ಸಚ್ಚಿದಾನಂದ ಹರಿಸಾಕ್ಷಿ ಅಲಿಯಾಸ್ ಸಾಕ್ಷಿ ಮಹಾರಾಜ್. ಇಲ್ಲಿಯವರೆಗೆ ಅವರು ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆದುಕೊಳ್ಳಲಿ ಎನ್ನಲಾಗುತ್ತಿತ್ತು. ಆದರೆ ಈಗ ಅವರ ಮನಸ್ಸನ್ನು ಆಸಿಡ್ ಹಾಕಿ ಶುದ್ಧಗೊಳಿಸಿಕೊಳ್ಳಲಿ ಎಂಬ ವಾದ ಕೇಳಿಬಂದಿದೆ. ಜನರ ಸಮಸ್ಯೆಗೆ ಕರಗಿ ಬೆಂಡಾಗಿ ಹೋದವರಂತೆ ನಟಿಸಿದ ಬಿಜೆಪಿ ಸಂಸದರೊಬ್ಬರು ಸಾರ್ವಜನಿಕವಾಗಿ ಯುವತಿಯೊಬ್ಬಳ ಜೀನ್ಸ್ ಪ್ಯಾಂಟ್ ಬಿಚ್ಚುವಂತೆ ಪ್ರೇರೇಪಿಸಿದ್ದು ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ಅಷ್ಟಕ್ಕೂ ಆಗಿದ್ದಿಷ್ಟು. ಉತ್ತರಪ್ರದೇಶದ ಫರ್ದಾಬಾದ್ ಮೈದಾನ್ ಸಿಂಗ್ ಎಂಬ ಬಿಜೆಪಿ ಕಾರ್ಯಕರ್ತ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿಯ ಆಧಾರದ ಮೇಲೆ ಯುಪಿ ಪೊಲೀಸರು ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಮೈದಾನ್ ಸಿಂಗ್ ಮತ್ತವನ ಛೇಲಾಗಳು ಮನೆಯಲ್ಲಿರಲಿಲ್ಲ. ಮನೆಯಲ್ಲಿದ್ದಿದ್ದು ಅವನ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮಾತ್ರ. ಅವರೇ ಎದುರುನಿಂತು ಪೊಲೀಸರ ವಿರುದ್ಧ ಬೇಕಾಬಿಟ್ಟಿ ಹರಿಹಾಯ್ದಿದ್ದರು. `ಮಾಡೋದು ಹೇಸಿಗೆ ಕೆಲಸ, ನಮ್ಮ ಮೇಲೆ ಎಗರಿ ಬರುತ್ತೀರಾ’ ಎಂದು ಕೋಪಗೊಂಡ ಪೊಲೀಸರು ಅಲ್ಲಿದ್ದ ಹೆಣ್ಣುಮಕ್ಕಳ ಮೇಲೆಯೇ ಲಾಠಿಪ್ರಹಾರ ನಡೆಸಿ ಹೊರಟುಹೋದರು. ಈ ವಿಷಯವನ್ನು ತಿಳಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕೂಡಲೇ ಮೈದಾನ್ಸಿಂಗ್ ಮನೆಗೆ ಭೇಟಿಕೊಟ್ಟರು. ಬಿಜೆಪಿ ಕಾರ್ಯಕರ್ತರ ಮೇಲೆ ವಿಶೇಷ ಒಲವಿಟ್ಟುಕೊಂಡಿರುವ ಸಾಕ್ಷಿ ಮಹಾರಾಜ್ಗೆ ಮೈದಾನ್ ಸಿಂಗ್ ಮೇಲೆ ಇನ್ನಿಲ್ಲದ ಅಕ್ಕರೆಯಿದೆ. ಹಾಗೆ ಮೈದಾನ್ ಸಿಂಗ್ ಮನೆಗೆ ಭೇಟಿಕೊಟ್ಟ ಸಾಕ್ಷಿ ಮಹಾರಾಜ್ ಮುಂದೆ ಹೆಂಗಸರ ದಂಡು ಪೊಲೀಸರ ದೌರ್ಜನ್ಯದ ವಿರುದ್ಧ ವರದಿ ಒಪ್ಪಿಸತೊಡಗಿದ್ದಾರೆ. ಹೆಣ್ಣುಮಕ್ಕಳೆಂದೂ ನೋಡದೇ ಹಲ್ಲೆ ಮಾಡಿದ್ದಾರೆ ಎಂದು ಕಣ್ಣೀರಿಡತೊಡಗಿದ್ದಾರೆ. ಕೆಂಡಮಂಡಲರಾದ ಮಹಾರಾಜರು, `ಹೌದಾ.. ಗಾಯ ಎಲ್ಲಿಯಾಗಿದೆ ತೋರಿಸಿ’ ಎಂದಿದ್ದಾರೆ. ಆಗ ಮೈದಾನ್ ಸಿಂಗ್ ಅವರ ಹಿರಿಯ ಪುತ್ರಿ ತನ್ನ ಸೋದರಿಯ ತೊಡೆಯ ಭಾಗದಲ್ಲಿ ಗಾಯವಾಗಿದೆ ಎಂದಿದ್ದಾಳೆ. ಅಷ್ಟಕ್ಕೆ ತೃಪ್ತರಾಗದ ಮಹಾರಾಜ್, `ಎಲ್ಲಿ ತೋರಿಸಿ’ ಎಂದಿದ್ದಾರೆ. ಆಗ ಯುವತಿಯ ಜೀನ್ಸ್ ಪ್ಯಾಂಟನ್ನು ಬಿಚ್ಚುವ ಪ್ರಯತ್ನವಾಗುತ್ತದೆ. ಸಾರ್ವಜನಿಕರ ಎದುರು ಪ್ಯಾಂಟ್ ಬಿಚ್ಚಲು ಒಪ್ಪದ ಆ ಯುವತಿ, ಅರ್ಧಕ್ಕೆ ತಡೆದಿದ್ದಾಳೆ. ಮಹಾರಾಜರು ಅಷ್ಟಕ್ಕೆ ತಣಿದಿದ್ದಾರೆ.
ಜನರ ಸಮಸ್ಯೆಗೆ ಸ್ಪಂಧಿಸಲು ಹೊರಟ ಸಂಸದರೊಬ್ಬರು ಈ ರೀತಿಯಾಗಿ ಅನಾಗರಿಕನಂತೆ ವರ್ತಿಸಿದ್ದನ್ನು ಅಲ್ಲೇ ಇದ್ದವರೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಯುವತಿಯ ಪ್ಯಾಂಟ್ ಬಿಚ್ಚಿಸಲು ಹೋದ ಸಾಕ್ಷಿ ಮಹಾರಾಜ್ ಆ ಮೂಲಕ ಖುದ್ದಾಗಿ ತಾವೇ ಬೆತ್ತಲಾಗಿದ್ದಾರೆ. ಖಾವಿ ಧರಿಸಿ ವಿಶೇಷ ವ್ಯಕ್ತಿಯಂತೆ ಕಾಣುವ ಇವರ ಮನಸ್ಸಿನಲ್ಲಿರುವ ವಿಷಕಾರಿ ಚಿಂತನೆಗಳು ಆ ಮೂಲಕ ಬಟಾಬಯಲಾಗಿದೆ. ಆದರೆ ತಾನು ಮಾಡಿದ್ದು ತಪ್ಪೆಂಬುದನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಅವರಿಲ್ಲ. ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದರೇ ಪೊಲೀಸರನ್ನೇ ಗುಂಡಿಟ್ಟು ಕೊಲ್ಲುತ್ತೇನೆ ಎಂದು ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಸಾಕ್ಷಿ ಮಹಾರಾಜರ ಜೀನ್ಸ್ ಪುರಾಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲ, ವಿರೋಧಿ ರಾಜಕಾರಣಿಗಳಿಗೂ ಟೀಕೆಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಈ ಮನುಷ್ಯ ಇಲ್ಲಿಯವರೆಗೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಡುತ್ತಿದ್ದ. ಇದೀಗ ಹೆಣ್ಣುಮಕ್ಕಳ ಪ್ಯಾಂಟ್ಗೆ ಕೈ ಹಾಕುತ್ತಿದ್ದಾನೆ..!! ಇಂತಹ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂಬ ಆಕ್ರೋಶ ಕೇಳಿಬರುತ್ತಿದೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಸಾಕ್ಷಿ ಮಹಾರಾಜ್, `ಪೊಲೀಸರು ಇದೇ ರೀತಿ ಬಿಜೆಪಿ ಕಾರ್ಯಕರ್ತರನ್ನು ಮುಟ್ಟುತ್ತಾ ಹೋದರೇ, ಗುಂಡಿಟ್ಟು ಕೊಲ್ಲುತ್ತೇನೆ’ ಎಂದಿದ್ದಾರೆ. ಇದೀಗ ಅವರ ಮೇಲೆ ಪೊಲೀಸರ ವಿರುದ್ಧ ನೀಡಿದ ಹೇಳಿಕೆಯ ಆಧಾರದ ಮೇಲೆ ಕೇಸ್ ಹಾಕಲಾಗಿದೆ.
