ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!

Date:

 

raaaಎತ್ತಿಗೆ ಸಿಕ್ಕಾಪಟ್ಟೆ ಜ್ವರ. ಹೇಗಾದರೂ ಎತ್ತಿಗೆ ಬಂದಿರುವ ಜ್ವರ ಕಡಿಮೆ ಮಾಡಬೇಕು. ಹಾಗಾಗಿ ಅತೀಬುದ್ಧಿವಂತ ಎನಿಸಿಕೊಂಡವನು ಎಮ್ಮೆಗೆ ಬರೆ ಹಾಕಿ ನೋಡಿದ. ಅತ್ತ ಎತ್ತಿಗೆ ಬಂದ ಜ್ವರವೂ ಕಡಿಮೆಯಾಗಿಲ್ಲ. ಇತ್ತ ಚೆನ್ನಾಗಿದ್ದ ಎಮ್ಮೆಗೆ ವಿಪರೀತ ಜ್ವರ ಶುರುವಾಗಿತ್ತು. ಇಲ್ಲಿ ಜ್ವರ ಹಿಡಿದ ಎತ್ತು ನಮ್ಮ ದೇಶ, ಎಮ್ಮೆ ಜನಸಾಮಾನ್ಯರು, ಅತೀ ಬುದ್ದಿವಂತ ನರೇಂದ್ರ ಮೋದಿ.

ನಮ್ಮ ದೇಶದ ಇವತ್ತಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ, ಈ ದೇಶವನ್ನು ಬ್ರಿಟೀಷರು ಬಿಟ್ಟುಹೋಗಬಾರದಿತ್ತಲ್ವಾ..? ಎನಿಸಿಬಿಡುತ್ತದೆ. ಪ್ರಾಯಶಃ ಭಾರತ ಇವತ್ತು ಸಾಧಾರಣ ಪರಿಸ್ಥಿತಿಯಲ್ಲಾದರೂ ಇರುವುದಕ್ಕೆ ಬ್ರಿಟೀಷರೇ ಕಾರಣ. ಇಲ್ಲ ಅಂದಿದ್ರೇ ಈ ದೇಶ ಇಲ್ಲಿನ ಅರೆಬೆಂದವರ ಆಡಳಿತದಿಂದ ಸೊಮಾಲಿಯಾಕ್ಕಿಂತಲೂ ಹೀನಾಯ ಪರಿಸ್ಥಿತಿಯಲ್ಲಿರುತ್ತಿತ್ತು. ಸರಿಯಾದ ಶಿಕ್ಷಣವಿಲ್ಲದೇ, ಅನಾರೋಗ್ಯ, ಆರ್ಥಿಕ ಮುಗ್ಗಟ್ಟಿನಿಂದ ಅತ್ಯಂತ ಬಡದೇಶವಾಗಿರುತ್ತಿತ್ತು. ಅವರು ದೋಚಿಹೋದರೂ ಬದುಕು ಹೇಳಿಕೊಟ್ಟರು ಎಂಬ ತೀರ್ಮಾನಕ್ಕೆ ಬರುವಷ್ಟರ ಮಟ್ಟಿಗೆ ರೋಸಿಹೋಗಬೇಕಾದ ವಾಸ್ತವ ಇಲ್ಲಿದೆ.

ಈ ದೇಶವನ್ನು ಹೆಚ್ಚು ಆಳಿದ್ದ ಕಾಂಗ್ರೆಸ್‍ನಲ್ಲೂ ಸ್ವಾರ್ಥ ರಾಜಕಾರಣಿಗಳಿದ್ದರು. ದೇಶವನ್ನು ಒಂದು ಹಂತಕ್ಕೆ ತರುವುದರ ಜೊತೆ ತಾವೂ ಉದ್ಧಾರವಾದರು. ಆದರೆ ಅವರ ಆಡಳಿತದಲ್ಲಿ ಎಡವಟ್ಟುಗಳು ಕಡಿಮೆಯಿತ್ತು. ನಮ್ಮ ದೇಶವನ್ನು ತಟಸ್ಥವಾಗಿರಿಸಿದ್ದರು. ಸುಳ್ಳು ಸುಳ್ಳೇ ಭರವಸೆಗಳನ್ನು ಬಿತ್ತಲಿಲ್ಲ. ತಮ್ಮ ಕೈಲಾದಷ್ಟು ಏನಾದರೂ ಮಾಡಲು ಪ್ರಯತ್ನಿಸಿದರು. ಜನಸಾಮಾನ್ಯರ ತಲೆ ಮೇಲೆ ಬಂಡೆಕಲ್ಲು ಎತ್ತಿಹಾಕುವ ಕೆಲಸವನ್ನು ಮಾಡಲಿಲ್ಲ. ಇವತ್ತು ಕಾಂಗ್ರೆಸ್ ದೇಶದಲ್ಲಿ ಕಳೆದುಹೋಗುತ್ತಿದೆ ಎಂದರೇ ರಾಜಕೀಯವಾಗಿ ಅವರೇ ಮಾಡಿಕೊಂಡ ಸ್ವಯಂಕೃತಪರಾಧಗಳೇ ಕಾರಣ. ಅದೇ ರಾಜಕೀಯ ಸ್ವಯಂಕೃತಪರಾಧಗಳನ್ನು ಇವತ್ತು ಬಿಜೆಪಿಯೂ ಮಾಡುತ್ತಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ದೇಶದಿಂದ ನಿರ್ನಾಮವಾಗುವ ಸೂಚನೆಗಳಿವು.

