ರಾತ್ರಿ ಕಂಡ ಬಾವಿಗೆ ಹಗಲೇ ಬಿದ್ದರು..! ರಾಹುಲ್ ಎಂಬ ಗಲ್ಲಿ ಕ್ರಿಕೆಟ್ ಪ್ಲೇಯರ್..!

Date:

 

raaa
ಕಳೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ರಾಜ್ಯಗಳನ್ನು..!, ಐದಾರು ಜಿಲ್ಲೆಗಳಲ್ಲಿ ಕ್ಷೀಣವಾಗಿ ಉಸಿರಾಡುತ್ತಿದೆ. ಹೀಗೆ ಮುಂದುವರಿದರೇ ಮುಂದೊಂದು ದಿನ, ಕಾಂಗ್ರೆಸ್ ಅಂತ ಪಕ್ಷವೊಂದಿತ್ತು ಎಂದು ಭವಿಷ್ಯದ ಭಾರತ ಮಾತಾಡಿಕೊಳ್ಳಬೇಕಾಗುತ್ತದೆ. ಹಾಗಂತ ಆತಂಕಗೊಂಡ ಕಾಂಗ್ರೆಸ್ ಹಿರಿಯ ನಾಯಕರು, ಕಾಂಗ್ರೆಸ್‍ಗೆ ಮೇಜರ್ ಸರ್ಜರಿಯಾಗಬೇಕು ಎಂದರು. ಮೇಜರ್ ಸರ್ಜರಿ ಅಂದರೆ ಏನು..? ಯಾರನ್ನು ಬದಲಾಯಿಸಬೇಕು..? ಯಾರಿಗೆ ಜವಬ್ಧಾರಿವಹಿಸಬೇಕು..? ಕಾರ್ಯತಂತ್ರ ಹೇಗೆ ಸಿದ್ಧಪಡಿಸಬೇಕು..? ಮುಗಿದೇಹೋಗಿರುವ ಕಾಂಗ್ರೆಸ್ ಅನ್ನು ಪುನರ್‍ನಿರ್ಮಾಣ ಮಾಡುವುದು ಹೇಗೆ..? ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಾಯಕತ್ವವನ್ನು ಅನ್ವೇಷಿಸಬೇಕು.

ಕಾಂಗ್ರೆಸ್ ಹಿರಿಯರು ಅಸಲಿಗೆ ಮೇಜರ್ ಸರ್ಜರಿ ಆಗಬೇಕೆಂದು ಹೇಳಿದ್ದರ ಹಿಂದೆ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಅನ್ನು ಮುಕ್ತಿ ಮಾಡಬೇಕೆಂದಿತ್ತು. ಅವರ ಜಾಗಕ್ಕೆ ಅಥವಾ ಎಐಸಿಸಿ ಅಧ್ಯಕ್ಷಗಾದಿಗೆ ಪ್ರಿಯಾಂಕ ಅಥವಾ ಬೇರೊಬ್ಬ ಸಮರ್ಥ ನಾಯಕರನ್ನು ತಂದು ಕೂರಿಸುವ ಇರಾದೆಯಿತ್ತು. ಆದರೆ ಕಾಂಗ್ರೆಸ್ ಬಾಣಲೆಯಿಂದ ಸೀದಾ ಬೆಂಕಿಗೆ ಬಿದ್ದಿದೆ. ಇವತ್ತು ಕಾಂಗ್ರೆಸ್ ಚಿಂತಾಜನಕ ಸ್ಥಿತಿ ತಲುಪಲು ಕಾರಣವಾಗಿದ್ದ ರಾಹುಲ್‍ಗಾಂಧಿಗೆ ಉಪಾಧ್ಯಕ್ಷನ ಸ್ಥಾನದಿಂದ ಅಧ್ಯಕ್ಷ ಸ್ಥಾನಕ್ಕೆ ಬಡ್ತಿ ಕೊಟ್ಟು ಈ ದೇಶದಿಂದಲೇ ಕಾಂಗ್ರೆಸ್ ಅನ್ನು ಸರ್ವನಾಶ ಮಾಡುವಲ್ಲಿ ಕೊನೆಯ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ. ಅತ್ತ ಪ್ರಿಯಾಂಕ ಗಾಂಧಿಗೆ ಅದ್ಯಾಕೋ ರಾಜಕಾರಣದ ಬಗ್ಗೆ ಆಸಕ್ತಿಯಿಲ್ಲ. ರಾಹುಲ್‍ಗಾಂಧಿಗೆ ಎಲ್ಲಾ ಆಕಾಂಕ್ಷೆಗಳಿದ್ದರೂ ಅವರನ್ನು ಪ್ರೌಢ ಎಂದು ಜನರು ಒಪ್ಪಿಕೊಳ್ಳುತ್ತಿಲ್ಲ. ಹೀಗಿದ್ದು ಅದೇಕೆ ರಾಹುಲ್‍ಗೆ ಕಾಂಗ್ರೆಸ್ ಮಣೆ ಹಾಕುತ್ತಿದೆಯೋ ಅರ್ಥವಾಗುತ್ತಿಲ್ಲ.

ಅಷ್ಟಕ್ಕೂ, ನಿಧಿ ಶೋಧನೆಯ ಅಗತ್ಯವೇ ಇರಲಿಲ್ಲ. ಕೈಯ್ಯಲ್ಲೇ ಕಾಂಗ್ರೆಸ್ ಎಂಬ ಬೆಲೆ ಕಟ್ಟಲಾಗದ ನಿಧಿಯಿತ್ತು. ಆದರೂ ಯುವರಾಜ ಅದನ್ನ ಸಮರ್ಥವಾಗಿ ನಿಭಾಯಿಸುವುದರಲ್ಲಿ ಸೋತುಹೋದರು. ಒಂದೇ ಕುಟುಂಬ, ಮೂವರೂ ಪ್ರೈಂ ಮಿನಿಸ್ಟರ್, ಒಬ್ಬ ಸಮರ್ಥ ನಾಯಕಿ..! ಅವರ ಕುಟುಂಬದ ಕೂಸಿನ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳಿದ್ದವು. ಏಕೆಂದರೇ ನೆಹರೂ ರಕ್ತ ಅವರ ಕುಟುಂಬದ ನರನಾಡಿಯಲ್ಲೂ ಮಿಳಿತವಾಗಿತ್ತು. ಕಾಂಗ್ರೆಸ್‍ನ ಮಿಕ್ಕ ನಾಯಕರು ಕೂಡ ನೆಹರು ಕುಟುಂಬದ ನಾಯಕತ್ವವನ್ನು ಒಪ್ಪಿಕೊಂಡಿತ್ತು, ಅಥವಾ ಒಗ್ಗಿಕೊಂಡಿತ್ತು. ಯಾವುದನ್ನೂ ರಾಹುಲ್ ಬಯಸಲಿಲ್ಲ, ಎಲ್ಲವೂ ಅದಾಗೇ ಒದಗಿತ್ತು. ರಾಜಕಾರಣಕ್ಕೆ ತಪಸ್ಸು ಬೇಕೆನ್ನುತ್ತಾರೆ, ಹಾರ್ಡ್‍ವರ್ಕ್ ಮಾಡುವವನಿಗೆ ಮಾತ್ರ ರಾಜಕಾರಣ ಒಲಿಯುತ್ತದೆ. ಪಥ್ಯವಾಗುತ್ತದೆ. ಅವರು ಜನನಾಯಕರೆನಿಸಿಕೊಳ್ಳುತ್ತಾರೆ. ಒಳ್ಳೆ ಆಡಳಿತ ಎನ್ನುವುದಕ್ಕಾಗದಿದ್ದರೂ.. ಅಟ್ಲಿಸ್ಟ್ ಆಡಳಿತ ನಡೆಸುವ ಚಾಕಾಚಕ್ಯತೆ ಅವರಲ್ಲಿ ಮೇಳೈಸಿರುತ್ತದೆ. ಆದರೆ ಇದ್ಯಾವ ಕ್ವಾಲಿಟಿಯೂ ರಾಹುಲ್‍ಗಿಲ್ಲ. ಮುತ್ತಾತನ ಕೀರ್ತಿ, ಅಜ್ಜಿಯ ದಿಟ್ಟ ಆಡಳಿತ, ಅಪ್ಪನ ಖ್ಯಾತಿ, ಅಮ್ಮನ ಶ್ರೀ ರಕ್ಷೆ.. ಇವಿಷ್ಟು ಮಾತ್ರ ಅವರ ಬೆನ್ನಿಗಿತ್ತು. ತೋಳು ಮಡಚಿ ಜನನಾಯಕರಾಗಲು ಹೊರಟರು. ಕಾಂಗ್ರೆಸ್ ಅನ್ನು ಇನ್ನಿಲ್ಲದ ಎತ್ತರಕ್ಕೆ ತೆಗೆದುಕೊಂಡು ಹೋಗುವಂತೆ ವಿಜೃಂಭಿಸಿದರು. ಮೈಕ್ ಸಿಕ್ಕಲೆಲ್ಲಾ ಯಪರಾತಪರಾ ಭಾಷಣಗಳನ್ನು ಹರಿಯಬಿಟ್ಟರು. ಕಡೆಕಡೆಗೆ ಕಾಂಗ್ರೆಸ್‍ನ ಹಿರಿಯ ನಾಯಕರ ಬಗ್ಗೆಯೇ ಟೀಕೆ ಮಾಡತೊಡಗಿದರು. ಎಲ್ಲವೂ ಬಾಲೀಶತನದ ಪರಮಾವಧಿಯಾಗಿತ್ತು.

