ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಅಪ್ರಾಪ್ತ ಬಾಲಕಿಯ ಅಶ್ಲೀಲ ಫೋಟೋವನ್ನು ಶೇರ್ ಮಾಡಿದ್ದ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ತನ್ನ ಸ್ನೇಹಿತನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ನಡೆಸಿದ ಸಂಭಾಷಣೆಯನ್ನು ಹಾಗೂ ಆಕೆಯ ಅಶ್ಲೀಲ ಫೋಟೋವನ್ನು ಆರೋಪಿ ಭರತ್ ಖಾತರ್ ಎಂಬಾತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾನೆ.
ಆರೋಪಿ ಭರತ್ ಖಾತರ್ ಈವೆಂಟ್ ಮ್ಯಾನೆಜ್ಮೆಂಟ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆರೋಪಿ ನಡೆಸುತ್ತಿದ್ದ ಚಟುವಟಿಕೆ ಬಗ್ಗೆ ಮಾಹಿತಿ ದೊರೆತ ಮೇರೆಗೆ ಪೊಲೀಸರು ಆತನನ್ನು ಫರಿದಾಬಾದ್ ಮನೆಯಲ್ಲಿ ಬಂಧಿಸಿದ್ದಾರೆ ಹಾಗೂ ಆರೋಪಿ ಬಳಿ ಇದ್ದ ಮೊಬೈಲ್‍ನನ್ನು ವಶ ಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಈ ಹಿಂದೆ ದೂರು ನೀಡಿರುವ ಬಾಲಕಿಯೊಂದಿಗೆ ಸ್ನೇಹ ಹೊಂದಿರುವುದಾಗಿ ತಿಳಿಸಿದ್ದಾನೆ. ನಂತರ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ, ನಕಲಿ ಖಾತೆಯನ್ನು ರಚಿಸಿ ಬಾಲಕಿಯ ಜೊತೆ ನಡೆಸಿದ ನಿಂದನೀಯ ಸಂಭಾಷಣೆ ಹಾಗೂ ನಗ್ನ ಫೋಟೋವನ್ನು ಶೇರ್ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.