ಅಸಲಿ ಸಂಗತಿ ಚರ್ಚಿಸುವ ಮುನ್ನ ತೈಲದ ವಿಚಾರಕ್ಕೆ ಬನ್ನಿ. ಏಕೆಂದರೇ ಇವತ್ತು ಸ್ವಚ್ಛಭಾರತ, ಕೃಷಿ ಕಲ್ಯಾಣದ ನೆಪದಲ್ಲಿ ವಸೂಲಿಗಿಳಿದಿರುವ ಮೋದಿ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪಾತಾಳಕ್ಕಿಳಿದರೂ ಅದರ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸಲಿಲ್ಲ. ಈ ಬಗ್ಗೆ ಕೇಂದ್ರದ ವಿರುದ್ಧ ಸುಪ್ರಿಂ ಕೋರ್ಟ್‍ಗೂ ಹೋಗಲಾಗಿತ್ತು. ಜಗತ್ತು ಆರ್ಥಿಕ ಸಂಕಷ್ಟದಲ್ಲಿದ್ದಾಗ ನಮ್ಮ ದೇಶ ತಟಸ್ತವಾಗಿರಲು ಕಾರಣ- ತೈಲ ಬೆಲೆಯ ಬ್ಯಾಲೆನ್ಸ್ ಎಂದು ಕೇಂದ್ರ ಸಮಜಾಯಿಷಿ ನೀಡಿತ್ತು. ಕೇಂದ್ರ ಅದೇನೇ ಸಮರ್ಥನೆ ಮಾಡಿಕೊಂಡರು ನ್ಯಾಯಾಲಯ ಮಾತನಾಡುವುದು ಕಡಿಮೆ. ಪೆಟ್ರೋಲ್, ಡಿಸೆಲ್ ಬೆಲೆ ಇಳಿಯಲಿಲ್ಲ. ಅಂದಾಜು ಲೆಕ್ಕಾಚಾರದ ಪ್ರಕಾರ ಪೆಟ್ರೋಲ್ ಹದಿನೈದರಿಂದ, ಇಪ್ಪತ್ತು ರೂಪಾಯಿಗೆ ಸಿಗಬೇಕಿತ್ತು. ಡೀಸೆಲ್ ಈ ಬೆಲೆಗಿಂತ ಮೂರ್ನಾಲ್ಕು ರೂಪಾಯಿ ಕಡಿಮೆಗೆ ಸಿಗಬೇಕಿತ್ತು. ಅದೇ ಮನಮೋಹನ್ ಸಿಂಗ್ ಸರ್ಕಾರ ನೂರಾರು ಡಾಲರ್ ಬ್ಯಾರೆಲ್ ಪೆಟ್ರೋಲ್‍ಗೆ ಹಣ ಕೊಟ್ಟು ಹೆಚ್ಚುಕಮ್ಮಿ ಈಗ ಮೋದಿ ಕೊಡುತ್ತಿರುವ ಬೆಲೆಗೆ ಪೆಟ್ರೋಲ್, ಡೀಸೆಲ್ ಕೊಡುತ್ತಿತ್ತು. ಅದೇ ಅಚ್ಚೇದಿನ್ ಅಚ್ಚರ್‍ಗಳು ಇಪ್ಪತ್ತಾರು ಡಾಲರ್ ಕೊಟ್ಟು ಬ್ಯಾರೆಲ್ ಪೆಟ್ರೋಲ್ ಪರ್ಚೇಸ್ ಮಾಡಿ ಜನಸಾಮಾನ್ಯರಿಗೆ ದೊಡ್ಡ ದೋಖಾ ಮಾಡಿದೆ.

