ಸುತ್ತಲೂ ಹಸಿರಿ ಸಿರಿ.. ಸೌಂದರ್ಯದ ಸಿರಿಯನ್ನೇ ಹೊದ್ದು ಮಲಗಿರುವ ಪ್ರಕೃತಿ.. ಸ್ವರ್ಗವೇ ಧರೆಗಿಳಿಯಿತೇನೋ ಎಂಬ ಸೊಬಗು.. ಇದು ನಮ್ಮ ಮಲೆನಾಡಿನ ಮನೋಹರ ಪ್ರಕೃತಿಯ ಕಿರುನೋಟವಷ್ಟೇ..
ಹಸಿರು ನೋಡುವ ತವಕದಲ್ಲಿ ಮಲೆನಾಡಿಗೆ ಒಂದು ಕ್ಷಣ ಬೆರಗಾಗುತ್ತಾರೆ. ಇಂಥ ಹಸಿರನಾಡಿನಲ್ಲಿ ನಮ್ಮನ್ನು ಮತ್ತಷ್ಟು ಬೆರಗು ಮಾಡಿಸುತ್ತೆ ಈ ತಾಣ.
ಹೌದು. ನಮ್ಮ ಮಲೆನಾಡ ಪ್ರಕೃತಿಯ ಸೊಬಗು ಯಾವುದಕ್ಕೂ ಕಡಿಮೆ ಇಲ್ಲಾ.. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಸಂಸೆ ಸಮೀಪದ ಬಾಮಿಕೊಂಡ ಎಂಬ ಚಿಕ್ಕಹಳ್ಳಿಯ ಅತ್ಯದ್ಬುತ ಪ್ರಕೃತಿ ಸೊಬಗೊಂದು ಎಲ್ಲರ ಹೃನ್ಮನ ಸೆಳೆಯುತ್ತಿದೆ. ಎತ್ತರವಾದ ಬೆಟ್ಟದ ಮೇಲಿನ ಕೆಸರಿನ ಮಧ್ಯೆ ಸೃಷ್ಟಿಯಾದ ಹಚ್ಚ ಹಸಿರಿನ ಹೃದಯಾಕಾರದ ಹಸಿರು ರಾಶಿ ಎಲ್ಲರನ್ನು ಆಕರ್ಷಿಸುತ್ತಿದೆ.
ಅನೇಕ ವರ್ಷಗಳಿಂದ ಕೃಷ್ಣ ಎಂಬ ರೈತ ಕುಟುಂಬ ಈ ಬೆಟ್ಟದ ಸುತ್ತ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ಯಾವುದೇ ಯಂತ್ರೋಪಕರಣಗಳಿಲ್ಲದೆ ಗದ್ದೆಗಳನ್ನು ಸಿದ್ದ ಮಾಡಿದ್ದಾರೆ. ಇಂತಹ ಅಪಾಯದ ಜಾಗದಲ್ಲಿ
ಸೌಂದರ್ಯವನ್ನು ತುಂಬಿರುವುದು ಅದ್ಬುತವೇ ಸರಿ.
ನಾವು ನೀವೆಲ್ಲಾ ಯಾವುದೋ ದೇಶದ ಎತ್ತರವಾದ ಬೆಟ್ಟಗಳ ಮೇಲಿನ ಕೆಸರು ಗದ್ದೆಗಳನ್ನು ನೋಡಿರುತ್ತೆ.. ಅಬ್ಬಾ ಎಂಥ ಸೌಂದರ್ಯ ಅಂತಾ ಕಣ್ತುಂಬಿಕೊಂಡಿರುತ್ತೇವೆ. ಜೊತೆಗೆ ಆ ಸುಂದರ ದೃಶ್ಯವನ್ನು ಸೃಷ್ಟಿಸಿದವರಿ ಗೂ ಒಂದು ಶಹಬ್ಬಾಸ್ ಗಿರಿ ಕೊಟ್ಟಿರುತ್ತೇವೆ. ಆ ದರೆ ಮಲೆನಾಡಿನ ಈ ಸಂಸೆ ಎಂಬ ಅದ್ಬುತ ಫಾರಿನ್ ಮಾತ್ರ ಈವೆರಗೂ ಯಾರ ಕಣ್ಣಿಗೂ ಬಿದ್ದಿಲ್ಲ.
