ಲಾಕ್‌ಡೌನ್ ಬಳಿಕ ಬಿಡುಗಡೆಯಾದ ಸಿನೆಮಾಗಳಿಗಿಂತ ವಿಭಿನ್ನವಾದ ಜಾನರ್ ಸಿನೆಮಾ ಇದು. ಹಾಗಂತ ಇದೇ ರೀತಿಯ ಚಿತ್ರ ಎಂದು ಕೆಟಗರಿ ಮಾಡಿ ಕೂರಿಸಲಾಗದ ವೈವಿಧ್ಯತೆ ಚಿತ್ರದಲ್ಲಿದೆ. ಈ ಹಿಂದೆ ಸಿನೆಮಾಗಳಲ್ಲಿ ನೋಡಿ ಸವಕಲೆನಿಸಿದ ದೃಶ್ಯಗಳು ಇಲ್ಲಿರುವುದಿಲ್ಲ ಎಂಬ ಭರವಸೆ ನೀಡಬಲ್ಲೆ. ನಾಯಕ ನಿರೂಪ್ ಅವರು ಕೂಡ ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಹಾಗಂತ ಇದು ತುಂಬ ಪ್ರಯೋಗಾತ್ಮಕ ಚಿತ್ರ ಎಂದುಕೊಳ್ಳಬಾರದು.
ಇಲ್ಲಿಯೂ ಕತೆಗೆ ಹೊಂದಿಕೊಂಡಂತೆ ಫೈಟ್ ಸನ್ನಿವೇಶಗಳು ಬಂದು ಹೋಗುತ್ತವೆ. ಖಳ ನಟ ಪಿ.ರವಿಶಂಕರ್ ಅವರು ಚಿತ್ರದಲ್ಲಿ ಒಂದು ವಿಭಿನ್ನ ಕ್ಯಾರಕ್ಟರ್ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಮನಸ್ಸಿನಿಂದ ಪರಿಶ್ರಮ ಹಾಕಿ ಮಾಡುವ ಕೆಲಸ ಖಂಡಿತವಾಗಿ ಎಲ್ಲರನ್ನು ತಲುಪುತ್ತದೆ ಎನ್ನುವುದು ನನ್ನ ನಂಬಿಕೆ. ಹಾಗಾಗಿ ಚಿತ್ರ ಖಂಡಿತವಾಗಿ ವೀಕ್ಷಕರಿಗೆ ಇಷ್ಟವಾಗಬಹುದೆನ್ನುವ ಭರವಸೆ ಇದೆ.ಮೊದಲನೆಯದಾಗಿ ಕತೆ ಕೇಳಿದ ನಾಯಕ ನಿರೂಪ್ ಚಿತ್ರವನ್ನು ಒಪ್ಪಿಕೊಂಡಿದ್ದು ಖುಷಿ ನೀಡಿತು. ಈ ಕತೆಯನ್ನು ನಾನು ಸುದೀಪ್ ಅವರಿಗೂ ಹೇಳಿದ್ದೆ. ಅವರು ಕೂಡ ಕತೆ ಮೆಚ್ಚಿಕೊಂಡಿದ್ದು, ಅವರ ಮೂಲಕವೇ ಜಾಕ್ ಮಂಜು ಅವರಂತಹ ಪ್ರತಿಷ್ಠಿತ ನಿರ್ಮಾಪಕರ ಪರಿಚಯವಾಯಿತು. ನಾಯಕಿಯರಾದ ಅಮೃತಾ ಅಯ್ಯಂಗಾರ್, ಸಂಜನಾ ಆನಂದ್ ಸೇರಿದಂತೆ ಒಟ್ಟು ಚಿತ್ರ ತಂಡ ನನಗೆ ಬೆನ್ನೆಲುಬಾಗಿ ನಿಂತಿದೆ. ಇಲ್ಲಿ ಮುಖ್ಯವಾಗಿ ನನ್ನ ನಿರ್ದೇಶಕರ ತಂಡ ಮತ್ತು ಸಂಕಲನಕಾರರ ಬಗ್ಗೆ ಪ್ರಸ್ತಾಪಿಸಲೇಬೇಕು.
ಬರವಣಿಗೆ ರೂಪದಲ್ಲಿದ್ದ ನನ್ನ ಕತೆಗೆ ಸಿನೆಮಾ ಕತೆಯ ರೂಪ ನೀಡುವಲ್ಲಿ ವೀರೇಶ್ ಪಾತ್ರ ಪ್ರಮುಖ. ಯೋಗರಾಜ್ ಭಟ್ ಮತ್ತು ಕವಿರಾಜ್ ಅವರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಅವರು ನೀಡಿರುವ ಸಂಗೀತ ಚಿತ್ರಕ್ಕೊಂದು ಶಕ್ತಿಯಾಗಿದೆ.