ಪ್ರಸ್ತುತ ಈ ವಿಚಾರ ಚರ್ಚೆಗೀಡಾಗಲು ಕಾರಣ; ಇವತ್ತಿನಿಂದ ಕೇಂದ್ರ ಸರ್ಕಾರ ಕೃಷಿ ಕಲ್ಯಾಣ ಸೆಸ್ ಜಾರಿಗೊಳಿಸುತ್ತಿದೆ. ಅಂದರೆ ದೈನಂದಿನ ಚಟುವಟಿಕೆಗಳ ಮೇಲೆ ಸೇವಾ ತೆರಿಗೆಯನ್ನು ಶೇಕಡಾ 14.5ರಿಂದ 15ಕ್ಕೆ ಏರಿಸುತ್ತಿದೆ. ಇದರಿಂದ ಹಾಸ್ಪಿಟಲ್, ಹೋಟೆಲ್, ಮೊಬೈಲ್ ರಿಚಾರ್ಜ್, ಬ್ಯಾಂಕ್ ವ್ಯವಹಾರ, ಅಂತರ್ಜಾಲದ ಬೆಲೆಗಳು ಏರಿಕೆಯಾಗಲಿದೆ. ಸ್ವಚ್ಛಭಾರತ ಆಂದೋಲನದ ವಿವಿಧ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಈ ಹಿಂದೆ ಸೇವಾ ತೆರಿಗೆ ಹೆಚ್ಚಿಸಿದ್ದ ಸರ್ಕಾರ, ಈಗ ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಕೃಷಿ ಕಲ್ಯಾಣ ಸೆಸ್ ಜಾರಿಗೆ ತರುತ್ತಿರುವುದಾಗಿ ಹೇಳುತ್ತಿದೆ. ಈ ವರ್ಷ ಇದರಿಂದ ಎರಡು ಕೋಟಿ ಹತ್ತು ಲಕ್ಷ ಎಕ್ಸ್ಟ್ರಾ ತೆರಿಗೆ ದುಡ್ಡನ್ನು ಸಂಗ್ರಹಿಸುವ ಉದ್ದೇಶದಲ್ಲಿದೆಯಂತೆ. ಇಲ್ಲಿವರೆಗೂ ಲೆಕ್ಕವನ್ನೇ ಕೊಡದ ತೈಲದ ದುಡ್ಡಿನಿಂದ ಇವಕ್ಕೆ ಹಣ ಹೊಂದಿಸಬಹುದಿತ್ತಲ್ವಾ..!? ಜನಸಾಮಾನ್ಯರ ಮೇಲೇಕೆ ಕೆಂಗಣ್ಣು ಹಾಕ್ತೀರಾ..? ಅಂತ ಕೇಳಿದರೇ ಬರುವುದು ಅದೇ ಹಳಸಲು ಉತ್ತರ- ಅಚ್ಛೇದಿನ್. ಜನಸಾಮಾನ್ಯರ ಎದೆಯ ಮೇಲೆ ಅಚ್ಛೇದಿನ್ ಎಂಬ ಸುಳ್ಳಿನ ಸಮಾಧಿ ಕಟ್ಟುತ್ತಿರುವ ಬಿಜೆಪಿಯ ಅವಸಾನ ಅರಂಭವಾಗಿದೆ ಎನ್ನುವುದಕ್ಕೆ ಇವು ತಾಜಾ ನಿದರ್ಶನ.