ಈಗ ಸಾಕ್ಷಿ ಮಹಾರಾಜ್ಗೆ ಸರಿಯಾಗಿ ಅರವತ್ತು ವರ್ಷ. ಅರಳುಮರಳಿನಿಂದ ಅವರು ಬೇಕಾಬಿಟ್ಟಿ ಮಾತನಾಡುತ್ತಿದ್ದರು ಎನ್ನಲಾಗುತ್ತಿತ್ತು. ಆದರೆ ಪ್ಯಾಂಟ್ಹರಕುತನಗಳು ಬಯಲಾಗಿರಲಿಲ್ಲ. ಈ ವಯಸ್ಸಿನಲ್ಲೂ ಅವರಿಗೆ ಚಪಲಗಳು ಇದೆಯಾ..? ಅಥವಾ ನಿಜಕ್ಕೂ ಗಾಯ ನೋಡುವುದಷ್ಟೇ ಅವರ ಉದ್ದೇಶವಾಗಿತ್ತಾ..? ಎಂಬ ಚರ್ಚೆಗಳೂ ಶುರುವಾಗಿದೆ. ಜನರ ಸಮಸ್ಯೆಯ ಬಗ್ಗೆ ಕಾಳಜಿ ಇರುವ ಮನುಷ್ಯನಿಗೆ ಗಾಯವಾಗಿದೆ ಎಂಬ ಅಂಶವಷ್ಟೇ ಸಾಕಲ್ಲವೇ ಸಿಡಿದುಬೀಳಲು..? ಗಾಯನೋಡಿ ಅದಕ್ಕೆ ಮುಲಾಮು ಸವರುವ ಅವರ ಆಸಕ್ತಿಯ ಹಿಂದೆ ಲಂಪಟತನವನ್ನಲ್ಲದೇ ಬೇರೇನು ಕಾಣಲು ಸಾಧ್ಯ..?ಇಷ್ಟು ಮಾತ್ರವಲ್ಲ. ಸಾಕ್ಷಿ ಮಹಾರಾಜ್ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರು ಕೆಡಿಸಿಕೊಂಡವರು. ಅವರ ಕೆಲವು ಹೇಳಿಕೆಗಳು ದೇಶದ ಕೋಮನ್ನೇ ಕದಡಿದ್ದವು. ಸಾಕ್ಷಿ ಮಹಾರಾಜ್ ಭಾಷಣಕ್ಕೆ ನಿಂತರೆ ಅಲ್ಲಿ ಕಿಡಿ ಹೊತ್ತಿಕೊಳ್ಳುತ್ತದೆ. ಮಾತೆತ್ತಿದರೇ ಅದು ವಿವಾದವಾಗುತ್ತದೆ.
