ಕನ್ನಡ ಅಂದ್ರೇ ಏನು..? ಕೇವಲ ನವೆಂಬರ್ ಒಂದನೇ ತಾರೀಕಿನ ಸಂಭ್ರಮವಾ..? ವರ್ಷಕ್ಕೆರಡು ಕಾರ್ಯಕ್ರಮಗಳನ್ನು ಮಾಡಿ ಜೀವನ ರೂಪಿಸಿಕೊಳ್ಳುವ ಪ್ರಯತ್ನವಾ..? ನವೆಂಬರ್ ಒಂದನೇ ತಾರೀಕು ಬಂದ್ರೆ ಸಾಕು, ಇದ್ದಕ್ಕಿದ್ದಂತೆ ನಮ್ಮ ಜನ್ರಿಗೆ ಕೆಚ್ಚೆದೆ ಬಂದುಬಿಡುತ್ತದೆ. ಆಮೇಲೆ ಕನ್ನಡ ಅಂದ್ರೆ ಎನ್ನಡ ಎನ್ನುವ ಜಾಯಮಾನ. ಅಲ್ಲಲ್ಲಿ ಕನ್ನಡಕ್ಕಾಗಿ ಹೋರಾಡುವ ಸಂಘಟನೆಗಳು ಕಾಣಿಸುತ್ತವೆ ವಿನಃ ಮತ್ಯಾವ ಅಚ್ಚ ಕನ್ನಡದವನು ಕನ್ನಡಕ್ಕಾಗಿ ಮಿಡಿಯುವುದನ್ನು ಕಾಣುವುದು ವಿರಳ. ಕನ್ನಡ ಅಂದ್ರೆ ಕೇವಲ ನವೆಂಬರ್ ತಿಂಗಳ ಸಮಾಚಾರವಲ್ಲ, ಕನ್ನಡ ಅಂದ್ರೆ ಐತಿಹ್ಯ, ಕನ್ನಡವೆಂದ್ರೇ ಗತವೈಭವ..!
`ಕನ್ನಡ ನುಡಿದರೇ ಚೆನ್ನ, ಕನ್ನಡ ಸವಿದರೇ ಚೆನ್ನ’. ಈ ನಾಡಲ್ಲಿ ಹುಟ್ಟುವುದಕ್ಕೆ ಹೆಮ್ಮೆ ಪಡಬೇಕು. ಈ ನಾಡಿನ ಬಗ್ಗೆ ಹೇಳುತ್ತಾ ಹೋದರೇ ಮುಗಿದುಹೋಗದ ಚರಿತ್ರೆಗಳು ಅಣಕಿಸುತ್ತವೆ. ಕನ್ನಡವೆಂದರೇ ಕೇವಲ ಹೋರಾಟವಲ್ಲ, ಕನ್ನಡವೆಂದರೇ ಸಿಟ್ಟಲ್ಲ, ಸೆಡವಲ್ಲ, ಸೋಲು-ಗೆಲುವಿನ ಲೆಕ್ಕಾಚಾರವಲ್ಲ. ಕೇವಲ ಅಸ್ತಿತ್ವದ ವಿಚಾರವೂ ಅಲ್ಲ. ಕನ್ನಡ ಅಂದ್ರೇ ಎಲ್ಲವನ್ನೂ ಮೀರಿದ ಅಚ್ಚರಿ. ಕನ್ನಡ ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಪ್ರಮುಖವಾದ ಭಾಷೆಯಾಗಿದೆ. ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಅಂದಾಜಿನ ಪ್ರಕಾರ ಐವತ್ತು ದಶಲಕ್ಷಕ್ಕೂ ಅಧಿಕ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ. ಜಗತ್ತಿನಾದ್ಯಂತ 7 ಕೋಟಿಗೂ ಅಧಿಕ ಮಂದಿ ಕನ್ನಡವನ್ನು ಮಾತನಾಡುತ್ತಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಭಾಷೆಗಳಲ್ಲಿ ಕನ್ನಡ ಇಪ್ಪತ್ತೊಂದನೇ ಸ್ಥಾನದಲ್ಲಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳಾದ ಗ್ರೀಕ್ ಮತ್ತು ಸಂಸ್ಕೃತ ಬಿಟ್ರೇ ಆನಂತರದ ಸ್ಥಾನದಲ್ಲಿರುವುದು ಕನ್ನಡ.