ಮೊದಲು ಸ್ವಚ್ಛಭಾರತದ ಪೊರಕೆಯ ವಿಚಾರಕ್ಕೆ ಬನ್ನಿ. ಮೊದಲು ಮೋದಿ ಸರ್ಕಾರ ವಸೂಲಿಗಿಳಿಯುವ ಮುನ್ನ ಅರ್ಥ ಮಾಡಿಕೊಳ್ಳಬೇಕಾಗಿರುವುದು ಬಹಳಷ್ಟಿದೆ. ಅವರ್ಯಾಕೋ ಹಿಮಾಲಯದ ಮೇಲೆ ನಿಂತು ಚಂದ್ರನಿಗೆ ಕೈ ಚಾಚುವ ಕನಸು ಕಾಣುತ್ತಿದ್ದಾರೆ. ದೇಶದ ಪರಿಸ್ಥಿತಿ ಅವರಂದುಕೊಂಡಷ್ಟು ಸೊಗಸಾಗಿಲ್ಲ. ದೇಶವನ್ನು ನೀಟ್ ಮಾಡುತ್ತೇನೆ ಅಂತ ಅಮೆರಿಕಾದ ಬೀದಿಯಲ್ಲಿ ನಿಂತು ಯೋಚಿಸಿದ ಕೂಡಲೇ ಈ ದೇಶ ಸ್ವರ್ಗವಾಗುವುದಿಲ್ಲ. ಅಸಲಿ ಸಮಸ್ಯೆ ದೇಶದ ಬುಡದಲ್ಲೇ ಇದೆ. ಇಲ್ಲಿನ ಜನರ ಮನಃಸ್ಥಿತಿಯನ್ನು ಅಷ್ಟು ಸುಲಭಕ್ಕೆ ಬದಲಾಯಿಸಲು ಸಾಧ್ಯವಿಲ್ಲ. ದೇಶದ ಜನರ ಮನಃಸ್ಥತಿಗಳು ಬದಲಾಗದ ಹೊರತು ದೇಶವನ್ನು ಸುಂದರವಾಗಿ, ಶಿಸ್ತಿನಿಂದ ನೋಡಲು ಸಾಧ್ಯವಿಲ್ಲ. ಮೋದಿಗೆ ನಿಜಕ್ಕೂ ಈ ದೇಶವನ್ನು ಯಕಃಶ್ಚಿತ್ ಭವಿಷ್ಯದಲ್ಲಾದರು ಸೊಗಸು ಮಾಡಬೇಕೆಂಬ ಮರ್ಜಿಯಿದ್ದರೇ ಈಗಿನಿಂzಲೇ ಸ್ವಚ್ಛಭಾರತ್ ಆಂದೋಲನವನ್ನು ಕೈಬಿಟ್ಟು, ಅದಕ್ಕಾಗಿ ಹೆಚ್ಚಿಸಿದ್ದ ಸೆಸ್ ಅನ್ನು ಕೃಷಿ ಕಲ್ಯಾಣಕ್ಕಾಗಿ ಉಪಯೋಗಿಸಲಿ. ಕೃಷಿ ಕಲ್ಯಾಣ ಸೆಸ್ ಅನ್ನು ನಿಲ್ಲಿಸಲಿ. ಕಸದ ಆಂದೋಲನವನ್ನು ಕೈಬಿಟ್ಟು ಶಿಕ್ಷಣ ಆಂದೋಲನವನ್ನು ನಡೆಸಲಿ. ಜನರು ವಿದ್ಯಾವಂತರಾಗದ ಹೊರತು ಅವರು ಸುಧಾರಿಸುವುದಿಲ್ಲ. ವಿದ್ಯೆಯ ಜೊತೆಗೆ ವಿವೇಕವನ್ನು ಕಲಿಸುವ ಆಂದೋಲನವಾಗಬೇಕು. ನಮ್ಮ ಮನೆ ಕ್ಲೀನ್ ಆದರೆ ಸಾಕು, ನಮ್ಮ ಮನೆ ಕಸ ಪಕ್ಕದ ಮನೆಗೆ ಬಿದ್ದರೂ ಪರ್ವಾಗಿಲ್ಲ. ಬೆಳಿಗ್ಗೆ ಕಸ ಸಂಗ್ರಹಿಸುವವರು ಬಂದಾಗ ಡಬ್ಬದಲ್ಲಿ ಕಸ ಹಾಕಿಬರಲು ಆಲಸ್ಯ. ಮನೆಯ ಕಿಟಕಿಯಿಂದ ಎತ್ತಿಬೀಸಾಡುತ್ತೇವೆ. ಅಸಲಿಗೆ ಜನರ ಮನಸ್ಸಿನಲ್ಲೇ ಕಸ ತುಂಬಿಕೊಂಡಿದೆ ಎಂದಾಯಿತಲ್ಲವೇ..!? ಅದನ್ನು ಕ್ಲೀನ್ ಮಾಡುವ ಆಂದೋಲನವಾಗಬೇಕು. ಅದುಬಿಟ್ಟು ತೆರಿಗೆ ಹೆಚ್ಚಿಸಿ ಆ ದುಡ್ಡಿನಿಂದ ಸ್ವಚ್ಚಭಾರತ್ ಆಂಧೋಲನ ನಡೆಸುತ್ತೇನೆ, ಪೆಂಡಾಲ್ ಹಾಕಿ, ಮೈಕಿಡಿದು ಕೆಲಸಕ್ಕೆ ಬಾರದ ಭಾಷಣ ಬಿಗಿಯುತ್ತೇನೆ ಎಂದರೇ ಅದು ಗಾಳಿಯಲ್ಲಿ ಗುಂಡು ಹೊಡೆದಂತೆ ಲೆಕ್ಕ.

