ಮುಂಬೈ: ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ವಿದೇಶಿ ಆಟಗಾರರಿಗೆ ಬಿಸಿಸಿಐ ಅಭಯ ನೀಡಿದೆ.
ಭಾರತದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್‍ನಿಂದ ವಿದೇಶಿ ಆಟಗಾರರು ಭಾರತವನ್ನು ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ವಿದೇಶಿ ಆಟಗಾರರಿಗೆ ಅಭಯ ನೀಡಿ ಭಯಪಡಬೇಡಿ ಎಂದು ಹೇಳಿದೆ.
ಬಿಸಿಸಿಐ ಸಿಒಒ ಹೆಮಾಂಗ್ ಅಮಿನ್ ವಿದೇಶಿ ಆಟಗಾರರಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿ, ಪಂದ್ಯಾವಳಿ ಮುಗಿದ ನಂತರ ಸ್ವದೇಶಕ್ಕೆ ಮರಳುವುದು ಹೇಗೆ ಎಂಬುದರ ಬಗ್ಗೆ ನೀವು ಭಯಗೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ನಿಮ್ಮನ್ನು ನಿಮ್ಮ ದೇಶಗಳಿಗೆ ತಲುಪಿಸಲು ಬಿಸಿಸಿಐ ಎಲ್ಲ ವ್ಯವಸ್ಥೆ ಮಾಡುತ್ತದೆ. ಬಿಸಿಸಿಐ ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪಂದ್ಯಾವಳಿ ಮುಗಿದ ನಂತರ ನಿಮ್ಮನ್ನು ಮನೆಗೆ ತಲುಪಿಸುವ ವ್ಯವಸ್ಥೆಗಳನ್ನು ಮಾಡಲು ಸರ್ಕಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಐಪಿಎಲ್ ನಡೆಯುತ್ತಿರುವ ಸಮಯದಲ್ಲೇ ಆಂಡ್ರ್ಯೂ ಟೈ(ರಾಜಸ್ಥಾನ ರಾಯಲ್ಸ್), ಕೇನ್ ರಿಚರ್ಡ್‍ಸನ್ ಮತ್ತು ಆಡಂ ಜಂಪಾ(ರಾಯಲ್ ಚಾಲೆಂಜರ್ಸ್ ಬೆಂಗಳೂರು) ಆಸ್ಟ್ರೇಲಿಯಾಕ್ಕೆ ತೆರಳಲು ಮುಂದಾಗಿದ್ದಾರೆ.
ಆಸ್ಟ್ರೇಲಿಯಾದ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್ ಕೋಚ್‍ಗಳಾದ ರಿಕ್ಕಿ ಪಾಂಟಿಂಗ್, ಸೈಮನ್ ಕ್ಯಾಟಿಚ್, ವೀಕ್ಷಕ ವಿವರಣೆಗಾರರಾದ ಮ್ಯಾಥ್ಯೂ ಹೇಡನ್, ಬ್ರೇಟ್ ಲೀ, ಮೈಕಲ್ ಸ್ಲೇಟರ್, ಲಿಸಾ ಸ್ಥಲೇಕಾರ್ ಐಪಿಎಲ್‍ನಲ್ಲಿ ಭಾಗಿಯಾಗಿದ್ದಾರೆ.
ಕಳೆದ ಬಾರಿ ಯುಎಇಯ ಮೂರು ಮೈದಾನದಲ್ಲಿ ಐಪಿಎಲ್ ಕ್ರಿಕೆಟ್ ಅನ್ನು ಬಯೋ ಬಬಲ್ ಅಡಿ ಆಡಲಾಗಿತ್ತು. ಇಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ಬಯೋ ಬಬಲ್ ಅಡಿ 6 ಮೈದಾನದಲ್ಲಿ ಕ್ರಿಕೆಟ್ ಆಡಲಾಗುತ್ತಿದೆ.