವಾಮೀಜಿ, ರಿಷಿ ನಿರ್ದೇಶಿಸಲಿರುವ ಇಟ್ರಲ್ಲಪ್ಪೋ ಬತ್ತಿ , ಜಯಸಿಂಹ ರೆಡ್ಡಿ ನಿರ್ದೇಶನದ ಲವ್ ಕಾಲೇಜ್ ಎಂಬ ಚಿತ್ರಗಳು ಸೇರಿದಂತೆ ಒಂದಿಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು . ಆದರೆ ವಿಧಿಯಾಟವೇ ಬೇರೆಯಾಗಿತ್ತು . ಬುಲೆಟ್ ಬಿಟ್ಟು ಹೋಗಿದ್ದಾರೆ . ಅವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ .
ಬುಲೆಟ್ ಪ್ರಕಾಶ್ ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು . ಇನ್ನೂ ಒಂದಿಷ್ಟು ಸಿನಿಮಿಮಾಗಳಲ್ಲಿ ನಟಿಸಿ , ಇನ್ನೂ ಒಂದಿಷ್ಟು ಕಾಲ ನಮ್ಮ ನಿಮ್ಮ ನಡುವೆ ಇರಬೇಕಿತ್ತು . ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳ ಮೂಲಕ ರಂಜಿಸಿದ್ದ ಅವರು ನಿರ್ಮಾಪಕರಾಗುವ ಕನಸು ಹೊಂದಿದ್ದರು . ನೆಚ್ಚಿನ ಗೆಳೆಯ ದರ್ಶನ್ ಗಾಗಿ ಸಿನಿಮಾ ಮಾಡಬೇಕೆಂಬ ಆಸೆ ಇತ್ತು . ತಾನು ನಿರ್ಮಾಪಕನಾಗಿ ಮಗನನ್ನು ಹಿರೋ ಮಾಡಬೇಕೆಂದಿದ್ದರು . ಆ ಎಲ್ಲ ಕನಸು ನನಸಾಗುವ ಮುನ್ನ ಅಗಲಿದ್ದಾರೆ .