`ಪಂಚತಂತ್ರ'ಗಳ ಇಂಟರೆಸ್ಟಿಂಗ್ ವಿಷ್ಯ..!?

Date:

raaa

ಕೇರಳದಲ್ಲಿ ಪೋ ಮೋನೆ ಚಾಂಡಿ, ತಮಿಳುನಾಡಿನಲ್ಲಿ `ಅಮ್ಮ.. ಬೇಕಮ್ಮ, ಅಪ್ಪಾ ಬೇಡಪ್ಪಾ’, ಪಶ್ಚಿಮ ಬಂಗಾಳದಲ್ಲಿ `ಅಕ್ಕಾ ಹಂಡೆಡ್ ಪರ್ಸೆಂಟ್ ಪಕ್ಕಾ’, ಅಸ್ಸಾಂನಲ್ಲಿ `ಕಮಲ ಪತಾಕೆ’, ಪುದುಚೇರಿಯಲ್ಲಿ `ರಂಗಸ್ವಾಮಿ.. ಸಾಕು ನಡೀರಿ ಸ್ವಾಮಿ’-ಇವೆಲ್ಲವೂ ಮತದಾರ ಕೊಟ್ಟ ನಿಚ್ಚಳ ತೀರ್ಪು.

ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚೇರಿಯಲ್ಲಿ ಮತದಾರ ನಿಚ್ಚಳ ತೀರ್ಪನಿತ್ತಿದ್ದಾನೆ. ಮತದಾನಕ್ಕೂ ಮುನ್ನ ಆಕ್ಸಿಸ್ ಮೈ ಇಂಡಿಯಾ, ನ್ಯೂಸ್ ನೇಷನ್, ಇಂಡಿಯಾ ಟುಡೇ, ಸೀವೋಟರ್- ಇತರೆ ಮಾಧ್ಯಮಗಳು ನಡೆಸಿದ ಸಮೀಕ್ಷೆಯ ರಿಪೋರ್ಟ್ ಗೆ, ಇದೇ ಮಾಧ್ಯಮಗಳು ಮತಗಟ್ಟೆಯ ಸಮೀಕ್ಷೆಯಲ್ಲಿ ನೀಡಿದ ಸಮೀಕ್ಷೆಯ ವರದಿಗೂ ಅಜಗಜಾಂತರ ವ್ಯತ್ಯಾಸವಿತ್ತು. `ವಾರದ ಹಿಂದಿನ ಮತದಾರ, ಮತದಾನ ಮಾಡುವ ಕ್ಷಣದಲ್ಲಿ ಬದಲಾಗಿದ್ದಾನೆ. ತಮಿಳುನಾಡಿನಲ್ಲಿ ಅಮ್ಮನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಭಾವಿಸಿದರೇ ಅಲ್ಲಿ ಅಪ್ಪ ಕಿರೀಟ ಹಾಕುವುದು ನಿಶ್ಚಿತ. ಕೇರಳದಲ್ಲಿ ಹಳೇ ತಲೆಮಾರಿನ ಆಡಳಿತ ವೈಕರಿಯಲ್ಲಿ ಲಾಗಾಪಲ್ಟಿ ಹೊಡೆಯುತ್ತಿರುವ ಉಮ್ಮನ್ ಚಾಂಡಿಯ ಸೋಲಾರ್ ನಂತ ಭ್ರಷ್ಟಾಚಾರದಿಂದ ಕೇರಳದ ಜನರು ಬೇಸತ್ತು ಎಲ್ಡಿಎಫ್ ಕಡೆ ವಾಲಿದ್ದಾರೆ, ಅಸ್ಸಾಂನಲ್ಲಿ ಕೋಮುಗಲಭೆ, ಬೊಡೋ ಉಗ್ರರ ಕೃಪಾಕಟಾಕ್ಷವನ್ನು ದಕ್ಕಿಸಿಕೊಂಡಿರುವ ಬಿಜೆಪಿ ಕಾಂಗ್ರೆಸ್ ಅಸಮರ್ಥತೆಯನ್ನು ಎನ್ಕ್ಯಾಶ್ ಮಾಡಿಕೊಂಡಿದೆ, ಪುದುಚೆರಿಯಲ್ಲಿ ಯಾಕೋ ರಂಗಸ್ವಾಮಿ ಮೇಲೆ ಮತದಾರನಿಗೆ ಒಲವಿಲ್ಲ’ ಎಂಬ ಸಮೀಕ್ಷೆಯಲ್ಲಿ ಅಮ್ಮನ ವಿಚಾರ ಮಾತ್ರ ಸುಳ್ಳಾಗಿದೆ. ಉಳಿದಂತೆ ಉಳಿದವರು ಕಂಡಂತೆ ಎಲ್ಲವೂ ನಡೆದಿದೆ.