ಒಂದಿಷ್ಟು ಯುವ ಪೀಳಿಗೆಯನ್ನು ರಾಹುಲ್ ಸೆಳೆದಿದ್ದು ನಿಜ. ಆದರೆ ಅದಕ್ಕೆ ಕಾರಣ ಅವರ ಪ್ರಬುದ್ಧ ರಾಜಕಾರಣವೆಂದರೇ ತಮಾಷೆಯಾಗುತ್ತದೆ. ರಾಹುಲ್‍ನನ್ನು ಯುವಕರು ಅಥವಾ ಯುವತಿಯರು ಇಷ್ಟಪಡುವುದಕ್ಕೆ ಬಲವಾದ ಕಾರಣ, ಅವರು ಯಾವುದೇ ಬಾಲಿವುಡ್ ಹೀರೋಗಿಂತ ಕಡಿಮೆಯಿರಲಿಲ್ಲ. ಅವರಂತೆ ಅವರನ್ನು ಪ್ರೀತಿಸಿದವರ ನಿಮಿತ್ತವೂ ಬಾಲೀಶವಾಗಿತ್ತು. ಕಾಂಗ್ರೆಸ್ ರಾಹುಲ್‍ಗೆ ಏನೆಲ್ಲಾ ಕೊಟ್ಟಿಲ್ಲ ಹೇಳಿ, ಆರಂಭದಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್‍ನ ನಾಯಕತ್ವವಹಿಸಿತು. ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಸೆಕ್ರೆಟರಿ ಮಾಡಿತು. ಅಮೇಥಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಪಾರ್ಲಿಮೆಂಟ್ ಸದಸ್ಯತ್ವ ನೀಡಿತು. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಸೆಕೆಂಡ್ ರ್ಯಾಂಕ್ ಕೊಟ್ಟು ಪ್ರೋತ್ಸಾಹಿಸಿತು. ಆದರೂ ರಾಹುಲ್ ರಾಜಕೀಯದಲ್ಲಿ ಪ್ರಬುಧ್ದರಾಗಿರಲಿಲ್ಲ. ಎಲ್ಲಾ ಗೊತ್ತಿದ್ದು ಅವರನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಪಿಎಂ ಕ್ಯಾಂಡಿಡೆಟ್ ಅಂತ ಘೋಷಿಸಿ ಅಖಾಡಕ್ಕಿಳಿಸಿತ್ತು.

ಚುನಾವಣಾ ಪ್ರಚಾರದ ವೇಳೆ ಮೋದಿ ಹಾಗೂ ರಾಹುಲ್ ಗಾಂಧಿಯ ಭಾಷಣಗಳು ಕೂಡ ಹೈಲೇಟ್ ಆಗುತ್ತಿತ್ತು. ಮೋದಿ ಅಭಿವೃದ್ದಿ ಮಂತ್ರ ಘೋಷಿಸುತ್ತಿದ್ದರೇ, ರಾಹುಲ್ ಮೋದಿಯನ್ನು ಕೋಮುವಾದಿ ಎಂದು ಬೈಯುತ್ತಲೇ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಮೋದಿ, `ರಾಹುಲ್ ಬಚ್ಚಾ.. ಗಲತ್ ಬೋಲ್ತಾ ಹೈ, ಖೇಲ್‍ನೇ ಚೋಡ್‍ದೋನಾ..’ ಅಂತ ಟಾಂಗು ಕೊಟ್ಟು ಸುಮ್ಮನಾಗುತ್ತಿದ್ದರು.
ಮುಂದೆ ಕಾಂಗ್ರೆಸ್ ಇನ್ನಿಲ್ಲದಂತೆ ನೆಲಕಚ್ಚಿಹೋಯಿತು. ಯುವರಾಜ ಮುಖಭಂಗ ಅನುಭವಿಸಿದರು. ಅವತ್ತಿನಿಂದಲೇ ಯುವರಾಜ ನಾಪತ್ತೆಯಾದರು. ಕಾಂಗ್ರೆಸ್‍ನ ಯಾವುದೇ ಸಭೆ ಸಮಾರಂಭದಲ್ಲೂ ಕಾಣಿಸಿಕೊಳ್ಳಲಿಲ್ಲ. ಅಲ್ಲೆಲ್ಲೋ ಕೆಲವೊಮ್ಮೆ ಹೈಕಮಾಂಡ್ ಎಂದೇ ಖ್ಯಾತಿಯಾಗಿದ್ದ ಸೋನಿಯಾ ಗಾಂಧಿ ಮುಖದರ್ಶನವಾಗುತ್ತಿತ್ತು…! ಹತ್ತಿರತ್ತಿರ ಅರವತ್ತು ವರ್ಷಗಳ ಕಾಲ ಇಡೀ ದೇಶವನ್ನು ಆಳಿದ್ದ ಬಲಿಷ್ಠ ಕಾಂಗ್ರೆಸ್ ಕೇವಲ ಒಂದೇ ಚುನಾವಣೆಯ ಸೋಲಿಗೆ `ಕೈ’ ಮುರಿದುಕೊಂಡಿತಾ..? ಮತ್ಯಾವತ್ತೂ ಚೇತರಿಸಿಕೊಳ್ಳುವುದಿಲ್ಲ ಅಂತ ಆಗಲೇ ನಿರ್ಧಾರಕ್ಕೆ ಬಂದುಬಿಟ್ಟಿದೆಯಾ..? ಕಷ್ಟಪಟ್ಟು ವಿರೋಧ ಪಕ್ಷದ ಸ್ಥಾನದಲ್ಲಿ ಕುಂತಿರುವ ಆ ಪಕ್ಷಕ್ಕೆ ಟೀಕಾ-ಟಿಪ್ಪಣೆ ಮಾಡುವಷ್ಟು ಸಾಮಥ್ರ್ಯ ಇಲ್ಲವಾ..? ಎನ್ನುತ್ತಿರುವಾಗ ಮತ್ತೆ ಪ್ರತ್ಯಕ್ಷರಾದರು. ಆದರೆ ರಿಟರ್ನ್‍ನಲ್ಲೂ ಪ್ರೌಢರೆನಿಸಲಿಲ್ಲ.

