ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾ ‘ಡಿಯರ್ ಸತ್ಯ’. ಈಗಾಗಲೇ ಶೇ. 90ರಷ್ಟು ಪೂರ್ಣಗೊಂಡಿರುವ ಈ ಚಿತ್ರದ ಟೀಸರ್ ಸ್ವಾತಂತ್ರ್ಯ ದಿನಾಚರಣೆಯಂದು ರಿಲೀಸ್ ಆಗಿದೆ.
ಡಿಯರ್ ಸತ್ಯ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವ ಡಾ. ಶಿವರಾಜ್ ಕುಮಾರ್ ʻಟೀಸರ್ ಅದ್ಭುತವಾಗಿ ಬಂದಿದೆ. ಸಂತೋಷ್ ಈ ಚಿತ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣುತ್ತಿದ್ದಾರೆ. ಹೊಸಬರು ಚಿತ್ರರಂಗದಲ್ಲಿ ಗೆಲ್ಲಬೇಕು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿʼ ಎಂದು ಹಾರೈಸಿದ್ದಾರೆ.
ತೀಶ್ ವೆಂಕಟೇಶ್, ಬಿ.ಎಸ್. ಶ್ರೀನಿವಾಸ್, ಗಣೇಶ್ ಪಾಪಣ್ಣ ಮತ್ತು ಅಜಯ್ ಅಪ್ಪರೂಪ್ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಆಕ್ಷನ್ ರಿವೇಂಜ್, ಥ್ರಿಲ್ಲರ್ ಚಿತ್ರ ‘ಡಿಯರ್ ಸತ್ಯ’.
ಡಿಯರ್ ಸತ್ಯ ಕ್ಲಾಸಿಕ್ ಕಮರ್ಷಿಯಲ್ ಚಿತ್ರವಾಗಲಿದೆ. ಈಗಾಗಲೇ 90% ಭಾಗ ಶೂಟಿಂಗ್ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರೋ ಪ್ಲಾನ್ ನಲ್ಲಿದೆ ಚಿತ್ರತಂಡ. ಕೊರೋನಾದಿಂದ ಎದುರಾಗಿರುವ ಚಿತ್ರಮಂದಿರಗಳ ಸಮಸ್ಯೆ ಬಗೆಹರಿದರೆ ಥಿಯೇಟರ್ನಲ್ಲಿ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ನೇರವಾಗಿ ಓಟಿಟಿಯಲ್ಲೇ ರಿಲೀಸ್ ಮಾಡಬೇಕಾಗುತ್ತದೆ ಎನ್ನುವುದು ಚಿತ್ರತಂಡದ ಮಾತು.
ನೂರು ಜನ್ಮಕೂ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದವರು ಆರ್ಯನ್ ಸಂತೋಷ್. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೇಗ್ ಬಂದ ಎಂಬೆರಡು ರಿಯಾಲಿಟಿ ಶೋಗಳ ನಿರೂಪಕರಾಗಿ, ಬಿಗ್ ಬಾಸ್ ಸೀಸನ್-2 ನ ಸ್ಪರ್ಧಿಯಾಗಿದ್ದವರು ಆರ್ಯನ್ ಸಂತೋಷ್. ಈಗ ‘ಡಿಯರ್ ಸತ್ಯ’ನಾಗಿ ಹೊಸ ಲುಕ್ ನಲ್ಲಿ ಮತ್ತೆ ಹಾಜರಾಗಿದ್ದಾರೆ. ಈ ಹಿಂದೆ ನಟಿಸಿದ ಸಿನಿಮಾಗಳಿಗಿಂತ ತುಂಬಾನೇ ವಿಭಿನ್ನವಾದ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ಈ ಚಿತ್ರದಲ್ಲಿ ಸತ್ಯ ಮತ್ತು ರಿವೇಂಜ್ ಎಂಬ ಎರಡು ಶೇಡ್ ಗಳಿವೆ.
ಪೊಲೀಸ್ ಪಾತ್ರಕ್ಕೆ ಅತುಲ್ ಕುಲಕರ್ಣಿ ಅವರು ಬರಬೇಕಿತ್ತು.ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆ ಪಾತ್ರವನ್ನು ನಮ್ಮ ಕನ್ನಡದವರೇ ಆದ ಅರವಿಂದ್ ರಾವ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಹಾಗೆಯೇ ನಾಯಕಿಯ ಪಾತ್ರಕ್ಕೆ ತಾನ್ಯ ಹೋಪ್ ಅವರನ್ನು ಅಪ್ರೋಚ್ ಮಾಡಿಲಾಗಿತ್ತು, ಆ ಜಾಗಕ್ಕೆ ಹೊಸಬರಾದ ಅರ್ಚನಾ ಕೊಟ್ಟಿಗೆ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ತಾಯಿ ಮತ್ತು ಮಗನ ಬಾಂಧವ್ಯ ಕಾಡುವಂತೆ ಮೂಡಿಬಂದಿದ್ದು, ಅರುಣಾ ಬಾಲರಾಜ್ ತಾಯಿಯಾಗಿ ನಟಿಸಿದ್ದಾರೆ. ಅಂದಹಾಗೆ ತಾಯಿ ಮಗನ ಕಾಂಬಿನೇಷನ್ ಅಷ್ಟು ಅಚ್ಚುಕಟ್ಟಾಗಿ ಮೂಡಿಬಂದಿದೆ. ಐದು ಹಾಡುಗಳಿಗೆ ಶ್ರೀಧರ್ ವಿ ಸಂಭ್ರಮ್ ಅದ್ಭುತವಾದ ಟ್ಯೂನ್ ನೀಡಿದ್ದಾರೆ.
ಬೆಂಗಳೂರೆಂಬ ಮಹಾನಗರದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಹುಡುಗನ ಕಥೆಯೇ ಡಿಯರ್ ಸತ್ಯ. ಡಿಯರ್ ಸತ್ಯ ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ. ಅಖಾಡ ದಿಂದ ಆರಂಭಿಸಿ, ಹೃದಯದಲಿ ಇದೇನಿದು, ಜಿಗರ್ ಥಂಡ, ಆ ದೃಶ್ಯ, ತ್ರಾಟಕ ಚಿತ್ರಗಳನ್ನು ನೀಡಿದ್ದ ಶಿವಗಣೇಶ್ ‘ಡಿಯರ್ ಸತ್ಯ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿನೋದ್ ಭಾರತಿ ‘ಡಿಯರ್ ಸತ್ಯ’ ಚಿತ್ರದ ಛಾಯಾಗ್ರಹರಾಗಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಸುರೇಶ್ ಆರ್ಮುಗಂ ಸಂಕಲನ ಮಾಡಿದ್ದು, ಜರಂಗಿ ಮೋಹನ್, ಕಲೈ ಮತ್ತು ನೃತ್ಯ ಸಂಯೋಜನೆ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಭಾರ್ಗವಿ ವಿಖ್ಯಾತಿ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.