ಮೊದಲು ಅಮ್ಮನ ವಿಚಾರಕ್ಕೆ ಬಂದ್ರೆ, ಜಯಲಲಿತಾ ಸೋಲುತ್ತಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದು ಅಚ್ಚರಿಮೂಡಿಸಿತ್ತು. ಅಮ್ಮನನ್ನು ಸಾಯುವಂತೆ ಆರಾಧಿಸುವ ಮತದಾರರು ಯೂಟರ್ನ್ ತೆಗೆದುಕೊಂಡು ಅಪ್ಪನಿಗೆ ಆತುಕೊಂಡಿದ್ದಾರೆ ಎಂಬುದನ್ನು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಏಕೆಂದರೇ ಪ್ರವಾಹದ ಸಂದರ್ಭ ಹೊರತುಪಡಿಸಿದರೇ ಮಿಕ್ಕ ಹಲವು ವಿಚಾರಗಳಲ್ಲಿ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ ಅಂತ ಖುದ್ದಾಗಿ ಅಮ್ಮನೇ ಭಾವಿಸಿದ್ದರು. ಆದರೆ ಜನರಿಗೆ ಜಯಲಲಿತಾ ಅವರ ಭ್ರಷ್ಟಾಚಾರ, ಉಢಾಫೆ ರಾಜಕಾರಣ ಇಷ್ಟವಾಗಿಲ್ಲವಾ..? ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಭ್ರಷ್ಟಾಚಾರದಲ್ಲಿ ಈಯಮ್ಮ ಜೈಲಿಗೂ ಹೋಗಿಬಂದಿದ್ದರು. ಪ್ರವಾಹದಲ್ಲಿ ತಮಿಳುನಾಡು ತತ್ತರಿಸಿದಾಗ ನಮಗೆ ಕರ್ನಾಟಕ, ಕೇರಳದ ಪರಿಹಾರ ಬೇಡ ಅಂತ ಉಢಾಫೆಯಿಂದ ಮಾತನಾಡಿದ್ದರು. ಅವರ ಇಂತಹ ಹಲವಾರು ಅಹಂಕಾರದ ನಡುವಳಿಕೆಯನ್ನು ಮತದಾರ ಮನಸ್ಸಿನಲ್ಲಿಟ್ಟುಕೊಂಡಿದ್ದಾನೆ ಎನ್ನಲಾಯಿತು. ಆದರೆ ತಮಿಳುನಾಡಿನಲ್ಲಿ ಜಯಲಲಿತಾ ಅರ್ಥಾತ್ ಅಮ್ಮನದ್ದೇ ಈ ಬಾರಿಯ ಚುನಾವಣೆಯಲ್ಲಿ ಪಾರುಪತ್ಯ. ಕಳೆದ ಬಾರಿ ನೂರ ಐವತ್ತು ಸ್ಥಾನಗಳನ್ನು ಪಡೆದುಕೊಂಡಿದ್ದ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಈ ಬಾರಿ ನೂರ ಮೂವತ್ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ. ಸ್ಟಾಲಿನ್ ನಾಯಕತ್ವ ಡಿಎಂಕೆಗೆ ಹೆಚ್ಚು ಸ್ಥಾನಗಳನ್ನು ತಂದುಕೊಟ್ಟಿತೇ ವಿನಃ ಗೆಲುವು ತಂದುಕೊಡಲಿಲ್ಲ. ಡಿಎಂಕೆ ಜೊತೆ ಸಂಬಂಧ ಕುದುರಿಸಿಕೊಂಡಿದ್ದ ಕಾಂಗ್ರೆಸ್ ಉಸಿರಾಟ ನಿಂತಿದೆ. ಬಿಜೆಪಿ ಯಥಾಪ್ರಕಾರ ಖಾತೆ ತೆರೆದಿಲ್ಲ. ಅಮ್ಮನ ಮ್ಯಾಜಿಕ್ ಮುಂದೆ ಮಿಕ್ಕವರ ಆಟ ನಡೆಯಲಿಲ್ಲ.