ಶಿಕ್ಷಣ ಆಂದೋಲನ ಮಾಡಿ, ಈ ಜನರಿಗೆ ವಿದ್ಯೆ ಕಲಿಸಿ, ವಿವೇಕ ಕಲಿಸುವಷ್ಟರಲ್ಲಿ ಎಷ್ಟೋ ಶತಮಾನಗಳು ಕಳೆದಿರುತ್ತದೆ ಎನ್ನುವುದಾದರೇ ಕಾನೂನಿನಲ್ಲಿ ಮಾರ್ಪಾಡು ತನ್ನಿ. ಮನಸ್ಸಿನಲ್ಲಿ ಕಸ ತುಂಬಿಕೊಂಡ ಜನರಿಗೆ ಫೈನ್ ಹಾಕುವ ಕಾನೂನು ತರಲಿ. ಐನೂರು, ಸಾವಿರ ದಂಡ ಕಟ್ಟಿ ಶಿಕ್ಷೆ ಅನುಭವಿಸಲು ಯಾರೂ ಸಿದ್ದರಿರುವುದಿಲ್ಲ. ಒಂದೆರಡು ಬಾರಿ ಮರುಕಳಿಸಿದರೇ ಜನರು ಅವರಾಗಿಯೇ ಬದಲಾಗುತ್ತಾರೆ. ದೇಶ ಕಸಮುಕ್ತ ಸಾಮ್ರಾಜ್ಯವಾಗುತ್ತದೆ. ವಿದೇಶಗಳಲ್ಲಿ ಇದೇ ಸಂಸ್ಕøತಿಯಿದೆ. ಹಾಗಾಗಿ ಅಲ್ಲಿನ ಬೀದಿಗಳು, ರಸ್ತೆಗಳು ಫಳಫಳಿಸುತ್ತವೆ. ಅವರು ಕಠಿಣ ಕಾನೂನು ಕ್ರಮ ತೆಗೆದುಕೊಂಡಿದ್ದರ ಹಿಂದೆ ನಿಜಕ್ಕೂ ದೇಶವನ್ನು ಶುಭ್ರಗೊಳಿಸುವ ಉದ್ದೇಶವಿತ್ತು. ಆದರೆ ನಮ್ಮ ಆಂದೋಲನಗಳ ಹಿಂದಿರುವ ಅಜೆಂಡಾ ಲಾಭಕೋರ ಮನಃಸ್ಥಿತಿಗಳಷ್ಟೇ..! ಈ ಆಂದೋಲನಗಳಿಂದ ದೇಶ ಸ್ವಚ್ಛವಾಗುವುದಿಲ್ಲ ಎಂಬ ಸತ್ಯ ಖುದ್ದು ಪೊರಕೆ ಹಿಡಿದ ಮೋದಿಗೆ ಗೊತ್ತಿದೆ.

ರೈತರು ಹಾಗೂ ಕೃಷಿ ಕಲ್ಯಾಣಕ್ಕಾಗಿ ಸೇವಾ ತೆರಿಗೆ ಹೆಚ್ಚಿಸುತ್ತಿದೆ. ಇದನ್ನು ಸಂಪೂರ್ಣವಾಗಿ ರೈತರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇಲ್ಲಿಯವರೆಗೆ ಬೇರೆ ಬೇರೆ ಸರ್ಕಾರಗಳು ರೈತ ಕಲ್ಯಾಣಕ್ಕಾಗಿ ಬೇಕಾದಷ್ಟು ಮಾಡಿಟ್ಟಿವೆ. ಆದರೆ ಯಾವುದು ರೈತರಿಗೆ ಸಮರ್ಪಕವಾಗಿ ಮುಟ್ಟುತ್ತಿಲ್ಲ. ಇದು ಕೂಡ ರೈತರ ಹೆಸರಿನಲ್ಲಿ ನಡೆಯುವ ಸಮಾರಾಧನೆಯಷ್ಟೇ..!? ಇದು ಜನಸಾಮಾನ್ಯರಿಗೆ ಬರೆ ಎಳೆದು, ಆ ಗಾಯದ ಮೇಲೆ ಅಚ್ಛೇದಿನ್ ಎಂಬ ಉಪ್ಪು ಸುರಿಸುವ ಪ್ರಯತ್ನವಲ್ಲದೇ ಬೇರೇನಲ್ಲ. ಅಸಲಿಗೆ ಈ ಪ್ರಯತ್ನದಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಗೊತ್ತಿದ್ದೇ ಸೇವಾತೆರಿಗೆಯಲ್ಲಿ ಕಾಸು ದುಡಿದುಕೊಳ್ಳುವ ಪ್ರಯತ್ನವಾಗುತ್ತಿದೆ. ಇವತ್ತಿನಿಂದ ಅಂದರೆ ಜೂನ್ ಒಂದನೇ ತಾರೀಕಿನಿಂದ ಕೃಷಿ ಕಲ್ಯಾಣ್ ಸೆಸ್ ಜಾರಿಗೆ ಬರಲಿದೆ. ಇದರಿಂದ ಜನಸಾಮಾನ್ಯರಿಗೆ ಬೀಳುವುದು ಸಣ್ಣ ಹೊಡೆತವೇನಲ್ಲ. ಕಳೆದ ವರ್ಷದ ಬಜೆಟ್ಟಿನಲ್ಲಿ 12.36ನಷ್ಟಿದ್ದ ಸೇವಾತೆರಿಗೆಯನ್ನು 14.5ಕ್ಕೇರಿಸಿದ್ದ ಕೇಂದ್ರ ಕಳೆದ ಬಜೆಟ್ಟಿನಲ್ಲಿ ಅದನ್ನು ಶೇಕಡಾ 15ಕ್ಕೆ ತಂದು ನಿಲ್ಲಿಸಿದೆ. ಜನರು ಸರ್ಕಾರದ ಜೇಬಿಗೆ ಕತ್ತರಿಹಾಕುವ ಚಾಳಿಗೆ ಪ್ರತಿಭಟಿಸಿ ನಿಲ್ಲದಿದ್ದರೇ- ದುಡಿದ ಹಣವನ್ನೆಲ್ಲಾ ಟ್ಯಾಕ್ಸ್ ಕಟ್ಟಲು ವಿನಿಯೋಗಿಸಬೇಕಾಗುತ್ತದೆ. ಆಮೇಲೆ ಅಚ್ಛೇದಿನ್ ಹೆಸರಿನಲ್ಲಿ ಮಣ್ಣುತಿನ್ನುತ್ತಾ ಕೂರಬೇಕಷ್ಟೇ..!