ರಾಜೀವ್ ಗಾಂಧಿ ಜಮಾನ ಮುಗಿದ ಎಷ್ಟೋ ವರ್ಷಗಳ ನಂತರ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಸೋನಿಯಾ ಗಾಂಧಿ, ಕಾಂಗ್ರೆಸ್‍ಗೆ ಮರುಜೀವ ನೀಡಿದರು. ಸತತ ಎರಡು ಬಾರಿ `ಕೈ’ಯನ್ನು ಎತ್ತಿ ಹಿಡಿದಿದ್ದರು. ಆದರೆ ತಾನು ವಿಶ್ರಾಂತಿ ಬಯಸಿ, ತನ್ನ ಸುಪುತ್ರನನ್ನು ಅಖಾಢಕ್ಕೆ ಬಿಟ್ಟರು ನೋಡಿ, ಎಡವಟ್ಟಾಗಿದ್ದೇ ಇಲ್ಲಿ. ಹೆತ್ತವರಿಗೆ ಹೆಗ್ಗಣ ಮುದ್ದು. ಆದರೆ ದಶಕಗಳ ಇತಿಹಾಸವಿರುವ ಕಾಂಗ್ರೆಸ್ ಮಟ್ಟಿಗೆ ಈ ಲಾಲಿ ಸುವ್ವಾಲಿಗಳ ಅಗತ್ಯವಿರಲಿಲ್ಲ. ಸೋನಿಯಾ ಗಾಂಧಿ ಮಗನನ್ನು ಪ್ರಧಾನಿ ಮಾಡಲು ಹೋಗಿ `ಕೈ’ ಸುಟ್ಟುಕೊಂಡಿದ್ದಾರೆ. ಪ್ರಣವ್ ಮುಖರ್ಜಿ, ಪಿ ಚಿದಂಬರಂ, ಆಂಟನಿ ಅವರಂಥ ಬಲಾಢ್ಯ ನಾಯಕರನ್ನು ಬದಿಗಿಟ್ಟು, ರಾಹುಲ್‍ನನ್ನು ಪಿಎಂ ಅಭ್ಯರ್ಥಿ ಅಂತ ಘೋಷಿಸಿ ಮುಂದೆಬಿಟ್ಟರೋ, ಅನನುಭವಿ ಯುವರಾಜ ತನ್ನ ಬಾಲೀಶತನಗಳಿಂದಲೇ ಕಾಂಗ್ರೆಸ್ ಅವನತಿಗೆ ಕಾರಣರಾದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿ, ಅಟ್ಲಿಸ್ಟ್ ವಿರೋಧ ಪಕ್ಷದ ಸ್ಥಾನಕ್ಕೂ ಹೆಣಗಾಡಿದಾಗ ರಾಹುಲ್ ಎಂಬ ಮಗು ಪೇಚಾಡಿದ್ದನ್ನು ನೋಡಬೇಕಿತ್ತು. ಚುನಾವಣ ಪೂರ್ವ, ಚುನಾವಣಾ ನಂತರವೂ ಅವರ ಬಾಲೀಶತನ ಸತ್ತಿರಲಿಲ್ಲ. ಏಕೆಂದರೇ ಕಾಂಗ್ರೆಸ್ ಸೋತಿರುವುದು ಇದೇನು ಮೊದಲ ಸಲವಲ್ಲ. ಸಮರ್ಥ ಆಡಳಿತ ನಡೆಸಿದ ನಂತರವೂ ಜನತಾ ಪರಿವಾರದ ಹೊಡೆತಕ್ಕೆ ತರಗರಲೆಯಾಗಿ ಹೋಗಿತ್ತು. ಆದರೆ ಒಂದೇ ಟರ್ಮ್‍ನಲ್ಲಿ ಆ ಸೋಲನ್ನು ನಿವಾಳಿಸಿ ದಿಗ್ವಿಜಯಗಳಿಸಿತ್ತು. ಅವತ್ತು ಅಲ್ಲಿದ್ದವರು `ಪವರ್‍ಫುಲ್’ ಇಂದಿರಾ ಗಾಂಧಿ. ಇವತ್ತು ಇಲ್ಲಿರೋದು `ಝೀರೋ ಕ್ವಾಲಿಟಿ’ ರಾಹುಲ್ ಗಾಂಧಿ.