`ಅಮ್ಮಾ’ ಅಂದ್ರೇ, `ಏಯ್ ಅಮ್ಮಾ ಅನ್ಬೇಡ, ಮಮ್ಮಿ’ ಅನ್ನು ಅಂತ ಗದರುವ ಮಮ್ಮಿ, ಮನೇಲಿ ಕುಂತು ಕನ್ನಡ ಸಿನಿಮಾ ನೋಡಿದ್ರೇ, `ಇಂಗ್ಲೀಷ್ ನೋಡು’ ಅಂತ ಗದರುವ ಪೇರೆಂಟ್ಸ್. ಕನ್ನಡದಲ್ಲಿ ಹಚ್ಚೇವು ಕನ್ನಡದ ದೀಪ ಅಂತ ಹಾಡಿದರೇ, `ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್..’ ಅಂತ ಹಾಡಿಸುವ ಟೀಚರ್ಸ್. ಕನ್ನಡ ಮಾತನಾಡಿದ್ರೇ ಮಹಾಪರಾಧವೇನೋ ಎಂಬಂತೆ ಸಾಮಾನ್ಯವಾಗಿ ನೋಡುವ ವಲಸೆ ಪ್ರಾಣಿಗಳು. ವಾಸ್ತವ ಹೀಗಿರುವಾಗ ಕನ್ನಡ ಹೇಗೆ ತಾನೇ ಉಳಿದುಕೊಂಡೀತು ಹೇಳಿ..?. ಅಚ್ಚ ಕನ್ನಡಕ್ಕಾಗಿ ಈ ಜೀವ ಮೀಸಲು ಎಂದವರ ಮಕ್ಕಳೆಲ್ಲಾ ಇಂಗ್ಲೀಷ್ ಸ್ಕೂಲ್ಗಳಲ್ಲಿ ಓದುತ್ತಿದ್ದಾರೆ. ಕನ್ನಡತನ ಇದ್ದ ಕಡೆಯಲ್ಲೆಲ್ಲಾ ತಮಿಳರು ಆಕ್ರಮಿಸಿಕೊಂಡಿದ್ದಾರೆ. `ನಮಸ್ಕಾರ..’ ಎಂಬ ಚಂದದ ಶಬ್ಧದ ಜಾಗದಲ್ಲಿ `ವಣಕ್ಕಂ..’ ಶಬ್ಧ ವಕ್ಕರಿಸಿಕೊಂಡಿದೆ. ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡಿಕೊಳ್ಳುತ್ತಿರುವ ಈ ಬೆಳವಣಿಗೆ ಕಾಲಕಾಲಕ್ಕೆ ಕನ್ನಡವನ್ನು ನಾಶ ಮಾಡುತ್ತಿರುವುದು ಸುಳ್ಳಲ್ಲ. ಕನ್ನಡವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೇ ಮೊದಲು ಅದರ ಇತಿಹಾಸವನ್ನ ತಿಳಿದುಕೊಳ್ಳಬೇಕು. ಆಗ ಮಾತ್ರ ಕನ್ನಡ ಅಂತರಂಗಕ್ಕೆ ಕಚಗುಳಿಯಿಡುತ್ತದೆ. ರೋಮಾಂಚನವನ್ನುಂಟು ಮಾಡುತ್ತದೆ.
