ಆರ್‍ಬಿಐನ ಅಧಿಕೃತ ವೆಬ್‍ಸೈಟ್‍ನಲ್ಲಿ ` ರಿಸರ್ವ್ ಬ್ಯಾಂಕ್‍ನ ಗವರ್ನರ್‍ಗಳು ಸಾಂಸ್ಕೃತಿಕವಾಗಿ ಸಂಪ್ರದಾಯಿಗಳು(ಮಡಿವಂತರು), ಹಾಗೂ ಸಾರ್ವಜನಿಕವಾಗಿ ನಾಚಿಕೆ ಸ್ವಭಾವವುಳ್ಳವರು’ ಎಂದು ಹೇಳಲಾಗಿದೆ. ರಾಜನ್ ಸರಕಾರದ ಮಡಿವಂತಿಕೆಗೆ ತಿಲಾಂಜಲಿ ನೀಡಿ ದೇಶದ ಆರ್ಥಿಕತೆ ಬೆಳೆಸಲು ಹೋಗಿದ್ದಕ್ಕೆ ಈಗ ಅವರಿಗೆ ಸಿಗುತ್ತಿರುವುದು ಏನು ಎಂದು ಇಡೀ ದೇಶಕ್ಕೆ ಗೊತ್ತಿದೆ. ಮಾಧ್ಯಮಗಳಿಗೆ ತುಸು ದಿಟ್ಟವಾಗಿಯೇ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ರಾಜನ್ ಅವರ ಈ ನಡವಳಿಕೆಗಳಿಂದ ಹಲವಾರು ವಿವಾದಗಳ ಹುತ್ತಗಳೇ ಬೆಳೆದು ನಿಂತಿವೆ. ಇಡೀ ದೇಶದಲ್ಲಿ ಕಾವು ಪಡೆದುಕೊಂಡಿದ್ದ `ಅಸಹಿಷ್ಣುತೆ ಪ್ರಕರಣಕ್ಕೆ’ ರಾಜನ್ ಅವರ ಹೇಳಿಕೆ ಹಾಗೂ ಇತ್ತೀಚಿಗೆ ವಿಶ್ವದ ಕತ್ತಲೆಯ ಆರ್ಥಿಕತೆಯಲ್ಲಿ ಭಾರತದ ಆರ್ಥಿಕತೆ ಒಂದು ಬೆಳಗುವ ಚುಕ್ಕೆ ಎಂದು ಹೆಸರಾಗಿದೆ ಎಂದು ಹೇಳಿದ್ದ ಅವರು ಪ್ರಸಿದ್ಧ ಹಿಂದಿ ಗಾದೆ `ಭಾರತದ ಆರ್ಥಿಕತೆ ಒಕ್ಕಣ್ಣಿನ ಅರಸನ ರಾಜ್ಯವಿದ್ದಂತೆ’ ಎಂಬುದಕ್ಕೆ ಹೋಲಿಸಿ ತಾವು ವಿವಾದಕ್ಕೀಡಾಗಿದ್ದಲ್ಲದೇ ಸರಕಾರಕ್ಕೂ ಮುಜುಗರ ತಂದೊಡ್ಡಿದ್ದರು. ಹೀಗಾಗಿ ಇವರ ನಡೆಯ ವಿರುದ್ಧ ತೀವ್ರವಾಗಿಯೇ ಅಸಮಾನದ ಭುಗಿಲು ಬಿಜೆಪಿ ಪಾಳಯದಲ್ಲಿ ಹುಟ್ಟಿಕೊಂಡಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸಚಿವೆ ನಿರ್ಮಲ ಸೀತಾರಾಮನ್ ಮೊದಲ ಬಾರಿಗೆ ಬಹಿರಂಗವಾಗಿ ರಾಜನ್ ವಿರುದ್ಧ ಅಸಮಾಧಾನದ ತೋರಿಸಿಕೊಟ್ಟಿದ್ದರು. ಇನ್ನೂ ಬೂದಿ ಮುಚ್ಚಿದಂತಿದ್ದ ಈ ಕೆಂಡಕ್ಕೆ ಮತ್ತೊಮ್ಮೆ ಬೆಂಕಿ ಹೊತ್ತಿಕೊಳ್ಳುವಂತೆ ಸುಬ್ರಮಣಿಯನ್ ಸ್ವಾಮಿ ಮಾಡಿದ್ದಾರೆ. ಒಂದು ಸಾಮಾನ್ಯ ಜ್ಞಾನದ ಪ್ರಕಾರ ಗವರ್ನರ್ ವಿರುದ್ಧ ಕೇವಲ ವೈಯುಕ್ತಿಕವಾಗಿ ಸುಬ್ರಮಣಿಯನ್ ಸ್ವಾಮಿ ಪ್ರಧಾನಿಗೆ ಪತ್ರ ಬರೆದಿರಬಹುದು ಆದರೆ, ಇದು ಇಡೀ ಸರಕಾರದ ಧ್ವನಿಯಾಗಿದೆ.