ಮೋದಿ ಅಭಿವೃದ್ದಿ ಮಂತ್ರ ಘೋಷಣೆಯ ಉದ್ದಕ್ಕೂ ಕಾಂಗ್ರೆಸ್ ಭಾರತವನ್ನು ಅರವತ್ತು ವರ್ಷಗಳಿಂದ ತಟಸ್ಥಗೊಳಿಸಿದೆ. ಯಾವುದೇ ಅಭಿವೃದ್ದಿಯಾಗಿಲ್ಲ. ನಾನು ಐದೇ ವರ್ಷದಲ್ಲಿ ಏನೆಲ್ಲಾ ಮಾಡ್ತೀನಿ ನೋಡಿ ಎನ್ನುತ್ತಲೇ ಅಧಿಕಾರಕ್ಕೆ ಬಂದರು. ಯೋಜನೆಗಳನ್ನು ಜಾರಿಗೆ ತಂದರು. ಅದನ್ನು ಹೇಗೆ ಪ್ರಚಾರ ಮಾಡಬೇಕು, ಜನರಿಗೆ ಹೇಗೆ ಮುಟ್ಟಿಸಬೇಕು, ಜನರ ಮನಸಿನಲ್ಲಿ ಹೇಗೆ ವೀರಾಜಮಾನರಾಗಬೇಕು ಎಂಬ ತಂತ್ರಗಾರಿಕೆ ಅವರಿಗೆ ಕರಗತವಾಗಿತ್ತು. ಆದರೆ ಮನಮೋಹನ್ ಸಿಂಗ್ ಮಾತೇ ಆಡಲಿಲ್ಲ. ಪ್ರಚಾರ ಬಯಸಲಿಲ್ಲ. ಆದರೆ ಕೆಲಸ ಮಾಡಿದರು. ಆರ್ಥಿಕ ಸಂಕಷ್ಟದಿಂದ ಬಳಲಬೇಕಾಗಿದ್ದ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ ಇವ್ಯಾವುದು ಜನರಿಗೆ ಅರ್ಥವಾಗಲಿಲ್ಲ. ಮನ್‍ಮೋಹನ್ ಸಿಂಗ್ ಜನರನ್ನು ಮುಟ್ಟಲಿಲ್ಲ. ಏಕೆಂದರೇ ಕಾಂಗ್ರೆಸ್‍ಗೆ ಪ್ರಚಾರಬೇಕಿರಲಿಲ್ಲ. ಯಥಾಪ್ರಕಾರ ರಾಜಗಾಂಭೀರ್ಯದಲ್ಲೇ ನಡೆಯಿತು. ಅದು ಕಾಂಗ್ರೆಸ್‍ನ ಸಿದ್ಧಾಂತವೂ ಹೌದು. ನಡೆದು ಬಂದ ರೀತಿಯೂ ಹೌದು. ಇನ್ನು ಆ ಪಕ್ಷದ ಅನುಭವದ ಬಗ್ಗೆ ಮಾತೇ ಆಡುವಂತಿಲ್ಲ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಮದರ್ ಸೆಂಟಿಮೆಂಟ್‍ಗೆ ತಕರಾರು ಮಾಡದೇ ಸುಮ್ಮನಾಯಿತು. ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ರಾಹುಲ್‍ಗೆ ಸಡನ್ನಾಗಿ ವಲ್ರ್ಡ್‍ಕಪ್ ಆಡಲು ಅವಕಾಶ ಕೊಟ್ಟಿತು. ಅವರು ಮೊದಲ ಎಸೆತಕ್ಕೆ ಇಡೀ ತಂಡವನ್ನು ಔಟ್ ಮಾಡಿದ್ದರು. ಯಾವುದೇ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಸೋಲಿನ ಪರಾಮರ್ಶೆ ಮಾಡುತ್ತದೆ. ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡುತ್ತದೆ. ವಿರೋಧಪಕ್ಷವಾಗಿ ಅವಕಾಶ ಸಿಕ್ಕಾಗೆಲ್ಲಾ ಆಡಳಿತ ಪಕ್ಷದ ಮೇಲೆ ಮುಗಿಬಿದ್ದು ಜನರ ಮನಸ್ಸಿನಲ್ಲಿ ಸ್ಥಾಪಿತವಾಗಲು ಪ್ರಯತ್ನಿಸುತ್ತದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ, ಅಧಿಕಾರಕ್ಕೇರುವ ಶತಃ ಪ್ರಯತ್ನಗಳನ್ನು ಮಾಡುತ್ತದೆ. ಆದರೆ ಕಾಂಗ್ರೆಸ್‍ನಲ್ಲಿ ಇವ್ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೊಳು ಮಡಚಿ, ಬಾಲೀಶವಾಗಿ ಅಬ್ಬರಿಸುವ ರಾಹುಲ್, ಗತಕಾಲದ ರಾಜಕಾರಣ, ಹಲ್ಲುಕಿತ್ತ ಹಾವಿನಂತಾಗಿದೆ. ಹಲವು ದಶಕಗಳ ಐತಿಹ್ಯವಿರುವ ಕಾಂಗ್ರೆಸ್ ಪರಿಸ್ಥಿತಿ ನಿಜಕ್ಕೂ ಶೋಚನೀಯ..?

ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸುಶಿಕ್ಷಿತ ಭಾರತೀಯರಿಗೆ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸೃಷ್ಠಿಸುವ ಉದ್ದೇಶದೊಂದಿಗೆ 1885ರಲ್ಲಿ ಸ್ಥಾಪಿಸಲಾಯಿತು. ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷ ಬ್ರಿಟೀಷ್ ವಿರೋಧಿಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಬ್ರಿಟೀಷ್ ಸರ್ಕಾರದ ವಿರುದ್ಧ ಸೆಟೆದು ನಿಂತಿತ್ತು. ಭಾರತೀಯ ಸ್ವಾತಂತ್ರಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ಸಾರಥ್ಯವನ್ನು ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್ ವಹಿಸಿಕೊಂಡಿದ್ದರು. ಸ್ವಾತಂತ್ರ್ಯನಂತರ ಜವಾಹರ್ ಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಅನೇಕ ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಮಟ್ಟಿಗೆ ನೆಹರು ಪ್ರಮುಖವಾಗಿದ್ದರಿಂದ ಅದು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿಯನ್ನು ಮುಗಿಸಿಕೊಂಡು ರಾಹುಲ್ ಗಾಂಧಿಯವರೆಗೆ ಬಂದುನಿಂತಿದೆ. ಕಾಂಗ್ರೆಸ್‍ನಿಂದ ನೆಹರು ದೇಶದ ಮೊದಲ ಪ್ರಧಾನಮಂತ್ರಿಯಾಗಿ ಗದ್ದುಗೆಗೇರಿದ್ದರು. ಅವರು 1947 ಆಗಸ್ಟ್ 15ರಿಂದ 1964 ಮೇ 27ರವರೆಗೆ ಅಧಿಕಾರದಲ್ಲಿದ್ದರು. ಅವರು ಬರೋಬ್ಬರಿ 16 ವರ್ಷ 286 ದಿನಗಳ ಕಾಲ ದೇಶವನ್ನು ಆಳಿದರು. ಅವರ ಮರಣ ನಂತರ ಗುಲ್ಜಾರಿಲಾಲ್ ನಂದಾ ಹಾಗೂ ಲಾಲ್ ಬಹದ್ಧೂರ್ ಶಾಸ್ತ್ರಿ ಪ್ರಧಾನಿಯಾದರು. ಆದರೆ 1966ರಿಂದ ನೆಹರು ಕುಟುಂಬವೇ ಅಧಿಕಾರ ನಡೆಸತೊಡಗಿತು. ಗಾಂಧಿ ಕುಟುಂಬದ ಎರಡನೇ ಕುಡಿ ಇಂದಿರಾ ಗಾಂಧಿ 1966 ಜನವರಿ 24ರಂದು ಕಾಂಗ್ರೆಸ್ ಪಕ್ಷದಿಂದ ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದರು. ಸತತ 11 ವರ್ಷಗಳ ಕಾಲ ಆಡಳಿತ ನಡೆಸಿದರು. ಅವರಿದ್ದಷ್ಟು ದಿನ ಕಾಂಗ್ರೆಸ್‍ನಲ್ಲಿ ಅವರದ್ದೇ ಅಂತಿಮ ಮಾತಾಗಿರುತ್ತಿತ್ತು. ಅಲ್ಲಿ ಬೇರೆಯವರ ಅಭಿಪ್ರಾಯ, ಸಲಹೆಗಳಿಗೆ ಅಷ್ಟಾಗಿ ಅವಕಾಶವಿರಲಿಲ್ಲ. ಇಂದಿರಗಾಂಧಿ ಮಹಿಳೆಯಾದರೂ, ಅವರ ಆಡಳಿತ ವೈಕರಿ, ಪಕ್ಷದ ಮೇಲಿನ ಹಿಡಿತ, ಜನರು ಅವರ ಮೇಲಿಟ್ಟಿದ್ದ ವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು.