ಕನ್ನಡಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡದ ಲಿಪಿ, ಕದಂಬ ಲಿಪಿಯಿಂದ ಜನ್ಮ ತಾಳಿದೆ. ಕ್ರಿಸ್ತಶಕ ಆರನೇ ಶತಮಾನದಲ್ಲಿ ಪಶ್ಚಿಮ ಗಂಗರ ಕಾಲದಲ್ಲಿ ಹಾಗೂ ಒಂಬತ್ತನೇ ಶತಮಾನದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ಹಳಗನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ಕ್ರಿ.ಶ ನಾನೂರೈವತ್ತರಲ್ಲೇ ಬಳಕೆಯಲ್ಲಿದ್ದ ಹಳೆಗನ್ನಡ, ಹತ್ತೊಂಬತ್ತನೇ ಶತಮಾನದ ನಂತರ ಸೊಗಸಾದ ಕನ್ನಡವಾಗಿ ರೂಪುಗೊಂಡಿದೆ. ಆಯಾ ಪ್ರಾಂತ್ಯಗಳಿಗೆ ತಕ್ಕ ಹಾಗೇ ಕನ್ನಡದ ಭಾಷಾ ವೈಖರಿಯಲ್ಲಿ ಬದಲಾವಣೆ ಇದ್ದರೂ, ಅಚ್ಚ ಸೊಬಗಿನ ಕನ್ನಡಕ್ಕೆಂದು ಧಕ್ಕೆಯಾಗಿಲ್ಲ. ಕನ್ನಡ, ಇಂಟರ್ನ್ಯಾಶನಲ್ ಹಾಗೂ ನ್ಯಾಶನಲ್ ಭಾಷೆಗಳು ಎನಿಸಿಕೊಂಡಿರುವ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಿಗಿಂತ ಮಹತ್ವವಾದ ಸ್ಥಾನವನ್ನು ಹೊಂದಿದೆ. ಇಂಗ್ಲಿಷ್ ಗೆ ಸ್ವಂತದ ಲಿಪಿಯಿಲ್ಲ. ಅದು ರೋಮನ್ ನಲ್ಲಿದೆ. ಇನ್ನು ಹಿಂದಿಯ ಮೂಲ ಲಿಪಿ ದೇವ ನಗರಿ. ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗ ಬರೆದ ಅಮೋಘವರ್ಷ ನೃಪತುಂಗ, `ಕಾವೇರಿಯಿಂದ ಗೋದವರಿಯವರೆಗೆ..’ ಎಂದು ನುಡಿದಾಗ ಹಿಂದಿ, ಇಂಗ್ಲೀಷ್ ಜನಿಸಿದ ಸುದ್ದಿಯೇ ಇರಲಿಲ್ಲ..! ಕನ್ನಡದ ಮಹತ್ವ, ಕನ್ನಡದ ಅಸ್ತಿತ್ವ, ಕನ್ನಡದ ಇತಿಹಾಸ ಹೇಳಿದಷ್ಟು ಮುಗಿಯುವುದೇ ಇಲ್ಲ. ಇಡೀ ಭಾರತದಲ್ಲಿರುವ ಅದೆಷ್ಟೋ ಭಾಷೆಗಳಲ್ಲಿ ವಿದೇಶಿ ರೆವರೆಂಡ್ ಫಡರ್ಿನಾಂಡ್ ಕಿಟ್ಟಲ್ ಬರೆದ ಒಂದೇ ಒಂದು ಶಬ್ಧಕೋಶ- ಅದು ಕನ್ನಡದಲ್ಲಿದೆ. ಕನ್ನಡ-ಇಂಗ್ಲಿಷ್ನಲ್ಲಿ ಅವರು ರಚಿಸಿದ ಶಬ್ಧಕೋಶದಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಶಬ್ಧಭಂಡಾರವಿದೆ. ಜಿ. ವೆಂಕಟಸುಬ್ಬಯ್ಯನವರು ಹೊಸಗನ್ನಡ ಕಾಲಘಟ್ಟದಲ್ಲಿ ಕನ್ನಡ- ಕನ್ನಡ ನಿಘಂಟು ರಚಿಸಿದರು. ಹಾಗೆಯೇ ಸಾಹಿತ್ಯ ಪ್ರಕಾರದ ರಗಳೆ ಸಾಹಿತ್ಯವನ್ನ ಕನ್ನಡದಲ್ಲಿ ಮಾತ್ರ ಕಾಣಲು ಸಾಧ್ಯ.
