ಈಗೇನಿದ್ದರೂ ಡಿಜಿಟಲ್ ಯುಗ.. ಯಾವುದೇ ಮಾಹಿತಿ ಬೇಕಾದರೂ ತುದಿ ಬೆರಳಲ್ಲೇ ಸಿಗಲಿದೆ. ಸರ್ಕಾರ ನೌಕರಿ, ಹೊಸ ಯೋಜನೆಗಳ ಮಾಹಿತಿ, ಹೀಗೆ ಯಾವುದೇ ರೀತಿಯ ಮಾಹಿತಿಯೂ ಸುಲಭವಾಗಿ ಎಲ್ಲರನ್ನೂ ತಲುಪುತ್ತಿದೆ. ಇದೀಗ ಕೃಷಿಕರಿಗೂ ಕೂಡ ಸರ್ಕಾರಿ ಯೋಜನೆಗಳು ಮೊಬೈಲ್ ಮೂಲಕವೇ ತಲುಪುತ್ತಿವೆ.
ಕೃಷಿ ಕ್ಷೇತ್ರ ಸಹ ಡಿಜಟಲೀಕರಣದತ್ತ ಹೆಜ್ಜೆ ಇಡುತ್ತಿದೆ. ಕೃಷಿಕರ ಸಹಾಯಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಮೊಬೈಲ್ ಮೂಲಕವೇ ತಲುಪುವಂತೆ ಮಾಡುತ್ತಿದ್ದಾರೆ. ಇದೀಗ ಬೆಳೆ ಸಮೀಕ್ಷೆಯನ್ನು ಸಹ ರೈತರೇ ಮಾಡುವಂತೆ ಸರ್ಕಾರ ಆ್ಯಪ್ ಅಭಿವೃದ್ದಿ ಮಾಡಿದೆ.
ಹೌದು, ಇನ್ಮುಂದೆ ರೈತರು ಬೆಳೆ ಸಮೀಕ್ಷೆಗಾಗಿ ಅಧಿಕಾರಿಗಳು ಬರೋವರೆಗೂ ಕಾಯಬೇಕಿಲ್ಲ. ತಮ್ಮ ಜಮೀನಿನಲ್ಲೇ ತಾವು ಬೆಳೆದ ಬೆಳೆಯನ್ನು ದಾಖಲಿಸಬಹುದು. ಛಾಯಾಚಿತ್ರ ಸಹಿತ “ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಮೂಲಕ ಸ್ವಯಂ ದಾಖಲಿಸುವ ವಿನೂತನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಫೋಟೋ ಸಹಿತ ದಾಖಲಿಸಬಹುದು.
ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖ್ಯಿಕ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು, ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲೂಕು ಆಡಳಿತ ಪರಿಶೀಲಿಸಲಿದೆ.
ರೈತರು ಸ್ಮಾರ್ಟಫೋನ್ ಉಪಯೋಗಿಸಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನ್ನು ಗೂಗಲ್‍ನ “ಪ್ಲೇ ಸ್ಟೋರ್ ದಿಂದ ಡೌನಲೋಡ್ ಮಾಡಿಕೊಳ್ಳಬೇಕು ಅಥವಾ ರೈತರ ಪರವಾಗಿ ಅವರ ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ, ಕೃಷಿ ಇಲಾಖೆ ವತಿಯಿಂದ ನಿಯೋಜನೆಗೊಂಡ, ಮಾಹಿತಿ ತಂತ್ರಜ್ಞಾನದ ತಿಳುವಳಿಕೆ ಇರುವ ತಮ್ಮದೆ ಗ್ರಾಮದ ಯುವಕರ ಸಹಾಯದೂಂದಿಗೆ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಪಡೆಯುವ ಮೂಲಕ ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸಬಹುದಾಗಿದೆ.
ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ದಾಖಲಿಸದೇ ಇದ್ದ ಪಕ್ಷದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜನೆಗೊಂಡ ಬೆಳೆ ಸಮೀಕ್ಷಕರು (ಖಾಸಗಿ ನಿವಾಸಿ-ಪಿ.ಆರ್) ತಮ್ಮ ಹೊಲಗಳಿಗೆ ಭೇಟಿ ನೀಡಿ ಮೊಬೈಲ್ ಆ್ಯಪ್ ಬಳಸಿ ಬೆಳೆ ಮಾಹಿತಿ ಸಂಗ್ರಹಿಸಿ ಅಪಲೋಡ್ ಮಾಡುತ್ತಾರೆ.
ರೈತರು ಕೂಡಲೇ ಕಾರ್ಯಪ್ರವೃತ್ತರಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ಹಂಗಾಮುವಾರು ಮೊಬೈಲ್ ಮೂಲಕ ಸ್ವಯಂ ದಾಖಲಿಸಬೇಕು. ಬೆಳೆಗಳ ವಿವರಗಳನ್ನು ದಾಖಲಿಸಲು ವಿಫಲರಾದರೆ ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ರೈತರಿಗೆ ತಾಂತ್ರಿಕ ಅಡಚಣೆ ಉಂಟಾಗಬಹುದಾಗಿದೆ.
ಬೆಳೆ ಸಮೀಕ್ಷೆ ಉದ್ದೇಶ: ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹವಾಗುವ ಮಾಹಿತಿಯನ್ನು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಎನ್ ಅಡಿ ಆರ್ ಎಫ್ ಮತ್ತು ಎಸ್ ಅಡಿ ಆರ್ ಎಫ್ ಅಡಿಯಲ್ಲಿ ಸಹಾಯಧನ ನೀಡಲು, ವರದಿ ತಯಾರಿಸಲು ಬೆಳೆ ವಿಮೆ ಯೋಜನೆಯಡಿ ನೊಂದಾಯಿತ ರೈತರ ತಾಕು ಹಂತದ ಬೆಳೆ ಪರಿಶೀಲಿಸಲು, ಕನಿಷ್ಠ ಬೆಂಬಲ ಬೆಲೆ ನಿಗದಿ ಮತ್ತು ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗುತ್ತದೆ. ಸರ್ಕಾರದ ಯೋಜನೆಗಳಲ್ಲಿ ಬಳಸಲು ತೀರ್ಮಾನಿಸಲಾಗಿದೆ. ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ (ಪಹಣಿಯಲ್ಲಿ)
ಸಾಂಖ್ಯಿಕ ಇಲಾಖೆಯ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ವಿಸ್ತೀರ್ಣ ಲೆಕ್ಕಾಚಾರ ಮತ್ತು ಎಣಿಕೆ ಕಾರ್ಯದಲ್ಲಿ ಈ ಮಾಹಿತಿಯನ್ನು ಬಳಸಲು ಅನುಮತಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಈ ಕಾರ್ಯಕ್ಕಾಗಿ ನಿಯೋಜನೆಗೊಂಡ ತಮ್ಮದೇ ಗ್ರಾಮದ ಖಾಸಗಿ ಸಮೀಕ್ಷಾಗಾರರನ್ನು (ಪಿ.ಆರ್) ಸಂಪರ್ಕಿಸಬಹುದಾಗಿದೆ. ಮುಂಗಾರು ಹಂಗಾಮಿನ ಬೆಳೆ ಸಮಿಕ್ಷೆ ವಿವರಗಳನ್ನು ಆಗಸ್ಟ್ 10 ರಿಂದ 24 ರೊಳಗೆ ಅಪ್ ಲೋಡ್ ಮಾಡಿ ದಾಖಲಿಸಲು ಕಾಲಾವಧಿಯನ್ನು ನಿಗಧಿಪಡಿಸಲಾಗಿದೆ.