1971ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಭಾರಿ ಅಕ್ರಮ ನಡೆಸಿದ್ದಾರೆ ಎಂದು, ಆ ಚುನಾವಣೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ಅಸಿಂಧುಗೊಳಿಸಿತು. ಇಂದಿರಾಗಾಂಧಿ ಈ ಸಂದರ್ಭದಲ್ಲಿ ರಾಜಿನಾಮೆ ನೀಡುವ ಬದಲು ತುರ್ತು ಪರಿಸ್ಥಿತಿ ಘೋಷಿಸಿದರು. ಎರಡು ವರ್ಷಗಳ ಕಾಲ ತುರ್ತು ಪರಿಸ್ಥಿತಿ ಮುಂದುವರೆದಿತ್ತು. ಇದರಿಂದ ಬೇಸತ್ತ ದೇಶದ ಜನ 1977ರ ಚುನಾವಣೆಯಲ್ಲಿ ಜನತಾ ಮೋರ್ಚಾ ಎಂದು ಕರೆಯಲ್ಪಟ್ಟ ಪಕ್ಷಗಳ ಒಕ್ಕೂಟವನ್ನು ಗೆಲ್ಲಿಸಿದರು. ಕಾಂಗ್ರೆಸ್ ಪಕ್ಷ ಮೊದಲ ಬಾರಿ ಹೀನಾಯವಾಗಿ ಸೋತಿತ್ತು. ಆದರೆ ಜನತಾ ಪಕ್ಷ ಅಧಿಕಾರಕ್ಕೆ ಬಂದರೂ, ಅದರ ನೆಲೆಗಟ್ಟು ದುರ್ಬಲವಾಗಿತ್ತು. ಅಧಿಕಾರದಲ್ಲಿ ಹಿಡಿತವಿರಲಿಲ್ಲ. ಕಾಂಗ್ರೆಸ್‍ನಿಂದ ಬಂಡಾಯವೆದ್ದು ಜನತಾ ಪರಿವಾರ ಸೇರಿಕೊಂಡಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ, ಗುಲ್ಜಾರಿಲಾಲ್ ನಂದಾರಂಥ ಬಲಾಢ್ಯ ನಾಯಕರಿದ್ದರೂ, ಸ್ಥಿರತೆಯನ್ನು ಕಾಪಾಡುವುದರಲ್ಲಿ ಸಫಲತೆ ಕಾಣಲಿಲ್ಲ. ಹಾಗಾಗಿ 1980ರಲ್ಲಿ ಮತ್ತೆ ಚುನಾವಣೆ ನಡೆಯಿತು. ಅಷ್ಟರಲ್ಲಾಗಲೇ ಇಂದಿರಾಗಾಂಧಿ ಎಡವಟ್ಟುಗಳನ್ನು ಮರೆತಿದ್ದ ಜನ, ಅವರನ್ನು ಮತ್ತೊಮ್ಮೆ ಪ್ರಧಾನಿಪಟ್ಟದಲ್ಲಿ ಕೂರಿಸಿದರು. 1984ರಲ್ಲಿ ಇಂದಿರಾಗಾಂಧಿ ಹತ್ಯೆ ನಡೆದ ನಂತರ ಮಧ್ಯಂತರ ಅವಧಿಗೆ ಪ್ರಧಾನಿಯಾಗಿ ರಾಜೀವ್‍ಗಾಂಧಿ ಪ್ರಮಾಣವಚನ ಸ್ವೀಕರಿಸಿದರು. ಆನಂತರ 1984 ನವೆಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ಮತ್ತೆ ಪ್ರಧಾನಿಯಾದರು. 1989ರವರೆಗೆ ದೇಶವನ್ನಾಳಿದರು. 1992ರಲ್ಲಿ ರಾಜೀವ್‍ಗಾಂಧಿ ಹತ್ಯೆ ನಡೆದ ನಂತರ ಕಾಂಗ್ರೆಸ್ ಪಕ್ಷ ಸಮರ್ಥ ನಾಯಕನಿಲ್ಲದೆ ಸೊರಗತೊಡಗಿತು. ಪಿ ವಿ ನರಸಿಂಹರಾವ್ ಅಧಿಕಾರ ಹಿಡಿದರಾದರೂ ಕಾಂಗ್ರೆಸ್ ಮಂಪರಿನಿಂದ ಏಳಲಿಲ್ಲ.