ಭಾರತದಲ್ಲಿ ಅಸಂಖ್ಯಾ ಕವಿಗಳಿದ್ದಾರೆ, ಲೇಖಕರಿದ್ದಾರೆ. ಆದರೆ ಭಾರತದ ಶ್ರೇಷ್ಟ ಜ್ಞಾನಪೀಠ ಪ್ರಶಸ್ತಿಯಲ್ಲಿ ಅನಾಮತ್ತು ಎಂಟು ಪ್ರಶಸ್ತಿ ಕರ್ನಾಟಕದ ಮುಕುಟವನ್ನೇರಿದೆ. ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕೃತಿ ಕುವೆಂಪು ಅವರ ಶ್ರೀ ರಾಮಾಯಣದರ್ಶನಂ. ದ. ರಾ ಬೇಂದ್ರೆಯವರ ನಾಕುತಂತಿ, ಕೆ ಶಿವರಾಮಕಾರಂತರ ಮೂಕಜ್ಜಿಯ ಕನಸುಗಳು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕ್ಕವೀರ ರಾಜೇಂದ್ರ, ವಿನಾಯಕ ಕೃಷ್ಣ ಗೋಕಾಕ್ ಅವರ ಭಾರತ ಸಿಂಧೂ ರಶ್ಮಿ, ಯು ಆರ್ ಅನಂತಮೂರ್ತಿ ಅವರ ಒಟ್ಟು ಸಾಹಿತ್ಯ, ಗಿರೀಶ್ ಕಾರ್ನಾಡ್ ರವರ ಯಯಾತಿ, ಚಂದ್ರಶೇಖರ ಕಂಬಾರರ ಒಟ್ಟು ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ. ಜೊತೆಗೆ ಭಾರತದ ಸಾಹಿತಿಗಳಲ್ಲಿಯೇ ಅತೀ ಹೆಚ್ಚು ಪ್ರಶಸ್ತಿ ಪಡೆದ ಹೆಗ್ಗಳಿಕೆ ನಮ್ಮ ರಾಷ್ಟ್ರಕವಿ ಕುವೆಂಪು ಅವರದ್ದಾಗಿದೆ.
ಕನ್ನಡಕ್ಕೆ ಅನೇಕ ಉಪಭಾಷೆಗಳಿವೆ. ಕುಂದಗನ್ನಡ, ಹವಿಗನ್ನಡ, ಅರೆಭಾಷೆ, ಸೋಲಿಗ ಕನ್ನಡ ಇನ್ನಿತರೆ ಪ್ರಕಾರಗಳಿವೆ. ಅಯಾ ಸಮುದಾಯ ಪ್ರಾಂತ್ಯ, ಆಚರಣೆ, ಸಂಪ್ರದಾಯಕ್ಕೆ ಅನುಗುಣವಾಗಿ ಕನ್ನಡದಲ್ಲಿ ಉಪಭಾಷೆಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಕುಂದಾಪುರದ ಜನರು ಕುಂದಗನ್ನಡ ಮಾತನಾಡುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಬೇರೆ ಬೇರೆ ವಲಯಗಳಲ್ಲಿ ಬೇರೇ ಬೇರೇ ರೀತಿಯ ಕನ್ನಡ ಮಾತನಾಡುತ್ತಾರೆ. ಅದೇನೆ ಉಪಭಾಷೆಯಾದರೂ ಕನ್ನಡ ವಿಭಿನ್ನವಾಗಿ ಕೇಳುವುದಕ್ಕೆ ಸೊಗಸಾಗಿರುತ್ತದೆ. ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಯಥೇಚ್ಚವಾಗಿ ಕನ್ನಡಿಗರಿದ್ದಾರೆ. ಹಾಗೆಯೇ ಅಮೇರಿಕಾ, ಇಂಗ್ಲೆಂಡ್, ಕೊಲ್ಲಿ ರಾಷ್ಟ್ರಗಳಲ್ಲೂ ಕನ್ನಡಿಗರಿದ್ದಾರೆ. ಕನ್ನಡ ಭಾಷೆಯಿದೆ.