ಮೂಲತಃ ಉತ್ತರಪ್ರದೇಶದ ಕಸಗಂಝ್ ಜಿಲ್ಲೆಯ ಸಾಕ್ಷಿದಮ್ನವರಾದ ಮಹಾರಾಜ್, ಹಿಂದುಳಿದ ವರ್ಗಕ್ಕೆ ಸೇರಿದವರು. 1991ರಲ್ಲಿ ಬಿಜೆಪಿ ಪಕ್ಷದ ಮೂಲಕ ರಾಜಕಾರಣಕ್ಕೆ ಬಂದಿದ್ದ ಇವರು ಉತ್ತರಪ್ರದೇಶದ ಜನಪ್ರಿಯ ನಾಯಕರಾಗಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಫರ್ರಖಾಬಾದ್ನಿಂದ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದರು. ತಮ್ಮ ತೀವ್ರಗಾಮಿ ಸಿದ್ಧಾಂತಗಳಿಂದಲೇ ಗೆದ್ದುಬರುತ್ತಿರುವ ಅವರು ಇತ್ತೀಚೆಗೆ ವಿವಾದಗಳನ್ನು ಮೈಮೇಲೆಳೆದುಕೊಳ್ಳುವದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
ದೇಶದಲ್ಲಿ ದೊಡ್ಡ ಸಮಸ್ಯೆಯಾಗಿರುವ, ಎರಡು ಕೋಮುಗಳ ನಡುವೆ ಜೀವಂತ ದ್ವೇಷಕ್ಕೆ ಕುರುಹಾಗಿರುವ ಅಯೋಧ್ಯೆ ವಿವಾದ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿಯಲ್ಲಿದೆ. ಎನ್ಡಿಎ ಅಧಿಕಾರಕ್ಕೆ ಬಂದರೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ ಎಂದೇ ಹೇಳಲಾಗಿತ್ತು. ಬಾಬ್ರಿ ಮಸೀದಿ ಕೆಡವಿದ ಜಾಗದಲ್ಲಿ ರಾಮಮಂದಿರ ನಿರ್ಮಿಸುವುದು ಅಷ್ಟು ಸುಲಭದ ವಿಚಾರವಲ್ಲವಾಗಿರುವುದರಿಂದ ಮೋದಿ ಸರ್ಕಾರ ಆಡಳಿತಕ್ಕೆ ಬಂದರೂ ರಾಮಮಂದಿರ ನಿರ್ಮಾಣದ ಪ್ರಸ್ತಾಪವನ್ನೂ ಮಾಡುತ್ತಿಲ್ಲ. ಸುಪ್ರಿಂ ಕೋಟರ್್ ಹೇಳಿರುವಂತೆ, ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಸಹ ಅಯೋಧ್ಯೆಯ ಆ ವಿವಾದಾತ್ಮಕ ಜಾಗದ ಬದಲು ಬೇರೆ ಬೇರೆ ಜಾಗದಲ್ಲಿ ಮಸೀದಿ, ಮಂದಿರ ನಿರ್ಮಿಸಿಕೊಳ್ಳಿ ಎಂದಿದ್ದರು. ಆದರೂ ಈ ವಿಚಾರದಲ್ಲಿ ಯಾವುದೇ ಅಡಿಗಲ್ಲು ನಿರ್ಮಿಸುವುದು ಅಪಾಯಕಾರಿ ಬೆಳವಣಿಗೆಯಾಗಿರುವುದರಿಂದ ಮೊದಲೇ ಹೇಳಿದಂತೆ ಬೂದಿಮುಚ್ಚಿದ ಕೆಂಡದ ಪರಿಸ್ಥಿತಿಯಿದೆ. ಹೀಗಿರುವಾಗ ಕೆಲ ಕಿಡಿಗೇಡಿ ಜನಪ್ರತಿನಿಧಿಗಳು ವಿವಾದಾತ್ಮಕ ಹೇಳಿಕೆಗಳನ್ನು ಹರಿಯಬಿಟ್ಟು ಅನಗತ್ಯ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಇದೇ ಸಾಕ್ಷಿ ಮಹಾರಾಜ್, `ಅದ್ಯಾರೇ ಎದುರು ನಿಲ್ಲಲಿ, ಎನ್ಡಿಎ ತನ್ನ ಅಧಿಕಾರದವಧಿಯಲ್ಲಿ ರಾಮಮಂದಿರ ನಿರ್ಮಿಸುತ್ತದೆ. ಇದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಬುದ್ಧಿಭ್ರಮಣೆಯಾಗಿದೆ. ಸೋನಿಯಾ ನಿಜವಾಗಲೂ ರಾಜೀವ್ ಗಾಂಧಿಯ ಉತ್ತಮ ಪತ್ನಿಯೇ ಆದರೆ ರಾಮಮಂದಿರ ನಿರ್ಮಾಣಕ್ಕೆ ಸಹಕರಿಸಲಿ’ ಎಂದಿದ್ದರು. ಕೋರ್ಟ್ ನಲ್ಲಿ ಕೇಸ್ ಇರುವಾಗ ಇವೆಲ್ಲಾ ಆಗಿಹೋಗುವ ಮಾತಲ್ಲ ಎಂಬ ವ್ಯವಧಾನವೂ ಅವರಿಗಿಲ್ಲ.