ಸ್ವಚ್ಛಭಾರತಕ್ಕಾಗಿ ಸೇವಾ ತೆರಿಗೆ ಹಾಕಿದ ಬೆನ್ನಿಗೆ ರೈತರಿಗಾಗಿ ಸೇವಾ ತೆರಿಗೆಯ ಟೋಪಿಯನ್ನು ಜನರ ತಲೆ ಮೇಲಿಡುತ್ತಿರುವ ಕೇಂದ್ರ ಸರ್ಕಾರದ ಈ ಧೋರಣೆಯಿಂದ ದೈನಂದಿನ ಸೇವೆಗಳನ್ನು ಅನುಭವಿಸುತ್ತಿರುವ ಜನರಿಗೆ ಬೇಲೆಯೇರಿಕೆಯ ಬಿಸಿ ತಟ್ಟಲಿದೆ. ಆಸ್ಪತ್ರೆಗಳ ಬಿಲ್, ಫೋನ್ ಬಿಲ್, ವಿಮಾನಯಾನ, ರೈಲು ಪಯಣದ ಬೆಲೆ ಹೆಚ್ಚಳ, ಇಂಟರ್‍ನೆಟ್ ಬಾಡಿಗೆ, ಏರ್‍ಪೋರ್ಟ್ ಸೇವೆ, ಎಟಿಎಂ ಬಳಕೆ, ಹೂಡಿಕೆ, ಉಳಿತಾಯ, ಮನೆ ನಿರ್ಮಾಣ, ಹವಾ ನಿಯಂತ್ರಣ, ಜಾಹೀರಾತು ಏಜನ್ಸಿ, ಬ್ಯಾಂಕ್ ವ್ಯವಹಾರ ಬಿಸಿನೆಸ್ ಪ್ರದರ್ಶನ, ಕೇಬಲ್ ದರ, ಚಾರ್ಟಡ್ ಅಕೌಂಟಿಂಗ್, ಸರಕು ಸಾಗಣೆ, ಕಾಪಿರೈಟ್, ಕ್ರೆಡಿಟ್, ಡೆಬಿಟ್ ಕಾರ್ಡ್, ಕೋರಿಯರ್, ಡ್ರೈ ಕ್ಲೀನಿಂಗ್, ಐಟಿ ಸಾಫ್ಟ್‍ವೇರ್, ಗಣೀ- ಇತ್ಯಾದಿಗಳ ಬೆಲೆ ಏರಿಕೆಯಾಗಲಿದೆ. ಒಟ್ಟಿನಲ್ಲಿ ಎಲ್ಲಾ ಬಿಟ್ಟ ಮಗ ಭಂಗಿನೆಟ್ಟ ಎನ್ನುವಂತಾಗಿದೆ. ಕಾಂಗ್ರೆಸ್ ಹತುವರ್ಷದಲ್ಲಿ ಜನರನ್ನು ತಲುಪುವುದರಲ್ಲಿ ಸೋತಿತ್ತು. ಅಂದರೇ ಪ್ರಚಾರದಲ್ಲಿರುವ ಕಲೆ ಅವರಿಗೆ ಗೊತ್ತಿಲ್ಲ. ಅಂತರ್ಜಾಲದ ಬಗ್ಗೆ ಅರಿವಿರಲಿಲ್ಲ. ಕಾಂಗ್ರೆಸ್‍ನ ಡಿಜಿಟಲ್ ವೀಕ್ನೆಸ್ ಎನ್‍ಕ್ಯಾಶ್ ಮಾಡಿಕೊಂಡು ಪ್ರಧಾನಿಯಾದವರು ನರೇಂದ್ರ ಮೋದಿ. ಪಾಪ, ಅವರು ಭಾರತವನ್ನು ಗುಜರಾತ್ ಎಂದುಕೊಂಡಿದ್ದಾರೆ.

