ಹುಡ್ಗೀರು ಏನೇನೋ ಆಗಿಬಿಡ್ತಾರೆ. ಬಾಳಿಗೆ ಖುಷಿ ಸುರಿದು ಬೆಳಕಾಗ್ತಾರೆ. ನೋವು ಕೊಟ್ಟು ಕತ್ಲು ಅಂತಾನೂ ಅನಿಸ್ತಾರೆ. ಹೀಗೆ ಹುಡುಗೀರು ಯುವಮನದ ಹುಡುಗರಿಗೆ ಏನೋ ಒಂಥರಾ ವಿಶೇಷ.
ನಾನು ಪಿಯುಸಿ ಮುಗಿಸಿ ಡಿಗ್ರಿ ಕಲಿಯೋಕೆ ಕಾಲೇಜು ಸೇರಿದ್ದೆ. ಪ್ರೀತಿ ಪ್ರೇಮ ಅಂದ್ರೆ ಅಷ್ಟೇನೂ ಆಸಕ್ತಿ ಇಲ್ಲದ ನನಗೆ, ಹುಡುಗಿಯರನ್ನು ನೋಡುವ ಮನಸ್ಸಾಗುತ್ತಿರಲಿಲ್ಲ. ಆದರೆ ನನ್ನ ಗೆಳೆಯ ವಿಕ್ರಮ ಅದೇನೋ ಖನಿಜ ಸಂಪತ್ತನ್ನು ಬಗೆದು ಪಡೆಯುವ ರೀತಿಯಲ್ಲಿ ಹುಡುಗಿಯರನ್ನು ನೋಡುತ್ತಿರುತ್ತಿದ್ದ. ನನಗೂ ಅವನಿಗೂ ಈ ಬಗ್ಗೆ ಚರ್ಚೆಗಳೇನೂ ಆಗುತ್ತಿರಲಿಲ್ಲ. ಆದರೆ ನಾನು ಹುಡುಗಿಯರನ್ನು ನೋಡುವುದೇ ಇಲ್ಲ, ನನಗೆ ಹುಡುಗಿಯರ ಬಗ್ಗೆ ಆಸಕ್ತಿಯೇ ಇಲ್ಲ ಎಂದು ಟೀಕಿಸುತ್ತಿದ್ದ. ನನಗದು ಸಮಸ್ಯೆ ಎಂದು ಅನಿಸಿರಲಿಲ್ಲ. ನನ್ನ ಪಾಡಿಗೆ ನಾನಿದ್ದೆ.
ಈ ನಡುವೆ ಮರುಭೂಮಿಯ ಬಿರುಗಾಳಿಯಂತೆ ಬೀಸಿ ಬಂದವಳು ಕಲ್ಪನಾ (ಹೆಸರು ಬದಲಾಯಿಸಲಾಗಿದೆ). ನಮ್ಮ ಹುಡುಗರ ಸಾಲಿನ ಪಕ್ಕದ ಸಾಲಿನಲ್ಲಿ, ಹುಡುಗರ ಬದಿಗೆ ಅವಳ ಸೀಟು. ಹುಡುಗರ ಸಾಲಿನಲ್ಲಿ ಅವಳ ಪಕ್ಕಕ್ಕೆ ಎಂಬಂತೆ ವಿಕ್ರಮ ಮತ್ತು ಅವನ ಪಕ್ಕ ನಾನು ಕೂತಿರುತ್ತಿದ್ದೆವು.
ವಿಕ್ರಮನಿಗೆ ಒಳಗಿಂದೊಳಗೆ ಅದೇನೋ ಖುಷಿ. ಕಲ್ಪನಾಳ ಪಕ್ಕ ನಾನು ಕೂತಿದ್ದೇನೆ ಎಂಬ ಭಾವ. ಇದನ್ನು ನನ್ನ ಬಳಿ ಹೇಳಿಕೊಂಡಿದ್ದ. ನಾನು ಕಲ್ಪನಾಳನ್ನು ಪ್ರೀತಿಸುತ್ತಿದ್ದೇನೆ, ಸರಿಯಾಗಿ ಒಂದು ದಿನ ಹೇಳಿಯೇ ಬಿಡುತ್ತೇನೆ ಎನ್ನುತ್ತಿದ್ದ. ಎಂದೂ ಏನೂ ಆಗಿರದ ನನಗೆ ಅಂದು ಹೊಟ್ಟೆಕಿಚ್ಚಾಗಿತ್ತು. ಅದ್ಯಾಕೋ ಕಲ್ಪನಾ ನನ್ನ ಹುಡುಗಿ ಅನಿಸಿತು. ನಾನು ಅವನೆದುರು ಯಾವ ಭಾವವನ್ನೂ ಪ್ರಕಟಿಸದೆ ಸುಮ್ಮನೆ ಕುಳಿತಿದ್ದೆ. ಕಾಲೇಜಿನ ದಿನಚರಿ ಕಳೆಯಿತು.
