‘‘ಗಾಡ್ಸ್ ಓವ್ನ್ ಕಂಟ್ರಿ’’ ಎಂದೇ ಪ್ರತೀತಿ ಹೊಂದಿದ ಕೇರಳನಾಡು ನಿಜಕ್ಕೂ ‘’ದೇವರುಗಳ ನಾಡೆ’’ ಸರಿ.ದರ್ಶನ ಮಾಡ ಹೊರಟರೆ ನಿಮ್ಮ ಕ್ಷೇತ್ರ ಯಾತ್ರೆ ಅನವರತ.ಪ್ರತೀ ದೇವಸ್ಥಾನಗಳ ಹಿಂದೆಯೂ ಒಂದೊಂದು ಪುರಾಣ ಸಂಬಂಧಿ ಕಥೆಯು ಅಡಗಿದೆ.ತಿಳಿಯಹೊರಟರೆ ಆಗುವ ರೋಮಾಂಚಕಾರಿ ಅನುಭವ ಅವರ್ಣನಾತೀತ.ಅರೆರೆ! ಇದೇನಪ್ಪಾ !ಶೀರ್ಷಿಕೆನೇ ಬೇರೆ,ಹೇಳ್ತಿರೋ ವಿಷಯಾನೇ ಬೇರೆ ಅನ್ತೀರ? ಪಾಶುಪತಾಸ್ತ್ರಕ್ಕೂ ಟಿಪ್ಪು ಸುಲ್ತಾನನಿಗೂ ಇರೋ ನಂಟೇನು?ನಾನು ಹೇಳ್ಳೆ ಬೇಕು ನೀವು ಕೇಳಲೇ ಬೇಕು.ಸರಿ ವಿಷ್ಯಕ್ಕೆ ಬರೋಣ ಬನ್ನಿ. ೭ ನೇ ಶತಮಾನದಲ್ಲಿ ಭಾರವಿಯು ಬರೆದ ಕಿರಾತಾರ್ಜುನಿಯ ಎಂಬ ಮಹಾಕಾವ್ಯದ ಬಗ್ಗೆ ಎಲ್ಲರೂ ತಿಳಿದಿರುತ್ತೀರಿ.ಇದು ಮಹಾಭಾರತದಲ್ಲಿ ಬರುವ ಒಂದು ಪರ್ವ.ಈ ಪರ್ವ ನಡೆದಿದ್ದು ನಮ್ಮ ನೆರೆ ರಾಜ್ಯ ಕೇರಳದ ಕಾಸರಗೋಡಿನಲ್ಲಿರುವ ಅಡೂರ್ ಎಂಬ ಗ್ರಾಮದಲ್ಲಿ.ಕಾಸರಗೋಡಿನಿಂದ ೪೨ ಕಿ.ಮೀ ದೂರದಲ್ಲಿರೋ ಈ ಕ್ಷೇತ್ರ ಮಹಾತ್ಮೆಯನ್ನು ತಿಳಿದವರು ತೀರ ವಿರಳ ಎಂದರೆ ತಪ್ಪಾಗಲಾರದು.
ಪುರಾಣ ಪ್ರಸಿದ್ದ ಕುಂಬಳೆ ಸೀಮೆಯ ಇತಿಹಾಸದಲ್ಲಿ ಪರಮಪಾವನವಾದ ಅಡೂರು,ಮಧೂರು,ಮುಜುಂಗಾವು,ಕಣಿಪುರ ಎಂಬ ೪ ಪ್ರಸಿದ್ದ ಆರಾಧನ ಕೇಂದ್ರಗಳು ಸರ್ವಾಭಯಪ್ರದ ದೇವ ಸನ್ನಿಧಿಗಳಾಗಿವೆ.