ತಮಿಳುನಾಡಿನ ರಾಜಕಾರಣ ದೇಶದ ಮಿಕ್ಕ ರಾಜ್ಯಗಳ ರಾಜಕಾರಣಗಳಿಗಿಂತ ವಿಶಿಷ್ಟವಾದುದು. ಆ ರಾಜ್ಯದ ಸಂಸ್ಕೃತಿಯಂತೆ ಅಲ್ಲಿನ ಜನರ ಮನಃಸ್ಥಿತಿಯೂ ಅರ್ಥವಾಗದಷ್ಟು ನಿಗೂಢ, ಅರ್ಥ ಮಾಡಿಕೊಂಡಷ್ಟೇ ಮುಗ್ಧವಾಗಿದೆ. ಅಲ್ಲಿ ಸೆಂಟಿಮೆಂಟ್ಗೆ ಬೆಲೆಯಿದೆ. ಹುಚ್ಚು ಅಭಿಮಾನವಿದೆ. ತಮಿಳುನಾಡು ಹಿಂದೆಂದೂ ಮಾಡದಷ್ಟು ಸಾಲ ಮಾಡಿಕೊಂಡಿದೆ. ಆ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಹಾಲಿ ಮುಖ್ಯಮಂತ್ರಿ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿಬಂದಿದ್ದಾರೆ. ಅವರು ಅಕ್ರಮವಾಗಿ ಸಾವಿರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಇದ್ಯಾವುದನ್ನೂ ಅಲ್ಲಿನ ಮತದಾರ ಯೋಚಿಸುವುದಿಲ್ಲ. ಅವರಿಗೆ ಅಮ್ಮನ ಹೆಸರಿನ ಮಾವಿನಹಣ್ಣು ಹೆಚ್ಚು ರುಚಿಯೆನಿಸುತ್ತದೆ. ಜಯಲಲಿತಾರನ್ನು ಅಮ್ಮ ಎಂದು ಕರೆದ ಯಾವ ಪುತ್ರ ತಾನೇ ತಾಯಿಯನ್ನು ಸೋಲಿಸುತ್ತಾನೆ. ತಮಿಳುನಾಡಿಗರ ಈ ಸೂಕ್ಷ್ಮ ಮನಸ್ಸನ್ನು ಪರಿಪೂರ್ಣವಾಗಿ ಎನ್ ಕ್ಯಾಶ್ ಮಾಡಿಕೊಂಡಿದ್ದು ಜಯಲಲಿತಾ ಮಾತ್ರವಲ್ಲ. ಆ ರಾಜ್ಯವನ್ನು ಆಳಿದವರೆಲ್ಲ ತಮಿಳುನಾಡಿಗರ ಮನಸ್ಸನ್ನು ಪಲುಕುವುದರಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ತಮಿಳುನಾಡಿನ 234 ಸ್ಥಾನಗಳಿಗೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅಮ್ಮನ ಎಐಎಡಿಎಂಕೆ ಕನಿಷ್ಠ ನೂರಮೂವತ್ತು ಸ್ಥಾನಗಳನ್ನು ಗೆಲ್ಲಲಿದೆ ಎಂದು ಮತದಾನಕ್ಕೂ ಮುನ್ನ ಇಂಡಿಯಾ ಟಿವಿ ಸಿವೋಟರ್ ಸಮೀಕ್ಷೆ ಹೇಳಿತ್ತು. ಕಳೆದ ಬಾರಿ ಮೂವತ್ತೊಂದು ಸ್ಥಾನಗಳನ್ನು ಗೆದ್ದುಕೊಂಡಿದ್ದ ಕರುಣಾನಿಧಿಯವರ ಡಿಎಂಕೆ-ಕಾಂಗ್ರೆಸ್ ಅಲಯನ್ಸ್ 80 ಚಿಲ್ಲರೇ ಸ್ಥಾನಗಳನ್ನು ಗೆದ್ದುಕೊಳ್ಳಬಹುದು. ಉಳಿದವರು ಅಂದರೇ ಡಿಎಂಡಿಕೆ ಪ್ಲಸ್, ಎಡಪಕ್ಷಗಳು, ಇತರರು- ಮೂವತ್ತರಿಂದ ಮೂವತ್ತೈದು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದು ಸುಳ್ಳಾಗಿದೆ. ತಮಿಳುನಾಡಿನಲ್ಲಿ ಇನ್ನೊಂದು ಅವಧಿಗೆ ಜಯಲಲಿತಾ ಅವರದ್ದೆ ಅಬ್ಬರ ಎನ್ನುವುದಷ್ಟೇ ವಾಸ್ತವ.