ಕನ್ನಡಕ್ಕೆ ಹತ್ತಿರತ್ತಿರ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆದರೆ ಮೊನ್ನೆ ಮೊನ್ನೆ ಕನ್ನಡದ ಶಲ್ಯವನ್ನ ಹೆಗಲಿಗೆ ಹಾಕ್ಕೊಂಡ ಮಂದಿ, ಅಂದು ನಾಡು ಕಟ್ಟಿದ ಅದೇನೋ, ಇಂದು ನಾಡು ಉಳಿಸುತ್ತಿರುವ ಇದೇನೋ..? ಅಂತೆಲ್ಲಾ ಪುಕ್ಕಟ್ಟೇ ಪ್ರಚಾರ ಗಿಟ್ಟಿಸಿಕೊಂಡು ತಿರುಗುತ್ತಿದ್ದಾರೆ. ಕೆಲವರು ಕನ್ನಡದ ಹೆಸರಿನಲ್ಲಿ ದೊಂಬಿ ಎಬ್ಬಿಸುವುದು, ರೋಲ್ ಕಾಲ್ ಮಾಡುವುದನ್ನೇ ಸಾಧನೆ ಎಂದುಕೊಂಡವರಿದ್ದಾರೆ. ಅಸಲಿಗೆ ಕನ್ನಡಪರ ಹೋರಾಟ ಅಂದ್ರೇ ಏನು..? ವರ್ಷಕ್ಕೆರಡು ಫಂಕ್ಷನ್ ಮಾಡಿ, ಲೈಫ್ ಸೆಟ್ಟಲ್ ಮಾಡಿಕೊಳ್ಳುವುದಾ..?. ಖಂಡಿತವಾಗಿಯೂ ಅಲ್ಲ. ಕನ್ನಡ ನಾಡಿನ ಜೀವನದಿ ಕಾವೇರಿಯ ವಿಚಾರಕ್ಕೆ ಬನ್ನಿ, `ಪ್ರಾಣ ಕೊಟ್ಟೆವು, ಒಂದು ಹನಿ ನೀರು ಕೊಡೆವು’ ಅಂತ ಕೆಲ ಹೋರಾಟಗಾರರು ಬ್ಯಾನರ್ ನಲ್ಲಿ ಸ್ಲೋಗನ್ನು ಬರೆಸುತ್ತಾರೆ. ಆದರೆ ತಮಿಳುನಾಡಿಗೆ ಹನಿ ನೀರಲ್ಲ, ಕ್ಯೂಸೆಕ್ಸ್ ಗಟ್ಟಳೆ ನೀರು ಬಿಡಲಾಗುತ್ತಿದೆ. ಇವರೆಲ್ಲರನ್ನು ಬ್ಯಾಟರಿ ಹಾಕಿ ಹುಡುಕಬೇಕಾಗಿದೆ. ಏನಿವರಿಗೆಲ್ಲಾ ಕನ್ನಡ ಅಂದ್ರೇ ಫ್ಯಾಶನ್ ಆಗಿದೆಯಾ..?. ಹೋರಾಟದಲ್ಲಿ ಪ್ರಾಮಾಣಿಕತೆ, ಛಲವಿಲ್ಲದಿದ್ದರೇ ನಮ್ಮ ದೇಶಕ್ಕೆ ಸ್ವಾತಂತ್ರವೂ ಬರುತ್ತಿರಲಿಲ್ಲ ಎಂಬ ಕಟುವಾಸ್ತವ ಇವರಿಗೆಲ್ಲಾ ಯಾವ ಕಾಲಕ್ಕೆ ಅರ್ಥವಾಗುತ್ತೋ..? ನನಗೆ ಅರ್ಥವಾಗುತ್ತಿಲ್ಲ. ಕನ್ನಡವೆಂದ್ರೇ ಕೇವಲ ಸ್ವಾರ್ಥದ ಸರಕಲ್ಲ. ಕನ್ನಡ ನಮ್ಮ ಹೆಮ್ಮೆಯ ಪ್ರತೀಕ. ಅದನ್ನು ಉಳಿಸಿ ಬೆಳೆಸಲು ಪ್ರಾಮಾಣಿಕತೆಯ, ಕಲ್ಮಶವಿಲ್ಲದ ಅಭಿಮಾನದ ಅಗತ್ಯವಿದೆ. ಪ್ರಪಂಚದ ಪುರಾತನ ಭಾಷೆಗಳಲ್ಲೇ ಮೂರನೇ ಸ್ಥಾನದಲ್ಲಿರುವ ಕನ್ನಡದ ಉದ್ಧಾರಕ್ಕೆ, ಅಚ್ಚ ಕನ್ನಡದ ಪ್ರತಿಯೊಬ್ಬ ನಾಗರೀಕನು ಈ ನೆಲ, ಜಲ, ನಾಡು, ನುಡಿಗೆ ಪ್ರಾಮಾಣಿಕವಾಗಿ ಮಿಡಿದರೇ ಸಾಕು. ಕನ್ನಡದ ಬಾವುಟ ಇತಿಹಾಸಕ್ಕೆ ಪ್ರತೀಕವಾಗಿ ಹಾರುತ್ತಲೇ ಇರುತ್ತದೆ.