ಪ್ರಶಾಂತವಾಗಿ ಹರಿಯುವ ಪಯಸ್ವಿನಿ ನದಿಯ ಝುಳು ಝುಳು ನಿನಾದಕ್ಕೆ ಮೈಮರೆತು ಆಲಿಸುತ್ತಿರುವ ಮರಳಿನ ಮೂರ್ತಿಯೇ ಅಡೂರಿನ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ.ಈ ಮಹಾಲಿಂಗೇಶ್ವರನ ಲಿಂಗವು ಸ್ವತಃ ಅರ್ಜುನನಿಂದ ಮರಳಲ್ಲಿ ನಿರ್ಮಿಸಲ್ಪಟ್ಟ ಲಿಂಗವಾಗಿದ್ದು ಇದಕ್ಕೆ ಬೆಳ್ಳಿಯ ಹೊದಿಕೆಯನ್ನು ಮಾಡಲಾಗಿದೆ.ಲಿಂಗವು ಮರಳಿನ ಲಿಂಗವಾಗಿದ್ದು ದೇವರಿಗೆ ಅಭಿಷೇಕ ನಿಶಿದ್ದ.ಕೇವಲ ಮಂತ್ರ ರೂಪದಲ್ಲಷ್ಟೇ ನಡೆಯುವುದು.
ದೇವಸ್ಥಾನದ ಹಿನ್ನೆಲೆ ಹೀಗಿದೆ.
ಮಹಾಭಾರತ ಯುದ್ದದಲ್ಲಿ ಜಯಿಸಲು ಅಗತ್ಯವಾಗಿದ್ದ ಪಾಶುಪತಾಶ್ತ್ರವನ್ನು ಪಡೆಯಲು ಅರ್ಜುನನು ಶ್ರೀಕೃಷ್ಣನ ಸಲಹೆಯಂತೆ ಕಪದೀಕಾನನ (ಕೌಡಿಂಕಾನನ)ದಲ್ಲಿ ಮಹೇಶ್ವರನ ಕುರಿತು ತಪಸ್ಸನ್ನಾಚರಿಸುತ್ತಾನೆ.ಶಿವ ಪಾರ್ವತಿಯರು ಕಿರಾತಕರಂತೆ (ಬೇಡ ಬೇಡತಿ) ಮಾರುವೇಷದಲ್ಲಿ ಬಂದು ಅರ್ಜುನನನ್ನು ಪರೀಕ್ಷೆ ಮಾಡುತ್ತಾರೆ.ಶಿವ ಪಾರ್ವತಿಯರ ಆ ಲೀಲಾ ನಾಟಕವೇ ಅಡೂರು ಕ್ಷೇತ್ರದ ಸ್ಥಳ ಪುರಾಣವಾಯಿತು.ಅರ್ಜುನನು ತಪಸ್ಸು ಮಾಡಲು ಎಲ್ಲಿಂದಲೋ ಬಂದ ಹಂದಿಯು ತಪಸ್ಸಿಗೆ ಭಂಗ ಉಂಟುಮಾಡುತ್ತಿರಲು ಹಂದಿಗೆ ಗುರಿಯಿಡುತ್ತಾನೆ.ಇತ್ತ ಕಡೆಯಿಂದ ಬಂದ ಬೇಡ ತಾನೂ ಹಂದಿಯನ್ನು ಹೊಡೆಯುತ್ತಾನೆ.ಕಿರಾತನಿಗೂ ಅರ್ಜುನನಿಗೂ ಹಂದಿಯನ್ನು ಕೊಂದವರು ತಾನು ತಾನೆಂದು ವಾಗ್ವಾದ ನಡೆದು ಮುಶ್ಠಿಯುದ್ದ ಮಲ್ಲಯುದ್ದ ನಡೆದು ಉರುಡಾಡುತ್ತಾರೆ.ಅವರು ಉರುಡಾಡಿದ ಆ ಸ್ಥಳವೇ ಉರುಡೂರಾಗಿ ಕ್ರಮೇಣ ಅಡೂರು ಎಂದು ನಾಮಾಂಕಿತಗೊಂಡಿತು.