ಕೇರಳವನ್ನು ದೇವರ ನಾಡು ಎಂದು ಕರೆಯಲಾಗುತ್ತದೆ. ಸೊಮಾಲಿಯಾವನ್ನು ದೆವ್ವದ ನಾಡು ಅರ್ಥಾತ್ ಘೋಸ್ಟ್ ಸಿಟಿ ಎಂದು ಕರೆಯಲಾಗುತ್ತದೆ. ಇವೆರಡಕ್ಕೂ ಹೋಲಿಕೆ ಮಾಡಿ ತಮಾಷೆಯಾಗಿದ್ದು ನಮ್ಮ ಪ್ರಧಾನಿ ನರೇಂದ್ರಮೋದಿ. ತಮ್ಮ ಮಾತಿನಿಂದಲೇ ಮಹಲ್ ಕಟ್ಟುತ್ತಿದ್ದ ಮೋದಿ ಅದೇ ಮಾತಿನ ವರಸೆಯಿಂದ ಕಟ್ಟುತ್ತಿದ್ದ ಮಹಲನ್ನು ನೆಲಕ್ಕೆ ಕೆಡವಿಕೊಂಡಿದ್ದರು. ಕೇರಳವನ್ನು ಗೋಸ್ಟ್ ಸಿಟಿ ಸೊಮಾಲಿಯಾಕ್ಕೆ ಹೋಲಿಸಿ `ಪೋ ಮೋನೆ ಮೋದಿ’ ಎನಿಸಿಕೊಂಡರು. ಅದಕ್ಕೆ ತಕ್ಕಂತೆ ಮೋದಿ ಮತ್ತು ಎನ್.ಡಿ.ಎ.ಗೆ ದೊಡ್ಡ ಕುಂಬಳಕಾಯಿಯನ್ನು ಅಲ್ಲಿನ ಮತದಾರ ಹೊರಿಸಿ ಕಳಿಸಿದ್ದಾನೆ. ತಮಾಷೆಯೆಂದರೇ ಐದು ವಿಧಾನಸಭೆ ಚುನಾವಣೆಯಲ್ಲಿ ಮೋದಿಯ ಅಲೆ ಕೆರೆ ನೀರಾಗಿದೆ, ಭೋರ್ಗರೆಯಬೇಕಾದ ಕಡೆ ಬರಗಾಲ ವ್ಯಾಪಿಸಿದೆ. ಅದೇನೇ ಹರಸಾಹಸಪಟ್ರೂ ಅವರಿಗಿದ್ದ ಮೊದಲ ಆರುತಿಂಗಳ ಚಾರ್ಮ್ ಪ್ರದರ್ಷಿಸಲಿಕ್ಕಾಗುತ್ತಿಲ್ಲ. ದೆಹಲಿ, ಬಿಹಾರ, ಈಗ ನಾಲ್ಕು ಕಡೆ ಬಿದ್ದ ಏಟನ್ನು ಅವರು ತಾಳಿಕೊಳ್ಳಬೇಕಾಗಿದೆ. ಅಸ್ಸಾಂನಲ್ಲಿ ಅದರದ್ದೇ ಆದ ಕೆಲವು ಕಾರಣಗಳಿಂದ ಅಲ್ಲಿ ಬಿಜೆಪಿ ಅಜೆಂಡಾ ಈಡೇರಿದೆ. ಆದರೆ ಮಿಕ್ಕ ನಾಲ್ಕು ಕಡೆ ತಿಪ್ಪರಲಾಗಹಾಕಿದರೂ ನೋಯೂಸ್.

ತಮಿಳುನಾಡಿನಂತೆ ಕೇರಳದಲ್ಲೂ ಇರುವುದು ಎರಡು ಪಕ್ಷಗಳ ಒಕ್ಕೂಟಗಳ ನಡುವಿನ ಸಮರ. ಕಾಂಗ್ರೆಸ್ ನೇತೃತ್ವದ ಯುಡಿಎಫ್, ಎಡಪಂಥೀಯ ನಿಲುವಿರುವವರ ಒಕ್ಕೂಟ ಎಲ್ಡಿಎಫ್ ನಡುವೆ ನೇರಾ ಹಣಾಹಣಿಯಿತ್ತು. ಉಮ್ಮನ್ ಚಾಂಡಿ ಸಿಎಂ ಆಗುವ ಮುನ್ನ ಕೇರಳದಲ್ಲಿ ಎಲ್ಡಿಎಫ್ ಆಡಳಿತ ನಡೆಸಿತ್ತು. ಅದಕ್ಕೂ ಮುನ್ನ ಉಮ್ಮನ್ ಚಾಂಡಿಯವರೇ ಮುಖ್ಯಮಂತ್ರಿಯಾಗಿದ್ದರು. ಇನ್ನು ಇವರಿಬ್ಬರಿಗೆ ಸ್ವಲ್ಪಮಟ್ಟಿಗೆ ಕಮ್ಯುನಿಸ್ಟ್ ಪಾರ್ಟಿ ಪೈಪೋಟಿ ನೀಡುತ್ತದೆ. ಇವರನ್ನು ಹೊರತುಪಡಿಸಿ- ಮಿಕ್ಕವರು ಇಲ್ಲಿ ಉಸಿರಾಡುವುದು ಕೂಡ ಕಷ್ಟ. ಅವರಲ್ಲಿ ಮೋದಿ ನಾಯಕತ್ವದ ಬಿಜೆಪಿಯೂ ಒಂದು. ಅತ್ತ ಕೇರಳದಲ್ಲಿ ಉಮ್ಮನ್ ಚಾಂಡಿ ಪರ ಮತಯಾಚಿಸುವ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಬಿಜೆಪಿ ನನ್ನನ್ನು ಪದೇಪದೇ ಇಟಲಿಯವಳು ಎನ್ನುತ್ತಿದೆ. ನಾನು ಇಟಲಿಯಲ್ಲಿ ಹುಟ್ಟಿದ್ದು ನಿಜ, ಆದರೆ ನಾನು ಭಾರತಕ್ಕೆ ಬಂದು 48 ವರ್ಷಗಳಾಗಿದೆ. ನಾನೂ ಭಾರತೀಯಳು. ನಾನು ಸಾಯುವುದು ಕೂಡ ಇಲ್ಲೆ ಎಂದರು. ಆದರೆ ಸೋನಿಯಾ ಸೆಂಟಿಮೆಂಟ್ನ ಪೂರ್ಣಲಾಭ ಪಡೆದುಕೊಳ್ಳುವ ಅರ್ಹತೆಯನ್ನು ಉಮ್ಮನ್ ಚಾಂಡಿ ಉಳಿಸಿಕೊಂಡಿಲ್ಲ. ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ಕೇರಳದಲ್ಲಿ ಈ ಬಾರಿಯೂ ಯುಡಿಎಫ್ ಆಡಳಿತಕ್ಕೆ ಬರಬೇಕು. ಆದರೆ ಮತಗಟ್ಟೆ ಸಮೀಕ್ಷೆಯಲ್ಲಿ ಅಚ್ಯುತಾನಂದನ್ ನೇತೃತ್ವದ ಎಲ್ಡಿಎಫ್ ಕೈಮೇಲಾಗುವ ಸಾಧ್ಯತೆ ಹೆಚ್ಚಿತ್ತು. ಈ ಪೈಕಿ ಮತಗಟ್ಟೆ ಸಮೀಕ್ಷೆ ನಿಜವಾಗಿದೆ. ಅಲ್ಲೀಗ ಪೋ ಮೋನೆ ಚಾಂಡಿ ಅಷ್ಟೇ..!

