ಧೋನಿ ನಿಭಾಯಿಸಿದ್ದ ಜವಬ್ದಾರಿ ಕನ್ನಡಿಗ ರಾಹುಲ್ ಹೆಗಲಿಗೆ..!
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಪ್ರತಿಯೊಬ್ಬರ ವೃತ್ತಿ ಜೀವನಕ್ಕೆ ಆರಂಭವಿದ್ದಂತೆ ನಿವೃತ್ತಿ ಕೂಡ ಸಹಜ. ಹಾಗೆಯೇ ಧೋನಿ ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದು, ನಾಯಕನಾಗಿದ್ದು, ಸಾಧಿಸಿದ್ದು ದಾಖಲೆ ಬರೆದಿದ್ದು ಎಲ್ಲವೂ ಇತಿಹಾಸ! ಈಗ ಧೋನಿ ನಿವೃತ್ತಿಯನ್ನು ಒಪ್ಪಿಕೊಂಡು ತಂಡ ಮುಂದೆ ಸಾಗಲೇಬೇಕಾಗಿರುವ ಸಮಯ..! ಧೋನಿಗೆ ಧೋನಿಯೇ ಸಾಟಿ.. ಅವರ ಸ್ಥಾನಕ್ಕೆ ಯಾರನ್ನೂ ಕಲ್ಪಿಸಿಕೊಳ್ಳಲು ಆಗಲ್ಲ. ಆದರೆ ಅವರು ನಿಭಾಯಿಸಿದ್ದ ಜವಬ್ದಾರಿ ನಿಭಾಯಿಸಲೇ ಬೇಕಿದೆ ಅಲ್ಲವೇ? ಹಾಗೆಯೇ ಆ ಒಂದು ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸ ಬಲ್ಲ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಅನ್ನೋ ಚರ್ಚೆ ಶುರುವಾಗಿದೆ!
ಹೌದು, ಧೋನಿ ನಿಭಾಯಿಸಿದ್ದ ಹೊಣೆಗಾರಿಕೆಯೊಂದಕ್ಕೆ ಸೂಕ್ತ ಆಟಗಾರನಾಗಿ ಕೆ.ಎಲ್ ರಾಹುಲ್ ಹೆಸರು ಕೇಳಿಬರುತ್ತಿದೆ. ಆ ಜವಬ್ದಾರಿ ವಿಕೆಟ್ ಕೀಪಿಂಗ್…! ಪೂರ್ಣಪ್ರಮಾಣದ ಕೀಪರ್ ಆಗಿಯೇ ಗುರುತಿಸಿಕೊಂಡಿರುವ ಅನುಭವಿ ಆಟಗಾರ ದಿನೇಶ್ ಕಾರ್ತಿಕ್, ಯುವ ಆಟಗಾರರಾದ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಅವರಿಗಿಂತಲೂ ಟೀಮ್ ಇಂಡಿಯಾದ ಕಾಯಂ ವಿಕೆಟ್ ಕೀಪರ್ ಆಗಿ ಕನ್ನಡಿಗ ಕೆ.ಎಲ್ ರಾಹುಲ್ ಮುಂದುವರೆಯಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಾಜಿ ಕ್ರಿಕೆಟಿಗರು ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ.
ಹೌದು, ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಕೂಡಿಕೊಂಡಿದ್ದು ಬ್ಯಾಟ್ಸ್ಮನ್ ಆಗಿ. ಆದರೆ, ಅನಿವಾರ್ಯ ಸಂದರ್ಭಗಳಲ್ಲಿ ಕೀಪರ್ ಆಗಿಯೂ ಮೋಡಿ ಮೋಡಿದರು. ಆರಂಭದಿಂದ ಬ್ಯಾಟಿಂಗ್ ಜೊತೆ ಕೀಪಿಂಗ್ ಮಾಡಿದ್ದು ಟೀಮ್ ಇಂಡಿಯಾದಲ್ಲಿ ಹೊಸ ಹೊಣೆ ನಿಭಾಯಿಸಲು ಸಾಧ್ಯವಾಗಿದೆ.
2019ರ ವಿಶ್ವಕಪ್ ಸಂದರ್ಭದಲ್ಲಿ ರಿಷಭ್ ಪಂತ್ ಗೆ ಅವಕಾಶ ನೀಡಲಾಯಿತು. ಮಹೇಂದ್ರ ಸಿಂಗ್ ಧೋನಿ ಬಳಿಕ ಟೀಮ್ ಇಂಡಿಯಾದ ಕಾಯಂ ವಿಕೆಟ್ ಕೀಪರ್ ಎಂದು ಅವರನ್ನು ಪರಿಗಣಿಸಲಾಗಿತ್ತು. ಆದರೆ, ಯುವ ಆಟಗಾರ ಪಂತ್ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಿದರು. ಅದೇ ಧೋನಿ ಮತ್ತು ಪಂತ್ ಅನುಪಸ್ಥಿತಿಯಲ್ಲಿ ಕನ್ನಡಿಗ ರಾಹುಲ್ ಗೆ ಹೆಚ್ಚುವರಿಯಾಗಿ ವಿಕೆಟ್ ಕೀಪಿಂಗ್ ಹೊಣೆಯನ್ನು ನೀಡಲಾಯಿತು. ರಾಹುಲ್ ಆ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.
ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ, ತಂಡಕ್ಕೆ ಆಧಾರವಾಗಿ ನಿಲ್ಲ ಬಲ್ಲ ಆಟಗಾರ ರಾಹುಲ್ ಕೀಪಿಂಗ್ ಮೂಲಕವೂ ತಂಡಕ್ಕೆ ನೆರವಾಗ ಬಲ್ಲರು ಎಂಬುದು ಪ್ರೂವ್ ಆಗಿರುವುದರಿಂದ ಕಾಯಂ ವಿಕೆಟ್ ಕೀಪರ್ ಆಗಿ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ವೃದ್ಧಿಮಾನ್ ಸಹಾ ಟೆಸ್ಟ್ನಲ್ಲಿ ಕೀಪರ್ ಆಗಿದ್ದರೆ, ಏಕದಿನ ಮತ್ತು ಟಿ20ಯಲ್ಲಿ ರಾಹುಲ್ ಆ ಹೊಣೆ ನಿಭಾಯಿಸುವ ಸಾಧ್ಯತೆ ಹೆಚ್ಚಿದೆ. ಪಂತ್ ಗೆ ಅಮ್ಮಮ್ಮ ಅಂದ್ರೆ ಇನ್ನೆರಡು – ಮೂರು ಅವಕಾಶ ಕೊಡಬಹುದಷ್ಟೇ..!
ಮಾಜಿ ವಿಕೆಟ್ ಕೀಪರ್ , ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್, ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಗಳಾದ ನಯನ್ ಮೋಂಗಿಯಾ, ದೀಪದಾಸ್ ಗುಪ್ತಾ ಕೂಡ ರಾಹುಲ್ ಸೀಮಿತ ಓವರ್ಗಳ ಫಾರ್ಮೆಟ್ ಗಳಲ್ಲಿ ( ಏಕದಿನ ಮತ್ತು ಟಿ20) ವಿಕೆಟ್ ಕೀಪರ್ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.