ಇಬ್ಬರ ನಡುವೆ ನಡೆದ ಘೊರ ಕಾಳಗದಲ್ಲಿ ಅರ್ಜುನನು ಸೋತು ಅವಮಾನವನ್ನು ತಾಳಲಾರದೆ ಮನನೊಂದು ತಾನು ಬಿದ್ದ ಸ್ಥಳದಿಂದಲೇ ಮರಳನ್ನು ಆಯ್ದು ಮರಳ ಲಿಂಗವನ್ನು ಮಾಡಿ ಚಿಕ್ಕ ಕುಂಡಿಕೆಯೊಂದನ್ನು ರಚಿಸಿ ಅದರ ಜಲದಿಂದಲೇ ಅಭಿಷೇಕ ಮಾಡಿ,ಬಿಲ್ವಪತ್ರೆ ಹಾಗೂ ಹೂವುಗಳಿಂದ ಪೂಜೆಗೈಯುತ್ತಾನೆ.ಆದರೆ ಅಲ್ಲಿ ಮಾಡಿದ ಪೂಜೆಯು ಕಿರಾತನ ಶಿರಕ್ಕೆ ಸಲ್ಲುತ್ತದೆ. ಇದನ್ನರಿತ ಅರ್ಜುನನು ಓಡೋಡಿ ಬಂದು ಬೇಡನ ಕಾಲಿಗೆರಗಿದಾಗ ಸಾಕ್ಷಾತ್ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ಮನಸಾ ಮೆಚ್ಚಿ ಪಾಶುಪತಾಸ್ತ್ರವನ್ನು ಅರ್ಜುನನಿಗೆ ಅನುಗ್ರಹಿಸುತ್ತಾರೆ ಎಂಬುದು ಈ ಜಾಗದಲ್ಲಿ ನಡೆದ ಕಿರಾತಾರ್ಜುನಿಯ ಪರ್ವವಾಗಿದೆ.ಶ್ರೀ ಕ್ಷೇತ್ರದ ಪ್ರಧಾನ ಬಲಿ ಕಲ್ಲಿನಲ್ಲಿ ಕಿರಾತಾರ್ಜುನೀಯ ಘಟನಾವಳಿಗಳನ್ನು ಕೆತ್ತಿ ಚಿತ್ರಿಸಿರುವುದನ್ನು ಇಂದಿಗೂ ಕಾಣಬಹುದಾಗಿದೆ.ಕಾಲಾಂತರದಲ್ಲಿ ಕಾಡಾಗಿ ಬೆಳೆದು ಹೋಗಿದ್ದ ಪ್ರದೇಶದಿಂದ ಎಡವಳ ಎಂಬ ಗಿರಿಜನ ಧನ್ಯಾತ್ಮನಿಗೆ ಆ ಪರಮ ಪೂಜ್ಯಮರಳ ಶಿವಲಿಂಗದ ದರ್ಶನವಾಯಿತು.ಇದನ್ನರಿತ ಸಮಸ್ತ ಊರ ಮಹನೀಯರೆಲ್ಲ ಒಟ್ಟು ಸೇರಿ ಮಕರ ಸಂಕ್ರಮಣದಂದು ಸುಂದರ ದೇವಾಲಯವನ್ನು ನಿರ್ಮಿಸಿ ಆ ಮಹಾಲಿಂಗವನ್ನು ಪ್ರತಿಷ್ಟಾಪಿಸಿದರು.ಅರ್ಜುನನು ರಚಿಸಿದ ಆ ಕುಂಡಿಕೆಯಿಂದ ಇಂದಿಗೂ ಮಕರ ಸಂಕ್ರಮಣದಂದು 1 ಸಾವಿರ ಕಲಶದ ನೀರಿನ ಅಭಿಷೇಕ ಮುಖ್ಯದೇವರಿಗೆ ಮಂತ್ರ ರೂಪದಲ್ಲಿ ಹಾಗೂ ಉಳಿದ ಲಿಂಗಗಳಿಗೆ ಪೂರ್ಣ ಪ್ರಮಾಣದಲ್ಲಿ ಸಲ್ಲಲೇ ಬೇಕು.ಎಷ್ಟೆಂದರೂ ಶಿವ ಅಭಿಷೇಕ ಪ್ರಿಯನಲ್ಲವೇ???