ರಘುರಾಂ ರಾಜನ್ ಅವರ ಅಧಿಕಾರವಧಿ ಸೆಪ್ಟೆಂಬರ್‍ನಲ್ಲಿ ಮುಗಿಯುತ್ತಿದ್ದಂತೆಯೇ ಶಿಕಾಗೋಗೆ ಮರಳಿ ಹೋಗಲು ಹಲವಾರು ಬಯಸುತ್ತಿದ್ದಾರೆ. ಅದರಲ್ಲೂ ಕಾರ್ಪೋರೇಟ್ಸ್‍ಗಳಂತೂ ತೀರ್ವ ಹಿನ್ನಡೆ ಅನುಭವಿಸಿದ್ದು, ಪ್ರಸ್ತುತ ಸರಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಅದೆಷ್ಟೋ ಬ್ಯಾಂಕ್‍ಗಳ ಸಿಇಓಗಳು ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಭೇಟಿಯಾಗಿ ರಾಜನ್ ಸಾಲಗಳ ಮೇಲೆ ತೆಗೆದುಕೊಂಡಿರುವ ಕಠಿಣ ಧೋರಣೆಗಳನ್ನು ಪ್ರಶ್ನಿಸಿದ್ದಾರೆ. ಇದಲ್ಲದೇ ಅನೇಕ ಬ್ಯಾಂಕರ್‍ಗಳು, ಆರ್ಥಿಕ ತಜ್ಞರು ಹಾಗೂ ನೀತಿ ನಿರೂಪಕರು ರಘುರಾಂ ರಾಜನ್ ತಮಗೇ ಸಮಯವೇ ಮೀಸಲಿಡುವುದಿಲ್ಲ. ಆದರೆ, ವಿಶ್ವದ ವಿವಿಧ ಬ್ಯಾಂಕ್‍ಗಳ ಆರ್ಥಿಕ ತಜ್ಞರ ಜತೆ, ವ್ಯವಸ್ಥಾಪಕ ನಿರ್ದೇಶಕರ ಜತೆ ಮಾತ್ರ ಹಲವಾರು ಗಂಟೆಗಳ ಕಾಲ ತಮ್ಮ ಸಮಯವನ್ನು ಮೀಸಲಿಡುತ್ತಿದ್ದಾರೆ ಎಂದು ಹಲವರ ಆರೋಪವಾಗಿದೆ.ಈ ಹಿಂದೆ ಎಲ್ಲ ಭಾರತೀಯ ರಿಸರ್ವ್ ಬ್ಯಾಂಕ್‍ಗಳ ಗವರ್ನರ್‍ಗಳು ಸರಕಾರದ ಒತ್ತಡಕ್ಕೆ ಮಣಿದು ಕಾರ್ಪೋರೇಟರ್ಸ್ ಹೇಳಿದಂತೆ, ಕೈಗಾರಿಕೋದ್ಯಮಿಗಳಿಗೆ ನೆರವಾಗುವಂತೆ ನಡೆದುಕೊಳ್ಳುತ್ತಿದ್ದರು. ಆದರೆ ರಾಜನ್ ಹಾಗಲ್ಲ. ಬೇರೆ ರಾಷ್ಟ್ರಗಳಲ್ಲಿನ ಆರ್ಥಿಕತೆ ಕುಸಿಯುತ್ತಿದ್ದರೂ ರುಪಾಯಿ ಮೌಲ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದು. ಯಾವುದೇ ಸರಕಾರವಿರಲಿ, ಯಾವುದೇ ನೀತಿತತ್ವಗಳಿರಲಿ ಎಲ್ಲರೂ ಸಹಜವಾಗಿಯೇ ಕಡಿಮೆ ಬಡ್ಡಿ ದರ, ಕಡಿಮೆ ರುಪಾಯಿ ಮೌಲ್ಯ, ಕಡಿಮೆ ಗೃಹ ಸಾಲದ ಬಡ್ಡಿ ಹಾಗೂ ಸುಲಭ ರೀತಿಯಲ್ಲಿ ವ್ಯಾಪಾರಕ್ಕೆ ಅನುಗುಣವಾಗಿ ಮರು ಸಾಲದ ಮಾರ್ಗಗಳು ಇರಬೇಕೆಂದು ಬಯಸುತ್ತಾರೆ. ಆದರೆ, ರಾಜನ್ ಅವರ ಕಟು ನೀತಿಗಳು ಬಹುಶಃ ಇದಕ್ಕೆ ಅನುವು ಮಾಡಿಕೊಡುವುದಿಲ್ಲ. ಚುನಾವಣೆ ಕೇವಲ ಮೂರೇ ವರ್ಷಗಳು ಬಾಕಿಯುಳಿದಿದ್ದರಿಂದ ರಾಜನ್ ಅವರ ಇನ್ನೊಂದು ಅವಧಿಯ ಮುಂದುವರಿಕೆಯಿಂದಾಗಿ ವೋಟ್‍ಬ್ಯಾಂಕ್‍ಗಳಿಗೆ ಖಂಡಿತವಾಗಿಯೂ ಹೊಡೆತ ಬೀಳಲಿದೆ ಎಂದು ಬಿಜೆಪಿಗೆ ಸ್ಪಷ್ಟವಾಗಿದ್ದರಿಂದ ಸುಬ್ರಮಣಿಯನ್ ಸ್ವಾಮಿಯವರನ್ನು ಬಳಸಿಕೊಳ್ಳುತ್ತಿರಲೂಬಹುದು