ಸೋನಿಯಾ ಗಾಂಧಿಯನ್ನು ಕೆಣಕಿದ ನಂತರ ಸಾಕ್ಷಿ ಮಹಾರಾಜ್ ಕಣ್ಣುಹಾಕಿದ್ದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯ ಮೇಲೆ. ನೇಪಾಳದಲ್ಲಿ ಕಳೆದ ವರ್ಷ ಸಂಭವಿಸಿದ ಭೂಕಂಪದಿಂದ ಆ ದೇಶದಲ್ಲಿ ತಲ್ಲಣ ಸೃಷ್ಟಿಸಿತ್ತು. ಅಪಾರ ಸಾವು, ನೋವುಗಳು ಸಂಭವಿಸಿದ್ದವು. ನಮ್ಮ ದೇಶವೂ ಸೇರಿದಂತೆ ಇಡೀ ವಿಶ್ವವೇ ನೇಪಾಳಕ್ಕೆ ನೆರವಾಗಿತ್ತು. ಈ ಹೊತ್ತಿಗೆ ಸಾಕ್ಷಿ ಮಹಾರಾಜ್, `ನೇಪಾಳದಲ್ಲಿ ನಡೆದ ಭೂಕಂಪಕ್ಕೆ ರಾಹುಲ್ ಗಾಂಧಿ ಕಾರಣ’ ಎಂದು ಹೇಳಿಕೆ ಕೊಟ್ಟರು. `ಗೋಮಾಂಸ ತಿನ್ನುವ ರಾಹುಲ್ ಗಾಂಧಿ, ನೇಪಾಳದ ಕೇದರನಾಥ ದೇಗುಲವನ್ನು ಪ್ರವೇಶಿಸಿದ್ದೇ ಭೂಕಂಪಕ್ಕೆ ಕಾರಣ’ ಎಂದರು. ಇಲ್ಲಿಗೆ ಅವರ ಗೋಮಾಂಸ ಭಕ್ಷಣೆಯ ವಿರುದ್ಧದ ಆಕ್ರೋಶ ನಿಲ್ಲಲಿಲ್ಲ. ದೇಶದಲ್ಲಿ ಗೋಮಾಂಸ ನಿಷೇಧವಾಗಬೇಕು. ಇಲ್ಲವೆಂದರೇ `ನಾನು ಗೋವಿಗಾಗಿ ಸಾಯಲು ಸಿದ್ಧ, ಗೋವಿಗಾಗಿ ಸಾಯಿಸಲು ಸಿದ್ದ’ ಎಂದು ಕಿಡಿಕಾರುವ ಹೇಳಿಕೆ ಕೊಟ್ಟರು. ಇವತ್ತಿಗೆ ದೇಶದ ಕೆಲವು ರಾಜ್ಯಗಳಲ್ಲಿ ಗೋಮಾಂಸ ನಿಷೇಧವಾಗಿದೆ. ಅದರ ಪರಿಣಾಮವನ್ನು ಖುದ್ದಾಗಿ ದೇಶವೇ ಎದುರಿಸುತ್ತಿದೆ. ಕಸಾಯಿಖಾನೆಗೆ ರವಾನೆಯಾಗುತ್ತಿದ್ದ ದನಗಳು ವ್ಯಥಾ ಸಾಯುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಆ ವಿಚಾರ ಒತ್ತಟ್ಟಿಗಿರಲಿ.