1763ರಲ್ಲಿ ಕ್ಷೇತ್ರದ ಆಕ್ರಮಣಕ್ಕೆ ಆಗಮಿಸಿದ ಟಿಪ್ಪು ಸುಲ್ತಾನನ ಕುರುಹಾಗಿ ದೇವಳದ ಕೆರೆಯಾದ ಪುಷ್ಕರಿಣಿಯಲ್ಲಿ ದೊರೆತ ಫಿರಂಗಿ ಹಾಗೂ ಮದ್ದು ಗುಂಡುಗಳು ಅವನ ಆಗಮನವನ್ನು ಸಾರುತ್ತವೆ.ಇಲ್ಲಿರುವ ಸತ್ಯಪ್ರಮಾಣ ಕಲ್ಲು ಕುಂಬಳೆ ಸೀಮೆಯ ಸತ್ಯದ ನಾಡಿನ ಪ್ರಮಾಣ ಕಲ್ಲಾಗಿದೆ.ಹಿಂದೆ ಸತ್ಯಪ್ರಮಾಣ ಮಾಡುವವರು ಪುಷ್ಕರಿಣಿಯಲ್ಲಿ ಮಿಂದು ಸ್ನಾನ ಮಾಡಿಒದ್ದೆ ಬಟ್ಟೆಯಲ್ಲಿ ಕಲ್ಲ ಮೇಲೆ ನಿಂತು ದೇವ ಸಾಕ್ಷಿಯಾಗಿ ಸತ್ಯಪ್ರಮಾಣ ಮಾಡುತ್ತಿದ್ದರಂತೆ.ಟಿಪ್ಪು ಸುಲ್ತಾನನು ಇದರ ಅವಹೇಳನ ಮಾಡಲು ಸತ್ಯಪ್ರಮಾಣಕ್ಕಾಗಿ ಕಲ್ಲಿನ ಮೇಲೆ ನಿಂತು ನಂದಿಯ ವಿಗ್ರಹದ ಮುಂದೆ ಹುಲ್ಲು ಹಾಕಿ ಈ ಸತ್ಯ ನಿಜವೇ ಆದರೆ ಈ ಕಲ್ಲಿನ ನಂದಿಯು ಹುಲ್ಲನ್ನು ತಿನ್ನಲಿ ಎಂದು ಹೇಳಿ ಸವಾಲೆಸೆದಾಗ, ಹಿಂತಿರುಗಿ ನೋಡುವಷ್ಟರಲ್ಲಿ ನಂದಿ ಹುಲ್ಲು ತಿಂದು ಸೆಗಣಿ ಹಾಕಿತ್ತಂತೆ.ಇದರಿಂದ ಭಯಬೀತನಾದ ಟಿಪ್ಪುವು ಸೋಲೊಪ್ಪಿಕೊಂಡು ಹಿಂತಿರುಗಿದನಂತೆ ಎಂದು ಇಲ್ಲಿನ ಕೆಲವು ಲಿಖಿತ ಪುರಾವೆಗಳು ತಿಳಿಸುತ್ತವೆ.ಕ್ರಮೇಣ ಸತ್ಯದ ಪ್ರಖರತೆ ಅತಿ ತೀಕ್ಷ್ಣವಾಗಿದ್ದು ಈ ಸಂಪ್ರದಾಯವು ನಿಂತು ಹೋಯಿತು.ಇದೇ ಟಿಪ್ಪುಗೂ ಈ ಕ್ಷೇತ್ರಕ್ಕೂ ಇರೋ ನಂಟು.