ಬರೀ ಕಸ, ಕೃಷಿ ಕಲ್ಯಾಣಗಳಷ್ಟೇ ಅವರ ಭರವಸೆಗಳಲ್ಲ. ಚುನಾವಣೆಗೂ ಮುನ್ನ ಕಪ್ಪುಹಣ ತರ್ತೀನಿ ಎಂದರು. ಈಗ ಕಪ್ಪು ಅಂದರೇ ಸಾಕು ಅವರ ಮುಖ ಕೆಂಪಾಗುತ್ತದೆ. ಹದಿನೈದು ಲಕ್ಷ ಹಣ ಅಕೌಂಟಿಗೆ ಬೀಳುವ ಕನಸು ಕನಸಾಗಿಯೇ ಉಳಿದಿದೆ.ಪಾಕಿಸ್ತಾನಕ್ಕೆ ಬುದ್ದಿ ಕಲಿಸುತ್ತೇನೆ ಅಂದರು. ನವಾಜ್ ಷರೀಫ್ ಮನೆಯಲ್ಲಿ ಬಿರಿಯಾನಿ ತಿಂದುಬಂದರು. ಮೇಕ್ ಇನ್ ಇಂಡಿಯಾ ಅಂದರು. ಅದು ಟೇಕ್ ಇನ್ ಇಂಡಿಯಾ ಆಯ್ತು. ಮೇಕ್ ಇನ್ ಇಂಡಿಯಾಕ್ಕೆ ವಿದೇಶಿ ಫಂಡು ಎಂದರು. ಲಡ್ಡು ಕೂಡ ಬೊಕ್ಕಸಕ್ಕೆ ಬಂದು ಬೀಳಲಿಲ್ಲ. ಆದರೂ ಕೆಲವು ಜನ ಯಕಃಶ್ಚಿತ್ ಕಲಾಸಿಪಾಳ್ಯವನ್ನು ಮುಂದಿನ ಸಿಂಗಾಪುರ ಎಂದು ಭ್ರಮಿಸುವುದು ನಿಲ್ಲಿಸಿಲ್ಲ. ಸ್ಮಾರ್ಟ್ ಸಿಟಿ ಎಂದರು. ಅದು ಸ್ಮಾರ್ಟ್ ಗೇಮ್ ಎಂಬುದು ಖಚಿತವಾಗಿದೆ. ಆಮೇಲೆ ಪೊರಕೆ ಹಿಡಿದು ಸ್ವಚ್ಛಭಾರತ್ ಎಂದರು, ಅದೇ ಪೊರಕೆ ದೆಹಲಿಯಲ್ಲಿ ಮೋದಿಯನ್ನೇ ಗುಡಿಸಿಹಾಕಿತ್ತು. ಮೋದಿ ಪೊರಕೆ ಹಿಡಿದ ಕಟೌಟ್‍ಗಳು ಇವತ್ತಿಗೆ ಕಸದ ರಾಶಿಯ ಮೇಲೆ ನಿಂತಿದೆ. ಅದಕ್ಕಾಗಿ ಜನರ ತಲೆ ಮೇಲೆ ತೆರಿಗೆಯ ಟೋಪಿಯಿಟ್ಟರು. ಸೆಲ್ಫಿ ವಿತ್ ಡಾಟರ್ ಅಂದರು, ವಿದೇಶದ ಹೆಣ್ಣುಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಎದ್ದುಬಂದರು. ಬೇಟಿ ಪಡಾವೋ, ಬೇಟಿ ಬಚಾವೋ ಅಂದ್ರು. ಜನರನ್ನು ಖಾಯಬೇಕಾದ ಪೊಲೀಸ್ರೇ ದಲಿತ ಮಹಿಳೆಯರನ್ನು ಬೆತ್ತಲುಗೊಳಿಸಿ ಮೋದಿಯನ್ನು ಬೆತ್ತಲು ನಿಲ್ಲಿಸಿದರು. ಇಡೀ ದೇಶವನ್ನು ಸ್ವರ್ಗ ಮಾಡುತ್ತೇನೆ ಎಂದರು. ಅಸಹಿಷ್ಣುತೆಯ ನರಕ ಸೃಷ್ಟಿಸಿದರು. ನಾವೆಲ್ಲರೂ ಒಂದೇ ಎಂದರು. ದಲಿತರು, ಅಲ್ಪಸಂಖ್ಯಾತರನ್ನು ಮೇಲ್ವರ್ಗದವರು ಹಿಂಸಿಸಿದರು, ಕೊಂದರು. ಆದರೂ ಮೋದಿಯ ಭರವಸೆ ನಿಂತಿಲ್ಲ. ಎರಡು ವರ್ಷ ಕಳೆದರೂ ನೋಡಿ ಏನೆಲ್ಲಾ ಮಾಡ್ತೀನಿ ಎನ್ನುತ್ತಲೇ ಇದ್ದಾರೆ. ಬಿಡ್ರೀ ಏನೋ ಮಾಡ್ತಾರೆ, ಮುಗಿದಿರೋದು ಎರಡು ಹೆಜ್ಜೆ, ಇನ್ನೂ ಮೂರು ಹೆಜ್ಜೆ ಬಾಕಿಯಿದೆ ಅಂತ ಈಗ ಹೇಳಲಾಗುತ್ತಿದೆ. ಹೋಗ್ಲಿ ಈ ಎರಡು ಹೆಜ್ಜೆಗಳಲ್ಲಿ ಎಲ್ಲಿದೆ ಹೇಳಿ ಅಚ್ಛೇದಿನ್..!?

