ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅವರ ಮೇಲೆ ಹೊಸ ಆರೋಪ ಹೊರಿಸಲಾಗಿದೆ. ಕೇರಳದ ವ್ಯಕ್ತಿಯೊಬ್ಬರಿಂದ ಸನ್ನಿ ಲಕ್ಷಾಂತರ ರೂಪಾಯಿ ಹಣ ಪಡೆದು, ನಂತರ ಮೋಸ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಸಂಬಂಧ ಸನ್ನಿ ಲಿಯೋನ್ ಅವರನ್ನು ಕೊಚ್ಚಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಕೇರಳದಲ್ಲಿ ನಡೆಯಬೇಕಿದ್ದ ಎರಡು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತೇನೆ ಎಂದು ಒಪ್ಪಿಕೊಂಡು ಸನ್ನಿ ಲಿಯೋನ್ 29 ಲಕ್ಷ ರೂ. ಪಡೆದುಕೊಂಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅವರು ಆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ತಮಗೆ ಭಾರಿ ನಷ್ಟ ಆಗಿದೆ ಎಂದು ಶಿಯಾಸ್ ಎಂಬ ವ್ಯಕ್ತಿ ದೂರು ನೀಡಿದ್ದರು. ಅದನ್ನು ಆಧರಿಸಿ ಸನ್ನಿಯನ್ನು ಅಧಿಕಾರಿಗಳು ಈಗ ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಸನ್ನಿ ರಜೆಯ ಮಜಾ ಸವಿಯುತ್ತಿದ್ದಾರೆ. ‘ನಾನು ಯಾರಿಗೂ ಮೋಸ ಮಾಡಿಲ್ಲ. ಅವರು ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲ. ಐದಕ್ಕಿಂತ ಹೆಚ್ಚು ಬಾರಿ ಅವರು ಕಾರ್ಯಕ್ರಮವನ್ನು ಮುಂದೂಡಿದ್ದರು. ಸರಿಯಾದ ದಿನಾಂಕದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ನಾನು ಖಂಡಿತಾ ಬರುತ್ತೇನೆ’ ಎಂದು ಸನ್ನಿ ಉತ್ತರಿಸಿದ್ದಾರೆ ಎಂದು ವರದಿ ಆಗಿದೆ.