ಅರ್ಜುನನು ತಪಸ್ಸು ಮಾಡಿದ ಜಾಗವಾದ ಕೌಡಿಂಕಾನ ಅರಣ್ಯವು ಶಿವ ಪಾರ್ವತಿಯರ ಸಾನ್ನಿದ್ಯವಾಗಿದ್ದು ಅಡೂರ್ ಕ್ಷೇತ್ರದ ಮೂಲಸ್ಥಾನವಾಗಿದೆ.ಇಲ್ಲಿಂದ 12 ವರ್ಷ ಗಳಿಗೊಮ್ಮೆ ಮೂಲಮೃತ್ತಿಕಾಪ್ರಸಾದವನ್ನು ತಂದು ದೇವಸ್ಥಾನದ ಲಿಂಗಕ್ಕೆ ಐಕ್ಯಗೊಳಿಸುತ್ತಿದ್ದು ಇದು ಕಾರಣಾಂತರಗಳಿಂದ 400 ವರ್ಷಗಳ ಹಿಂದೆ ನಿಂತು ಹೋಯಿತು.400 ವರ್ಷಗಳ ಹಿಂದೆ ಈ ರೀತಿಯಲ್ಲಿ ಮೂಲಮೃತ್ತಿಕೆಯನ್ನು ತರಲು ಹೋದ ಕ್ಷೇತ್ರಾಚಾರ್ಯರು ಹಿಂತಿರುಗಿ ಬರುವಾಗ ತಮ್ಮ ಕೈಬಟ್ಟಲನ್ನು ಮರೆತುಬಂದಿದ್ದು ಮತ್ತೆ ತರುವ ಉದ್ದೇಶದಿಂದ ಪುನಃ ಆ ಮೂಲಸ್ಥಾನಕ್ಕೆ ಹಿಂತಿರುಗಿದರು,ಆದರೆ ಈ ಮೂಲಸ್ಥಾನಕ್ಕೆ ಒಮ್ಮೆ ಹೋದವರು ಮತ್ತೊಮ್ಮೆ ಹಿಂತಿರುಗಬಾರದೆಂಬ ನಿಯಮವನ್ನು ಕ್ಷೇತ್ರರು ಉಲ್ಲಂಘಿಸಿದರು.ಮೃತ್ತಿಕಾಪ್ರಸಾದ ತರಲು ಸಮಸ್ಥ ಊರಬಾಂಧವರು ಕೊಂಬುವಾದ್ಯಗಳೊಂದಿಗೆ ಆಚಾರ್ಯರೊಂದಿಗೆ ತೆರಳಿದರೂ ನಿರ್ದಿಷ್ಟಗಡಿಯಿಂದಾಚೆಗೆ ಆಚಾರ್ಯರೊಬ್ಬರಿಗೇ ಪ್ರವೇಶ. ಅವರು ಹಿಂತಿರುಗಿ ಬಾರದ್ದನ್ನು ಕಂಡು ಬೇರೆ ದಾರಿ ಕಾಣದೆ ಉಳಿದವರು ಕ್ಷೇತ್ರಕ್ಕೆ ಹಿಂತಿರುಗಿದರು.ಸುಮಾರು 1 ವರ್ಷಗಳನಂತರ ಆಚಾರ್ಯರ ತಿಥಿ ಸಿದ್ದತೆಯಾಗುತ್ತಿದ್ದು ಅವರನ್ನು ಕಂಡು ಎಲ್ಲರೂ ಆಶ್ಚರ್ಯಗೊಂಡು ಕಾರಣವನ್ನು ವಿಚಾರಿಸಿದರು.ಆದರೆ ಅಲ್ಲಿ ನಡೆದ ಘಟನೆಯನ್ನು ಯಾರಿಗೂ ಹೇಳಬಾರದೆಂಬ ದೈವಾಜ್ನ್ಯೆ ಇದ್ದು ಅದನ್ನು ಮರೆತ ಆಚಾರ್ಯರು ಅಲ್ಲಿ ತಾನು ತೂಗುಯ್ಯಾಲೆಯಲ್ಲಿದ್ದ ಪಾರ್ವತಿ ಪರಮೇಶ್ವರನನ್ನು ನೋಡಿದೆನೆಂದೂ ಅವರೊಡನೆ ಕಳೆದ ಆ ಒಂದು ಘಳಿಗೆಯೆ ಒಂದು ವರ್ಷವಾಯಿತೆಂದು ಹೇಳಿದರು.ಅಷ್ಟರಲ್ಲಾಗಲೇ ಅವರ ಪ್ರಾಣ ಪಕ್ಷಿಯು ಹಾರಿಹೋಯಿತು.400 ವರ್ಷಗಳ ಹಿಂದೆ ನಿಂತು ಹೋದ ಈ ಸಂಪ್ರದಾಯವು ದೇವಸ್ಥಾನದ ಜೀರ್ಣೊದ್ದಾರ ಕಾರ್ಯಕ್ಕಾಗಿ ನಡೆಸಿದ ಸಮಸ್ತ ಭಕ್ತ ಜನರ ಒಳಿತಿಗಾಗಿ 2 ವರ್ಷಗಳ ಹಿಂದೆ ಮತ್ತೆ ನಿರ್ವಿಘ್ನವಾಗಿ ನೆರವೇರಿತು.ಮೂಲಮೃತ್ತಿಕಾ ಪ್ರಸಾದವು ಭಗವಂತನ ಶಿರಸ್ಸನ್ನು ಅಲಂಕರಿಸಿತು.