ಆಮೇಲೆ `ದೇಶದಲ್ಲಿರುವ ಮದರಸಗಳನ್ನು ನಿಷೇಧಿಸಬೇಕು, ಏಕೆಂದರೇ ಅಲ್ಲಿ ಭಯೋತ್ಪಾಧನೆಯ ಪಾಠ ಹೇಳಿಕೊಡಲಾಗುತ್ತದೆ’ ಅಂತ ಧಾರ್ಮಿಕ ಕಿಡಿಯನ್ನು ಹಚ್ಚಿದ್ದರು. `ಮದರಸಗಳಿಂದಲೇ ಭಯೋತ್ಪಾಧಕರ ಜನನವಾಗುತ್ತಿದೆ. ಅಲ್ಲಿ ದೇಶದ್ರೋಹಿ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಮದರಸಗಳನ್ನು ನಿಷೇಧಿಸುವುದರಿಂದ ದೇಶದಲ್ಲಿ ಭಯೋತ್ಪಾಧನೆಯನ್ನು ನಿವಾರಿಸಬಹುದು’ ಎಂಬ ಬಾಲೀಶ ಹೇಳಿಕೆ ಕೊಟ್ಟ ಅವರಲ್ಲೇ ಆ ಬಗ್ಗೆ ಸೂಕ್ತವಾದ ಸಮರ್ಥನೆಗಳಿರಲಿಲ್ಲ. ಇಷ್ಟಕ್ಕೆ ಅವರ ಮುಸಲ್ಮಾನ ವಿರೋಧಿ ಹೇಳಿಕೆ ನಿಲ್ಲಲಿಲ್ಲ. `ಮುಸ್ಲೀಮರಿಗೆ ಐದು, ಹತ್ತು ಮಕ್ಕಳಿರುತ್ತವೆ. ದೇಶದಲ್ಲಿ ಅವರ ಸಂಖ್ಯೆ ಬೆಳೆಯುತ್ತಿದೆ. ಹೀಗೇ ಮುಂದುವರಿದರೇ ಹಿಂದೂಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಹಾಗಾಗಿ ಹಿಂದೂ ಹೆಣ್ಣುಮಕ್ಕಳು ಕನಿಷ್ಠ ಪಕ್ಷ ನಾಲ್ಕು ಮಕ್ಕಳನ್ನಾದರೂ ಹೆರಬೇಕು’ ಎಂದರು. ಆದರೆ ಇದಕ್ಕೆ ಬೇರೆ ಸಮುದಾಯದಲ್ಲಿ ಮಾತ್ರವಲ್ಲ, ಅವರೇ ಪ್ರತಿನಿಧಿಸುವ ಸಂಘಟನೆಯ ಮುಖ್ಯಸ್ತ ಮೋಹನ್ ಭಾಗವತ್ ತಿರುಗೇಟು ನೀಡಿದ್ದರು. `ಹಿಂದೂ ಹೆಣ್ಣುಮಕ್ಕಳು ಮಕ್ಕಳು ಹೆರುವ ಯಂತ್ರವಲ್ಲ’ ಎಂದ ಅವರ ಉತ್ತರದಲ್ಲಿ ಪ್ರಶ್ನೆ ಹುಡುಕುವ ದೈರ್ಯ ಮಾಡಲಿಲ್ಲ ಸಾಕ್ಷಿ ಮಹಾರಾಜ್. ಇದಾದ ಮೇಲೆ `ನೀವು ಮುಸಲ್ಮಾನರ ವಿರೋಧಿ’ ಎಂದು ಸಾಕ್ಷಿ ಮಹಾರಾಜ್ ಕಡೆ ಬೊಟ್ಟು ತೋರಿಸಿದಾಗ, `ನಾನೂ ಒಬ್ಬ ಮುಸ್ಲಿಂ, ಪ್ರವಾದಿ ಮೊಹಮ್ಮದ್ ಮಹಾನ್ ಯೋಗಿ’ ಎಂದರು. ಆ ಮೂಲಕ ಹೇಳಿಕೆಗಳನ್ನು ಮಗುಚಿ ಹಾಕುವುದರಲ್ಲಿ ತಾನೂ ನಿಸ್ಸೀಮ ಎಂದು ತೋರಿಸಿಕೊಂಡರು.