ಕೇರಳದಲ್ಲಿ ಒಂದೊಂದು ಟರ್ಮ್ ಗೆ ಒಂದೊಂದು ಸರ್ಕಾರ ಆಡಳಿತ ನಡೆಸುತ್ತದೆ. ಅಲ್ಲಿನ ಜನರು ಒಬ್ಬರಿಗೆ ಎರಡೆರಡು ಟಮರ್್ ಮಣೆ ಹಾಕುವುದು ಕಡಿಮೆ. ಅದು ಅಲ್ಲಿನ ಹಳೆಯ ಸಂಪ್ರದಾಯ. ಆದರೆ ಈ ಬಾರಿ ಉಮ್ಮನ್ ಚಾಂಡಿ ಸರ್ಕಾರ ಸೋಲಲು ಅದರದ್ದೇ ಆದ ಹಲವು ಕಾರಣಗಳಿದ್ದವು. ಚಾಂಡಿ ಸರ್ಕಾರ ಬಹುಕೋಟಿ ಸೋಲಾರ್ ಹಗರಣದಲ್ಲಿ ಸಿಲುಕಿತ್ತು. ಖುದ್ದಾಗಿ ಉಮ್ಮನ್ ಚಾಂಡಿಯವರೇ ಹಗರಣದಲ್ಲಿ ಭಾಗಿಯಾಗಿದ್ದರು. ಸೋಲಾರ್ ಹಗರಣದಲ್ಲಿ ಪ್ರಮುಖ ಆರೋಪಿಗಳಾದ ಸರಿತಾ ನಾಯರ್, `ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರೂಪಾಯಿ ಲಂಚ ನೀಡಿದ್ದೇವೆ, ಲಂಚದ ಮೊತ್ತ ಪಾವತಿಸಿದ ಮೇಲೆ ಬಹುಕೋಟಿ ಸೋಲಾರ್ ಯೋಜನೆಯನ್ನು ವಹಿಸಲಾಯಿತು’ ಎಂದು ಕೋರ್ಟ್ ನಲ್ಲಿ ಹೇಳಿದ್ದರು. ಮತ್ತೊಬ್ಬ ಆರೋಪಿ ಬಿಜು ರಾಧಾಕೃಷ್ಣನ್, `ಉಮ್ಮನ್ ಚಾಂಡಿ ಅವರು ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ದರು’ ಎಂದು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ತ್ರಿಶೂರಿನ ವಿಜಿಲೆನ್ಸ್ ಕೋರ್ಟ್, ಉಮ್ಮನ್ ಚಾಂಡಿ ಹಾಗೂ ಇಂಧನ ಸಚಿವ ಮೊಹಮ್ಮದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶಿಸಿತ್ತು. ಆಮೇಲೆ ಉಮ್ಮನ್ ಚಾಂಡಿಯವರ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಉಮ್ಮನ್ ಚಾಂಡಿ ಪದಚ್ಯುತಿಗೆ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ ಸೇರಿ ವಿಪಕ್ಷಗಳು ಎಡಬಿಡದೆ ಪ್ರತಿಭಟನೆ, ಹಿಂಸಾಚಾರ ನಡೆಸಿದ್ದವು.