ರೈತನು ಎತ್ತರವಾದ ಬೆಟ್ಟದ ಸುತ್ತಾ ಮೆಟ್ಟಿಲುಗಳ ರೀತಿ ಭತ್ತದ ಗದ್ದೆಗಳನ್ನು ಮಾಡಿದ್ದು, ಅದಕ್ಕೆ ಸೊಬಗಿನ ಸಿರಿಯನ್ನೇ ತುಂಬಿದ್ದಾನೆ. ಜೊತೆಗೆ ಸುತ್ತಲಿನ ಎತ್ತರದ ಬೆಟ್ಟಗುಡ್ಡಗಳು, ಸದಾ ಬೀಸುವ ತಂಪಾದ ಗಾಳಿ ಮತ್ತಷ್ಟು ಈ ಅತ್ಯದ್ಭುತ ತಾಣಕ್ಕೆ ಮತ್ತಷ್ಟು ಜೀವಕಳೆ ತುಂಬಿದೆ.
ಸುಮಾರು ನಾಲ್ಕು ಎಕರೆ ಜಾಗದಲ್ಲಿ ಈ ಗದ್ದೆಯನ್ನು ಉಳುಮೆ ಮಾಡಲಾಗುತ್ತಿದೆ. ಬೆಟ್ಟದ ಸುತ್ತಲೂ ಉಳುಮೆಯನ್ನು ಮಾಡಿ ಭತ್ತ ನಾಟಿ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸುತ್ತಲು ಉಳುಮೆ ಮಾಡಿ ಬೆಟ್ಟದ ಮೇಲ್ಭಾಗವನ್ನು ಹೃದಯಾಕಾರದಲ್ಲಿ ಹಸಿರು ಹುಲ್ಲನ್ನು ಹಾಗೆಯೇ ಬಿಡಲಾಗಿದೆ. ಇದು ಗದ್ದೆಯ ಕೆಸರಿನ ನಡುವೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಮನೋಹರ ದೃಶ್ಯ ಸೃಷ್ಟಿಸಿದೆ.
ಇನ್ನು ಒಂದು ಹಾಳಿಯಿಂದ ಮತ್ತೊಂದು ಹಾಳಿಗೆ ಬದುವಿನ ಮೇಲಿಂದ ನೀರು ಸುರಿಯುವ ದೃಶ್ಯ ಸಣ್ಣ ಸಣ್ಣ ಜಲಪಾತಗಳಂತೆ ಗೋಚರಿಸುತ್ತವೆ.ಮೂಡಿಗೆರೆ ತಾಲೂಕು ಕಳಸಾದಿಂದ ಕುದುರೆಮುಖ ಮಾರ್ಗವಾಗಿ ಸಾಗಿದರೆ ಈ ಗ್ರಾಮ ಸಿಗುತ್ತದೆ. ಆದರೆ ಈ ಭತ್ತದ ಗದ್ದೆಯ ಸೌಂದರ್ಯ ಸವಿಯಲು ಸುಮಾರು 4 ಕಿ.ಮೀ ಬೆಟ್ಟದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು. ಇದುವರೆಗೂ ಈ ಗ್ರಾಮದಲ್ಲಿ ಐದಾರು ಕುಟುಂಬಗಳು ವಾಸ ಮಾಡುತ್ತಿದ್ದು, ನಗರ ಸಂಪರ್ಕ ಮಾಡಲು ಅವರಿಗೆ ಕಾಲು ನಡಿಗೆಯೇ ಆಧಾರವಾಗಿದೆ. ಆದರೆ ಇಲ್ಲಿನ ಪ್ರಕೃತಿಯ ಸೊಬಗು ನೋಡಿದರೆ ಎಂತಹ ಸುಸ್ತು ಸಹ ಮಾಯವಾಗುತ್ತೆ.