ಈ ಎಲುಬಿಲ್ಲದ ನಾಲಿಗೆಯ ಮೇಲೆ ಪಾರುಪತ್ಯ ಸಾಧಿಸಿರುವ ಸಾಕ್ಷಿ ಮಹಾರಾಜ್ ಅವರ ಹೇಳಿಕೆಗಳನ್ನು ವಿರೋಧಿಸಿದವರ ವಿರುದ್ಧ ಕೆಂಡಮಂಡಲವಾದರು. `ನೀವು ಬದಲಾಗಿ, ಇಲ್ಲವೆಂದರೇ ಸಾರ್ವಜನಿಕರೇ ಒದೆಯುತ್ತಾರೆ’ ಎಂದರು. ಅವರ ಪ್ರಕಾರವಾಗಿಯೇ ಹೇಳುವುದಾದರೇ, ಬದಲಾಗುವುದೆಂದರೇ ಏನು..?. ಶಾಂತಿಯನ್ನು ಕದಡಿ ಅಶಾಂತಿಯನ್ನು ಸೃಷ್ಟಿಸುವುದಾ..? ಹೆಣ್ಣುಮಕ್ಕಳ ಜೀನ್ಸ್ ಪ್ಯಾಂಟ್ ಕಡೆ ಗಮನ ಕೊಡುವುದಾ..? ಇಲ್ಲವೇ ಮಕ್ಕಳನ್ನು ಹೆರುವುದಾ..?. ಇಲ್ಲಿ ಸಾರ್ವಜನಿಕರು ಯಾರಿಗೆ ಒದೆಯಬಹುದು ಎಂಬುದನ್ನು ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ದೇಶದಲ್ಲಿ ಒಂದೆರಡು ತಿಂಗಳ ಹಿಂದೆ ಅಸಹಿಷ್ಣುತೆ ಚರ್ಚೆಯಾಗತೊಡಗಿತ್ತು. ಈ ವಿಚಾರದಲ್ಲಿ ಅಮೀರ್ ಖಾನ್ ಅನಗತ್ಯ ವಿವಾದ ಮಾಡಿಕೊಂಡರು. ಇದೇ ಮಹಾರಾಜರು, `ಅಮೀರ್ ದೇಶಬಿಟ್ಟು ಹೋಗಲಿ, ದೇಶದ ಜನಸಂಖ್ಯೆ ಕಡಿಮೆಯಾಗುತ್ತದೆ. ಅವರು ಇರಾನ್ಗೆ ಹೋಗುತ್ತಾರಾ..? ತಾಲಿಬಾನ್ಗೆ ಹೋಗುತ್ತಾರಾ..?’ ಎಂದು ಕೇಳಿದ್ದರು. `ಬಿಹಾರದಲ್ಲಿ ಪರಿವಾರದ ನಿತೀಶ್ ಅಸಹಿಷ್ಣುತೆಯನ್ನೇ ದಾಳ ಮಾಡಿಕೊಂಡು ಗೆದ್ದರು. ಇಲ್ಲವೆಂದರೇ ಮೋದಿಯ ಅಲೆಗೆ ಕೊಚ್ಚಿಕೊಂಡು ಹೋಗುತ್ತಿದ್ದರು’ ಎಂದ ಅವರ ಮಾತಿನಲ್ಲಿ ಚರ್ಚಿಸುವ ಅಂಶಗಳಿರಲಿಲ್ಲ. ಆದರೆ ಯಾಕೂಬ್ ಮೆಮೊನ್ನನ್ನು ಸಮರ್ಥಿಸಿಕೊಂಡ ಓವೈಸಿ ಪಾಕಿಸ್ತಾನಕ್ಕೆ ಹೋಗಲಿ ಎಂದ ಇವರ ಮಾತಿಗೆ ಬೆಂಬಲ ಸಿಕ್ಕಿತ್ತು.