ಅವಳನ್ನು ಬಿಟ್ಟುಬಿಟ್ಟರೆ ನನಗೆ ಸಿಗಲಾರಳು ಎಂದು ತೀವ್ರವಾಗಿ ಅನಿಸಿತು. ವಿಕ್ರಮನ ಮೊದಲು ಅವಳ ಬಳಿ ನಾನೇ ಮಾತನಾಡಬೇಕು ಅನಿಸಿತು. ತಡಮಾಡಲಿಲ್ಲ. ಆ ರಾತ್ರಿ ಊಟ ಮಾಡಿ ಹಾಸಿಗೆಗೆ ಬಿದ್ದವನೇ ಮೊಬೈಲ್ ಕೈಗೆತ್ತಿಕೊಂಡೆ. ಫೇಸ್ಬುಕ್ ನಲ್ಲಿ ಅವಳನ್ನು ಹುಡುಕಿ “ಹಾಯ್” ಎಂದು ಮೆಸೇಜು ಕಳಿಸಿದೆ. ಆನ್ಲೈನ್ ನಲ್ಲಿ ಇದ್ದಳು. ಆದರೆ ನನ್ನ ಮೆಸೇಜು ನೋಡಲಿಲ್ಲ. ಏನೋ ಭಯವಾಯಿತು. ಮೈ ಕೈ ಎಲ್ಲಾ ಬಿಸಿಯಾಗಿ, ನಾಳೆ ಕಾಲೇಜಿನಲ್ಲಿ ಅವಳನ್ನು ಹೇಗೆ ನೋಡಲಿ ಎಂದು ಕಳವಳವಾಯಿತು. ಆದರೂ ಧೃತಿಗೆಡಲಿಲ್ಲ. ಧೈರ್ಯ ಮಾಡಿ “ಗುಡ್ ನೈಟ್” ಮತ್ತೊಂದು ಮೆಸೇಜು ಕಳಿಸಿದೆ. ಅದನ್ನು ತಕ್ಷಣ ನೋಡಿದ ಅವಳು “ಆರ್ ಯು ಗೋಯಿಂಗ್ ಟು ಸ್ಲೀಪ್?” ಎಂದು ಕೇಳಿದಳು. ಉಸಿರು ಬಿಗಿ ಹಿಡಿದು ಬಿಡುವ ಮೊದಲು “ನೊ” ಅಂತ ಪ್ರತಿಕ್ರಿಯೆ ಕೊಟ್ಟುಬಿಟ್ಟೆ. ಮತ್ತೆ ತಕ್ಷಣ ಮೆಸೇಜು ಬರಲಿಲ್ಲ.
ಈಗ ಮತ್ತೂ ಭಯಗೊಳ್ಳುವ ಸರದಿ ನನ್ನದು. ಮೊಬೈಲ್ ಆಫ್ ಆನ್ ಮಾಡುತ್ತಾ, ಫೇಸ್ಬುಕ್ ಒಮ್ಮೆ, ವಾಟ್ಸಾಪ್ ಒಮ್ಮೆ ತೆರೆಯುತ್ತಾ, ಮೊಬೈಲ್ ಹಿಡಿದು ಬಿಟ್ಟು ಗೊಂದಲದ ಬಲೆಯಿಂದ ಒದ್ದಾಡಿದೆ. ಸ್ವಲ್ಪ ಹೊತ್ತಿಗೆ ಟಿಣ್ ಎಂಬ ಸದ್ದಾಯಿತು. ತಡಬಡಾಯಿಸಿ ಮೊಬೈಲ್ ತೆಗೆದು ನೋಡಿದರೆ ಅವಳದೇ ಮೆಸೇಜು.
“ಮಲಗೋ ಮುಂಚೆ ಗುಡ್ ನೈಟ್ ಹೇಳೋದು.. ಹಾಯ್ ಅಂದ್ಬಿಟ್ಟು ತಕ್ಷಣ ಗುಡ್ ನೈಟ್ ಅನ್ನೋದಲ್ಲ” ಅಂತ ಪಾಠ ಮಾಡಿದ್ಳು. ಆ ಕ್ಷಣದ ಭಯ, ಸಂತೋಷ, ಗೊಂದಲದ ಸಮ್ಮಿಶ್ರ ಭಾವವನ್ನ ಇಂದೂ ಮರೆತಿಲ್ಲ. ಒಂದು ಹುಡುಗಿ ಹೀಗೆಲ್ಲಾ ಕಲಿಸಿಕೊಡಬಹುದು. ಹುಡುಗೀರು ಕಲಿಸಿದ ಪಾಠ ಮರೆತೂ ಹೋಗಲ್ಲ ಅಂತ ಗೊತ್ತಾಯ್ತು. ಈ ವಿಷಯವನ್ನು ನಾನು ಯಾರಲ್ಲಿಯೂ ಹಂಚಿಕೊಂಡಿರಲಿಲ್ಲ.
ನಾಗೇಶ್ ಭಿನ್ನ