ಪ್ರಧಾನಿಗೆ ಇವರು ಬರೆದಿದ್ದ ಪತ್ರದ ಕ್ರಮವನ್ನು ಖಂಡಿಸಿ ಯಾವ ಬಿಜೆಪಿ ನಾಯಕರೂ ವಿರೋಧಿಸಲಿಲ್ಲ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗಾರರಿಗೆ ಗವರ್ನರ್ ಹುದ್ದೆಯ ನೇಮಕ ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಬದಲಾಗಿ ಆರ್‍ಬಿಐ ಹಾಗೂ ಕೇಂದ್ರ ಸರಕಾರ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಇದು ಹೊರ ನೋಟಕ್ಕೆ ಸುಬ್ರಮಣಿಯನ್ ಸ್ವಾಮಿ ಅವರನ್ನು ವಿರೋಧಿಸಿದಂತಿದ್ದರೂ ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಸ್ವಾಮಿ ಅವರ ಪತ್ರಕ್ಕೆ ಬೆಂಬಲಿಸಿದ್ದಾರೆ. ಅವರು ನಿಜವಾಗಿಯೂ ಸುಬ್ರಮಣಿಯನ್ ಸ್ವಾಮಿಯವರನ್ನು ವಿರೋಧಿಸಿದ್ದೇ ಆಗಿದ್ದಲ್ಲಿ ಅವರ ಹೇಳಿಕೆಯಲ್ಲಿ ಗವರ್ನರ್ ಅವರ ನೇಮಕ ಸ್ವಾಮಿಯವರ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಿತ್ತಲ್ಲವೇ? ಆದರೆ ಅವರು ಹಾಗೆ ಮಾಡಲಿಲ್ಲ. ಪ್ರಸ್ತುತದ ಬೆಳವಣಿಗೆಗಳು ಗಮನಿಸಿದರೆ ರಘುರಾಂ ರಾಜನ್ ಅವರ ಇನ್ನೊಂದು ಅವಧಿಯ ವಿಸ್ತರಣೆ ಅಸಾಧ್ಯ ಎಂಬಂತಿದೆ. ಹಾಗೇನಾದರೂ ಆಗಿದ್ದಲ್ಲಿ ರಾಜನ್ ಅವರ ಅದೃಷ್ಟ ಎಂದೇ ಹೇಳಬಹುದು. ಚುರುಕು ಬುದ್ದಿಯುಳ್ಳ ರಾಜನ್ ಇದನ್ನು ಅರಿವು ಮಾಡಿಕೊಂಡು ಅವರೇ ಸ್ವಯಂ ಪ್ರೇರಿತರಾಗಿ ಹುದ್ದೆಯನ್ನು ತ್ಯಜಿಸಿ ಹೊರನಡೆದು ಈ ವಿವಾದಕ್ಕೆ ಅಂತ್ಯ ಹಾಡಬಹುದು. ಹೀಗೆ ಮಾಡುವುದರಿಂದ ಅವರ ಸ್ವಪ್ರತಿಷ್ಠೆ ಉಳಿಸಿಕೊಳ್ಳಬಹುದು ಎಂದು ನನ್ನ ಅನಿಸಿಕೆ.
- ವಿಶ್ವನಾಥ್ ಶೇರಿಕಾರ್
POPULAR STORIES :
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?
ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?