ಇದರ ಜೊತೆಗೆ ಪಟಾಕಿ ದುರಂತಕ್ಕೆ ಕಾರಣವಾದ ಅಂಶಗಳು, ಅದರಲ್ಲಿ ಸರ್ಕಾರದ ಪಾತ್ರ, ಶ್ರೀಜಾ ರೇಪ್ ಅಂಡ್ ಮರ್ಡರ್, ಅರಾಜಕತೆ, ಭ್ರಷ್ಟಾಚಾರ- ಎಲ್ಲವೂ ಯುಡಿಎಫ್ಗೆ ಹಿನ್ನಡೆಯನ್ನುಂಟು ಮಾಡಿದೆ. ಆದರೆ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಉಮ್ಮನ್ ಚಾಂಡಿ ಕೈಮೇಲಾಗಿತ್ತು. ಆದರೆ ಮತಗಟ್ಟೆ ಸಮೀಕ್ಷೆಯಲ್ಲಿ ಎಲ್ಡಿಎಫ್ ಕೈ ಮೇಲಾಗುವುದು ಸ್ಪಷ್ಟವಾಗಿತ್ತು. ಸಧ್ಯಕ್ಕೆ ಅಚ್ಯುತಾನಂದನ್ ನೇತೃತ್ವದ ಎಲ್ಡಿಎಫ್ ಅಲ್ಲಿ ಅಧಿಕಾರಕ್ಕೇರಿದೆ. 140 ಸ್ಥಾನಗಳ ಪೈಕಿ ಕಳೆದ ಬಾರಿ 67 ಸ್ಥಾನಗಳನ್ನು ಪಡೆದಿದ್ದ ಯುಡಿಎಫ್ ಈ ಬಾರಿ ನಲವತ್ತೇಳು ಸ್ಥಾನಗಳನ್ನು ಪಡೆದಿದೆ. ಕಳೆದ ಬಾರಿ ಯುಡಿಎಫ್ಗಿಂತಲೂ ಅಧಿಕ 73 ಸ್ಥಾನಗಳನ್ನು ಪಡೆದರೂ ಎಲ್ಡಿಎಫ್ಗೆ ಸರ್ಕಾರ ರಚಿಸಲಾಗಲಿಲ್ಲ. ಅಲಯನ್ಸ್ನಿಂದ ಎಲ್.ಡಿ.ಎಫ್.ಗೆ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಎಲ್.ಡಿ.ಎಫ್ ಸ್ವಸಾಮರ್ಥ್ಯದಿಂದ 91 ಸ್ಥಾನಗಳನ್ನು ಗೆದುಕೊಂಡಿದೆ. ಬಿಜೆಪಿ ಒಂದು ಸ್ಥಾನ ಪಡೆದರೇ ಉಳಿದ ಮೂರು ಸ್ಥಾನಗಳನ್ನು ದೇವೆಗೌಡರ ಜೆಡಿಎಸ್ ಗೆದ್ದುಕೊಂಡಿದೆ. ಗೌಡರು ಈಗಾಗಲೇ ಎಲ್.ಡಿ.ಎಫ್ ಗೆ ಬೆಂಬಲ ಸೂಚಿಸಿದ್ದಾರೆ. ಕೇರಳದ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಆ ಪೈಕಿ ಮೂರರಲ್ಲಿ ಗೆದಿದ್ದು, ಕೇರಳದಲ್ಲಿ ಮೋದಿ ಅಲೆಗಿಂತ ಗೌಡರ ಅಲೆ ಜೋರಾಗಿದೆ ಎಂಬುದು ಖಚಿತವಾಗಿದೆ