ಈ ಹೊತ್ತಿಗೆ ಕಾಂಗ್ರೆಸ್‍ಗೆ ಗಾಂಧಿ ಕುಟುಂಬದ ಸೊಸೆ ಸೋನಿಯಾ ಗಾಂಧಿಯ ಪ್ರವೇಶವಾಯಿತು. ಪ್ರಧಾನಿಯಾಗುವ ಅವಕಾಶವಿದ್ದರೂ ನಿರಾಕರಿಸಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿ, ತಾವು ಹೈಕಮಾಂಡ್ ಸ್ಥಾನದಲ್ಲಿ ಪ್ರತಿಷ್ಟಾಪನೆಯಾದರು. ಕಾಂಗ್ರೆಸ್ ಸತತ 10 ವರ್ಷಗಳ ಕಾಲ ಆಡಳಿತ ನಡೆಸಿತು. ಆದರೆ ಕಳೆದ ಚುನಾವಣೆಯಲ್ಲಿ ರಾಹುಲ್‍ನನ್ನು ಮುಂದೆ ಬಿಟ್ಟು ಎಡವಟ್ಟು ಮಾಡಿಕೊಂಡಿತ್ತು. ಕಾಂಗ್ರೆಸ್ ಧೂಳೀಪಟವಾಯಿತು. ಒಟ್ಟಿನಲ್ಲಿ ನೆಹರು ಅವರಿಂದ ಶುರುವಾದ ಕಾಂಗ್ರೆಸ್ ಯಾನ, ಇದೀಗ ರಾಹುಲ್ ಗಾಂಧಿಯವರೆಗೆ ಬಂದು ನಿಂತಿದೆ. ಅಸಲಿಗೆ ಸೋನಿಯಾ ಗಾಂಧಿಯ ನಂತರ ಕಾಂಗ್ರೆಸ್ ಪತಾಕೆಯನ್ನು ಪ್ರಿಯಾಂಕ ಗಾಂಧಿ ಹಾರಿಸಲಿ, ಅವರಿಗೆ ಇಂದಿರಾ ಗಾಂಧಿಯ ಲುಕ್ ಇದೆ, ಜನರನ್ನು ಸೆಳೆಯುವ ಚಾಕಾಚಕ್ಯತೆಯಿದೆ ಎಂದೇ ಲೆಕ್ಕಾಚಾರವಿತ್ತು. ಬಹುಶಃ ರಾಹುಲ್ ಬದಲಿಗೆ ಪ್ರಿಯಾಂಕ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕ್ಕಿದ್ದರೇ… ಕಾಂಗ್ರೆಸ್‍ಗೆ ಈ ದುರ್ಗತಿ ಬರುತ್ತಿರಲಿಲ್ಲವೇನೋ..? ಖಾತ್ರಿಯಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಎಂಬ ಮಹಾ ಪರ್ವತವೊಂದು ಅನನುಭವಿಯ `ಕೈ’ಯಲ್ಲಿ ಸಿಕ್ಕಿ ಅಧಃಪತನಕ್ಕಿಳಿದಿದೆ. ಇನ್ನು ಮುಂದೆಯಾದರೂ ರಾಹುಲ್‍ನಿಂದ ಅಧಿಕಾರದ ಚುಕ್ಕಾಣಿಯನ್ನು ಕಿತ್ತುಕೊಂಡು, ಸಮರ್ಥ ನಾಯಕರಿಗೆ ಪಟ್ಟ ಕೊಡದಿದ್ದರೇ ಕಾಂಗ್ರೆಸ್ ಅನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ. ಹಾಗಿದ್ದೂ ಈಗ ರಾಹುಲ್‍ನನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಸಿದ್ದತೆ ನಡೆದಿದೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದೆಂದರೇ ಇದೇನಾ..!?

 

POPULAR  STORIES :

ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!

ಮರೆಗುಳಿತನಕ್ಕೆ ಮದ್ದುಂಟೇ..???

ಐದು ಕೋಟಿ ಡೀಲ್ ರಹಸ್ಯ..! ಬೆಕ್ಕು ಕಣ್ಣು ಬಿಟ್ಟು ಹಾಲು ಕುಡಿದಿದೆ..!?

ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ..! ನಾಯಿಯನ್ನು ತಮಾಷೆ ಮಾಡಿದ್ರೇ ಜೈಲೂಟ ಫ್ರೀ..!!

ಮದ್ವೆಯಾದವ್ರು ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸುವಂತಿಲ್ಲ..! ಬಬಲ್ ಗಮ್ ಅಗಿದರೇ ಶಿಕ್ಷೆ ಗ್ಯಾರಂಟಿ..!

ನಮ್ಮ ಕ್ರಿಕೆಟರ್ಸ್ ಎಷ್ಟು ಸಂಬಳ ಪಡಿತಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..

ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...