ಯಾವುದೇ ಬದಲಾವಣೆಯಿಲ್ಲ. ಅಧಿಕಾರಕ್ಕೇರುವಾಗ ಇದ್ದಂತದ್ದೇ ಮಾತಿನ ದಾಟಿ. ಜನರನ್ನು ನಂಬಿಸುವ, ದಿಕ್ಕು ತಪ್ಪಿಸುವ ಪ್ರಯತ್ನ. ನೋಡಿ ಏನೆಲ್ಲಾ ಮಾಡ್ತೀನಿ ಅಂತ ಒಂದಿಷ್ಟು ಫಾರಿನ್ ಟ್ರಿಪ್ ಮಾಡಿ ಎದ್ದುಬಂದರೇ ಹೊರತು, ದೇಶಕ್ಕೇ ಇಲ್ಲಿಯವರೆಗೆ ಅವರಿಂದೇನಾಗಿದೆ ಅಂತ ಸಾಮಾನ್ಯ ಪ್ರಜೆಯಂತೆ ಚಿಂತಿಸಿದರೇ ಸಾಕು ದೊಡ್ಡದೊಂದು ಸೊನ್ನೆ ಸುತ್ತಿಕೊಳ್ಳುತ್ತದೆ. ಹಾಗಂತ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಏನೂ ಆಗಿಲ್ಲವೆಂದಲ್ಲ. ಗುಡ್ಡೆ ಹಾಕುವಷ್ಟು ವಿವಾದಗಳಾಗಿವೆ. ಕೋಮು ಸಂಘರ್ಷಗಳಾಗಿವೆ. ಅಸಹಿಷ್ಣುತೆ ಹೆಚ್ಚಿದೆ. ದೇಶಕ್ಕೆ ಜೈ ಎಂದವರ ಮಾತನ್ನೇ ತಿರುಚಿ ಬೆಂಕಿ ಹಾಕಲಾಗಿದೆ. ಮೋದಿ ಅಧಿಕಾರಕ್ಕೆ ಬಂದರೇ ಏನೆಲ್ಲಾ ಆಗುತ್ತೆ ಅಂತ ನಿರೀಕ್ಷಿಸಲಾಗಿತ್ತೋ ಅದೇ ಆಗುತ್ತಿದೆ. ಆದರೆ ಜಾಣ ಮೋದಿ ಮತ್ತವರ ಪಟಾಲಂ ತಮ್ಮ ಸರ್ಕಾರದ ಹಿರೋಯಿಜಂ ಅನ್ನು ಪ್ರಕಾಶಿಸುವುದರಲ್ಲಿ ಯಶಸ್ವಿಯಾಗಿದೆ.
ಅದನ್ನು ಮೋದಿಯ ಅಲೆ ಎನ್ನುವುದಕ್ಕಿಂತ, ಮೋದಿಯ ಬಲೆ ಎನ್ನಬಹುದು. ಜನರನ್ನು ನೀಟಾಗಿ ಬಲೆ ಹಾಕಿ ಹಿಡಿದಿಟ್ಟುಕೊಂಡ ಅವರು, ಅದೇ ಬಲೆಯಲ್ಲಿ ಜನರನ್ನು ಹಿಡಿದಿಟ್ಟುಕೊಳ್ಳಲು ಶ್ರಮಿಸುತ್ತಿದ್ದಾರೆ. ತನ್ನ ಹೀರೋಯಿಜಂ ನಿರಂತರವಾಗಿರಿಸಲು ಆಗಾಗ್ಗೆ ಚಹಾದ ಕಥೆಯನ್ನು ಹೇಳಿ, ವಾವ್ ಮೋದಿ ವಾವ್ ಅಂತ ಕರೆಸಿಕೊಳ್ಳುವುದರಲ್ಲಿ ಸಫಲರಾಗುತ್ತಿದ್ದಾರೆ. ಮೋದಿ ಎಷ್ಟೆಲ್ಲಾ ವಿವಾದ ಮಾಡಿಕೊಂಡಿದ್ದಾರಲ್ಲ ಎಂದರೇ, ಯಾರು ಮೋದೀನಾ, ಇವೆಲ್ಲ ವಿರೋಧಿಗಳ ಪಿತೂರಿ, ಮೋದಿ ಭೂಮಿಯ ಮೇಲಿರುವ ಜೀವಂತ ದೇವರು ಎಂದು ಕನವರಿಸುತ್ತಾರೆ. ಅಚ್ಛೇದಿನ್ ಮಾಂತ್ರಿಕತೆಯ ಮುಂದೆ ಇಂತಹ ಕಥೆ, ವಸೂಲಿಗಳು ನಡೆಯುತ್ತಲೇ ಇರುತ್ತವೆ.

 

POPULAR  STORIES :

ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತನಿಗೆ 10ಲಕ್ಶ ರೂ ಮಧ್ಯಂತರ ಪರಿಹಾರ

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...