ಇನ್ನು ಪಶ್ಚಿಮಬಂಗಾಳದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಬುಡಸಮೇತ ನಿರ್ಮೂಲನೆ ಮಾಡಿದ್ದು ಮಮತಾ ಬ್ಯಾನರ್ಜಿ. ಅಲ್ಲಿನ ಜನರು ಅವರನ್ನು ಪ್ರೀತಿಯಿಂದ ದೀದಿ ಎಂದೇ ಕರೆಯುತ್ತಾರೆ. ಚುನಾವಣಾಪೂರ್ವ, ಚುನಾವಣಾ ನಂತರದ ಸಮೀಕ್ಷೆಗಳಲ್ಲೂ ಮಮತಾ ದೀದಿಯದ್ದೇ ಮೇಲುಗೈ ಎಂಬ ವರದಿ ಬಂದಿತ್ತು. ಅದೀಗ ನಿಜವಾಗಿದೆ. ದೀದಿಯ ನೆರಳನ್ನು ಮುಟುವುದಕ್ಕಾಗದೇ ಬುದ್ಧದೇವ ಭಟ್ಟಾಚಾರ್ಯರಂತ ಪ್ರಭಾವಿಗಳು ಹೈರಾಣಾಗಿದ್ದಾರೆ. ಕಳೆದ ಬಾರಿ ಮಮತಾ ಅವರ ಟಿಎಂಸಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಈ ಭಾರಿ ಎಡಪಕ್ಷಗಳ ಜೊತೆ ಮದುವೆ ಮಾಡಿಕೊಂಡಿದ್ದು ಬಂಜೇತನದಿಂದ ನರಳುವಂತಾಗಿದೆ.

ಕಳೆದ ಬಾರಿ ಟಿಎಂಸಿ ಜೊತೆ ಸೇರಿ 230 ಸ್ಥಾನಗಳನ್ನು ಗೆದ್ದಿತ್ತು. ಟಿಎಂಸಿ 188 ಸ್ಥಾನಗಳನ್ನು ಗೆದ್ದುಕೊಂಡರೇ, ಕಾಂಗ್ರೆಸ್ 39 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಕಮ್ಯುನಿಸ್ಟರನ್ನು ಗುಡಿಸಿದ್ದ ದೀದಿಯನ್ನು ಅದೇ ಕಮ್ಯುನಿಸಂನಿಂದ ಮುಗಿಸುವ ಕೈ ನಿರ್ಧಾರ ತಲೆ ಕೆರೆದುಕೊಳ್ಳುವಂತಾಗಿದೆ. 294 ಸದಸ್ಯ ಸ್ಥಾನಗಳ ಪೈಕಿ ಕನಿಷ್ಠ 178 ಸ್ಥಾನಗಳು ದೀದಿ ಪಾಲಾಗಲಿದೆ ಎಂದಿದ್ದ ಸಮೀಕ್ಷೆಗಳೇ ಥಂಡಾ ಹೊಡೆಯುವಂತೆ 213 ಸ್ಥಾನಗಳನ್ನು ದೀದಿ ಗೆದ್ದುಕೊಂಡಿದ್ದಾರೆ. ಕಳೆದ ಬಾರಿ 102 ಸ್ಥಾನಗಳನ್ನು ಸ್ವಸಾಮಥ್ರ್ಯದಿಂದ ಗೆದ್ದುಕೊಂಡಿದ್ದ ಸಿಪಿಎಂ ಕಾಂಗ್ರೆಸ್ ಬೆಂಬಲವಿದ್ದೂ ಈ ಬಾರಿ 29 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿದೆ. ಕಳೆದ ಬಾರಿ ಮೂವತ್ತೊಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ಈ ಬಾರಿ 45 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಬ್ಬರಿಂದ ಸಂಖ್ಯೆ ಎಪ್ಪತ್ಮೂರಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ದೀದಿಗೆ ಗದ್ದುಗೆ ನೀಡಲು ಮತದಾರ ನಿರ್ಣಯಿಸಿರುವುದಕ್ಕೆ ಹಲವು ಕಾರಣಗಳಿವೆ. ರಸ್ತೆ, ವಿದ್ಯುತ್ ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ದೀದಿಯ ಸರಳ ವ್ಯಕ್ತಿತ್ವ, ಕಮ್ಯುನಿಸ್ಟರಿಂದ ಹಾದಿತಪ್ಪಿದ ಪಶ್ಚಿಮ ಬಂಗಾಳವನ್ನು ಸರಿಪಡಿಸಿದ ಕೀರ್ತಿ- ಎಲ್ಲವೂ ಸೇರಿ ದೀದಿ ಗೆಲುವಿನ ಮಂತ್ರ ಕೇಳಿಬಂದಿದೆ.