ಈ ಸೈನ್ ಬೋರ್ಡ್ ವಿಚಾರಕ್ಕೇ ಬನ್ನಿ. ಸಂಘಟನೆಗಳು ಬಿಬಿಎಂಪಿಯನ್ನು ಮುತ್ತಿಗೆ ಹಾಕಿದ್ದಾರೆ. ಅಹವಾಲು ಸಲ್ಲಿಸಿದ್ದಾರೆ. ಅವರು ಆಯ್ತು ಎನ್ನುತ್ತಾರೆ. ಇವರು ಎದ್ದು ಬರುತ್ತಾರೆ. ಅಲ್ಲಿಗೇ ಸೈನ್ ಬೋರ್ಡ್ ಹೋರಾಟ ಮುಗಿದುಹೋಗುತ್ತದೆ..! ಪ್ರಯೋಜನವೇನು..? ಅಷ್ಟೆಲ್ಲಾ ಹೋರಾಟ ಮಾಡಿದ್ದಕ್ಕೆ ಯಕಃಶ್ಚಿತ್ ಒಂದೇ ಒಂದು ಇಂಗ್ಲೀಷ್, ತಮಿಳು, ಹಿಂದಿ, ಉರ್ದು ಬೋರ್ಡನ್ನು ಕನ್ನಡೀಕರಿಸಲಾಯಿತಾ..? ಹೋರಾಟ ಯಾವತ್ತೋ ಒಂದು ದಿನದ ಜ್ಞಾನೋದಯವಾಗಬಾರದು. ಮಾಡಿದ ಹೋರಾಟ ಯಶಸ್ವಿಯಾಗಲು, ಕನ್ನಡದ ಹೋರಾಟಗಾರರ ಕೆಚ್ಚೆದೆ ಅನಾವರಣಗೊಳ್ಳಲು ಅವೆಲ್ಲಾ ಕಾರ್ಯರೂಪಕ್ಕೆ ಬರಬೇಕು. ಕನ್ನಡ ಅವಸಾನವಾಗುತ್ತಿದ್ದರೂ ಕೆಚ್ಚೆದೆಯ ಕನ್ನಡಿಗನಿಗೇನು ಇಲ್ಲಿ ಕೊರತೆಯಿಲ್ಲ. ಹೋರಾಟಕ್ಕೆ ನಿಂತರೇ ಆತನನ್ನು ಯಾರೂ ತಡೆಯುವುದಿಕ್ಕಾಗುವುದಿಲ್ಲ. ಇವತ್ತು ಬೆಂಗಳೂರಿನಲ್ಲಿ ಅದೆಷ್ಟು ಮಲ್ಟಿ ನ್ಯಾಶನಲ್ ಕಂಪನಿಗಳಿಲ್ಲ. ಅದರಲ್ಲಿ ಎಷ್ಟು ಜನ ಕನ್ನಡಿಗರಿಗೆ ಕೆಲಸ ಸಿಕ್ಕಿದೆ ಹೇಳಿ..?. ಕನ್ನಡಿಗ ಎಂಬ ಕಾರಣಕ್ಕೆ ಕೆಲಸ ಸಿಗದೇ ಬರಿಗೈಲಿ ವಾಪಾಸಾಗುವ ವಾಸ್ತವವಿದೆ. ಆರಂಭದಲ್ಲಿ ಮೈ ಮರೆತ ಕನ್ನಡಿಗರ ಉಡಾಫೆಗೆ ಅವರೇ ಬೆಲೆ ತೆರಬೇಕಾಗಿದೆ. ಅವತ್ತೆಲ್ಲಾ ಅವರ ಹಕ್ಕನ್ನು ಪಡೆಯುವುದಕ್ಕೆ ಅವರೇ ಉತ್ಸಾಹ ತೋರಿಸಲಿಲ್ಲ. ವಲಸೆ ಬಂದವರಿಗೆಲ್ಲಾ ಜಾಗ ಕೊಟ್ಟರು. ಲಾಭದ ಆಸೆಗೆ ತಮ್ಮತನವನ್ನು ಮಾರಿಕೊಂಡರು. ಇವೆಲ್ಲವೂ ಪರರ ಪರಾಕ್ರಮಕ್ಕೆ ಕಾರಣವಾಗಿದೆ.