ಕುಕ್ಕೆ ಸುಬ್ರಮಣ್ಯ ಕ್ಷೇತ್ರ ದಿಂದ ಸುಳ್ಯಕ್ಕೆ ಹೋಗೋ ದಾರಿಯಲ್ಲಿ ಸುಮಾರು 57 ಕಿ.ಮೀ ಕ್ರಮಿಸಿದಾಗ ಸಿಗುವುದೇ ಅಡೂರ್ ದೇವಸ್ಥಾನ.ರೈಲಿನಲ್ಲಿ ಹೋಗುವುದಾದಲ್ಲಿ ಮಂಗಳೂರಿನ ಹಾದಿಯಾಗಿ ಕಾಸರಗೋಡಿನ ರೈಲು ನಿಲ್ದಾಣದಿಂದ ಸುಮಾರು 47 ಕಿ.ಮೀಗಳ ದೂರ.ಮಡಿಕೇರಿಯ ಕಡೆಯಿಂದ ಬರುವುದಾದಲ್ಲಿ ಸುಳ್ಯದ ಹಾದಿಯಾಗಿ ಈ ದೇವಾಲಯದ ದರ್ಶನ ಭಾಗ್ಯ ಸಾಧ್ಯ.
ಕಾಸರಗೋಡು ಕರ್ನಾಟಕ ಹಾಗೂ ಕೇರಳಕ್ಕೆ ಸೇರಬೇಕೆಂಬ ವಿವಾದಗಳು ಅನವರತವಾಗಿ ಮುಂದುವರಿಯುತ್ತಿದೆ.ಯಾರ ಜಾಗ ಎಲ್ಲಿಯ ವಿವಾದ.ಎಲ್ಲವೂ ಸರ್ವಾಂತರ್ಯಾಮಿ ಭಗವಂತನಿಗೇ ಸೇರಿದ್ದು.ಯಾವುದೋ ಕ್ಷುಲ್ಲಕ ಕಾರಣಕ್ಕೆ ವೃಥಃ ಕಾಲಹರಣ ಮಾಡುವ ಬದಲು ಇಂತಹ ಇತಿಹಾಸ ಪುರಾಣ ಪ್ರಸಿದ್ದ ದೇವಸ್ಥಾನಕ್ಕೆ ಭೇಟಿ ನೀಡಿ ದೇವತಾ ಕಾರ್ಯದಲ್ಲಿ ಭಾಗವಹಿಸಿದಲ್ಲಿ ಅಂತರಾತ್ಮ ಪರಿಶುದ್ದ ಹಾಗೂ ಇತಿಹಾಸದ ಪ್ರಾಚೀನ ಪರಂಪರೆಯನ್ನು ಉಳಿಸಿ ಬೆಳೆಸಿದ ಒಂದಿಷ್ಟುಪುಣ್ಯ ನಮಗೆ ಲಭಿಸುವುದ್ರಲ್ಲಿ ಯಾವುದೇ ಸಂಶಯವಿಲ್ಲ.”ದೇಶ ಸುತ್ತಿನೋಡು ಕೋಶ ಓದಿ ನೋಡು” ಎಂಬ ಮಾತಿನಂತೆ ಸುತ್ತಿ ನೋಡಲು ಓದಿ ನೋಡಲು ಬೇಕಾದಷ್ಟಿದೆ.ಸ್ನೇಹಿತರೆ! ಮತ್ತಿನ್ನೇಕೆ ತಡ! ಬನ್ನಿ! ಆ ಟಿಪ್ಪು ಸುಲ್ತಾನನ್ನು ಬಗ್ಗು ಬಡಿದ ಆ ಪರಮ ಪಾವನ ಕ್ಷೇತ್ರ ದರ್ಶನಕ್ಕೆ ಹೊರಟೇಬಿಡೊಣ.
- ಸ್ವರ್ಣಲತ ಭಟ್
POPULAR STORIES :
ನಾನು ಫ್ಲಾಪ್ ಹೀರೋ ಎಂದ ಜಗ್ಗುದಾದಾ..!!
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!
ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!
ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!
ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?