ಅತ್ತ ಅಸ್ಸಾಂನಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿತ್ತು. ಆ ನಿರೀಕ್ಷೆ ಹುಸಿಯಾಗಿಲ್ಲ. ಅಲ್ಲಿ ಹದಿನೈದು ವರ್ಷಗಳಿಂದಲೂ ಆಡಳಿತವಿರೋಧಿ ಅಲೆಯಿತ್ತು. ಜನರಿಗೆ ಕಾಂಗ್ರೆಸ್ ಸಾಕೆನಿಸಿತ್ತು. ಹಾಗಾಗಿ ಬದಲಾವಣೆ ಬಯಸಿದ್ದರು. ಈ ಬಾರಿ ಅಸ್ಸಾಂನಲ್ಲಿ ಬಿಜೆಪಿಯ ಕಾರ್ಯತಂತ್ರ, ಧನಾತ್ಮಕ ಪ್ರಚಾರಗಳು ಗೆಲುವು ತಂದುಕೊಟ್ಟಿದೆ. ವಿಪರ್ಯಾಸವೆಂದರೇ ಬಿಜೆಪಿಯ ಸೋನುವಾಲ್ ಮುಂದೆ ಮುಖ್ಯಮಂತ್ರಿ ತರುಣ್ ಗಗೋಯ್ ಅವರ ಕ್ಲೀನ್ ಇಮೇಜ್ ವರ್ಕೌಟ್ ಆಗಿಲ್ಲ. ಒಟ್ಟು 126 ಸ್ಥಾನಗಳ ಪೈಕಿ ಬಿಜೆಪಿ 83 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿಗಿಂತ 60 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ಹದಿನೈದು ವರ್ಷ ಆಡಳಿತ ನಡೆಸಿದ ಆಡಳಿತ ಪಕ್ಷ ಕಾಂಗ್ರೆಸ್ 23 ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದೆ. ಎಯುಡಿಎಫ್ ಉಳಿದವರ ಕಥೆ- ಎಲ್ಲರೂ ಅಂದುಕೊಂಡಂತೆ ಇದೆ. ಇನ್ನು ಪುದುಚೆರಿಯಲ್ಲಿ ಆಡಳಿತ ವಿರೋಧಿ ಅಲೆ, ಎಐಎನ್ಆರ್ಸಿಯ ಮುಖ್ಯಮಂತ್ರಿ ರಂಗಸ್ವಾಮಿ ಜನರ ನಿರೀಕ್ಷೆಗೆ ತಕ್ಕಂತೆ ಸ್ಪಂಧಿಸಿಲ್ಲ ಎನ್ನುವುದೆಲ್ಲಾ ಸಾಬೀತಾಗಿ, ಅಲ್ಲಿ ಕಾಂಗ್ರೆಸ್ ಪ್ಲಸ್ ಅಧಿಕಾರಕ್ಕೇರಿದೆ. ಮೂವತ್ತು ಸ್ಥಾನಗಳ ಪೈಕಿ ಕಳೆದ ಬಾರಿ 15 ಸ್ಥಾನಗಳನ್ನು ಪಡೆದುಕೊಂಡ ಎನ್ಐಎನ್ಆರ್ಸಿ ಈ ಬಾರಿ ಹತ್ತು ಸ್ಥಾನಗಳನ್ನು ಪಡೆದುಕೊಂಡಿದೆ. ಕಳೆದ ಬಾರಿ 7 ಸ್ಥಾನಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಒಕ್ಕೂಟ ಈ ಬಾರಿ ಹದಿನೈದು ಸ್ಥಾನಗಳನ್ನು ಪಡೆದಿರುವುದರಿಂದ ಎಡಿಎಂಕೆ ಇತರರ ಜೊತೆ ಸೇರಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

ಒಟ್ಟಿನಲ್ಲಿ ಪಂಚರಾಜ್ಯ ಚುನಾವಣೆ ಮುಗಿದಿದ್ದು ಈ ಬಾರಿ ಪುದುಚೆರಿ, ಅಸ್ಸಾಂ ಬಿಟ್ಟರೇ ಮಿಕ್ಕ ಮೂರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈಯಾಗಿದೆ. ರಾಷ್ಟ್ರೀಯ ಪಕ್ಷಗಳ ನಿಲುವಿನಿಂದ ಮತದಾರ ಬೇಸತ್ತಿದ್ದಾನೆ ಎನ್ನುವುದು ದೇಶಕ್ಕೇನಾದರೂ ಅನ್ವಯಿಸಿದರೇ- ಮುಂದಿನ ದಿನಗಳಲ್ಲಿ ಭಾರತದ ಚುಕ್ಕಾಣಿಯನ್ನು ಪ್ರಾದೇಶಿಕ ಪಕ್ಷಗಳೇ ಹಿಡಿಯಬಹುದು. ಇತ್ತೀಚಿನ ಬೆಳವಣಿಗೆಗಳು ಇಂತಹ ಸಾಧ್ಯತೆಗಳನ್ನು ಹೆಚ್ಚಿಸಿವೆ.

POPULAR  STORIES :

ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video

ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?

ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!

ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

6-5=2 ಚಿತ್ರತಂಡದಿಂದ ಮತ್ತೊಂದು ಪ್ರಯತ್ನ, ಕನ್ನಡದ ಬಹುನಿರೀಕ್ಷಿತ ಹಾರರ್ ಥ್ರಿಲ್ಲರ್ ಮೂವಿ.

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...