ಕನ್ನಡದ ಹೋರಾಟಗಾರರಿಗೆ, ಕನ್ನಡಕ್ಕಾಗಿ ಮಿಡಿಯುವವರಿಗೆ ಚಿಕ್ಕದೊಂದು ಮನವಿ, ಯಾರ ವೈಯುಕ್ತಿಕ ಹಿತಾಸಕ್ತಿಗಳು, ದ್ವೇಷಗಳು ಬೇಕಾಗಿಲ್ಲ. ಅಪ್ಪಟ ಕನ್ನಡಿಗರಾಗಿ, ಅಪ್ಪಟ ಕನ್ನಡಕ್ಕಾಗಿ, ಅಪ್ಪಟ್ಟ ಹೋರಾಟವನ್ನು ಮಾಡಿ ಅಥವಾ ಮಾಡೋಣ. ಪ್ರಾಮಾಣಿಕತೆ, ಶ್ರದ್ಧೆಯಲ್ಲಿ ಪ್ರತಿ ಹೋರಾಟಕ್ಕೂ ಗೆಲುವಿದೆ. ಸೈನ್ ಬೋರ್ಡ್ ಮಾತ್ರವಲ್ಲ, ಈ ನಾಡನ್ನು ಕನ್ನಡೀಕರಿಸಲು ಹೊರಟ ನಿಚ್ಚಳ ನಡೆಯಲ್ಲಿ ಹಿಂದೇಟು ಬೇಡ. ಹೋರಾಟವನ್ನು ತೀವ್ರಗೊಳಿಸಿ, ಪರಿಪೂರ್ಣವಾಗಲ್ಲದಿದ್ದರೂ ಕೊಂಚಮಟ್ಟಿಗೆ ಕನ್ನಡದ ಅಕ್ಷರಗಳನ್ನು ಬೆಳಗುವಂತೆ ಮಾಡಿ. ಕನ್ನಡಿಗ ತಲೆ ಎತ್ತಿ ನಡೆಯಬೇಕು..! ತಲೆ ಎತ್ತಿದಾಗೆಲ್ಲಾ ಕನ್ನಡ ಕಾಣಿಸಬೇಕು.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.. ಇದು ಕೇವಲ ನಾಲಿಗೆಯ ತೆವಲಾಗಬಾರದು, ಅಂತರಂಗದ ಕೂಗಾಗಬೇಕು. ಒಪ್ಪಿಕೊಳ್ಳುತ್ತೇವೆ; ನಾವು ಭಾರತೀಯರು, ನಾವೆಲ್ಲರೂ ಒಂದೇ. ಆದರೆ ನಮ್ಮ ಸಾಮ್ರಾಜ್ಯದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳದ ಹೊರತು ದೇಶ ರಕ್ಷಣೆ ಸಾಧ್ಯವಿಲ್ಲ. ತಮ್ಮ ಮನೆಯನ್ನು ಕಾಪಾಡಲಾರದವನು, ನಾಡನ್ನು ರಕ್ಷಿಸುವ ಮಾತೆಲ್ಲಿ..!
POPULAR STORIES :
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!
ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.