ಆಮೇಲೆ `ಮೋದಿ ನಿಜಕ್ಕೂ ದೇವಧೂತ, ರಾಹುಲ್ ದೊಡ್ಡ ಹುಚ್ಚ’ ಅಂತ ಹೇಳಿಕೆ ಕೊಟ್ಟರು. `ಮೋದಿಗಿರುವ ಚಾರ್ಮ್ ನ ಎಳ್ಳಷ್ಟು ಇಲ್ಲದ ರಾಹುಲ್, ಅವರ ಬಗ್ಗೆ ಮಾತನಾಡುತ್ತಾರೆ ಅಂದರೇ ಅವರಿಗಿಂತ ದೊಡ್ಡ ಹುಚ್ಚ ಇನ್ನೊಬ್ಬನಿಲ್ಲ. ಮೋದಿ ಈ ದೇಶದ ದೇವಧೂತ’ ಎಂದ ಇದೇ ಮಹಾರಾಜ, `ಹಿಂದೂಗಳ ಬೇಡಿಕೆ ಈಡೇರಿಸದಿದ್ದರೇ- ಮೋದಿಯ ಸರ್ಕಾರವನ್ನು ಬೀಳಿಸುತ್ತೇನೆ’ ಎಂದರು. ಒಂದು ಕಡೆ ಹೊಗಳುವ ಇದೇ ಆಕೃತಿ, ಮತ್ತೊಂದು ಕಡೆ ಹೆದರಿಸುವ ಪ್ರಯತ್ನವನ್ನೂ ಮಾಡುತ್ತದೆ. ಸಾಕ್ಷಿ ಮಹಾರಾಜರ ಪ್ರತಿ ಹೇಳಿಕೆಗಳಿಗೂ ಖಂಡನೀಯ, ತಮಾಷೆಯ, ಗಂಭೀರವಾದ ಪ್ರತಿಕ್ರಿಯೆಗಳು ಸಿಕ್ಕಿವೆ. ಹಿಂದೂ ಹೆಣ್ಣುಮಕ್ಕಳು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕೆಂದಾಗ, `ಇದೇ ಮಹಾರಾಜರಂತೆ ಸದಾ ವಿವಾದಾತ್ಮಕ, ಬೆಂಕಿಯಿಡುವ ಹೇಳಿಕೆ ಕೊಡುವ ಸಾಧ್ವಿ ಪ್ರಾಚಿ ಹಾಗೂ ಸಾಕ್ಷಿ ಮಹಾರಾಜ್ ಇಬ್ಬರು ಮದ್ವೆಯಾಗಿ ಇಷ್ಟಬಂದಷ್ಟು ಮಕ್ಕಳನ್ನು ಹೆರಲಿ’ ಎಂದು ಕಾಂಗ್ರೆಸ್ ಕುಟುಕಿತ್ತು. ಆದರೆ ಆ ಪ್ರಯತ್ನವಾದ ಸುದ್ದಿಯೇ ಬಂದಿಲ್ಲ. ಇಲ್ಲಿಯವರೆಗೆ ಎಲ್ಲವೂ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಮಹಾರಾಜರ ಕಣ್ಣು ಹೆಣ್ಣುಮಕ್ಕಳ ಪ್ಯಾಂಟ್ನತ್ತ ಹೊರಳಿದೆ. ಉತ್ತರಪ್ರದೇಶದ ಮೈದಾನ್ಸಿಂಗ್ ಮನೆಯಲ್ಲಿ, ಆತನ ಮಗಳ ಜೊತೆ ಸಾಮಾನ್ಯಜ್ಞಾನವಿಲ್ಲದಂತೆ ವರ್ತಿಸಿದ್ದಾರೆ. ಹೆಣ್ಣುಮಕ್ಕಳನ್ನು ದೇವರಿಗೆ ಹೋಲಿಕೆ ಮಾಡುವ, ಯಕಃಶ್ಚಿತ್ ಗೋವನ್ನೂ ಹೆಣ್ಣಿಗೆ ಹೋಲಿಸುವ ಬಿಜೆಪಿ ಪಕ್ಷದಲ್ಲೇ ಮೇಲಿಂದ ಮೇಲೆ ಸಾಕ್ಷಿಮಹಾರಾಜರಂತವರ ಕಚ್ಚೆಹರಕುತನಗಳು ಬಯಲಾಗುತ್ತಿದೆ. ಶಿಸ್ತಿನ ಪಕ್ಷದ ಪ್ರತಿನಿಧಿಗಳಲ್ಲಿ ಕೆಲವರ ಕಚ್ಛೆಗಳೇ ನಿಲ್ಲುತ್ತಿಲ್ಲ. ಸಂಭಾವಿತರಂತಿರುವವರ ಕಣ್ಣುಗಳು ಜೀನ್ಸ್ ಪ್ಯಾಂಟ್ನತ್ತ ಹೊರಳತೊಡಗಿವೆ. ಇದೇನಾ ಅಚ್ಛೇದಿನ್..? ನರೇಂದ್ರ ಮೋದಿಯವರೇ ಉತ್ತರಿಸಬೇಕು.
POPULAR STORIES :
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie